ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷಾ ಪ್ರಕ್ರಿಯೆ ಗೊಂದಲ ಬೇಜವಾಬ್ದಾರಿಯ ಪರಮಾವಧಿ

Last Updated 25 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ದ್ವಿತೀಯ ಪಿಯು ಭೌತವಿಜ್ಞಾನ ವಿಷಯದಲ್ಲಿ 6 ಮತ್ತು ಇಂಗ್ಲಿಷ್‌ ವಿಷಯದಲ್ಲಿ 3 ಕೃಪಾಂಕಗಳನ್ನು ನೀಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ಧರಿಸಿರುವುದು, ಪ್ರಶ್ನೆಪತ್ರಿಕೆಗಳಲ್ಲಿ ಉಂಟಾದ ಲೋಪಗಳನ್ನು ತಿದ್ದಿಕೊಳ್ಳುವ ನಿಟ್ಟಿನಲ್ಲಿ ಅಗತ್ಯವಾದ ನಡೆ. ಆದರೆ, ಪ್ರತಿ ವರ್ಷವೂ ಪ್ರಶ್ನೆಪತ್ರಿಕೆಗಳಲ್ಲಿ ಗೊಂದಲ ಉಂಟಾಗುವುದು ಹಾಗೂ ಕೃಪಾಂಕ ನೀಡುವ ಮೂಲಕ ಅದನ್ನು ಸರಿಪಡಿಸುವುದನ್ನು ನೋಡಿದರೆ ಶಿಕ್ಷಣ ಇಲಾಖೆಯು ಪರೀಕ್ಷಾ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ ಎನ್ನುವ ಅನುಮಾನ ಉಂಟಾಗುತ್ತದೆ. ಲಕ್ಷಾಂತರ ವಿದ್ಯಾರ್ಥಿಗಳ ಜೊತೆ ಆಟವಾಡುವ ಇಲಾಖೆಯ ನಡವಳಿಕೆಯನ್ನು ಬೇಜವಾಬ್ದಾರಿಯ ಪರಮಾವಧಿ ಎಂದೇ ಪರಿಗಣಿಸಬೇಕಾಗುತ್ತದೆ. ತಪ್ಪು ಪ್ರಶ್ನೆ ಅಥವಾ ಸಿಲಬಸ್‌ನಲ್ಲಿ ಇಲ್ಲದ ಪ್ರಶ್ನೆಗಳು ಪ್ರಶ್ನೆಪತ್ರಿಕೆಯಲ್ಲಿ ಇರುವುದರಿಂದ ಕೃಪಾಂಕಗಳನ್ನು ನೀಡಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ನಡೆಸಿದ ಹೋರಾಟ 2016ರಲ್ಲಿ ದೊಡ್ಡ ಸುದ್ದಿಯಾಗಿತ್ತು. ಅಂತಹುದೇ ಅಚಾತುರ್ಯ ಈ ಬಾರಿ ಕೂಡ ಉಂಟಾಗಿದೆ.

ಭೌತವಿಜ್ಞಾನ ಮತ್ತು ಇಂಗ್ಲಿಷ್‌ ವಿಷಯಗಳಲ್ಲಿ ತಪ್ಪು ಪ್ರಶ್ನೆಗಳಿರುವುದರಿಂದ ಕೃಪಾಂಕ ನೀಡುವಂತೆ ವಿದ್ಯಾರ್ಥಿಗಳು ಇಲಾಖೆಯನ್ನು ಒತ್ತಾಯಿಸಿದ್ದರು. ಕಾಗುಣಿತ ಮತ್ತು ವ್ಯಾಕರಣ ದೋಷಗಳಿರುವುದರಿಂದ ವಿದ್ಯಾರ್ಥಿಗಳಲ್ಲಿ ಕೆಲವು ಪ್ರಶ್ನೆಗಳು ಗೊಂದಲ ಮೂಡಿಸಿರುವುದನ್ನು ಇಲಾಖೆ ಕೂಡ ಒಪ್ಪಿಕೊಂಡಿದ್ದು, ಕೃಪಾಂಕಗಳನ್ನು ನೀಡುವ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದೆ. ಇದರ ಜೊತೆಗೆ ಮುಂದಿನ ವರ್ಷದಿಂದ ಪ್ರಶ್ನೆಪತ್ರಿಕೆಗಳ ಕರಡು ತಿದ್ದಲು ತಂಡವೊಂದನ್ನು ರೂಪಿಸುವುದಾಗಿ ಶಿಕ್ಷಣ ಸಚಿವರು ಹೇಳಿದ್ದಾರೆ. ತಿದ್ದುವ ಈ ಪ್ರಕ್ರಿಯೆ ಇಲಾಖೆಯ ಒಟ್ಟಾರೆ ಕಾರ್ಯವೈಖರಿಗೂ ಅನ್ವಯವಾಗಬೇಕಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ಮೂಲಕ ಇಂಥ ಪ್ರಮಾದಗಳು ಮರುಕಳಿಸದಂತೆ ಶಿಕ್ಷಣ ಇಲಾಖೆ ಎಚ್ಚರಿಕೆ ವಹಿಸಬೇಕು.

ಪ್ರಶ್ನೆಪತ್ರಿಕೆಗಳ ಗೊಂದಲಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಹೊರತಾಗಿಲ್ಲ. ಪುನರಾವರ್ತಿತ ವಿದ್ಯಾರ್ಥಿಗಳಿಗೆ ನೀಡಬೇಕಾದ ಪ್ರಶ್ನೆಪತ್ರಿಕೆಗಳನ್ನು ಪ್ರಸಕ್ತ ಸಾಲಿನ ವಿದ್ಯಾರ್ಥಿಗಳಿಗೆ ನೀಡಿರುವ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳನ್ನು ಅಮಾನತುಗಳಿಸಲಾಗಿದೆ. ಮಂಗಳೂರಿನ ಕೊಣಾಜೆಯಲ್ಲೂ ಇಂತಹುದೇ ಘಟನೆ ನಡೆದಿದ್ದು, ಅಧಿಕಾರಿಗಳು ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ವಿದ್ಯಾರ್ಥಿಗಳಿಂದ ಎರಡನೇ ಬಾರಿ ಪರೀಕ್ಷೆ ಬರೆಸಿದ್ದಾರೆ ಎಂದು ವರದಿಯಾಗಿದೆ. ಇವೆಲ್ಲ ಘಟನೆಗಳನ್ನು ನೋಡಿದರೆ ಪರೀಕ್ಷೆ ಬೇಕಾಗಿರುವುದು ಅಧಿಕಾರಿಗಳಿಗೋ ಅಥವಾ ವಿದ್ಯಾರ್ಥಿಗಳಿಗೋ ಎನ್ನುವ ಗೊಂದಲ ಉಂಟಾಗದಿರದು. ಪ್ರಶ್ನೆಪತ್ರಿಕೆಗಳಲ್ಲಿ ತಪ್ಪುಗಳಿರುವುದು ಹಾಗೂ ಪರೀಕ್ಷೆ ನಡೆಯುವುದರಲ್ಲಿ ಗೊಂದಲಗಳಾಗುವುದನ್ನು ಶಿಕ್ಷಣ ಇಲಾಖೆ ಸಹಜ ಪ್ರಕ್ರಿಯೆ ಎಂದು ಒಪ್ಪಿಕೊಂಡಿರುವಂತಿದೆ. ವಿದ್ಯಾರ್ಥಿಗಳು ಹಾಗೂ ಪೋಷಕರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ.

ತಪ್ಪುಗಳನ್ನು ಪರೀಕ್ಷಾ ಮಂಡಳಿಗಳ ಗಮನಕ್ಕೆ ತರುವುದು ಹಾಗೂ ಆ ತಪ್ಪುಗಳಿಗೆ ಪ್ರತಿಯಾಗಿ ಕೃಪಾಂಕಗಳು ದೊರೆಯುವುದರೊಂದಿಗೆ ಸಮಸ್ಯೆಯನ್ನು ಮರೆಯಲಾಗುತ್ತದೆ. ಕೃಪಾಂಕಗಳನ್ನು ನೀಡುವುದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ 2017ರಲ್ಲಿ ನಿಯಮಾವಳಿ ರೂಪಿಸಿಕೊಂಡಿದೆ. ಆದರೆ ತಪ್ಪುಗಳಿಂದ ಮುಕ್ತವಾದ ಪ್ರಶ್ನೆಪತ್ರಿಕೆಯನ್ನು ರೂಪಿಸುವುದು ಹಾಗೂ ಸಮಸ್ಯೆಗಳಿಲ್ಲದೆ ಪರೀಕ್ಷೆ ನಡೆಸುವುದು ಏಕೆ ಸಾಧ್ಯವಿಲ್ಲ ಎನ್ನುವ ಪ್ರಶ್ನೆಯನ್ನು ಕೇಳಿಕೊಳ್ಳುವುದರ ಬಗ್ಗೆ ಇಲಾಖೆ ಹೆಚ್ಚು ಆಸಕ್ತವಾದಂತಿಲ್ಲ. ಕೈಬರಹದಲ್ಲಿ ಸಿದ್ಧಗೊಳ್ಳುವ ಪ್ರಶ್ನೆಪತ್ರಿಕೆಗಳನ್ನು ಮುದ್ರಣಕ್ಕೆ ಅಳವಡಿಸುವ ಸಂದರ್ಭದಲ್ಲಿ ಉಂಟಾಗುತ್ತಿರುವ ತಪ್ಪುಗ್ರಹಿಕೆಗಳೇ ಸಮಸ್ಯೆಗೆ ಕಾರಣ ಎನ್ನಲಾಗಿದೆ. ತಂತ್ರಜ್ಞಾನ ಅಂಗೈನೆಲ್ಲಿಯಾಗಿರುವ ಸಂದರ್ಭದಲ್ಲಿ ಇಂಥ ಕಾರಣಗಳು ನೆಪಗಳಲ್ಲದೆ ಬೇರೇನೂ ಅಲ್ಲ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯು ಪರೀಕ್ಷೆಗೆ ಸಂಬಂಧಿಸಿದಂತೆ ಪ್ರತಿ ವರ್ಷವೂ ಒಂದಲ್ಲಾ ಒಂದು ಸಮಸ್ಯೆ ಎದುರಾಗುವುದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಲಜ್ಜೆಯನ್ನುಂಟುಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT