ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂಲ ಸೌಕರ್ಯಕ್ಕೆ ಮನವಿ

ಅಲೆಮಾರಿ ಮುಖಂಡರ ಸಭೆ ನಡೆಸಿದ ಸಂಸದ ಮುದ್ದಹನುಮೇಗೌಡ
Last Updated 24 ಮಾರ್ಚ್ 2018, 12:28 IST
ಅಕ್ಷರ ಗಾತ್ರ

ಚಿಕ್ಕನಾಯಕನಹಳ್ಳಿ: ‘21ನೇ ಶತಮಾನದಲ್ಲೂ ಅಲೆಮಾರಿ ಸಮುದಾಯಗಳು ಕನಿಷ್ಠ ಮೂಲ ಸೌಕರ್ಯಗಳಿಲ್ಲದೆ. ನಿಕೃಷ್ಟ ಬದುಕು ಸಾಗಿಸುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸಬೇಕಾದ ವಿಚಾರ. ವಿಶೇಷ ಆದ್ಯತೆ ಇಟ್ಟುಕೊಂಡು ಅಧಿಕಾರಿಗಳು ಸರ್ಕಾರಿ ಯೋಜನೆಗಳು ಅಲೆಮಾರಿಗಳಿಗೆ ತಲುಪುವಂತೆ ಮಾಡಬೇಕು’ ಎಂದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಅಲೆಮಾರಿ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು.

‘ಅಲೆಮಾರಿ ಸಮುದಾಯಗಳ ಸಮಸ್ಯೆ ಬಗ್ಗೆ (ಮಾ.24) ಶನಿವಾರ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಲೆಮಾರಿ ಬುಡಕಟ್ಟು ಮಹಾಸಭಾದ ತಾಲ್ಲೂಕು ಅಧ್ಯಕ್ಷ ಹುಳಿಯಾರು ರಾಜಪ್ಪ ಮಾತನಾಡಿ, ‘ತುಮಕೂರು ಜಿಲ್ಲೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಲೆಮಾರಿಗಳ ಜನಸಂಖ್ಯೆ ಇದೆ. ಚಿಕ್ಕನಾಯಕನಹಳ್ಳಿ ಅಲೆಮಾರಿ ಸಮುದಾಯಗಳು ಕಳೆದ 30 ವರ್ಷಗಳಿಂದಲೂ ಮೂಲ ಸವಲತ್ತುಗಳಿಗಾಗಿ ಹೋರಾಟ ನಡೆಸುತ್ತಲೇ ಬರುತ್ತಿದ್ದೇವೆ. ಆದರೆ ಆಡಳಿತ ವರ್ಗ ಅಲೆಮಾರಿಗಳ ಕಡೆ ತಿರುಗಿ ನೋಡುತ್ತಿಲ್ಲ’ ಎಂದು ದೂರಿದರು.

‘ಅಲೆಮಾರಿಗಳ ಅಭಿವೃದ್ಧಿಗೆಂದೇ ರಾಜ್ಯ ಸರ್ಕಾರ ಅಲೆಮಾರಿ ಅಭಿವೃದ್ಧಿ ಕೋಶ ಸ್ಥಾಪಿಸಿದೆ. ₹ 120 ಕೋಟಿ ಹಣವನ್ನು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗಾಗಿ ಮೀಸಲಿಟ್ಟಿದೆ. ಆದರೂ ಅಧಿಕಾರಿಗಳು ಅಲೆಮಾರಿಗಳಿಗೆ, ನಿವೇಶನ, ವಸತಿ, ಸ್ಮಶಾನ, ನೀರು, ಬೆಳಕು ಹೀಗೆ ಕನಿಷ್ಠ ಮೂಲಸೌಕರ್ಯ ಸವಲತ್ತುಗಳಿಗೆ ಹೋರಾಟ ಮಾಡುತ್ತಿದ್ದೇವೆ’ ಎಂದರು.

ಸುಡುಗಾಡು ಸಿದ್ಧರ ಮುಖಂಡ ವೆಂಕಟೇಶಯ್ಯ ಮಾತನಾಡಿ, ‘ಪಟ್ಟಣದ 4ನೇ ವಾರ್ಡ್ ಕೇದಿಗೆಹಳ್ಳಿ ಗುಂಡು ತೋಪಿನಲ್ಲಿ 30 ವರ್ಷಗಳಿಂದ 35 ಸುಡುಗಾಡು ಸಿದ್ಧರ ಕುಟುಂಬಗಳು ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿವೆ. ಸರ್ಕಾರಿ ಜಮೀನನ್ನು ಕೊಡಲು ಸಾಧ್ಯ ಇಲ್ಲ ಎಂಬ ನೆಪ ಹೇಳಿ ನಿವೇಶನ ಹಂಚಿಕೆ ಮಾಡಿಲ್ಲ. ಆದರೆ ಅದೇ ಸರ್ವೆ ನಂಬರ್‌ನಲ್ಲಿ 5 ಮೇಲ್ವರ್ಗದ ಕುಟುಂಬಗಳಿಗೆ ನಿವೇಶನ ನೀಡಿರುವುದೂ ಅಲ್ಲದೆ ಪುರಸಭೆ ವತಿಯಿಂದ ಮನೆ ನಿರ್ಮಾಣಕ್ಕೆ ಅನುದಾನವನ್ನೂ ನೀಡಿದ್ದಾರೆ. ಈ ದೇಶದಲ್ಲಿ ನಿರ್ಗತಿಕರಿಗೆ ಒಂದು ಹಾಗೂ ಶಕ್ತಿವಂತರಿಗೆ ಇನ್ನೊಂದು
ಕಾನೂನು ಇದೆಯೇ’ ಎಂದು ಅವರು ಕೇಳಿದರು.

‘ಕಳೆದ 5ವರ್ಷಗಳಿಂದ ಹುಳಿಯಾರು ಗ್ರಾಮ ಪಂಚಾಯಿತಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೆಲಸ ಮಾಡುತ್ತಿದ್ದೇನೆ. ಕೆಲಸಕ್ಕೆ ಬೆರೆಯವರನ್ನು ತೆಗೆದುಕೊಳ್ಳುವ ಹುನ್ನಾರವನ್ನು ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ನಡೆಸಿದ್ದಾರೆ. ತಮ್ಮನ್ನೇ ಮುಂದುವರೆಸುವಂತೆ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಹಾಗೂ ಸಂಸದ ಎಸ್.ಪಿ.ಮುದ್ದಹನುಮೇಗೌಡ ಅವರೂ ಶಿಫಾರಸು ಪತ್ರ ನೀಡಿದ್ದಾರೆ. ಆದರೂ ಸಚಿವರು ಹಾಗೂ ಸಂಸದರ ಪತ್ರವನ್ನು ಕಸದ ಬುಟ್ಟಿಗೆ ಎಸೆಯಲಾಗಿದೆ. ತಮಗೆ ನ್ಯಾಯ ಒದಗಿಸಿಕೊಡಿ’ ಎಂದು ದೊಂಬಿದಾಸ ಸಮುದಾಯದ ಮಹಿಳೆ ಲಕ್ಷ್ಮಿ ಅಳಲು ತೋಡಿಕೊಂಡರು.

ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಸಿ.ಸಿದ್ದರಾಮಯ್ಯ, ಪುರಸಭೆ ಸದಸ್ಯರಾದ ರೇಣುಕಮ್ಮ, ಕೆ.ಜಿ.ಕೃಷ್ಣೇಗೌಡ, ಅಲೆಮಾರಿ ಮುಖಂಡರಾದ ಸಂತೋಷ್, ಹನುಮಂತಪುರ ರಾಜಣ್ಣ, ಸಣ್ಣಲಕ್ಷ್ಮಕ್ಕ, ಡಿಂಕನಹಳ್ಳಿ ರಾಜಪ್ಪ, ರಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT