ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಸಿಗೆಯಲ್ಲೂ ಕೆರೆಗಳಲ್ಲಿ ಜೀವಕಳೆ!

ಬತ್ತದ ನೀರಿನ ಸೆಲೆ; ಅಂತರ್ಜಲ ವೃದ್ಧಿ, ಕೃಷಿಗೂ ಅನುಕೂಲ
Last Updated 24 ಮಾರ್ಚ್ 2018, 12:16 IST
ಅಕ್ಷರ ಗಾತ್ರ

ರಾಮನಗರ: ಬೇಸಿಗೆ ಆರಂಭಗೊಂಡು ಬಿರು ಬಿಸಿಲು ನೆತ್ತಿ ಸುಡುತ್ತಿದೆ. ಇಂತಹ ವೇಳೆಯಲ್ಲಿಯೂ ತಾಲ್ಲೂಕಿನ ಸಾಕಷ್ಟು ಕೆರೆಗಳು ನೀರು ತುಂಬಿಕೊಂಡಿದ್ದು, ಜನ–ಜಾನುವಾರುಗಳಿಗೆ ಆಸರೆ ಆಗುತ್ತಿವೆ.

ಸತತ ನಾಲ್ಕು ವರ್ಷ ಬರದಿಂದ ಕಂಗೆಟ್ಟಿದ್ದ ರಾಮನಗರದಲ್ಲಿ ಕಳೆದ ಮುಂಗಾರು ಫಲಪ್ರದವಾಗಿತ್ತು. ಪರಿಣಾಮ ಬಹುತೇಕ ಕೆರೆಗಳು ಮೈತುಂಬಿದ್ದವು. ಮಳೆಗಾಲ, ಚಳಿಗಾಲ ಮುಗಿದು ಬೇಸಿಗೆ ಕಾಲಿಟ್ಟ ಮೇಲೆಯೂ ಈ ಕೆರೆಗಳಲ್ಲಿನ ಮಳೆ ನೀರು ಹಾಗೆಯೇ ಉಳಿದುಕೊಂಡಿದೆ.
ರಾಮನಗರ ಪಟ್ಟಣದ ಒಳಗೇ ಇರುವ ರಂಗರಾಯರದೊಡ್ಡಿ ಹಾಗೂ ಬೋಳಪ್ಪನಹಳ್ಳಿ ಕೆರೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ನೀರಿನ ಸಂಗ್ರಹವಿದೆ.

ಬಿಡದಿ ಪಟ್ಟಣದ ಜನರ ಜೀವನಾಡಿ ನಲ್ಲಿಗುಡ್ಡ ಕೆರೆ ದಶಕದ ನಂತರ ಕಳೆದ ಮಳೆಗಾಲದಲ್ಲಿ ಕೋಡಿ ತುಂಬಿ ಹರಿದಿತ್ತು. ಈಗಲೂ ಕೆರೆಯಲ್ಲಿ ಜೀವಜಲ ಸಮೃದ್ಧಿಯಾಗಿದೆ.

ರಾಮನಗರ ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿನ ಕೆರೆಗಳೂ ಈ ಬೇಸಿಗೆಯಲ್ಲಿ ಸಮೃದ್ಧವಾಗಿವೆ. ಬಿಡದಿ ಹೋಬಳಿಯ ತಮ್ಮನಾಯಕನ ಹಳ್ಳಿಯ ಕೆರೆಯು ಬರಗಾಲದಿಂದಾಗಿ ಸಂಪೂರ್ಣ ಬರಿದಾಗಿ ಹೋಗಿತ್ತು. ಆದರೆ ಸದ್ಯ ಅಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿ ನೀರಿನ ಸಂಗ್ರಹವಿದೆ. ಇದರಿಂದಾಗಿ ಕೊಕ್ಕರೆಗಳ ಹಿಂಡು ಬೀಡು ಬಿಟ್ಟಿವೆ. ಕೆರೆಯ ಪಕ್ಕದಲ್ಲಿನ ಅರಳೀ ಮರದಲ್ಲಿ ನೂರಾರು ಹಕ್ಕಿಗಳು ಗೂಡು ಕಟ್ಟಿಕೊಂಡು ನೆಮ್ಮದಿಯಿಂದಿವೆ.

ಹತ್ತಾರು ಎಕರೆ ವಿಸ್ತೀರ್ಣದಲ್ಲಿ ಇರುವ ಕೇತೋಹಳ್ಳಿ ಗ್ರಾಮದ ಕೆರೆಯು ಸಹ ಕಳೆದ ಬೇಸಿಗೆಯ ವೇಳೆಗೆ ಸಂಪೂರ್ಣ ಬರಿದಾಗಿ ಆಟದ ಮೈದಾನವಾಗಿತ್ತು. ನಂತರದಲ್ಲಿ ಇಲ್ಲಿನ ಹೂಳನ್ನು ಎತ್ತಿ ಕಾಯಕಲ್ಪ ನೀಡಲಾಗಿತ್ತು. ಅದರ ಫಲ ಎಂಬಂತೆ ಈಗ ಕೆರೆಯ ಅಂಗಳ ಸರೋವರದಂತೆ ಕಂಗೊಳಿಸತೊಡಗಿದೆ. ಮೀನುಗಾರಿಕೆಗೂ ಅನುಕೂಲ ಆಗಿದೆ.

ಹೀಗೆಯೇ ಇನ್ನೂ ಹತ್ತು ಹಲವು ಕೆರೆಗಳು ಈ ಬಾರಿಯ ಬೇಸಿಗೆಯಲ್ಲೂ ಜೀವಕಳೆ ಉಳಿಸಿಕೊಂಡು ಗ್ರಾಮೀಣ ಭಾಗದ ಜನರ ಜೀವ ಉಳಿಸುತ್ತಿವೆ!

ಕೃಷಿ–ಹೈನುಗಾರಿಕೆಗೆ ಅನುಕೂಲ: ಕೆರೆಗಳು ತುಂಬಿರುವುದರಿಂದ ಬಹುಮುಖ್ಯವಾಗಿ ಸುತ್ತಲಿನ ಅಂತರ್ಜಲ ಮಟ್ಟವು ಸುಧಾರಣೆ ಕಾಣುತ್ತಿದೆ. ಈ ಜಲಮೂಲಗಳ ಅಚ್ಚುಕಟ್ಟು ಪ್ರದೇಶದ ಜನರಿಗೆ ಕೃಷಿಗೆ ನೀರು ದೊರಕಿದೆ. ಹೀಗಾಗಿ ವ್ಯವಸಾಯದಿಂದ ವಿಮುಖರಾಗಿದ್ದ ಸಾಕಷ್ಟು ಮಂದಿ ಮತ್ತೆ ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ಕೆರೆ ತುಂಬಿರುವ ಕಾರಣ ಕೊಳವೆ ಬಾವಿಯಲ್ಲಿ ಮತ್ತೆ ನೀರು ಕಾಣುತ್ತಿದೆ. ಹೀಗಾಗಿ ಬೇಸಾಯ ಬಿಡಬೇಕು ಎಂದುಕೊಂಡಿದ್ದವರು ಈಗ ಹೊಲದಲ್ಲಿ ಜೋಳ ಬಿತ್ತನೆ ಮಾಡುತ್ತಿದ್ದೇವೆ’ ಎಂದು ಕೇತೋಹಳ್ಳಿ ಸಮೀಪದ ರೈತ ಶಿವಣ್ಣ ಹೇಳಿದರು.

‘ಕಳೆದ ವರ್ಷ ಮಳೆಯ ಕೊರತೆಯಿಂದಾಗಿ ರಾಗಿ ಕೈಕೊಟ್ಟಿತ್ತು. ಇದರಿಂದಾಗಿ ಜಾನುವಾರುಗಳ ಮೇವಿಗಾಗಿ ತೀವ್ರ ಪರದಾಡಿದ್ದೆವು. ಈ ವರ್ಷ ಅಂತಹ ಪರಿಸ್ಥಿತಿ ಇಲ್ಲ. ಈ ಬಾರಿ ರಾಗಿ ಫಸಲು ಕೈಸೇರಿದ ಕಾರಣ ಅಷ್ಟು ಸಮಸ್ಯೆ ಇಲ್ಲ. ಜೊತೆಗೆ ನೀರಿನ ಅನುಕೂಲ ಇದ್ದವರು ಅಲ್ಲಲ್ಲಿ ಹಸಿರು ಮೇವು ಬೆಳೆದಿದ್ದಾರೆ. ಕೆರೆಗಳು ತುಂಬಿರುವುದರಿಂದ ಒಂದೇ ವರ್ಷದಲ್ಲಿ ಬರ ನೀಗಿ ಪರಿಸ್ಥಿತಿ ಸುಧಾರಿಸಿದೆ’ ಎಂದು ಮತ್ತೊಬ್ಬ ರೈತ ರಾಮಯ್ಯ ಹೇಳಿದರು.
**
ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ

ಕಳೆದ ಬೇಸಿಗೆಯಲ್ಲಿ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ತೀವ್ರನಾಗಿತ್ತು. ರಾಮನಗರ ತಾಲ್ಲೂಕು ಒಂದರಲ್ಲಿಯೇ 20ಕ್ಕೂ ಹೆಚ್ಚು ಹಳ್ಳಿಗಳು ನೀರಿನ ತೀವ್ರ ಕೊರತೆ ಎದುರಿಸಿದ್ದು, ತಾಲ್ಲೂಕು ಆಡಳಿತವು ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಿತ್ತು. ಆದರೆ ಈ ವರ್ಷ ಪರಿಸ್ಥಿತಿ ಅಷ್ಟು ಬಿಗಡಾಯಿಸಿಲ್ಲ.

ಮಳೆಯಿಂದಾಗಿ ಅಂತರ್ಜಲ ಮಟ್ಟ ಸುಧಾರಣೆ ಆಗಿರುವ ಕಾರಣ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿದೆ. ಹೀಗಾಗಿ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಅಷ್ಟು ಬಾಧಿಸುತ್ತಿಲ್ಲ ಎನ್ನುತ್ತಾರೆ ತಾಲ್ಲೂಕು ಆಡಳಿತದ ಅಧಿಕಾರಿಗಳು.
**
ಬೇಸಿಗೆಯಲ್ಲೂ ಕೆರೆಗಳು ಜೀವಂತವಾಗಿವೆ. ಇದರಿಂದ ಸುತ್ತ ಹಸಿರು ಉಳಿದುಕೊಂಡಿದೆ. ಅಂತರ್ಜಲ ಮಟ್ಟ ಹೆಚ್ಚಿ ಕೃಷಿಗೂ ಅನುಕೂಲವಾಗಿದೆ

ಶಂಕರ್‌, ಬಿಡದಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT