ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರ ಬದುಕಿಗೆ ಆಸರೆಯಾದ ಸೀತಾಫಲ

Last Updated 31 ಜುಲೈ 2018, 12:21 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ಉತ್ತರ ಭಾಗದ ಗುಡ್ಡಗಾಡಿನಲ್ಲಿ ಈಗ ಸೀತಾಫಲ ಸುಗ್ಗಿ ಪ್ರಾರಂಭವಾಗಿದೆ. ಈ ಪ್ರದೇಶದ ಬಡವರು ಕಾಡು ಮೇಡು ಸುತ್ತಿ ಸೀತಾಫಲ ಸಂಗ್ರಹಿಸಿ ಮಾರಾಟ ಮಾಡುವುದರ ಮೂಲಕ ನಾಲ್ಕು ಕಾಸು ಸಂಪಾದಿಸುತ್ತಿದ್ದಾರೆ.

ಸೀತಾಫಲಕ್ಕೆ ಪಟ್ಟಣ ಹಾಗೂ ನಗರ ಪ್ರದೇಶದಲ್ಲಿ ಒಳ್ಳೆ ಬೇಡಿಕೆ ಇದೆ. ಉತ್ತಮ ಗುಣಮಟ್ಟದ ಫಲ ಕೆ.ಜಿಯೊಂದಕ್ಕೆ ₹ 80 ರವರೆಗೆ ಮಾರಾಟವಾಗುತ್ತದೆ. ಆದರೆ ಇಲ್ಲಿನ ಜನ ತಾವು ಸಂಗ್ರಹಿಸಿದ ಸೀತಾಫಲವನ್ನು ತಮ್ಮ ಗ್ರಾಮಗಳ ಸಮೀಪದ ರಸ್ತೆ ಅಂಚಿನಲ್ಲಿ ಬುಟ್ಟಿಯಲ್ಲಿ ಜೋಡಿಸಿಟ್ಟು ಮಾರಾಟ ಮಾಡುತ್ತಾರೆ. ಇಲ್ಲಿ ತೂಕಮಾಡಿ ಕೊಡುವ ಪದ್ಧತಿ ಇಲ್ಲ. ಬುಟ್ಟಿಯ ಮೇಲೆ ಇಂತಿಷ್ಟು ಹಣ ಎಂದು ಪಡೆದು ಕೊಟ್ಟುಬಿಡುತ್ತಾರೆ.

ಬೇರೆಲ್ಲೂ ಕಾಣಲು ಸಾಧ್ಯವಿಲ್ಲದಷ್ಟು ಸಂಖ್ಯೆಯ ಸೀತಾಫಲ ಗಿಡಗಳು ಈ ಪ್ರದೇಶದಲ್ಲಿ ಹರಡಿಕೊಂಡಿವೆ. ಅದಕ್ಕೆ ಇಲ್ಲಿನ ಜನರ ಸೀತಾಫಲ ಪ್ರೇಮವೇ ಕಾರಣ. ಗುಡ್ಡಗಾಡಲ್ಲಿ ಬೆಳೆಯುವ ಮರಗಳ ಮಾತಂತಿರಲಿ. ಸ್ವಂತ ಜಮೀನಲ್ಲಿ ಸೀತಾಫಲ ಗಿಡ ಇದ್ದರೂ ಕಡಿಯುವುದಿಲ್ಲ. ಸಾಮಾನ್ಯವಾಗಿ ಹೊಲದ ಕಟವೆಗಳಲ್ಲಿ ಈ ಗಿಡಗಳಿಗೆ ಸ್ಥಾನ ಕಲ್ಪಿಸಿದ್ದಾರೆ. ಹೊಲದ ಸುತ್ತಲಿನ ಬದುಗಳ ಪಕ್ಕದಲ್ಲಿಯೂ ಈ ಗಿಡಗಳು ಜೀವಂತವಾಗಿವೆ. ಸೌದೆಗಾಗಿ ಎಲ್ಲ ಜಾತಿಯ ಗಿಡಗಳನ್ನೂ ಕಡಿಯುವುದುಂಟು. ಆದರೆ ಸೀತಾಫಲ ಗಿಡ ಕಡಿಯಬಾರದು ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ನಂಬಿಕೆಯಿಂದಾಗಿ ಅದು ಇನ್ನೂ ಜೀವಂತವಾಗಿದೆ.

ಕೃಷಿಕರು ತಮ್ಮ ಜಮೀನು ಪಕ್ಕದಲ್ಲಿ ಬೆಳೆದ ಸೀತಾಫಲ ಗಿಡಗಳಿಂದ ಕಾಯಿ ಬಿಡಿಸಿ, ಹಣ್ಣು ಮಾಡಿ ತಿನ್ನುತ್ತಾರೆ. ಕಾವಲು ಕಾಯುವ ಪದ್ಧತಿ ಇಲ್ಲ. ಗಿಡದಲ್ಲಿ ಕಾಯಿ ಇದ್ದರೆ ಯಾರೇ ಆದರೂ ಕಿತ್ತುಕೊಂಡು ಹೋಗಬಹುದಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ಉಚಿತ ಕೊಯಿಲು ದೂರವಾಗುತ್ತಿದೆ. ಕೆಲವರು ಕಾಯಿ ಬಿಡಿಸಿ ಮಾರತೊಡಗಿದ್ದಾರೆ.

ಈಗ ಸೀತಾಫಲದ ಕಾಲ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಉತ್ತಮ ಫಸಲು ಬಂದಿದೆ. ಇದಕ್ಕೆ ಆಗಾಗ ಸುರಿದ ಮಳೆ ಕಾರಣ. ಕಡಿಮೆ ತೇವಾಂಶದಲ್ಲೂ ಬದುಕುವ ಗುಣವುಳ್ಳ ಹಾಗೂ ನೈಸರ್ಗಿಕವಾಗಿ ಬೆಳೆಯುವ ಈ ಗಿಡ, ತಾನಾಗಿಯೇ ಒಣಗಿದ್ದಿಲ್ಲ.

ಇಲ್ಲಿನ ಕೆಲವರು ವಾಡಿಕೆಯಂತೆ ಕಾಯಿ ಕಿತ್ತು ಮಾರಾಟ ಮಾಡುತ್ತಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾದರೆ, ಸ್ಥಳೀಯವಾಗಿ ಬೇಡಿಕೆ ಇರುವುದಿಲ್ಲ. ಅಂಥ ಸಂದರ್ಭದಲ್ಲಿ ಬಿದಿರಿನ ಬುಟ್ಟಿಗಳಿಗೆ ತುಂಬಿ ಬಸ್‌ನಲ್ಲಿ ಸಮೀಪದ ಆಂಧ್ರಪ್ರದೇಶದ ಮದನಪಲ್ಲಿಯ ಮಾರುಕಟ್ಟೆಗೆ ಸಾಗಿಸುತ್ತಾರೆ. ‘ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳು ಖರೀದಿಸಿ ಲಾಭದಾಯಕ ಬೆಲೆಗೆ ಮಾರುತ್ತಾರೆ. ಬಸ್‌ ಪ್ರಯಾಣ ದರ, ಲಗ್ಗೇಜ್‌, ಕಮೀಷನ್‌ ಕಳೆದರೆ ಕೈಗೆ ಬರುವುದು ಅಷ್ಟಕ್ಕಷ್ಟೆ’ ಎನ್ನುತ್ತಾರೆ ಕೃಷಿಕ ಮಹಿಳೆ ಗಂಗುಲಮ್ಮ.

ಇನ್ನು ತಾಲ್ಲೂಕಿನ ಉತ್ತರ ಭಾಗದ ಮಾವಿನ ತೋಟಗಳ ಬೇಲಿ, ರಸ್ತೆ ಬದಿ ಹಾಗೂ ಕಟವೆಗಳಲ್ಲಿ ಹಿಂದೆ ಸೀತಾಫಲ ಗಿಡಗಳು ಇದ್ದವು. ಈ ಪ್ರದೇಶದ ಜನ ಸೌದೆಗಾಗಿ ಕಡಿದ ಪರಿಣಾಮವಾಗಿ ಕಣ್ಮರೆಯಾದವು. ಈ ಕಡೆ ಸೀತಾಫಲದಷ್ಟೇ ರುಚಿಕರವಾದ ರಾಮಫಲವೂ ಇತ್ತು. ವ್ಯತ್ಯಾಸವೆಂದರೆ ಸೀತಾಫಲದ ಹೊರಮೈ ಒರಟಾಗಿದ್ದರೆ, ರಾಮಫಲದ ಹೊರಮೈ ನಯವಾಗಿರುತ್ತದೆ. ಆದರೆ ಈಗ ಎರಡೂ ಫಲಗಳು ಕಾಣಿಸುವುದು ಅಪರೂಪವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT