ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನದಲ್ಲಿ ಕೇಳುವ ಎದೆಬಡಿತ

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಶಿಲ್ಪಗಳು ಮಾತನಾಡುವುದಿಲ್ಲ. ಸುಮ್ಮನೆ ಅದನ್ನೇ ನೋಡುತ್ತಾ ಇರಿ. ಅದು ನಿಮ್ಮ ಜೊತೆ ಸಂವಹನಕ್ಕಿಳಿಯುತ್ತದೆ. ಅಲ್ಲಿ ಮಾತಿನ ವರಸೆ ಇಲ್ಲ. ಬರೀ ಮೂಕ ಸಂದರ್ಶನ. ಲೇವಡಿ ಮಾತಿರಬಹುದು. ನಗು ಇರಬಹುದು. ರೋದನ ಇರಬಹುದು. ತುಂಬಾ ಗಂಭೀರ ಚಿಂತನೆ ಇರಬಹುದು. ಇಪ್ಪತ್ತು ವರ್ಷಗಳಿಂದ ಇಂತಹ ಅಸಂಗತ ಶಿಲ್ಪಗಳಿಗೆ ಅದ್ಭುತ ಶಕ್ತಿ ನೀಡಿ ಪೋಷಿಸುವ ಕಾಯಕದಲ್ಲಿ ತೊಡಗಿರುವ ಕಲಾವಿದರೊಬ್ಬರಿದ್ದಾರೆ. ಕೃತಿಗಳ ಕೆಳಗೆ ಎಲ್. ಎನ್. ತಲ್ಲೂರ್ ಎಂಬ ಹೆಸರು ಇರುತ್ತದೆ. ಅರೆ! ಹೆಸರಿನಲ್ಲೂ ಹೀಗೆ ಅಸಂಗತರಂತಿದ್ದರೆ ಹೇಗೆ ?! ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ದ ಹೆಸರು ಮಾಡುತ್ತೇನೆ ಎಂಬ ಸಾದಾ ಸೀದಾ ಮನೋಭಾವ ಲಕ್ಷ್ಮಿನಾರಾಯಣ್ ರದ್ದು.

ತಲ್ಲೂರ್ ಅವರದ್ದು ದಕ್ಷಿಣ ಕೊರಿಯಾದಲ್ಲಿ ವಾಸ. ಇದ್ದಕಿದ್ದಂತೆ ಅರಬ್ಬಿ ಸಮುದ್ರಕ್ಕೆ ತಾಗಿಕೊಂಡಿರುವ ಕುಂದಾಪುರ ಸಮೀಪದ ತಲ್ಲೂರಿನಲ್ಲಿ ಪ್ರತ್ಯಕ್ಷರಾಗಿಬಿಡುತ್ತಾರೆ. ಬಹುಶಃ ಅತ್ತ ಪತ್ನಿ ಸುನ್ ಗ್ಯುಮ್ ಲೀ ಮತ್ತು ಮಗಳು ವಾಂಗ್ ಸುಕ್ ಜಾ ಜತೆಗಿದ್ದಾಗ ಮೂಡುವ ಕನಸುಗಳಿಗೆ, ಇಲ್ಲಿ ತಾಯಿ, ಸೋದರನ ಕುಟುಂಬಗಳೊಂದಿಗೆ ಒಂದು ಪರಿಪೂರ್ಣ ರೂಪ ದೊರೆಯುತ್ತದೆ ಎಂದು ಕಾಣುತ್ತದೆ. ನಡುವೆ ನ್ಯೂಯಾರ್ಕ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಪ್ಯಾರಿಸ್, ಸಿಂಗಾಪುರ, ತೈವಾನ್, ಸ್ಪೇನ್, ಚೀನಾ, ಬ್ರೆಜಿಲ್, ಜರ್ಮನಿ, ಹಾಂಕಾಂಗ್, ಕ್ಯೂಬಾ ದೇಶಗಳ ನೀರು ಕುಡಿದು; ಮರಳಿ ಸ್ವದೇಶಕ್ಕೆ ಬಂದು ನವದೆಹಲಿ, ಮುಂಬೈ, ಹೈದರಾಬಾದ್ ಕಡೆ ಹೋಗಿ ’ಮೇಕ್ ಇನ್ ಇಂಡಿಯಾ’ ಕ್ಕೂ ಸೈ ಅನ್ನುತ್ತಾರೆ. ಅವರಿಗಿರುವ ಭಾರತದ ನಂಟು ಅವರ ಬಹುತೇಕ ಕಲಾಕೃತಿಗಳಲ್ಲಿ ಕಾಣುತ್ತದೆ. ಅಂದರೆ ಅವರಂತೆಯೇ ಅವರ ಶಿಲ್ಪಗಳಲ್ಲಿರುವ ಭಾರತೀಯ ವಸ್ತುಗಳೂ ಸೀಮೋಲ್ಲಂಘನ ಮಾಡುತ್ತಿರುತ್ತವೆ.

(ನ್ಯೂಯಾರ್ಕ್‌ನ ಜಾಕ್‌ಶೈನ್‌ಮ್ಯಾನ್‌ ಗ್ಯಾಲರಿಯಲ್ಲಿರುವ ‘ಕ್ರೊಮೊಟೋಫೋಬಿಯಾ’)

ಚೋಳ ಕಾಲದ ಪ್ರತಿಮೆಯ ತದ್ರೂಪ ರಚಿಸಿ ಅದನ್ನು ಇಂದಿನ ಕಾಲದ ಸಾಮಾಜಿಕ ನೆಲೆಯಲ್ಲಿ ರೂಪಾಂತರಗೊಳಿಸುವುದು ‘ತಲ್ಲೂರ್ ತಂತ್ರಗಾರಿಕೆ’. ತಂತ್ರಗಾರಿಕೆ ಕಲಾವಿದನ ಜತೆಗೇ ಸಾಗುವ ಬ್ರ್ಯಾಂಡ್. ‘ಯುನಿಕೋಡ್’(2011)ಎಂಬ ಹೆಸರಿನ ಒಂದು ಶಿಲ್ಪದಲ್ಲಿ ಕಾಣುವುದು ನೃತ್ಯ. ಕಾಂಕ್ರೀಟೀಕರಣ, ಹಣದ ವ್ಯಾಮೋಹ ಮನುಷ್ಯನ ಮೇಲೆ ಅಟ್ಟಹಾಸದ ನೃತ್ಯ ಮಾಡುತ್ತಿದೆ. ಆದರೆ ಅಲ್ಲಿ ಯಾರೂ ನೃತ್ಯ ಮಾಡುವುದು ಕಾಣುವುದಿಲ್ಲ. ಅದೇ ಈ ಕೃತಿಯ ಸೊಬಗು. ಸುಮಾರು 800 ಕಿಲೋ ಭಾರದ ಈ ಕೃತಿಯನ್ನು ಎಲ್.ಎನ್  ಸ್ವಲ್ಪ ಜಾಸ್ತಿಯೇ ಪ್ರೀತಿಸುತ್ತಾರೆ. ಇವರ ಯೋಚನೆಗಳೆಲ್ಲಾ ಹಾಗೇ.  ಕ್ರೇನ್ ನಲ್ಲಿ ಎತ್ತಿ ಇಡುವಷ್ಟು ದೊಡ್ದದು ಮತ್ತು ಅಷ್ಟೇ ತೂಕದ್ದು.

ಒರೆಸಿ ಹಾಕುವುದು ಅಷ್ಟು ಸುಲಭವಲ್ಲ. ಕಂಪ್ಯೂಟರ್ ನಿಂದ ಡಿಲೀಟ್ ಮಾಡಿದ್ದೇನೆ ಅನ್ನುವುದು ಕೂಡಾ ಹಾಸ್ಯಾಸ್ಪದ. ಶಾಶ್ವತವಾಗಿ ಅಳಿಸಿ ಹಾಕುವುದನ್ನು ಪ್ರತಿಬಿಂಬಿಸುವ ಕೃತಿ ‘ಇರೇಸರ್ ಪ್ರೊ’.  ಅಲ್ಲಿ ನಮ್ಮ ಬಾಪೂವಿನ ಛಾಯೆ ಇದೆಯಲ್ಲಾ ಎಂದು ಅನಿಸಿದರೆ ಅದು ಅವರವರ ಸಮಸ್ಯೆ. ಭಾರತೀಯರಿಗೆ ತುಂಬಾ ಹತ್ತಿರವಾಗುವ ‘ಇರೇಸರ್’ ಇಸ್ರೇಲ್ ನ ಆರ್ಟ್ ವಿಂಟೇಜ್ ಸಂಗ್ರಹದಲ್ಲಿದೆ.

ನವದೆಹಲಿಯ ಕಿರಣ್ ನಾಡರ್ ಮ್ಯೂಸಿಯಂನ ಸಂಗ್ರಹದಲ್ಲಿರುವ ಇವರ ವಿಶೇಷ ಕೃತಿ-ವಿನಿ.ವಿಡಿ,ವಿಸಿ (ನಾ ಬಂದೆ, ನಾ ನೋಡಿದೆ, ನಾ ಗೆದ್ದೆ) ಇದರ ಶಕ್ತಿ ನೋಡಿ!  ನೇರ ನಮ್ಮನ್ನು 200 ವರ್ಷಗಳ ಹಿಂದಕ್ಕೆ ಕೊಂಡೊಯ್ಯುವ ಮಂಗಳೂರು ಹಂಚುಗಳು ಮತ್ತು ಕೆಲವು ಹಂಚುಗಳಲ್ಲೇ ಉದ್ಭವಿಸಿದ ಹಠ ಯೋಗ ಮಾಡುತ್ತಿರುವ ಜೀವಿಗಳು! ಮಂಗಳೂರಿಗೆ ಬಂದ ಬಾಸೆಲ್ ಮಿಷನ್ ನವರು ಹಂಚಿನ ಕಾರ್ಖಾನೆ ಆರಂಭಿಸಿ, ಜತೆಗೆ ಮತಾಂತರ ಕಾರ್ಯದಲ್ಲಿ ತೊಡಗಿ, ಮತಾಂತರಗೊಂಡವರನ್ನು ಅಲ್ಲಿ ದುಡಿಸಿದ್ದು ಈ ಹಂಚುಗಳು ಹೇಳುವ ನಿಜಕತೆ.

(ಡಾ. ಬಾವೂ ದಾಜಿ ಲಾಡ್ ಮುಂಬೈ ಸಿಟಿ ಮ್ಯೂಸಿಯಂನಲ್ಲಿನ ಕಲಾಕೃತಿ (ಇದರ ಇರೇಸರ್‌ ಪ್ರೊ 1–2)

ಹಣ ಕಂಡರೆ ಮನುಷ್ಯ ಬಾಯಿ ಬಿಡುತ್ತಾನೆ. ಹೆಣ ಕೂಡಾ! ತಲ್ಲೂರ್ ಅವರ ಬಹಳಷ್ಟು ಕೃತಿಗಳಲ್ಲಿ ಹಣ ಗಿರಕಿ ಹೊಡೆದಿದೆ. ಹಣದ ಹೇಸಿಗೆತನವನ್ನು ಅತ್ಯಂತ ಪರಿಣಾಮಕಾರಿಯಾಗಿ ತೋರಿಸಿದ್ದಾರೆ. ಜಾಕಶೈನ್ ಮ್ಯಾನ್ ಗ್ಯಾಲರಿ, ನ್ಯೂಯಾರ್ಕ್ ನಲ್ಲಿರುವ ‘ಕ್ರೊಮೊಟೋಫೋಬಿಯಾ’ ಕೃತಿಯಲ್ಲಿ ದೊಡ್ಡ ನಗುವಿನ ಬುದ್ಧ ಇಲ್ಲದಿದ್ದರೂ (ಮತ್ತೆ ತಲ್ಲೂರು ತಂತ್ರಗಾರಿಕೆ!) ಆತನ ನೆನಪು ಬಾರದೆ ಇರುವುದು ಸಾಧ್ಯವಿಲ್ಲ. ಚೀನಾದ ‘ಅದೃಷ್ಟ ಲಕ್ಷ್ಮಿ’ ಯೆಂದೇ ಖ್ಯಾತಿ ಪಡೆದಿರುವ ‘ಲಾಫಿಂಗ್ ಬುದ್ಧ’ನ ಮೇಲೆ ಬಿದ್ದಿರುವ ಮರದ ದಿಮ್ಮಿ. ಪಕ್ಕದಲ್ಲಿ ವೀಕ್ಷಕರಿಗಾಗಿ ಸುತ್ತಿಗೆ ಇಟ್ಟಿರುತ್ತಾರೆ. ಸುತ್ತಿಗೆಯಿಂದ ನಿಮ್ಮಲ್ಲಿರುವ ನಾಣ್ಯವನ್ನು ಆ ಮರದ ದಿಮ್ಮಿಗೆ ಚುಚ್ಚುತ್ತಲೇ ನಮ್ಮ ಆಸೆ ಈಡೇರಿಸುವಂತೆ ಕೇಳಿಕೊಳ್ಳಬಹುದು.

‘ಒಬಿಚುವರಿ’ ಇನ್ನೊಂದು ಪರಿಣಾಮಕಾರಿ ಕೃತಿ. ಇಲ್ಲೂ ವೀಕ್ಷಕ– ಕೃತಿಯಲ್ಲಿ ಸಂಮೋಹನ ಶಕ್ತಿ ಇದೆ. ಪೂರ್ತಿ ನಾಣ್ಯಗಳಿಂದ ಚುಚ್ಚಲ್ಪಟ್ಟ ಮರದದಿಮ್ಮಿಯ ‘ಶವ ಸಂಸ್ಕಾರ’! ದಿಮ್ಮಿಯ ಮೇಲ್ಭಾಗದಿಂದ ಹದವಾಗಿ ನಿಜವಾದ ಹೊಗೆ ಮೇಲೇರುತ್ತಿದ್ದು ವೀಕ್ಷಕನನ್ನು ಹಿಡಿದೆಳೆಯುವ ಅದ್ಭುತ ಪ್ರಯೋಗವಿದು.

2005ರಲ್ಲಿ ತಯಾರಾದದ್ದು ’ಸೋವನೀರ್ ಮೇಕರ್’ ಎಂಬ ಕೃತಿ. ಅದೊಂದು ಮುಳ್ಳುತಂತಿ ಉತ್ಪಾದಿಸುವ ಯಂತ್ರ. ವೀಕ್ಷಕ ಸ್ವತಃ ಆ ತಂತಿಯನ್ನು ತಯಾರು ಮಾಡಬಹುದು. ಹಾಗೆ ಮಾಡುವಾಗ ಎಲ್ಲಾ ದೇಶಗಳ ರಾಷ್ಟ್ರಗೀತೆಗಳು ಒಂದರ ಹಿಂದೆ ಇನ್ನೊಂದರಂತೆ ಮೊಳಗುತ್ತವೆ! ಅಲ್ಲಿ ದೇಶಪ್ರೇಮದ ಇನ್ನೊಂದು ನೆರಳು ಕೂಡಾ ಇದೆ.

(‘ವಿನಿ, ವಿಡಿ, ವಿಸಿ’)

ತಲ್ಲೂರ್ ಅವರಿಗೆ ಪ್ರಯೋಗಗಳನ್ನು ಮಾಡದಿದ್ದರೆ ನಿದ್ದೆ ಬರುವುದಿಲ್ಲ. ಕೈಯಲ್ಲಿ ತನ್ನ ಮೆದುಳನ್ನು ಹಿಡಿದುಕೊಂಡೇ ಕೂರುತ್ತೀರಾ ಎಂಬ ಅಸಹಜ ಪ್ರಶ್ನೆಗೆ ಮಿಲಿಯನ್ ಡಾಲರ್ ನಗುವಿನ (ಅವರ ‘ಟ್ರೇಡ್ ಮಾರ್ಕ್’ ಕೂಡಾ) ಉತ್ತರ ಸಿಗುತ್ತದೆ. ‘ಒಟ್ಟಾರೆ ನನ್ನ ಕೆಲಸ ನನಗೇ ಅಚ್ಚರಿ ಮೂಡಿಸಬೇಕು.’ ಇದು ಅವರ ಸಿದ್ಧಾಂತ. ಅದೆಷ್ಟು ಸರಳವಾಗಿ ಹೇಳುತ್ತಾರಲ್ಲ!

ಮೈಸೂರಿನ ಕಾವಾದಲ್ಲಿ ಒಂದಿಷ್ಟು ಕಲಾನೈಪುಣ್ಯಕ್ಕೆ ಬೇಕಾದುದನ್ನು ತಲೆಗೆ ತುರುಕಿಸಿ, 1999ರಲ್ಲಿ ಅಮೆರಿಕದ ಬೋಸ್ ವಾಸಿಯಾ ಸಂಸ್ಥೆ ನೀಡಿದ ‘ಎಮರ್ಜಿಂಗ್ ಆರ್ಟಿಸ್ಟ್’ ಪ್ರಶಸ್ತಿಯೊಂದಿಗೆ ಆರಂಭವಾದ ಅವರ ಯೋಚನಾಲಹರಿಗಳು ದೇಶ ವಿದೇಶಗಳ ಮ್ಯೂಸಿಯಂ, ಆರ್ಟ್ ಗ್ಯಾಲರಿ ಮತ್ತು ಕಲಾರಸಿಕರ ಸಂಗ್ರಹದಲ್ಲಿ ಸಾಕ್ಷಿಯಾಗಿ ಕುಳಿತಿವೆ.

ಕೊನೆಗೊಂದು ಸಂಶಯ. ‘ನೀವು ರೂಪ ಕೊಡುತ್ತೀರೋ, ವಿರೂಪಗೊಳಿಸುತ್ತೀರೋ?’!

ಅದಕ್ಕೆ ಅವರು ಎರಡು ಉದಾಹರಣೆಗಳನ್ನು ಮುಂದಿಡುತ್ತಾರೆ. ಒಂದು: ದೇವಸ್ಥಾನದಲ್ಲಿ ಡೋಲು, ತಮಟೆ, ಗಂಟೆ ಬಾರಿಸುವುದಕ್ಕೆ ಜನ ಇದ್ದರು. ಈಗ ಅಷ್ಟನ್ನೂ ಒಮ್ಮೆಲೇ ಯಾವ ಮನುಷ್ಯನ ನೆರವಿಲ್ಲದೆ ಬಾರಿಸುವ ತಾಂತ್ರಿಕತೆ ಬಂದಿದೆ. ಎರಡು: ಗುಡಿಯಲ್ಲಿರುವ ದೇವರಿಗೆ ಬೆಳ್ಳಿ ಕವಚ ಮಾಡಿಸಬೇಕಿತ್ತು. ಅಳತೆ ಮಾಡುವುದಕ್ಕೆ ಗರ್ಭಗುಡಿಗೆ ಪ್ರವೇಶ ಸಿಗಲಿಲ್ಲ. ಅದರ ಪರಿಣಾಮ ದೇವರಿಗೆ ‘ಸ್ಟಿಚ್ಚಿಂಗ್’ ಸರಿಯಾಗುವುದಿಲ್ಲ. ಅದಕ್ಕೆ ಕಂಡುಕೊಂಡ ಮಾರ್ಗ. ಆ ಬೆಳ್ಳಿ ಕವಚಕ್ಕೆ ಹೊಂದಿಕೊಳ್ಳುವ ಹೊಸ ಪ್ರತಿಮೆ!

ಹಳೇ ಶಿಲ್ಪಗಳನ್ನು ವಿರೂಪಗೊಳಿಸುತ್ತಲೇ ಸಮಕಾಲೀನ ಕಲೆಯನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗುವುದಿದೆಯಲ್ಲ. ಅದು ಎಲ್.ಎನ್. ತಲ್ಲೂರು.

**

ಒಂದು ಪುಸ್ತಕ

ಅಂತರರಾಷ್ಟೀಯ ಮಟ್ಟದಲ್ಲಿ ಹೆಸರಿದ್ದರೂ ಕನ್ನಡಿಗರಿಗೆ ಅಪರಿಚಿತರಂತಿದ್ದ ಈ ಶಿಲ್ಪ ಕಲಾವಿದನನ್ನು ಪರಿಚಯಿಸುವ ಪುಸ್ತಕ ಈಗ ಹೊರಬಂದಿದೆ. ‘ತಲ್ಲೂರು ಎಲ್. ಎನ್’ನಲ್ಲಿ ನಮಗೆ ಸಿಗುವುದು ಕಲಾವಿದನ ಕೃತಿಗಳ ಒಂದು ಭಾಗವಷ್ಟೇ. ಅವೆಲ್ಲಾ ‘ಆರ್ಥಿಕತೆ’ಯನ್ನು ವಿಷಯವಾಗಿಟ್ಟುಕೊಂಡು ರಚಿಸಿದ ಕುತೂಹಲಕಾರಿ ಕೃತಿಗಳು. ಈಚೆಗೆ ಅವರ ‘ಕಾಯ್ನೇಜ್’ ಎಂಬ ಹೊಸ ಶಿಲ್ಪವನ್ನು ಮಣಿಪಾಲದ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪನೆಗೊಳಿಸುವ ಸಂದರ್ಭದಲ್ಲಿ ಈ ಪುಸ್ತಕ ಬಿಡುಗಡೆಯಾಗಿತ್ತು. ಇಬ್ಬರು ಅಂತರರಾಷ್ಟ್ರೀಯ ಕಲಾವಿಮರ್ಶಕರು ಬರೆದ ಲೇಖನಗಳಿರುವ ಕನ್ನಡದ ಮಟ್ಟಿಗೆ ಅಪರೂಪದ ಈ ಪುಸ್ತಕದ ಸಂಪಾಕತ್ವವನ್ನು ಅವರ ಸಹೋದರ ಲೇಖಕ ರಾಜಾರಾಂ ತಲ್ಲೂರು ವಹಿಸಿದ್ದಾರೆ.

(ನವದೆಹಲಿಯ ನೇಚರ್‌ಮೋರ್ತ್‌ ಗ್ಯಾಲರಿಯಲ್ಲಿನ ಕಲಾಕೃತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT