ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಟೆ ದರವಾಜ, ಕಲ್ಲಾನೆ ಸಂರಕ್ಷಣೆಗೆ ಯೋಜನೆ

ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಅಭಿವೃದ್ಧಿಗೆ ಸಿದ್ಧತೆ
Last Updated 24 ಮಾರ್ಚ್ 2018, 12:10 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯ ಇತಿಹಾಸದ ಭಾಗವಾದ ರಾಯಚೂರು ನಗರದ ಕಾಟೆ ದರವಾಜ ಹಾಗೂ ತಿನ್‌ ಕಂದಿಲ್‌ ಕಲ್ಲಾನೆಗಳನ್ನು ಸಂರಕ್ಷಿಸಿ ಪ್ರೇಕ್ಷಣಿಯ ಕೇಂದ್ರವಾಗಿಸಲು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ರೂಪುರೇಷೆ ಸಿದ್ಧಪಡಿಸುತ್ತಿದೆ.

ಇಲಾಖೆಯ ತಜ್ಞರ ತಂಡವು ಈಗಾಗಲೇ ಮೂರು ಸಲ ಸ್ಥಳ ಪರಿಶೀಲನೆ ಮಾಡಿದ್ದು, ಆಗಬೇಕಿರುವ ಕೆಲಸಗಳನ್ನು ಪಟ್ಟಿ ಮಾಡಿದೆ. ಕಾಟೆ ದರವಾಜ ಹಾಗೂ ಕಲ್ಲಾನೆಯು ರಾಜ್ಯ ಸಂರಕ್ಷಿತ ಸ್ಮಾರಕ ಎಂದು ಘೋಷಿಸಿರುವುದರಿಂದ ಇವುಗಳ ಅಭಿವೃದ್ಧಿಯ ಉಸ್ತುವಾರಿಯನ್ನು ಪರಂಪರೆ ಇಲಾಖೆಯೆ ಸಂಪೂರ್ಣ ವಹಿಸಿಕೊಳ್ಳುತ್ತಿದೆ. ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಐತಿಹಾಸಿಕ ಸ್ಮಾರಕವನ್ನು ಉಳಿಸಿಕೊಂಡು, ಮುಂದಿನ ಪೀಳಿಗೆಗೆ ಅದನ್ನು ಪೋಷಿಸುವ ನಿಟ್ಟಿನಲ್ಲಿ ಇಲಾಖೆಯು ಶ್ರಮ ವಹಿಸುತ್ತಿದೆ.

ಕಾಟೆ ದರವಾಜ ಅಭಿವೃದ್ಧಿಗಾಗಿ ₹52 ಲಕ್ಷ ಹಾಗೂ ಕಲ್ಲಾನೆ ಸ್ಮಾರಕ ಸಂರಕ್ಷಣೆ ಕೆಲಸಕ್ಕೆ ₹15 ಲಕ್ಷ ವೆಚ್ಚವಾಗುವ ಅಂದಾಜನ್ನು ಪರಂಪರೆ ಇಲಾಖೆಯ ತಜ್ಞರು ಮಾಡಿದ್ದಾರೆ. ಪರಂಪರೆ ಇಲಾಖೆಗೆ ಸರ್ಕಾರವು ನೀಡುವ ಅನುದಾನದಲ್ಲಿಯೆ ಈ ಕೆಲಸಗಳನ್ನು ಮಾಡುವುದಕ್ಕೆ ಸಜ್ಜಾಗಿದೆ. ಆದರೆ ಸ್ಮಾರಕ ಸಂರಕ್ಷಣೆಯ ಕಾಮಗಾರಿ ವಿವರ ಹಾಗೂ ಅಂದಾಜು ವೆಚ್ಚಕ್ಕೆ ಸರ್ಕಾರದಿಂದ ಅನುಮೋದನೆ ಪಡೆಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ.

ಕೋಟೆ ಇತಿಹಾಸ: ರಾಯಚೂರಿನಲ್ಲಿ ಎರಡು ಸುತ್ತಿನ ಕೋಟೆಗಳಿವೆ. ಒಳಕೋಟೆ (ಅಂದ್ರೂನ್‌ ಕಿಲ್ಲಾ) ಹಾಗೂ ಹೊರಕೋಟೆ (ಬೆರೂನ್‌ ಕಿಲ್ಲಾ). ಕ್ರಿ.ಶ. 1294 ರಲ್ಲಿ ವಾರಂಗಲ್ಲಿನ ಕಾಕತೀಯ ರಾಣಿ ರುದ್ರಮ್ಮದೇವಿಯ ದಂಡನಾಯಕ ಗೋರೆಗನ್ನಯ್ಯ ರೆಡ್ಡಿ ಅವರ ಆದೇಶಾನುಸಾರ ಸ್ಥಾನಿಕ ರಾಜನಾಗಿದ್ದ ವಿಠಲನಾಥನು ಈ ಒಳಕೋಟೆ ನಿರ್ಮಿಸಿದ್ದಾನೆ.

ಹೊರಕೋಟೆಯನ್ನು ಕ್ರಿ.ಶ. 1470 ರಲ್ಲಿ ಬಹುಮನಿ ಸುಲ್ತಾನರು ನಿರ್ಮಿಸಿದ್ದು, ಇದಕ್ಕೆ ಐದು ದ್ವಾರಗಳಿವೆ. ಕಾಟೇ ದರವಾಜ (ಪೂರ್ವದ್ವಾರ) ಮಕ್ಕಾದರವಾಜಾ (ಪಶ್ಚಿಮದ್ವಾರ) ನವರಂಗ ದರವಾಜಾ (ಉತ್ತರದ್ವಾರ) ಕಂದಕ ದರವಾಜ (ದಕ್ಷಿಣದ್ವಾರ) ಮತ್ತು ಕೊಡ್ಡಿ ದರವಾಜಾ (ನೈರುತ್ಯದ್ವಾರ) ಎಂದು ಕರೆಯಲಾಗುತ್ತಿದೆ ಎನ್ನುವುದು ಇತಿಹಾಸ ತಜ್ಞರ ವಿವರಣೆ. ಈಗಿನ ಉಸ್ಮಾನಿಯಾ ತರಕಾರಿ ಮಾರುಕಟ್ಟೆಗೆ ಹೊಂದಿಕೊಂಡಿರುವ ಕಾಟೇ ದರವಾಜ ವನ್ನು ಅಭಿವೃದ್ಧಿ ಮಾಡಿ ಸಂರಕ್ಷಿಸಲು ಪರಂಪರೆ ಇಲಾಖೆ ಮುಂದಾಗಿದೆ.

ಕಾಕತೀಯ ಮನೆತನದ ಲಾಂಛನವು ಆನೆ ಆಗಿತ್ತು. ರಾಯಚೂರು ನಗರಸಭೆಯು ಕಲ್ಲಾನೆಯನ್ನು ತನ್ನ ಗುರುತು ಮಾಡಿಕೊಂಡಿದ್ದರೂ ಅವುಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಿಭಾಯಿಸಿಲ್ಲ. ರಾಯಚೂರು ನಗರದ ತೀನ್‌ ಕಂದಿಲ್‌ ವೃತ್ತದಲ್ಲಿ ಎರಡು ಐತಿಹಾಸಕ ಕಲ್ಲಾನೆಗಳಿವೆ. ಸಾಕಷ್ಟು ಮೂಲೆಗುಂಪಾಗಿರುವ ಈ ಕಲ್ಲಾನೆಗಳ ಸೌಂದರ್ಯ ಕಾಪಾಡಿಕೊಳ್ಳುವ ಕೆಲಸ ಇಲ್ಲಿಯವರೆಗೂ ಆಗಿಲ್ಲ. ಪರಂಪರೆ ಇಲಾಖೆಯು ಇದೀಗ ಕಲ್ಲಾನೆಗಳನ್ನು ಸಂರಕ್ಷಿಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷ.

‘ಐತಿಹಾಸಿಕ ಸ್ಮಾರಕಗಳನ್ನು ಅಭಿವೃದ್ಧಿ ಮಾಡುವ ಕೆಲಸಕ್ಕೆ ನುರಿತವರು ಬೇಕಾಗುತ್ತದೆ. ಮೂಲ ಸೌಂದರ್ಯಕ್ಕೆ ಧಕ್ಕೆ ಬರದಂತೆ ಕೆಲಸ ಮಾಡಿಸಬೇಕು. ಹೊಸದಾಗಿ ಯಾವುದೇ ಕೆಲಸ ಮಾಡಿದರೂ ಸ್ಮಾರಕದ ಕಲೆಗೆ ಪೆಟ್ಟು ಬೀಳಬಾರದು. ಪರಂಪರೆ ಇಲಾಖೆಯ ಸಹಯೋಗದಲ್ಲಿ ನಗರಸಭೆ ಅಥವಾ ಜಿಲ್ಲಾಡಳಿತವು ಇವುಗಳನ್ನು ಸಂರಕ್ಷಿಸುವ ಕೆಲಸ ಮಾಡುವುದಕ್ಕೆ ಅವಕಾಶವಿತ್ತು. ಸದ್ಯಕ್ಕೆ ಪರಂಪರೆ ಇಲಾಖೆಯ ಅನುದಾನದಲ್ಲೆ ಸಂರಕ್ಷಿಸಲು ಯೋಜಿಸಲಾಗಿದೆ’ ಎಂದು ರಾಯಚೂರಿನ ಕ್ಯುರೇಟರವರ ಕಚೇರಿಯ ಪುರಾತತ್ವ ಸ್ಮಾರಕ ಸಂರಕ್ಷಣಾಧಿಕಾರಿ ಶಜೇಶ್ವರ ತಿಳಿಸಿದರು.
**
ಸ್ಮಾರಕಗಳ ಸಂರಕ್ಷಣೆಗಾಗಿ ಮಾಡಬೇಕಾದ ಕೆಲಸಗಳು ಹಾಗೂ ಅಂದಾಜು ವೆಚ್ಚವನ್ನು ತಜ್ಞರು ತಯಾರಿಸಿದ್ದಾರೆ. ಶೀಘ್ರಅನುಮೋದನೆ ಪಡೆದು ಕೆಲಸ ಪ್ರಾರಂಭಿಸುತ್ತೇವೆ
–ಶಜೇಶ್ವರ, ಪುರಾತತ್ವ ಸ್ಮಾರಕ ಸಂರಕ್ಷಣಾಧಿಕಾರಿ, ರಾಯಚೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT