ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಗತಿ ಮನೆತನದ ಚಿತ್ರಗಳ ಬೆರಗು

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನಮ್ಮ ಉಡುಗೆತೊಡುಗೆಗಳು ಭಾಗಶಃ ನಮ್ಮ ಕಸುಬು, ಹುದ್ದೆ, ಅಂತಸ್ತು, ಶೋಕಿತನಗಳನ್ನು ಕ್ವಚಿತ್ತಾಗಿ ಸಂಕೇತಿಸುತ್ತವೆ. ಇಲ್ಲವೇ ಅವುಗಳ ಛಾಯೆಯಲ್ಲಿ ಒಡಮೂಡಿರುತ್ತವೆ. ಹಳೆಯ ಅಥವಾ ಪಾರಂಪರಿಕ ವೇಷಭೂಷಣಗಳು, ಅಲಂಕಾರಿಕ ಸಾಧನಗಳು ಇತ್ತೀಚೆಗೆ ಹೊಸ ಬಗೆಗಳಲ್ಲಿ ದಾಂಗುಡಿಯಿಡುತ್ತ ಓಲ್ಡ್ ಈಸ್ ಗೋಲ್ಡ್ ಎಂಬ ವರ್ಣಕ ಪದಗಳನ್ನು ಸಿಂಚನ ಮಾಡಿಕೊಳ್ಳುತ್ತಿವೆ! ಹಳೆಯದೆಲ್ಲವನ್ನು ತಿರಸ್ಕಾರದಿಂದ ಅಥವಾ ಅವಗಣನೆಯಿಂದ ನೋಡುವ ಪರಿಪಾಠ ತಪ್ಪುತ್ತಿರುವುದು ಸಂತೋಷಕರ ಸಂಗತಿಯೇ ಸರಿ.

ದೇಸಗತಿಯ ಮನೆತನಗಳ(ನಾಡಗೌಡ, ದೇಸಾಯಿ ಎಂದರೂ ಆದೀತು) ಉಲ್ಲೇಖಗಳು 9ನೇ ಶತಮಾನಕ್ಕೂ ಹಿಂದಿನ ಶಾಸನಗಳಲ್ಲಿ ಕಂಡುಬರುತ್ತವೆ. ದೇಸಗತಿ ಮನೆತನಗಳು ಯಾವ ಅರಸರ ಕಾಲವನ್ನು ಪ್ರತಿನಿಧಿಸಿದ್ದವೋ ಅವರ ವೇಷಭೂಷಣ ಕೂಡ ಆಯಾ ಕಾಲದಲ್ಲಿ ಬಳಕೆಯಲ್ಲಿದ್ದ ವೇಷಭೂಷಣಗಳ ಪ್ರಭಾವಕ್ಕೆ ಒಳಗಾಗಿವೆ.

ಮೊಘಲರು, ಶಾಹಿ ಮನೆತನಗಳು, ಮರಾಠಾ- ಪೇಶ್ವೆ ಮತ್ತು ಬ್ರಿಟಿಷರ ಆಳ್ವಿಕೆಯ ಸರಣಿಯಲ್ಲಿ ವೇಷಭೂಷಣಗಳು ಅಂದಿನ ಆಮದು, ರಫ್ತಿನ ಕಲಾತ್ಮಕತೆ, ಆರ್ಥಿಕ ವಹಿವಾಟು, ಅಲಂಕಾರ ಪ್ರಜ್ಞೆಯ ಚಿತ್ರಣಗಳನ್ನು ಅರಹುತ್ತವೆ. ಅಲ್ಲಿ ಸ್ವದೇಶಿಯ ಮತ್ತು ಸಮುದ್ರದಾಚೆಗಿನ ಸಂಕರತೆಯ ಕೊಡುಗೆ ಸಾಕಷ್ಟು ಇದೆ. ಅವರ ಅಂತಸ್ತನ್ನು ಅಧಿಕಾರವನ್ನು ಪ್ರಚಲಿತದಲ್ಲಿದ್ದ ಕಲೆಯನ್ನು ಜಾನಪದೀಯ ಅಂಶಗಳನ್ನು ಹೊರಹಾಕುತ್ತವೆ.

ಈ ನಿಟ್ಟಿನಲ್ಲಿ ದೇಸಗತಿ ಮನೆತನಗಳ ಹಳೆಯ ಫೋಟೊಗಳಲ್ಲಿ ಕಣ್ಣಾಡಿಸಿದಾಗ ಉತ್ತರ ಕರ್ನಾಟಕದ ಭಾಗದಲ್ಲಿ ಬಹುಬಳಕೆಯಲ್ಲಿದ್ದ ಪ್ರಚಲಿತದಲ್ಲಿದ್ದ ಕೆಲ ವೇಷಭೂಷಣಗಳ ಉತ್ತರ ಕರ್ನಾಟಕೀಯ(ಜವಾರಿ) ಹೆಸರುಗಳನ್ನು ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಒಂದೊಂದು ಪ್ರದೇಶದಲ್ಲಿ ಇವೇ ವೇಷಭೂಷಣಗಳಿಗೆ ಬೇರೆ ಹೆಸರಿನಿಂದಲೂ ಕರೆಯುತ್ತಿರಲೂಬಹುದು.ತಾಳೆಹಾಕಿ ನೋಡಬೇಕು ಅಷ್ಟೆ.

ದೇಸಗತಿ ಮನೆತನದ ಪುರುಷರು ಮುಸ್ಲಿಂ ಅರಸರ ಆಳ್ವಿಕೆಯಲ್ಲಿ ಶೇರವಾನಿ, ಕುರ್ತಾ- ಪೈಜಾಮ್, ಟೋಪಿ, ಪೇಟಾಗಳನ್ನು ಧರಿಸುತ್ತಿದ್ದರೆ, ಇನ್ನು ಕೆಲಕಡೆಗೆ ಸ್ವದೇಶಿ ಚಳವಳಿ ಹುಟ್ಟಿಕೊಂಡ ಕಾಲದಲ್ಲಿ ಧೋತಿ, ಬಿಚ್ಚಿಡುವ ಗುಂಡಿ ಅಂಗಿ, ಶಲ್ಲೆ, ಚರ್ಮದ ಮೆಟ್ಟುಗಳು ಸ್ಥಾನ ಪಡೆದವು.

ಬ್ರಿಟಿಷರಿಂದ ಪ್ರಭಾವಿತರಾಗಿದ್ದ ಕೆಲ ದೇಶಗತಿ ಅಧಿಕಾರಸ್ಥರು ಪ್ಯಾಂಟು, ಶರ್ಟು, ಕೋಟು, ಜ್ಯಾಕೆಟ್, ಟೈ ಧರಿಸುವುದನ್ನು ವಾಡಿಕೆ ಮಾಡಿಕೊಂಡರು. ಅದರ ಜೊತೆಗೆ ವಾಕಿಂಗ್ ಸ್ಟಿಕ್ಕು ಅಪ್ಪಿಕೊಂಡಿತು. ಈ ಮನೆತನದ ಅಧಿಕಾರಸ್ಥ ಪುರುಷರು ಬೆಳ್ಳಿ, ಬಂಗಾರದ ಆಭರಣಗಳನ್ನು ಅಲ್ಪಪ್ರಮಾಣದಲ್ಲಿ ಬಳಸಿದ್ದು ಕಾಣಸಿಗುತ್ತದೆ.

ದೇಸಗತಿ ಮನೆತನದ ಅಧಿಕಾರಸ್ಥರ ರಕ್ಷಣೆಗಿದ್ದ ಸಿಪಾಯಿಗಳನ್ನು ಈ ಭಾಗದಲ್ಲಿ ಪಟ್ಟಾ ಸಿಪಾಯಿಗಳೆಂದು ಕರೆಯುತ್ತಾರೆ. ಬಲಭುಜದ ಮೇಲ್ಭಾಗದಿಂದ ಎಡನಡುವಿನವರೆಗೆ ವಸ್ತ್ರ ಅಥವಾ ಚರ್ಮದ ಪಟ್ಟಿಗೆ ಅರಸರು ಹಾಕಿಕೊಟ್ಟ ಲೋಹದ ಬಿಲ್ಲೆಯನ್ನು ಅವರು ಟಂಕಿಸಿಕೊಂಡಿರುತ್ತಿದ್ದರು. ಬಿಲ್ಲೆಯಲ್ಲಿ ಇಂಗ್ಲಿಷ್ ಅಥವಾ ಉರ್ದು ಭಾಷೆಯ ಒಕ್ಕಣೆ ಇರುತ್ತಿತ್ತು. ಆ ಸಿಪಾಯಿಗಳು ಧೋತಿ, ಗುಂಡಿ ಅಂಗಿ, ಪೈಜಾಮ, ರುಮಾಲುಗಳನ್ನು ಧರಿಸುತ್ತಿದ್ದರು. ನಡುವಸ್ತ್ರದ ಧಾರಣೆಯು ವಿರಳವಾಗಿ ಇರುತ್ತಿತ್ತು. ಕೈಯಲ್ಲೊಂದು ತಲವಾರು ಬೇರೆ. ಅವರು ತಲವಾರುಧಾರಿಗಳಾಗಿರುತ್ತಿದ್ದರು. ಈ ವೇಷಭೂಷಣಗಳ ಪರಂಪರೆಗಳಲ್ಲಿ ಸಮುದ್ರದಾಚೆಗಿನ ಹಲವು ಸಂಸ್ಕೃತಿಯ ಮಿಳಿತ ಅಥವಾ ಪ್ರಭಾವಲಯ ಅಂಶಗಳು ಸಂಕರಗೊಂಡಿರುತ್ತಿದ್ದವು.

ದೇಸಗತಿ ಮನೆತನದ ಹೆಣ್ಣುಮಕ್ಕಳು ತಲೆಯಲ್ಲಿ ಬಂಗಾರದ ಬೈತಲೆ ಮಣಿ, ಕೊರಳಲ್ಲಿ ಜೀರಾಮಣಿ, ವಜ್ಜಿಟಿಕ್ಕೆ, ಗೆಜ್ಜೆಟಿಕ್ಕೆ, ಗುಂಡಿನಡಿಕೆ
(ಚೌಕಡಿ), ಸರಗಿ, ತಾಳಿ ಸಾಮಾನು, ನೆಲ್ಲಿಗುಂಡು, ಮೋಹನಮಾಲೆ ಧರಿಸಿರುತ್ತಿದ್ದರು. ತೋಳಲ್ಲಿ ವಂಕಿ, ಬಾಜುಬಂಧ, ತೋಡೆ, ಪಾಟಲಿ, ಬಿಲ್ವಾರಗಳ ಧಾರಣೆ ಇರುತ್ತಿತ್ತು. ಒಂದೊಂದು ಕೈಬೆರಳುಗಳಲ್ಲಿ ಎರಡೆರಡು ಹರಳಿನ ಉಂಗುರಗಳೂ ಇರುತ್ತಿದ್ದವು.

ನಡುವಲ್ಲಿ ಪಟ್ಟಿಡಾಬು, ಬಳೆಡಾಬುಗಳು, ಕಾಲ್ಬೆರಳಲ್ಲಿ, ಕಾಲುಂಗುರ ಮತ್ತು ಪಿಲ್ಲೆಗಳು, ಕಾಲಲ್ಲಿ ಬೆಳ್ಳಿ ಚೈನು ಮತ್ತು ದಪ್ಪ ದಪ್ಪ ಕಡಗಗಳು, ತುರುಬಿನಲ್ಲಿ ಜುಲ್ಫಿ ಹೂವು, ಕಿವಿಯಲ್ಲಿ, ಬುಗುಡಿ, ಬೆಂಡೋಲಿ, ಜುಮುಕಿ, ಕತ್ತರ ಬಾವಲಿ, ಮಾಟಿ, ಮುರ್ಕಿಗಳು; ಮೂಗಿನ ಎಡಬಲ ಭಿತ್ತಿಗಳಲ್ಲಿ ನತ್ತು ಮೂಗುಬಟ್ಟುಗಳು ಠಾಣೆ ಹೂಡಿರುತ್ತಿದ್ದವು.

ದೇಸಗತಿ ಮನೆತನದ ಸ್ತ್ರೀಯರ ವೇಷಗಳು ಸಾಮಾನ್ಯವಾಗಿ ಪರಾಸಪಟ್ಟಿ ಧರಿಯ ಇಳಕಲ್ ಸೀರೆ, ಗುಳೇದಗುಡ್ಡದ ಕುಪ್ಪಸ, ಜರಿ ಬಾರ್ಡರ್ ಬ್ಲೌಸ್‌ಗಳ ಧಾರಣೆ. ಈ ಮನೆತನದ ಚಿಕ್ಕಮಕ್ಕಳ ಕುಂಚಿಗೆಯಲ್ಲಿ ಬಂಗಾರದ ಜುಲ್ಫಿ ಹೂವುಗಳು. ಬಂಗಾರದ ಕೈಕಟ್ಟು, ಬೆಳ್ಳಿಯ ದಪ್ಪ ದಪ್ಪ ಕಾಲ್ಗಡಗಗಳು ಸಾಮಾನ್ಯವಾಗಿದ್ದವು.

ದೇಸಗತಿ ಮನೆತನದವರು ಬಳಸುತ್ತಿದ್ದ ಆಯುಧಗಳು ಇಂತಿವೆ– ಕಠಾರಿ, ತಲ್ವಾರ್, ಚಿಮ್ಮಟ, ದೊಡ್ಡಿಕ್ಕಳ, ಹಿರಕ(ಬಗೆಯುವ ಸಾಧನ), ಭಿನ್ನ ಅಳತೆಯ ಚಾಕುಗಳು, ಪಾಕೆಟ್ ಚಾಕು, ಕತ್ತರಿಗಳು, ಸಣ್ಣುಳಿ, ಕಬ್ಬಿಣದ ಮಾರಿಮುಸುಕು ಮುಂತಾದ ಆಯುಧಗಳು ರಕ್ಷಣೆಗಾಗಿ ಬಳಸಲಾಗುತ್ತಿತ್ತು. ಇವುಗಳಲ್ಲಿ ಕೆಲವು ಚಾಕುಗಳಿಗೆ ಬೆಳ್ಳಿ ಇಲ್ಲವೇ ಬಂಗಾರದ ಎರಕಗಳನ್ನು ಹೊಯ್ದು ಪ್ರಾಣಿ, ಪಕ್ಷಿ ಮತ್ತು ಹೂವಿನ ಚಿತ್ರಗಳನ್ನು ತೆಗೆಯಲಾಗುತ್ತಿತ್ತು. ಈ ದೇಸಗತಿ ಮನೆತನದ ಫೋಟೊಗಳಲ್ಲಿ ಕುತೂಹಲ ಮತ್ತು ಬೆರಗುಗಳ ದ್ರಾವಕ ಘನವಾಗಿದೆ ಎನಿಸದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT