ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹಣದ ಹರಿವಿನ ಮೇಲೆ ಕಣ್ಣಿಟ್ಟಿದೆ ಐ.ಟಿ.’

Last Updated 24 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಯಾವುದೇ ಕ್ಷಣದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಾಗಿದೆ. ಚುನಾವಣಾ ಪ್ರಕ್ರಿಯೆ ನಡೆಸುವ ಸಂಬಂಧ ತಮ್ಮ ಮೇಲೆ ಯಾವುದೇ ರಾಜಕೀಯ ಒತ್ತಡಗಳಿಲ್ಲ. ಮತದಾನವನ್ನು ಸುಗಮವಾಗಿ ನಡೆಸುವುದಕ್ಕಾಗಿ ವಿವಿಧ ರಾಜ್ಯಗಳಿಂದ ವಿವಿಪ್ಯಾಟ್‌ (ಮತ ಚಲಾವಣೆ ಖಾತ್ರಿ) ಒಳಗೊಂಡ ವಿದ್ಯುನ್ಮಾನ ಮತ ಯಂತ್ರಗಳನ್ನು (ಇವಿಎಂ) ತರಿಸಲಾಗಿದ್ದು, ಮತಪತ್ರಗಳನ್ನು ಬಳಸುವ ಪ್ರಶ್ನೆಯೇ ಇಲ್ಲ. ಅಲ್ಲದೆ, ಚುನಾವಣೆಯಲ್ಲಿ ಭಾರಿ ಪ್ರಮಾಣದ ಹಣದ ಸಾಗಾಟ ಹಾಗೂ ಬಳಕೆಯ ಮೇಲೆ ಆದಾಯ ತೆರಿಗೆ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಚುನಾವಣೆ ಖರ್ಚುವೆಚ್ಚಗಳ ಲೆಕ್ಕ ಕೊಡದವರಿಗೆ ಮುಂದಿನ ದಿನಗಳಲ್ಲಿ ಸಂಕಷ್ಟ ತಪ್ಪಿದ್ದಲ್ಲ’ ಎನ್ನುತ್ತಾರೆ ಕೇಂದ್ರ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌. ಅವರು ‘ಪ್ರಜಾವಾಣಿ’ಗೆ ಸಂದರ್ಶನ ನೀಡಿದ್ದಾರೆ. 

* ಚುನಾವಣೆ ಸಿದ್ಧತಾ ಕಾರ್ಯ ಪೂರ್ಣಗೊಂಡಿದೆಯೇ. ಚುನಾವಣೆ ದಿನಾಂಕ ಯಾವಾಗ ಪ್ರಕಟವಾಗಬಹುದು?
ಸಿದ್ಧತಾ ಕಾರ್ಯ ಮುಗಿದಿದೆ. ಚುನಾವಣಾ ಆಯೋಗ ಯಾವುದೇ ಸಮಯದಲ್ಲಾದರೂ ದಿನಾಂಕ ಪ್ರಕಟಿಸುವ ಸಾಧ್ಯತೆಯಿದೆ. ಮತದಾರರ ಪಟ್ಟಿಯೂ ಅಂತಿಮಗೊಂಡಿದೆ. ಪಟ್ಟಿ ಪರಿಷ್ಕರಣೆಗೆ 30 ಲಕ್ಷ ಅರ್ಜಿಗಳು ಬಂದಿದ್ದವು. ಅದರಲ್ಲಿ ಒಂದು ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 2013 ರಲ್ಲಿ 7.50 ಲಕ್ಷ ಹೊಸ ಮತದಾರರ ಸೇರ್ಪಡೆ ಆಗಿತ್ತು. ಆದರೆ, ಈ ಬಾರಿ 15 ಲಕ್ಷ ಹೊಸ ಮತದಾರರ ಸೇರ್ಪಡೆಯಾಗಿದೆ. 9 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆಯಲಾಗಿದೆ. ಮೃತಪಟ್ಟವರು, ಬೇರೆ ಊರಿಗೆ ಹೋದವರು ಮತ್ತು ನಕಲಿ ಮತದಾರರ ಹೆಸರುಗಳು ಇದರಲ್ಲಿ ಸೇರಿವೆ. ಮಹಿಳಾ ಮತದಾರರ ದಾಖಲಾತಿ ಪ್ರಮಾಣವೂ 2013 ಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಳವಾಗಿದೆ. ಲಿಂಗಾನುಪಾತ 2013 ಚುನಾವಣೆಯಲ್ಲಿ 1000 ಕ್ಕೆ 958 ಇದ್ದದ್ದು 2018ರ ಕರಡು ಪಟ್ಟಿಯಲ್ಲಿ 972 ಕ್ಕೆ ಏರಿಕೆ ಆಗಿದೆ. ಈ ಬಾರಿ ಮತದಾರರ ಪಟ್ಟಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಹೆಸರು ಸೇರಿಸಿದ್ದಾರೆ. ಚುನಾವಣಾ ಆಯೋಗ ಕಾಲೇಜುಗಳಿಗೆ ಹೋಗಿ ಅಲ್ಲಿ ಅರಿವು ಮೂಡಿಸುವ ಕಾರ್ಯ ಹಮ್ಮಿಕೊಂಡಿತ್ತು. ಯಾರದಾದರೂ ಹೆಸರು ಬಿಟ್ಟು ಹೋಗಿದ್ದರೆ ಸೇರಿಸಲು ಇನ್ನೂ ಅವಕಾಶವಿದೆ.

* ಮತಗಟ್ಟೆಗಳನ್ನು ಮತದಾರ ಸ್ನೇಹಿಯಾಗಿಸಲು ಏನೆಲ್ಲ ಕ್ರಮಗಳನ್ನು ತೆಗೆದುಕೊಂಡಿದ್ದೀರಿ?
ಮತಗಟ್ಟೆಗಳಲ್ಲಿರುವ ಸಮಸ್ಯೆಗಳನ್ನು ಗುರುತಿಸಿದ್ದೇವೆ. ಅಲ್ಲಿ ಏನೆಲ್ಲ ಬದಲಾವಣೆಗಳನ್ನು ಮಾಡಬೇಕು, ಯಾವ ಸೌಲಭ್ಯಗಳನ್ನು ಒದಗಿಸಬೇಕು ಎಂಬುದನ್ನು ಪಟ್ಟಿ ಮಾಡಿಕೊಂಡಿದ್ದೇವೆ. ಆ ಪ್ರಕಾರ ಎಲ್ಲ ಮತಗಟ್ಟೆಗಳಿಗೂ ಕನಿಷ್ಠ ಮೂಲ ಸೌಲಭ್ಯಗಳನ್ನು ನೀಡುವ ವ್ಯವಸ್ಥೆ ಮಾಡಿದ್ದೇವೆ. ಈ ಬಾರಿ ಚುನಾವಣೆಯಲ್ಲಿ ಅಂಗವಿಕಲರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಂಗವಿಕಲರೆಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡು ಮತ ಚಲಾಯಿಸಲು ಬರಬೇಕು. ಮತಗಟ್ಟೆಗಳಲ್ಲಿ ಇವರಿಗಾಗಿ ಗಾಲಿ ಕುರ್ಚಿ ಮತ್ತಿತರ ವ್ಯವಸ್ಥೆಗಳನ್ನು ಮಾಡುತ್ತೇವೆ. ಎಲ್ಲ ಮತಗಟ್ಟೆಗಳೂ ನೆಲ ಅಂತಸ್ತಿನಲ್ಲೇ ಇರುತ್ತವೆ.

* ಚುನಾವಣಾ ಕಾರ್ಯಕ್ಕೆ ಅಗತ್ಯವಿರುವಷ್ಟು ಸಿಬ್ಬಂದಿ ಇದ್ದಾರೆಯೇ. ಹಿಂದೊಮ್ಮೆ ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದ್ದಿರಿ?
ಚುನಾವಣೆ ಪ್ರಕ್ರಿಯೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಗುರುತಿಸಿ ಮಾಹಿತಿ ಸಂಗ್ರಹಿಸಲಾಗಿದೆ. ಈ ಬಾರಿ ಸುಮಾರು 3.75 ಲಕ್ಷ ಸಿಬ್ಬಂದಿ ಅಗತ್ಯವಿದೆ. ಇವರಿಗೆ ರಾಜ್ಯಮಟ್ಟದ ತರಬೇತಿ ಮುಗಿದಿದೆ. ಇವಿಎಂ ಮತ್ತು ವಿವಿಪ್ಯಾಟ್‌ ಬಗ್ಗೆ ಅರಿವು ಮೂಡಿಸುವ ಕಾರ್ಯ ಬಹುತೇಕ ಪೂರ್ಣಗೊಂಡಿದೆ. ನೀತಿ ಸಂಹಿತೆ ಜಾರಿಗೊಂಡ ಬಳಿಕ ಜಾರಿ (ಎನ್‌ಫೋರ್ಸ್‌ಮೆಂಟ್‌) ತಂಡಗಳನ್ನು ರಚಿಸಲಾಗುತ್ತದೆ. ಈ ತಂಡಗಳ ಕಾರ್ಯ ಸುಗಮವಾಗಲು ವಿಭಿನ್ನ ಐಟಿ ಅಪ್ಲಿಕೇಷನ್‌ ಮತ್ತು ಆಟೋಮೇಷನ್‌ಗಳ ಬಳಕೆ ಮಾಡಲಾಗುತ್ತದೆ. ಈ ಮೂಲಕ ಮತದಾರರಿಗೆ ತ್ವರಿತಗತಿಯಲ್ಲಿ ಮಾಹಿತಿ ನೀಡಲು ಸಾಧ್ಯ.

* ಚುನಾವಣೆಯಲ್ಲಿ ಬಳಸುವ ಇವಿಎಂಗಳು ಮತ್ತು ವಿವಿಪ್ಯಾಟ್‌ ಎಷ್ಟು ಸುರಕ್ಷಿತ. ಕೆಲವು ರಾಜಕೀಯ ಪಕ್ಷಗಳು ಮತ್ತೆ ಮತಪತ್ರ ವ್ಯವಸ್ಥೆ ತರಬೇಕು ಎಂದು ಒತ್ತಾಯಿಸುತ್ತಿವೆಯಲ್ಲಾ?
ನಾವು ವಿಶ್ವದಲ್ಲೇ ಅತ್ಯುತ್ತಮ ಚುನಾವಣಾ ವ್ಯವಸ್ಥೆಯನ್ನು ಹೊಂದಿದ್ದೇವೆ. ಇವಿಎಂ ಮತ್ತು ವಿವಿಪ್ಯಾಟ್‌ ಯಂತ್ರಗಳನ್ನು ದುರ್ಬಳಕೆ ಮಾಡಲು ಸಾಧ್ಯವೇ ಇಲ್ಲ. ವಿದ್ಯುನ್ಮಾನ ಮತಯಂತ್ರಕ್ಕೆ ಕನ್ನ ಹಾಕಿ ತಮಗೆ ಬೇಕಾದಂತೆ ಬಳಸಿಕೊಳ್ಳಲು ಸಾಧ್ಯವಿಲ್ಲ. ಇವುಗಳಿಗೆ ಮೂರು ರೀತಿಯ ರಕ್ಷಣೆಯನ್ನು ಒದಗಿಸಲಾಗಿದೆ. ಇವಿಎಂ ಮತ್ತು ವಿವಿಪ್ಯಾಟ್‌ಗಳ ತಯಾರಿಕೆ ಹಂತದಿಂದ ಮತ ಎಣಿಕೆವರೆಗೆ ಎಲ್ಲ ಹಂತಗಳಲ್ಲೂ ಕಟ್ಟುನಿಟ್ಟಾದ ಸುರಕ್ಷತಾ ವ್ಯವಸ್ಥೆ ಇದೆ. ಇವೆಲ್ಲದರ ಉಸ್ತುವಾರಿಗೆ ಉನ್ನತ ಮಟ್ಟದ ತಾಂತ್ರಿಕ ಸಮಿತಿ ಇರುತ್ತದೆ. ನಮ್ಮ ದೇಶದ ಅತ್ಯುತ್ತಮ ವಿಜ್ಞಾನಿಗಳು ಈ ಸಮಿತಿಯ ಸದಸ್ಯರಾಗಿರುತ್ತಾರೆ. ಅವರ ಸಮ್ಮುಖದಲ್ಲೇ ನಿರ್ದಿಷ್ಟ ಅಂಶಗಳನ್ನು (specification) ಅಳವಡಿಸಲಾಗುತ್ತದೆ. ಸಾರ್ವಜನಿಕ ಸ್ವಾಮ್ಯದ ‘ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌’ ಮತ್ತು ಇಸಿಐಎಲ್‌ನಲ್ಲಿ ಇವಿಎಂಗಳ ತಯಾರಿಕೆ ಆಗುತ್ತದೆ. ವಿಜ್ಞಾನಿಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿ ಪ್ರಮಾಣೀಕರಣ ಮಾಡಿದ ಬಳಿಕವೇ ಅವುಗಳನ್ನು ಬಳಸಲಾಗುತ್ತದೆ. ಅಲ್ಲಿಂದ ಸಾಗಿಸುವುದಕ್ಕೂ ಮುನ್ನ ರಾಜಕೀಯ ಪಕ್ಷಗಳ ಪ್ರತಿನಿಧಿಗಳನ್ನು ಕರೆಸಿ, ಅವರ ಮುಂದೆಯೇ ಪರೀಕ್ಷೆ ನಡೆಸಿ, ಅಣಕು ಮತದಾನ ಮಾಡಿಸಲಾಗುತ್ತದೆ. ಯಂತ್ರದ ಸ್ವಿಚ್‌ಗಳು ಸರಿಯಾಗಿ ಕೆಲಸ ಮಾಡುತ್ತವೆಯೋ ಇಲ್ಲವೊ ಎಂಬದನ್ನು ಖಾತರಿ ಪಡಿಸಿಕೊಳ್ಳಲಾಗುತ್ತದೆ. ಬಳಿಕ ಪೊಲೀಸ್‌ ಮತ್ತು ಚುನಾವಣೆ ಇಲಾಖೆ ಸಿಬ್ಬಂದಿಯ ಭದ್ರತೆಯಲ್ಲಿ ದೇಶದ ವಿವಿಧ ಜಿಲ್ಲೆಗಳಿಗೆ ಕಳುಹಿಸಲಾಗುತ್ತದೆ. ಜಿಲ್ಲೆಗಳಿಗೆ ಟ್ರಕ್‌ನಲ್ಲಿ ಕಳುಹಿಸುವಾಗ ಜಿಪಿಎಸ್‌ ಮೂಲಕ ಅವುಗಳನ್ನು ಟ್ರ್ಯಾಕ್‌ ಮಾಡಲಾಗುತ್ತದೆ.

ದೋಷವಿಲ್ಲದ ಇವಿಎಂಗಳನ್ನು ಮಾತ್ರ ಮತದಾನಕ್ಕೆ ಬಳಸಲಾಗುತ್ತದೆ. ಒಂದು ರೀತಿಯಲ್ಲಿ ಮತ ಯಂತ್ರಗಳನ್ನು ಮಿಶ್ರ ಮಾಡಿ ಬೇರೆ ಬೇರೆ ಕ್ಷೇತ್ರಗಳಿಗೆ ಕಳುಹಿಸಲಾಗುತ್ತದೆ. ನಾಮಪತ್ರ ಪರಿಶೀಲನೆ ಬಳಿಕವಷ್ಟೇ ಅಭ್ಯರ್ಥಿಗಳ ಹೆಸರುಗಳ ಪಟ್ಟಿಯನ್ನು ಮತಯಂತ್ರದಲ್ಲಿ ಅಡಕಗೊಳಿಸುವ ಕಾರ್ಯ ನಡೆಯುತ್ತದೆ. ಯಾರ ಹೆಸರು ಮೊದಲು, ಯಾರದ್ದು ನಂತರ ಎಂಬುದಕ್ಕೆ ಆಯೋಗದ ಮಾರ್ಗಸೂಚಿ ಇದೆ. ಅದರ ಪ್ರಕಾರವೇ ಅಭ್ಯರ್ಥಿಗಳ ಹೆಸರುಗಳನ್ನು ಪಟ್ಟಿ ಮಾಡಲಾಗುತ್ತದೆ.

* ಆದರೂ ಹ್ಯಾಕ್‌ ಮಾಡಿ ದುರ್ಬಳಕೆ ಮಾಡಬಹುದು ಎಂಬ ದೂರು ಇದೆಯಲ್ಲ?
ಖಂಡಿತವಾಗಿ ದುರ್ಬಳಕೆ ಸಾಧ್ಯವಿಲ್ಲ. ಚಿಪ್‌ನಲ್ಲಿ ಒಮ್ಮೆ ಮಾತ್ರ ಪ್ರೋಗ್ರಾಮಿಂಗ್ ಮಾಡಬಹುದು. ಎರಡನೇ ಸಲ ಮಾಡಲು ಆಗುವುದಿಲ್ಲ. ಪ್ರೋಗ್ರಾಮಿಂಗ್ ಆದ ಚಿಪ್‌ಗೆ ಇಂಟರ್‌ನೆಟ್‌, ಬ್ಲೂಟೂಥ್‌, ವೈಫೈ ಸಂಪರ್ಕ ಇರುವುದಿಲ್ಲ. ಈ ಮೂರರ ಪೈಕಿ ಯಾವುದಾದರೂ ಒಂದು ಇದ್ದರೆ ಮಾತ್ರ ದುರ್ಬಳಕೆ ಮಾಡಬಹುದು. ಆದ್ದರಿಂದ ಮೊಬೈಲ್‌ ಅಥವಾ ಇನ್ನಾವುದೇ ಸಾಧನ ಬಳಸಿ ಕೈಚಳಕ ತೋರಿಸಲು ಆಗುವುದಿಲ್ಲ. ಒಮ್ಮೆ ಈ ಯಂತ್ರವನ್ನು ಬಿಚ್ಚಿದರೆ ಅಥವಾ ಅದು ಬಿದ್ದುಹೋದರೆ ಯಂತ್ರ ಕಾರ್ಯ ನಿರ್ವಹಿಸುವುದಿಲ್ಲ.

ಎಂ–3 ಯಂತ್ರವನ್ನು ಯಾವುದೇ ರೀತಿಯಲ್ಲಿ ದುರ್ಬಳಕೆ ಮಾಡಲು ಮುಂದಾದರೆ ಯಂತ್ರವೇ ನಿಷ್ಕ್ರಿಯವಾಗುತ್ತದೆ. ಯಾವ ಇವಿಎಂ ಮತ್ತು ಯಾವ ವಿವಿಪ್ಯಾಟ್‌ಗಳನ್ನು ಯಾವ ಕ್ಷೇತ್ರಗಳಿಗೆ ಕಳುಹಿಸಲಾಗುತ್ತದೆ ಎಂಬ ವಿಚಾರ ಕೊನೆಯ ತನಕವೂ ಗೊತ್ತಾಗುವುದಿಲ್ಲ. ಮತದಾನದ ದಿನ ಬೆಳಿಗ್ಗೆ 6 ಗಂಟೆಗೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಎದುರು 50 ಮತಗಳ ಅಣಕು ಮತದಾನ ಮಾಡಲಾಗುತ್ತದೆ.

ಅವರೆಲ್ಲರೂ ‘ಸರಿ ಇದೆ’ ಎಂಬ ಅಭಿಪ್ರಾಯ ನೀಡಿದ ಬಳಿಕವೇ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ಮತದಾನ ಪ್ರಕ್ರಿಯೆ ವಿಡಿಯೊ ಚಿತ್ರೀಕರಣ ಆಗುತ್ತದೆ. ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಇರುತ್ತದೆ. ದೆಹಲಿಯಲ್ಲಿ ಕೂತು ಮುಖ್ಯ ಚುನಾವಣಾ ಆಯುಕ್ತರೂ ಇದನ್ನು ನೋಡಬಹುದು. ಇವಿಎಂ ಬೇಡ, ಕಾಗದದ ಮತಪತ್ರ ಮತ್ತೆ ಆರಂಭಿಸಿ ಎಂದು ಯಾವ ಕಾರಣಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿವೆ ಎಂಬುದಕ್ಕೆ ನಾನು ಉತ್ತರ ಕೊಡುವುದಿಲ್ಲ.

* ಚುನಾವಣೆ ಸಂದರ್ಭದಲ್ಲಿ ಭಾರಿ ಪ್ರಮಾಣದಲ್ಲಿ ಹಣ ಅಕ್ರಮವಾಗಿ ಸಂಗ್ರಹಿಸುವ ಮತ್ತು ಸಾಗಿಸುವ ಕಾರ್ಯ ನಡೆಯುತ್ತದೆ. ಇದರ ಮೇಲೆ ನಿಗಾ ಇಟ್ಟು ಕ್ರಮ ಕೈಗೊಳ್ಳಲು ಏನು ವ್ಯವಸ್ಥೆ ಇದೆ?
ಚುನಾವಣೆ ಪೂರ್ವದಲ್ಲಿ ಮತದಾರರಿಗೆ ವಿವಿಧ ರೀತಿಯ ಆಮಿಷವೊಡ್ಡಿ, ಹಣ ಮತ್ತು ವಿವಿಧ ವಸ್ತುಗಳನ್ನು ಹಂಚುವ ಚಟುವಟಿಕೆಗಳ ಮೇಲೆ ಈಗಾಗಲೇ ಆದಾಯ ತೆರಿಗೆ ಇಲಾಖೆ ನಿಗಾ ಇಟ್ಟಿದೆ. ಬ್ಯಾಂಕ್‌ ಅಥವಾ ಇತರ ಹಣಕಾಸು ಸಂಸ್ಥೆಗಳಲ್ಲಿ ದೊಡ್ಡ ಮೊತ್ತದ ಹಣವನ್ನು ಇಡುವುದು ಮತ್ತು ಹಣ ತೆಗೆಯುವುದರ ಮೇಲೂ ಕಣ್ಣಿಟ್ಟಿದೆ. ಚರಾಸ್ತಿ, ಸ್ಥಿರಾಸ್ತಿ ವರ್ಗಾವಣೆ ಮೇಲೂ ನಿಗಾ ವಹಿಸಲಾಗಿದೆ. ಮುಂದಿನ ದಿನಗಳಲ್ಲಿ ಇವೆಲ್ಲವುಗಳ ಮೇಲೆ ಆದಾಯ ತೆರಿಗೆ ಇಲಾಖೆ ನಿಶ್ಚಿತವಾಗಿ ಕ್ರಮ ಜರುಗಿಸುತ್ತದೆ. ಒಮ್ಮೆ ನೀತಿ ಸಂಹಿತೆ ಜಾರಿ ಆದ ಬಳಿಕ ದಾಳಿ ನಡೆಸಿ ಕ್ರಮ ಜರುಗಿಸಲು ಸಂಚಾರಿ ದಳಗಳಿರುತ್ತವೆ. ಈಗಾಗಲೇ ಅಕ್ರಮಗಳು ನಡೆಯಬಹುದಾದ ಸೂಕ್ಷ್ಮ ಕ್ಷೇತ್ರಗಳನ್ನು ಗುರುತಿಸಲಾಗಿದೆ.

ಚುನಾವಣೆಯಲ್ಲಿ ಹಣ ವರ್ಗಾವಣೆ ತಡೆಯುವುದರಲ್ಲಿ ಜನಸಾಮಾನ್ಯರ ಪಾತ್ರ ಮಹತ್ವದ್ದು. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಹಂಚಲೆಂದು ತಂದಿದ್ದ ವಸ್ತುಗಳನ್ನು ಜನರೇ ಸುಟ್ಟು ಹಾಕಿದ್ದರು. ಎಲ್ಲ ಕಡೆಗಳಲ್ಲೂ ಹೀಗಾದರೆ ಅಭ್ಯರ್ಥಿಗಳಿಗೆ ಆಮಿಷ ಒಡ್ಡಲು ಸಾಧ್ಯವಾಗುವುದಿಲ್ಲ. ಚುನಾವಣೆಯಲ್ಲಿ ನೈತಿಕತೆ ಮುಖ್ಯ. ಜನರಲ್ಲಿ ಅರಿವು ಬಂದಾಗ ಪ್ರಜಾಪ್ರಭುತ್ವ ಮತ್ತಷ್ಟು ಶಕ್ತಿಶಾಲಿಯಾಗುತ್ತದೆ.

* ಚುನಾವಣಾ ಉದ್ದೇಶಕ್ಕಾಗಿ ಸಾಮಾಜಿಕ ಜಾಲ ತಾಣಗಳನ್ನು ಬಳಸುವುದು ಮತ್ತು ಅದಕ್ಕಾಗಿ ಭಾರಿ ಪ್ರಮಾಣದಲ್ಲಿ ಹಣ ಖರ್ಚು ಮಾಡುವುದರ ಮೇಲೆ ಕಡಿವಾಣ ಹಾಕಲಾಗುವುದೇ?
ಇದೊಂದು ಹೊಸ ಕ್ಷೇತ್ರ. ಈಗಂತೂ ಸಾಮಾಜಿಕ ಜಾಲತಾಣದ ಮೇಲೆ ಮಾಡುತ್ತಿರುವ ಖರ್ಚಿನ ಮೇಲೆ ಆಡಳಿತಾತ್ಮಕವಾಗಿ ನಿಗಾ ಇಡಲು ಆಗುತ್ತಿಲ್ಲ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನ ಆರಂಭವಾಗಿದೆ. ಅಂತಹ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲಾಗುವುದು. ಚುನಾವಣೆಗೆ ಸಂಬಂಧಿಸಿದಂತೆ ಯಾವ ರೀತಿ ಸಂದೇಶಗಳು ಹೋಗುತ್ತಿವೆ. ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಅದಕ್ಕಾಗಿ ಮಾಡಿರುವ ಖರ್ಚು ಎಷ್ಟು ಎಂಬ ಬಗ್ಗೆ ಲೆಕ್ಕ ಕೇಳುತ್ತೇವೆ. ಲೆಕ್ಕ ಕೊಡದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.

* ನಿಮ್ಮ ಮೇಲೆ ರಾಜಕೀಯ ಒತ್ತಡಗಳೇನಾದರೂ ಇವೆಯೇ?
ಯಾವುದೇ ರಾಜಕೀಯ ಪಕ್ಷದಿಂದಲೂ ಒತ್ತಡ ಇಲ್ಲ. ಆಯೋಗ ಯಾವಾಗಲೂ ನಿಷ್ಪಕ್ಷಪಾತವಾಗಿ ಮತ್ತು ಕಾನೂನಿನ ಪ್ರಕಾರವೇ ನಡೆದುಕೊಳ್ಳುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT