ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನಿಸುವ ಓದುಗರ ಸೃಷ್ಟಿಯೇ ಸೃಜನಶೀಲತೆ

‘ಕೇಶವರೆಡ್ಡಿ ಹಂದ್ರಾಳರ ಕಥನದ ಮುಖಾಮುಖಿ’ ಕಾರ್ಯಕ್ರಮ
Last Updated 24 ಮಾರ್ಚ್ 2018, 12:52 IST
ಅಕ್ಷರ ಗಾತ್ರ

ಮೈಸೂರು: ಓದುಗರ ಜಗತ್ತಿಗೆ ಹೊಸ ಪ್ರಶ್ನೆಗಳನ್ನು ಕೇಳುವುದಕ್ಕೆ ಸಿದ್ಧಗೊಳಿಸುವ ಓದುಗರ ವರ್ಗವನ್ನು ಸೃಷ್ಟಿಸುವುದು ಕತೆಗಾರನ ಸೃಜನಾತ್ಮಕ ಕೆಲಸವಾಗಿದೆ‌ ಎಂದು ಚಿಂತಕ ಅಗ್ರಹಾರ ಕೃಷ್ಣಮೂರ್ತಿ ಇಲ್ಲಿ ಹೇಳಿದರು.

ನೇಗಿಲಯೋಗಿ ಟ್ರಸ್ಟ್‌, ಮೈಸೂರು ವಿಶ್ವವಿದ್ಯಾನಿಲಯದ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರವು ಶುಕ್ರವಾರ ಹಮ್ಮಿ ಕೊಂಡಿದ್ದ ‘ಕೇಶವರೆಡ್ಡಿ ಹಂದ್ರಾಳರ ಕಥನದ ಮುಖಾಮುಖಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನವನ್ನು ನೋಡುವ ವಿಧಾನ, ಜೀವನ ನೀಡುವ ಮಾದರಿಯನ್ನು ಬರವಣಿಗೆಗೆ ಇಳಿಸುವ ತಾಕತ್ತು, ಧೈರ್ಯ ಮಾಡುವುದು ಒಂದು ಪ್ರಯೋಗಶೀಲತೆಯೂ ಹೌದು. ಹೊಸ ಬಗೆಯ ಬರವಣಿಗೆಯೂ ಹೌದು. ಉತ್ತಮ ಕತೆಗಾರ ಆಗಬೇಕಾದರೆ ಒಳ್ಳೆಯ ವಾಕ್ಯ ರಚನೆಯ ಮೂಲಕ ಸಮಾಜಕ್ಕೆ ಒಂದು ದಿವ್ಯ ಅನುಭವ ನೀಡುವಂಥ ಕೃತಿ ರಚಿಸಬೇಕು ಎಂದು ಯೋಚನೆ ಮಾಡುತ್ತಾರೆ. ಇಂಥ ಸಾಂಪ್ರದಾಯಿಕ ವಿನ್ಯಾಸ ಬಿಟ್ಟು ಬೇರೆ ವಿಚಾರಗಳ ಮೂಲಕ ಕೃತಿಯನ್ನು ಕಟ್ಟಿಕೊಡುವ ಸೃಜನಾತ್ಮಕ ವ್ಯಕ್ತಿಗಳಲ್ಲಿ ಕೇಶವರೆಡ್ಡಿ ಹಂದ್ರಾಳ ಒಬ್ಬರಾಗಿದ್ದಾರೆ ಎಂದರು.

ಅಸಾಂಪ್ರದಾಯಿಕ ವಸ್ತುಗಳನ್ನು ಕತೆಗಳಲ್ಲಿ ಆಯ್ದುಕೊಳ್ಳುವುದಕ್ಕೂ ಧೈರ್ಯ ಬೇಕಾಗುತ್ತದೆ. ಅಲ್ಲದೆ, ನಮ್ಮ ನೈಜ ಬದುಕು ಇಂದು ಸಂಕೀರ್ಣತೆಗಳಿಂದ ಕೂಡಿದೆ. ವಿಚಿತ್ರ ಘಟನಾವಳಿಗಳು ನಡೆಯುತ್ತವೆ. ಅವು ಪತ್ರಿಕೆಗಳ ತುಣುಕುಗಳಂತೆ ಕಾಣುತ್ತವೆ. ಅವು ಮನುಷ್ಯ ಸಂಬಂಧಗಳ ನಡುವೆಯೇ ನಡೆಯುತ್ತಿವೆ ಎಂಬ ವಿದ್ಯಮಾನ ಎಂದು ಅನಿಸುವುದೇ ಇಲ್ಲ ಎಂದು ಹೇಳಿದರು.

ಒಬ್ಬ ಅಪ್ಪಟ ಬರಹಗಾರ, ಕತೆಗಾರ ಯಾರಿಂದಲೂ ಯಾವ ರೀತಿಯ ಅಪೇಕ್ಷೆಗಳನ್ನೂ ನಿರೀಕ್ಷಿಸು ವುದಿಲ್ಲ. ಅದು ಒಬ್ಬ ಓದುಗನ ಮೆಚ್ಚುಗೆಯಾಗಬಹುದು. ಅಥವಾ ಒಂದು ಸಮೂಹದ ಮೆಚ್ಚುಗೆ ಯಾಗಬಹುದು; ಒಂದು ಅಕಾಡೆಮಿಯ ಪ್ರಶಸ್ತಿಯೇ ಆಗಿರಬಹುದು. ಈ ರೀತಿಯ ಸಾಹಿತ್ಯೇತರ ಕಾರಣದ ವಿದ್ಯಮಾನಗಳಿಗೆ ಯಾರು ವಿಮುಖರಾಗಿರುತ್ತಾರೋ ಅಂಥವರು ದೊಡ್ಡ ಲೇಖಕರಾಗುವ ಅರ್ಹತೆ ಹೊಂದಿರುತ್ತಾರೆ ಎಂದರು.

ನೇಗಿಲಯೋಗಿ ಟ್ರಸ್ಟ್‌ ವ್ಯವಸ್ಥಾಪಕ ಟ್ರಸ್ಟಿ ಡಾ.ಎಚ್‌.ಆರ್‌.ಸ್ವಾಮಿ ಮಾತನಾಡಿ, ‘ಹಂದ್ರಾಳ ಅವರ ಕೃತಿಗಳಲ್ಲಿ ಗ್ರಾಮೀಣ ಬದುಕು ಅನಾವರಣಗೊಂಡಿದೆ. ಅವರ ಕೃತಿಗಳಲ್ಲಿ ಬರುವ ಪಾತ್ರಗಳೂ ಗ್ರಾಮೀಣ ಸೊಗಡಿನವು’ ಎಂದರು.

ಲೇಖಕ ಡಾ.ಸ್ವಾಮಿ ಆನಂದ್‌, ‘ಒಂದೇ ರೀತಿಯ ಶಿಕ್ಷಣದಿಂದಾಗಿ ಹಳ್ಳಿಯ ಮೂಲಜ್ಞಾನ ಪರಂಪರೆ ನಶಿಸುತ್ತಿದೆ. ಇಂದಿನ ಸ್ಥಿತ್ಯಂತರದ ಕಾಲಘಟ್ಟದಲ್ಲಿ ಹಳ್ಳಿಯ ಮೂಲಜ್ಞಾನವನ್ನು ದಾಖಲಿಸುವುದು ಉತ್ತಮ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಪಮಾನ ಹೆಚ್ಚಳ ಎಂಬ ಜಾಗತಿಕ ಭಯೋತ್ಪಾದನೆಯೂ ಹೆಚ್ಚಾಗಿದೆ. ಇರುವ ನೀರನ್ನು ಬಳಸಲೇ ಅಥವಾ ಬೇಡವೇ ಎಂಬ ಚಿಂತನೆ ಹೆಚ್ಚಾಗಿದೆ. ಎಲ್ಲರೂ ಜಲತಜ್ಞರಂತೆ ವರ್ತಿಸುತ್ತಿದ್ದಾರೆ ಎಂದು ಹೇಳಿದರು.

ಕನ್ನಡ ಕಥನ ಪರಂಪರೆ ಮತ್ತು ಕೇಶವರೆಡ್ಡಿ ಹಂದ್ರಾಳ ಕುರಿತು ಡಾ.ಜಿ.ವಿ.ಆನಂದಮೂರ್ತಿ, ಹಂದ್ರಾಳರ ಕಥೆಗಳಲ್ಲಿ ಬರುವ ಬದುಕಿನ ಸೂಕ್ಷ್ಮಗಳು ಕುರಿತು ಮಹೇಶ್‌ ಹರವೆ, ಹಂದ್ರಾಳ ಕಥನದ ಗ್ರಾಮೀಣ ವಾಸ್ತವತೆ ಕುರಿತು ಡಾ.ಪ್ರಕಾಶ್‌ ವಿಚಾರ ಮಂಡಿಸಿದರು.

ಪತ್ರಕರ್ತ ಡಾ.ಜಗದೀಶ್‌ ಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಡಾ.ಎಸ್‌.ನರೇಂದ್ರಕುಮಾರ್‌ ಭಾಗ ವಹಿಸಿದ್ದರು.

ಹಂದ್ರಾಳರೊಂದಿಗೆ ಮಾತುಕತೆ ಕಾರ್ಯಕ್ರಮಕ್ಕೆ ಪ್ರೊ.ಎಸ್‌.ಎಸ್‌.ಶೇಖರ್‌ ಚಾಲನೆ ನೀಡಿದರು. ಎಚ್‌.ಆರ್‌.ಸುಜಾತಾ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT