ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಗ್ಲ ‍ಪ್ರವಾಸಿ ಕಂಡ ಭಾರತ

ಯೋಗೀಂದ್ರ ಮರವಂತೆ
Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಭಾರತವನ್ನು ಐದು ಬಾರಿ ಒಂಟಿಯಾಗಿ ಸುತ್ತಿ ಬಂದ ನನ್ನ ಆಂಗ್ಲ ಮಿತ್ರನೊಬ್ಬನಿದ್ದಾನೆ. ಭಾರತವನ್ನು ಸುತ್ತುವುದು, ಒಂಟಿಯಾಗಿ ಪ್ರವಾಸ ಮಾಡುವುದು ಎರಡೂ ಆಂಗ್ಲರಿಗೆ ವಿಶೇಷವಲ್ಲ. ಈ ಆಂಗ್ಲ ಮಿತ್ರನಿಗೆ ತನ್ನ  ಹೆಂಡತಿಗೂ ಒಮ್ಮೆ ಭಾರತವನ್ನು  ತೋರಿಸುವ ಆಸೆ. ಇದು ಸಹಜವೇ ಬಿಡಿ. ಆದರೆ, ಹೆಂಡತಿ ಭಾರತ ಸುತ್ತಿಬರಲು ಒಲ್ಲಳು. ಇದೂ ಅಸಹಜ ಅಲ್ಲ!  ಇದರ ಹಿಂದಿನ ಕಾರಣಗಳನ್ನ ಆತನೇ ವಿವರಿಸಿ ವಿಶ್ಲೇಷಿಸುತ್ತಾನೆ.

ಭಾರತವನ್ನು ನೋಡಿಬಂದ ಹೊರದೇಶಿಯರಿಗೆ ಭಾರತ ಒಂದೋ ಬಹಳ ಇಷ್ಟ ಆಗುತ್ತದೆ ಅಥವಾ ಚೂರೂ ಇಷ್ಟ ಆಗುವುದಿಲ್ಲ. ಒಟ್ಟಿನಲ್ಲಿ ಮರೆಯಲಾಗದ ಅನುಭವ ನೀಡುತ್ತದೆ. ಒಂದೋ ಆಪ್ತ ಅನುಭವವಾಗಿ ನಿಲ್ಲುತ್ತದೆ. ಇಲ್ಲವೇ ದುಃಸ್ವಪ್ನವಾಗಿ ಕಾಡುತ್ತದೆ. ಮತ್ತೆ ನೋಡಬೇಕು ಎನ್ನುವ ಕಾತರ ಹಲವರಿಗಾದರೆ ಇನ್ನು ಕೆಲವರಿಗೆ ಈ  ದೇಶಕ್ಕೆ ಬರಲೇಬಾರದೆನ್ನುವ ಭಾವನೆ. ಏನೇ ಆದರೂ ಭಾರತ ಸುತ್ತಿ ಬಂದವರಿಗೆ ಒಂದು ಅವಿಸ್ಮರಣೀಯ ಅನುಭೂತಿ ಸಿಗುತ್ತದೆ.

ಐದು ಬಾರಿ ಭಾರತವನ್ನು ನೋಡಿ ಬಂದ ಮೇಲೂ ಇನ್ನೊಮ್ಮೆ ಹೋಗುವೆ ಎನ್ನುವ ಉತ್ಸಾಹಿ ಗುಂಪಿಗೆ ಸೇರಿದವನು ಈ ಇಂಗ್ಲಿಷ್ ಸ್ನೇಹಿತ. ಹಿಂದಿನ ಭಾರತ ಪ್ರವಾಸಗಳಲ್ಲಿ ತಾನು ನೋಡದೆ ಬಿಟ್ಟ ಜಾಗಗಳನ್ನು ಪಟ್ಟಿ ಮಾಡಿ ಹೇಳುತ್ತಾನೆ. ಶಿಮ್ಲಾದ ಪರ್ವತ ರೈಲಿನಲ್ಲಿ ಕೂರುವ ಅವಕಾಶ ಸಿಗಲಿಲ್ಲ ಎಂದು ಪರಿತಪಿಸುತ್ತಾನೆ. ಆ ಕಾರಣಕ್ಕಾಗಿ ಮತ್ತೆ ಭಾರತ ಪ್ರವಾಸ ಮಾಡುವೆ ಎನ್ನುತ್ತಾನೆ. ಈತನ ಹೆಂಡತಿ ಭಾರತವನ್ನು ಒಮ್ಮೆಯೂ ನೋಡದಿದ್ದರೂ ದೂರದರ್ಶನದ ಸುದ್ದಿಗಳಲ್ಲಿ, ಸಾಕ್ಷ್ಯಚಿತ್ರಗಳಲ್ಲಿ, ದಿನಪತ್ರಿಕೆಗಳಲ್ಲಿ  ನೋಡಿ, ಓದಿ ಅಥವಾ ಭಾರತವನ್ನು ತಿರುಗಾಡಿ ಅಹಿತ ಅನುಭವ ಆದ ಕೆಲವರಿಂದ ಕೇಳಿ ಭಾರತಕ್ಕೆ ತಾನೆಂದೂ ಭೇಟಿ ನೀಡಲಾರೆ ಎಂದು ಪಟ್ಟುಹಿಡಿದಿದ್ದಾಳೆ.

(ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ವಿದೇಶಿ ಪ್ರವಾಸಿಗರು)

ಆಗ್ರಾದ ತಾಜ್‌ಮಹಲ್, ರಾಜಸ್ಥಾನದ ಭವ್ಯ ಅರಮನೆಗಳು, ಪಶ್ಚಿಮ ಕರಾವಳಿಯ ತೆಂಗಿನ ತೋಟ, ಹಿನ್ನೀರಿನಲ್ಲಿ ತೇಲುವ ದೋಣಿಮನೆಗಳು, ಕಣ್ಣೆದುರೇ ಗಾಳ ಹಾಕಿ ಬಲೆ ಬೀಸಿ ಮೀನು ಹಿಡಿಯುವುದು, ದೋಣಿಯಲ್ಲೇ ಕುಳಿತು ಅವನ್ನು ಹುರಿಯುವುದು, ಬಾಯಿ ಚಪ್ಪರಿಸಿ ತಿನ್ನುವುದು, ಬೆಚ್ಚಗಿನ ಬಿಳಿನೊರೆಯ ಸಮುದ್ರಗಳು, ದೇಶದ ತುಂಬೆಲ್ಲ ಹರಡಿರುವ ನದಿ, ಪರ್ವತ, ಕಣಿವೆ ಹಸಿರು ಮತ್ತೆ ಭಾರತದ ಉದ್ದ ಅಗಲಕ್ಕೂ ಸುಲಭವಾಗಿ ದೊರೆಯುವ ರುಚಿ ರುಚಿಯಾದ ತಿಂಡಿ, ಊಟ ಇವೆಲ್ಲ ಸೇರಿ ಆಂಗ್ಲ ಪ್ರವಾಸಿಗರನ್ನು ಭಾರತಕ್ಕೆ ಕೈಬೀಸಿ ಕರೆಯುತ್ತವೆ.

ಆಂಗ್ಲರಿಗೆ ಅತಿ ಪ್ರಿಯವಾದ ಬಿಸಿಲು, ಬೀಚ್ ಮತ್ತು ಬಿಯರುಗಳ ತ್ರಿವೇಣಿ ಸಂಗಮವೂ ಹೌದು ಭಾರತ. ಮತ್ತೆ ಮಹಾ ಲೆಕ್ಕಾಚಾರದವರಾದ ಆಂಗ್ಲರಿಗೆ ಒಟ್ಟು ತಿರುಗಾಟದ ವೆಚ್ಚ ಬ್ರಿಟನ್ನಿನ ದುಡಿಮೆಗೂ ಅಥವಾ ಖರ್ಚಿಗೆ ಹೋಲಿಸಿದರೆ ಅಗ್ಗವೂ ಅನಿಸುತ್ತದೆ. ಅವರಲ್ಲಿ ನಮ್ಮ ಆಯುರ್ವೇದ, ಯೋಗ, ಸಂಗೀತ, ಕಲೆಗಳನ್ನು ಅನ್ವೇಷಿಸಿ ಬರುವವರೂ ಇದ್ದಾರೆ. ಭಾರತೀಯ ವಾದ್ಯವನ್ನು ಭಾರತದ ಗುರುವಿನಿಂದಲೇ ಕಲಿತು ಇಂಗ್ಲೆಂಡ್‌ಗೆ ಮರಳಿ ಇಲ್ಲಿ ಕಛೇರಿ ಕೊಡುವ ಉಸ್ತಾದರೂ ಇದ್ದಾರೆ. ಮತ್ತೆ ಒಂದು ವರ್ಷ ಇಡೀ ತಮ್ಮ ಕಚೇರಿಗೆ ‘ವಿಶ್ರಾಂತಿ ರಜೆ’ (sabbatical) ಹಾಕಿ, ಭಾರತದ ಯಾವುದೋ ಹಳ್ಳಿಯಲ್ಲಿ ಶಾಲೆಯೋ, ಆಸ್ಪತ್ರೆ ಕಟ್ಟುವುದರಲ್ಲೋ ಜೀರ್ಣೋದ್ಧಾರ ಮಾಡುವುದರಲ್ಲೂ ಕೈಜೋಡಿಸುವ ದೇವತಾ ಮನುಷ್ಯರೂ ಇದ್ದಾರೆ. ಭಾರತದಲ್ಲಿ ಬಂದಿಳಿದು ಸೈಕಲ್, ಆಟೊರಿಕ್ಷಾ ಅಥವಾ ಬಲಿಷ್ಠ ಬುಲೆಟ್ ಬೈಕ್‌ಗಳನ್ನು ಬಾಡಿಗೆಗೆ ಪಡೆದು ಅವುಗಳ ಬೆನ್ನು ತಟ್ಟುತ್ತ ಪಳಗಿಸುತ್ತ ಕಾಲುಮಾರ್ಗ, ಏರುದಾರಿ, ಕಂದರ ಕಣಿವೆ ಬೆಟ್ಟಗಳನ್ನು ಹತ್ತಿಳಿಯುವ ಸಾಹಸಿಗಳೂ ಹೌದು ಕೆಲವರು. ಭಾರತವನ್ನು ಸುತ್ತಲು ಹತ್ತಾರು ಅವತಾರಗಳು ನೂರಾರು ಸಬೂಬುಗಳು.

ವಾರ, ತಿಂಗಳುಗಟ್ಟಲೆ ಉದ್ದದ ಪ್ರವಾಸ ಮುಗಿದು ಮರಳುವಾಗ ಭಾರತದ ರುದ್ರರಮಣೀಯ ಸೌಂದರ್ಯ, ಭಾರತೀಯರು ಬದುಕುವ ರೀತಿ, ಉಡುಗೆ ತೊಡುಗೆ ಹಾವ ಭಾವ ಭಾಷೆ ಇವರ ಕಣ್ಣನ್ನು, ಮನಸ್ಸನ್ನು ದಟ್ಟವಾಗಿ ತುಂಬಿಕೊಂಡಿರುತ್ತದೆ. ಇನ್ನೊಮ್ಮೆ ಬರಬೇಕು ಎನ್ನುವ ಆಸೆ ಹುಟ್ಟಿಸುತ್ತದೆ. ಆಂಗ್ಲ ಸಂಸ್ಕೃತಿಗೆ ತೀರಾ ವ್ಯತಿರಿಕ್ತವಾದ ಭಾರತೀಯ ಜನರು, ಕೆಲವೊಮ್ಮೆ ಸರಳವಾಗಿ ತೋರುವ ಮತ್ತೆ ಕೆಲವೊಮ್ಮೆ ಸಂಕೀರ್ಣವಾಗಿ ಕಾಣುವ ನಮ್ಮ ಜೀವನ ಕ್ರಮ, ಕ್ಯಾಲೆಂಡರ್ ನೋಡಿಯೇ ಊಹಿಸಬಹುದಾದ ಹವಾಮಾನಗಳು ಇವೆಲ್ಲ ಸೇರಿ ಅಂತಹ ಪ್ರವಾಸಿಗರ ಕುತೂಹಲವನ್ನು ಹೆಚ್ಚಿಸುತ್ತವೆ.

(ವಿದೇಶಿ ಪ್ರವಾಸಿಗರು)

ಇನ್ನು ನಮ್ಮ ರಸ್ತೆಗಳಲ್ಲಿ ವಾಹನ ಸಂಚಾರ, ಜನದಟ್ಟಣೆ, ಹೊಗೆ, ದೂಳು, ಸೊಳ್ಳೆಗಳ ಗುಂಯ್ ಗುಟ್ಟುವಿಕೆಯೇ ಕೆಲವು ಪ್ರವಾಸಿಗರಿಗೆ ಹೆಚ್ಚು ನೆನಪಿನಲ್ಲಿರುತ್ತವೆ. ಅಂತಹ ಪ್ರವಾಸಿಗರು ರಸ್ತೆಯಲ್ಲಿ ಸದಾ ಕೇಳಿ ಬರುವ ಹಾರ್ನ್, ರಸ್ತೆ ದಾಟಲು ಪಡುವ ಸಾಹಸದ ಬಗ್ಗೆ ಮರಳಿ ಬಂದ ಮೇಲೆ ಹೇಳುತ್ತಾರೆ. ಬರೀ ರಸ್ತೆ ದಾಟುವ ಮಟ್ಟಿಗೆ ಬಾಡಿಗೆ ಕಾರು ಹತ್ತಿದವರೂ ಇದ್ದಾರೆ! ಬಿಡುವಿಲ್ಲದ ವಾಹನ ಸಂಚಾರದ ಮಧ್ಯೆ ರೋಚಕ ಅನುಭವ ಪಡೆಯಲು ಆಟೊ ರಿಕ್ಷಾ ಹತ್ತುವವರು ಒಂದು ಪಂಗಡದವರು. ಮತ್ತೆ ಅನಿವಾರ್ಯವಾಗಿ ರಿಕ್ಷಾ ಹತ್ತಿ ಕಣ್ಮುಚ್ಚಿ ಕುಳಿತು ಇಷ್ಟದೇವರ ಸ್ಮರಣೆ ಮಾಡಿ ಪ್ರಯಾಣ ಮುಗಿಸುವವರು ಇನ್ನೊಂದು ಬಗೆಯ ಪ್ರವಾಸಿಗರು. ಬಾಡಿಗೆ ಕಾರು ಹತ್ತಿ ತಾಜ್‌ಮಹಲ್ ಎಂಬ ಜಗತ್ಪ್ರಸಿದ್ಧ ಪ್ರೇಮಸೌಧಕ್ಕೆ ಹೊರಟವರ ಕ್ಯಾಮೆರಾದಲ್ಲಿ, ಸೊರಗಿ ಕೊರಗುತ್ತಿರುವ ಯಮುನೆಯು ಕೂಡ ಸೆರೆಹಿಡಿಯಲ್ಪಡುತ್ತಾಳೆ.

ಪ್ರೇಮಮಹಲಿನ ಹಲವು ಆಯಾಮಗಳ ಭಾವಚಿತ್ರ ತೆಗೆದವರು ಅಲ್ಲಿಗೆ ಹೋಗುವ ರಸ್ತೆಯ ಬದಿಯಲ್ಲಿ ಕಂಡ ಗುಡಿಸಲುಗಳ, ರಸ್ತೆ ದಾಟುವ ದನಕರುಗಳ ಚಿತ್ರಗಳನ್ನೂ ಸೆರೆಹಿಡಿಯುತ್ತಾರೆ.

ಪ್ರವಾಸದುದ್ದಕ್ಕೂ ಇವರ ಮನಸ್ಸಿನಲ್ಲಿ ಭಾರತದ ಸಾಮಾಜಿಕ ವ್ಯವಸ್ಥೆಯ ವೈರುಧ್ಯದ ಚಿತ್ರ ವಿಚಿತ್ರಗಳು ದಾಖಲಾಗುತ್ತವೆ. ಇನ್ನು ಬಡತನದ ಅನುಭವ ಪಡೆಯಲು ಅಂತಹ ಗಲ್ಲಿ, ಸಂದಿ, ಕೊಳಚೆಗಳನ್ನೇ ಹುಡುಕಿ ಹೋಗುವುದೂ ಉಂಟು. ಇತ್ತೀಚೆಗೆ ವಿಶ್ವವಿಖ್ಯಾತ ಮುಂಬೈ ನೋಡ ಬರುವ ಪರದೇಶೀಯರಿಗೆ, ಸ್ಲಂನಲ್ಲಿ ಇದ್ದು ಅನುಭವ ಪಡೆಯುವ ಹುಚ್ಚು ಮನಸ್ಸಿದ್ದರೆ ಸ್ಲಂ ನಡುವೆಯೇ ಅತಿಥಿ ಗೃಹಗಳು ಬಾಡಿಗೆಗೆ ಸಿಗುತ್ತವೆ.

(ವಿದೇಶಿ ಪ್ರವಾಸಿಗರು)

ಪ್ರವಾಸೋದ್ಯಮದಲ್ಲಿ ಬಡತನವೂ ಒಂದು ಸರ್ಕಾರದದ್ದು ಯಾರ ಭಾಗ್ಯ? ಅಲ್ಲ ಯಾರ ದೌರ್ಭಾಗ್ಯ ನೀವೇ ನಿರ್ಧರಿಸಿ. ಜಗತ್ತೆಲ್ಲ ಪ್ರವಾಸ ಮಾಡುವ ಕೆಲವು ಆಂಗ್ಲರು ವೈರುಧ್ಯದ ಮುಖತಃ ದರ್ಶನಕ್ಕೆ ಹೆದರಿಯೇ ಭಾರತಕ್ಕೆ ಭೇಟಿ ನೀಡುವುದಿಲ್ಲ ಎಂದು ಶಪಥ ಮಾಡಿದ ಉದಾಹರಣೆಯೂ ಇದೆ. ವಿರಾಮಕ್ಕೆಂದು ಮಾಡುವ ಪ್ರವಾಸದಲ್ಲಿ ಬಡತನ, ಭಿಕ್ಷುಕರು, ಕಸ, ಕೊಳಚೆಗಳು ಎದುರಾಗಿ ಚಿತ್ತಕ್ಷೋಭೆಗೆ ಒಳಗಾಗುವುದು ಬೇಡ ಎಂಬ ಕಾರಣ ನೀಡಿ, ತಾವು ಸುತ್ತಬಯಸುವ ದೇಶಗಳ ಪಟ್ಟಿಯಿಂದ ಭಾರತವನ್ನು ಹೊರಗಿಟ್ಟವರು ಅವರು.

ಭಾರತಕ್ಕೆ ಬರಲು ಬಯಸದವರ ಕಥೆ ಬಿಡೋಣ. ವರ್ಷಕ್ಕೆ ಸುಮಾರು 9 ಲಕ್ಷ ಬ್ರಿಟಿಷರು ಭಾರತದ ಪ್ರವಾಸ ಮಾಡುತ್ತಾರೆ ಎಂದು ಅಂಕಿಅಂಶ ಹೇಳುತ್ತವೆ. ಭಾರತವನ್ನು ಸಂದರ್ಶಿಸುವ ವಿದೇಶೀಯರಲ್ಲಿ ಬ್ರಿಟನ್‌ಗೆ ಮೂರನೆಯ ಸ್ಥಾನ. ಇವರೆಲ್ಲ ಭಾರತದ ವೈವಿಧ್ಯ– ವೈರುಧ್ಯ ಕುರಿತು ಕುತೂಹಲ ಇಟ್ಟುಕೊಂಡೇ ಬರುವವರು. ಮತ್ತೆ ತಮ್ಮ ಪ್ರವಾಸ ಸುಖಕರವಾಗಿರಲೆಂದು ಸೂಕ್ತ ಪೂರ್ವಯೋಜನೆ ಮಾಡಿಯೇ ಹೊರಡುವವರು. ಸಣ್ಣ ಸಣ್ಣ ಕೆಲಸಕ್ಕೂ ಸಿದ್ಧತೆ ಮಾಡುವ ಆಂಗ್ಲರು ಭಾರತ ಪ್ರವಾಸ ಮಾಡುವ ಮೊದಲು ಸಾಕಷ್ಟು ಓದಿಕೊಂಡಿರುತ್ತಾರೆ ಹಾಗೂ ಕೇಳಿಕೊಂಡಿರುತ್ತಾರೆ.

ಎಲ್ಲಿ ಚಳಿ ಹೆಚ್ಚು, ಎಲ್ಲಿ ಬಿಸಿಲ ಝಳ ಇದೆ. ಯಾವಾಗ ಮಳೆ, ಯಾವ ಊರಿನಲ್ಲಿ ಸೊಳ್ಳೆಕಾಟ, ಎಲ್ಲಿಗೆ ಹೋಗುವ ಮೊದಲು ಮಲೇರಿಯಾ ಲಸಿಕೆ ತೆಗೆದುಕೊಂಡಿರಬೇಕು, ಎಲ್ಲಿ ಉಳಿಯಬೇಕು, ಎಲ್ಲಿ ತಂಗಬಾರದು ಎಂದೆಲ್ಲ. ಯಾವ ತಿಂಗಳಲ್ಲಿ ಯಾವ ಹಬ್ಬ, ಯಾವ ಊರಲ್ಲಿ ಯಾವ ಭಾಷೆ ಎಂದು ಅವರಿಗೆ ಗೊತ್ತಿರುತ್ತದೆ. ಸ್ಥಳೀಯ ಭಾಷೆಯಲ್ಲಿ ನಾಲ್ಕು ವಾಕ್ಯಗಳನ್ನು ಕಲಿತೇ ಹೊರಟಿರುತ್ತಾರೆ. ಭಾರತಕ್ಕೆ ಬಂದಾಗ ‘ನಮಸ್’, ‘ಹೇಗಿದ್ದೀರಿ’,  ‘ಧನ್ಯವಾದ’ ಇತ್ಯಾದಿ ಶಬ್ದಗಳನ್ನು, ಸರಳ ವಾಕ್ಯಗಳನ್ನು ಹೇಳಿ ಮೆಚ್ಚುಗೆ ಪಡೆಯಬೇಕೆಂದು ಪ್ರಯತ್ನಿಸುತ್ತಾರೆ.

(ಬೆಂಗಳೂರಿನ ಅವೆನ್ಯೂ ರಸ್ತೆಯಲ್ಲಿ ಚಹ ಸೇವಿಸುತ್ತಿರುವ ವಿದೇಶಿಯರು)

ಪ್ರವಾಸದ ಮಾಹಿತಿ ನೀಡುವ 'ಲೋನ್ಲಿ ಪ್ಲಾನೆಟ್' ನಂತಹ ಪುಸ್ತಕಗಳ ಪ್ರತಿ ಪುಟವನ್ನು ತಿರುವಿ ಹಾಕಿರುತ್ತಾರೆ. ಹದಿನೈದು ದಿನಗಳಲ್ಲಿ ಉತ್ತರದ ಆಗ್ರಾದಿಂದ ದಕ್ಷಿಣದ ಕ್ಯಾಲಿಕಟ್‌ವರೆಗಿನ ಪ್ರವಾಸವನ್ನು ಅಚ್ಚುಕಟ್ಟಾಗಿ ಮುಗಿಸಿದರೂ ಆಯಿತು. ಕನ್ನಡ ನಾಡಿನ ಹಂಪೆಯನ್ನು ಇಷ್ಟಪಡುವ ಆಂಗ್ಲ ಪ್ರವಾಸಿಗರು ಬೇರೆ ರಾಜ್ಯಗಳ ಮುಖ್ಯ ನಗರಗಳಿಂದ ಹಂಪೆಗೆ ಬರಲು ತುರ್ತು ಸಂಪರ್ಕ ವ್ಯವಸ್ಥೆ ಇಲ್ಲದಿರುವುದರ ಬಗ್ಗೆ ಆಶ್ಚರ್ಯ ಮತ್ತು ವಿಷಾದ ವ್ಯಕ್ತಪಡಿಸುತ್ತಾರೆ. ಹೀಗೆ ಪ್ರವಾಸದ ಮೊದಲಿನ ಆಳವಾದ ತಯಾರಿ ಮತ್ತೆ ಪ್ರವಾಸದ ಮೂಲಕ ಸಿಗುವ ವೈವಿಧ್ಯಪೂರ್ಣ ಅನುಭವಗಳು ಅವರಿಗೆ ಭಾರತದ  ಬಗ್ಗೆ ವಿಸ್ತ್ರತ ತಿಳಿವಳಿಕೆ ಮತ್ತೆ ತೀವ್ರವಾದ ಅಭಿಪ್ರಾಯಗಳನ್ನು ನೀಡಿರುತ್ತವೆ. ಅದಕ್ಕಾಗಿಯೇ ಆಂಗ್ಲ ಪ್ರವಾಸಿಗರು ಒಂದೋ ಭಾರತವನ್ನು ಅತೀವವಾಗಿ ಪ್ರೀತಿಸುತ್ತಾರೆ ಅಥವಾ ತಾವು ಚೂರೂ ಇಷ್ಟಪಡದ ಪ್ರವಾಸಿ ತಾಣಗಳ ಪಟ್ಟಿಗೆ ಸೇರಿಸಿಬಿಡುತ್ತಾರೆ!  

ನನ್ನ ಆಂಗ್ಲ ಮಿತ್ರನ ಆರನೆಯ ಭಾರತ ಪ್ರವಾಸ, ಭಾರತದ ಬಗೆಗಿನ ಆತನ ಆಪ್ತ ಅನುಭವಗಳು ಮತ್ತು ಹೆಂಡತಿಯ ತೀವ್ರ ವಿರೋಧದ ನಡುವೆ ತೂಗಾಡುತ್ತಿದೆ. ಇವನ ಜೊತೆ ಹರಟುವಾಗಲೆಲ್ಲ ಆಂಗ್ಲ ಪ್ರವಾಸಿಯೊಬ್ಬನ ಕಣ್ಣಲ್ಲಿ ನಾನೂ ಭಾರತವನ್ನು ಮತ್ತೊಮ್ಮೆ ನೋಡುತ್ತೇನೆ. ಇನ್ನೊಮ್ಮೆ ತಿಳಿಯುತ್ತೇನೆ. ಆದಷ್ಟು ಬೇಗ ಈತ ಶಿಮ್ಲಾದ ಪರ್ವತ ರೈಲಿನಲ್ಲಿ  ಕುಳಿತುಕೊಳ್ಳುವಂತಾಗಲಿ, ಕಿಟಕಿ ಬದಿಯ ಆಸನದಲ್ಲೇ ಕೂತು ಬಿಸಿಬಿಸಿ ಚಹಾವನ್ನು ಸವಿಯುವಂತಾಗಲಿ ಹಾಗೂ ಇವನ ಕಣ್ಣಲ್ಲಿ ಮೂಡುವ ಹೊಸನೋಟಗಳು ಮತ್ತೆ  ನನಗೆ ಸಿಗುವಂತಾಗಲಿ ಎಂದು ಹಾರೈಸಿದ್ದೇನೆ.

(ಮೈಸೂರಿನಲ್ಲಿ ವಿದೇಶಿ ಪ್ರವಾಸಿಗರು)

(ಲೇಖಕರು ವಿಮಾನ ತಂತ್ರಜ್ಞರು, ಇಂಗ್ಲೆಂಡ್‌ನ ಬ್ರಿಸ್ಟಲ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT