ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿದೊಡ್ಡಿಯಲ್ಲಿ ಮೇವುಣಿಕೆ

Last Updated 26 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕುರಿ ಮತ್ತು ಮೇಕೆಗಳನ್ನು ಬಯಲಲ್ಲಿ ಮೇಯಿಸಿ ದೊಡ್ಡಿಯಲ್ಲಿ ಕೂಡಿಡುವುದು ಸಂಪ್ರದಾಯ. ಅದೇ ದೊಡ್ಡಿಯಲ್ಲಿ ಪ್ರತ್ಯೇಕವಾಗಿ ಮೇವು ಮತ್ತು ಪಶು ಆಹಾರ ನೀಡಿ ಸಾಕುವುದು ವಿರಳ. ಆದರೆ, ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲ್ಲೂಕಿನ ತಿರುಮಣಿ ಗ್ರಾಮದಲ್ಲಿ ಹಲವು ರೈತರು ತಮ್ಮ ಕುರಿ-ಮೇಕೆಗಳನ್ನು ಹೊರಗೆ ಮೇಯಿಸುವುದರ ಜೊತೆಗೆ ದೊಡ್ಡಿಯಲ್ಲೊಂದು ಆಧುನಿಕ ಮೇವುಣಿಕೆಯ ವ್ಯವಸ್ಥೆ ಮಾಡಿ ಸಾಕುತ್ತಿರುವುದು ವಿಶೇಷ. ಅವರವರ ಅವಶ್ಯಕತೆ ಮತ್ತು ಸಂಪನ್ಮೂಲಕ್ಕೆ ತಕ್ಕಂತೆ ಸ್ಥಳೀಯವಾಗಿ ಈ ಸಾಧನದ ವಿನ್ಯಾಸ ಕೂಡ ಭಿನ್ನವಾಗಿದೆ.

ಏನಿದು ಮೇವುಣಿಕೆ?
ದನಕರುಗಳ ಕೊಟ್ಟಿಗೆಯಲ್ಲಿ ಗೋಡೆಗೆ ಅಂಟಿಕೊಂಡು ಮೇವು ಹಾಕಲು, ದನ ನಿಲ್ಲುವ ಜಾಗದಿಂದ ಪ್ರತ್ಯೇಕಗೊಳಿಸಿರುವ ಜಾಗವೇ ಗ್ವಾದ್ನಿ (ಗ್ವಾದ್ಲಿ, ಗೋದಲಿ). ಹಾಗೆಯೇ ಕುರಿ-ಮೇಕೆಗಳಿಗೆ ಮೇವು ನೀಡಲು ಮತ್ತು ಅವು ಸುತ್ತ ನಿಂತು ಮೇವು ತಿನ್ನಲು ವಿನ್ಯಾಸಗೊಳಿಸಿರುವ ಸರಳ ಸಾಧನವೇ ಮೇವುಣಿಕೆ.

ಈ ಸಾಧನದಿಂದ ಮೇವು ಪೋಲಾಗುವುದನ್ನು ತಪ್ಪಿಸಬಹುದು. ಸಾಮಾನ್ಯವಾಗಿ ರಾಸುಗಳು ಮೇವು ತಿನ್ನುವಾಗ ಒಂದಿಷ್ಟು ಅವುಗಳ ಬಾಯಿಯಿಂದ ಜಾರಿ ಕೆಳಗೆ ಬೀಳುವುದು. ಇದು ಕಾಲ್ತುಳಿತಕ್ಕೆ ಒಳಪಟ್ಟು ಗಂಜಲವಾಗುವುದು. ಅಂತಹ ಮೇವನ್ನು ಮತ್ತೆ ಕುರಿ-ಮೇಕೆ ಮುಟ್ಟುವುದಿಲ್ಲ. ಮೇವಿನ ಬಾಣಲೆಗಳ ಬಳಕೆಯಿಂದ ಈ ಪೋಲನ್ನು ಬಹುಮಟ್ಟಿಗೆ ತಪ್ಪಿಸಬಹುದು. ‘ಮೇವನ್ನು ಕತ್ತರಿಸಿ ಹಾಕಿದರಂತೂ ಒಂದು ಕಡ್ಡಿಯೂ ಪೋಲಾಗುವುದಿಲ್ಲ’ ಎನ್ನುತ್ತಾರೆ ಇಲ್ಲಿನ ರೈತ ವೆಂಕಟಸ್ವಾಮಿ. ಒಂದಿಬ್ಬರನ್ನು ಬಿಟ್ಟರೆ ಯಾರ ಬಳಿಯೂ ಮೇವು ಕತ್ತರಿಸುವ ಯಂತ್ರವಿಲ್ಲ. ಅದನ್ನು ಖರೀದಿಸುವ ಇರಾದೆ ಬಹುತೇಕರದು.

ಹೊರಗೆ ಮೇಯಿಸಿಕೊಂಡು ಬರಲು ಆಳುಗಳ ಅಭಾವವಿರುವ ರೈತರು ಕುರಿ-ಮೇಕೆಗಳನ್ನು ಮೇವುಣಿಕೆಯ ಕಾಲುಗಳಿಗೆ ಕಟ್ಟುತ್ತಾರೆ. ಬೆಳಿಗ್ಗೆ ದೊಡ್ಡಿಯ ಹೊರಗೆ ಹಾಗೂ ರಾತ್ರಿಯ ವೇಳೆ ದೊಡ್ಡಿಯೊಳಗೆ ಇಟ್ಟಿರುವ ಮೇವುಣಿಕೆಯಲ್ಲಿ ಮೇವು ಕೊಡುತ್ತಾರೆ!

ಪಕ್ಕದ ಗ್ರಾಮದ ರೈತರೊಬ್ಬರು ಹಟ್ಟಿ ಪದ್ಧತಿಯಲ್ಲಿ ಮೇಕೆಗಳನ್ನು ಸಾಕಿದ್ದರು. ಕಾರಣಾಂತರಗಳಿಂದ ಮುಚ್ಚಲಾಗಿ, ಮೇವುಣಿಕೆಗಳನ್ನು ಮಾರಿದಾಗ ಒಂದೆರಡನ್ನು ತಿರುಮಣಿ ಗ್ರಾಮದ ಗಜೇಂದ್ರ ತಮ್ಮ ಮನೆಗೆ ತಂದು, ತಮ್ಮ ಅನುಕೂಲಕ್ಕೆ ತಕ್ಕಂತೆ ಮಾರ್ಪಾಡು ಮಾರಿಕೊಂಡರು. ಇವರಿಗೆ ಆದ ಅನುಕೂಲವನ್ನು ಗಮನಿಸಿದ ಊರಿನ ಇತರರು ಸ್ವಂತವಾಗಿ ಹತ್ತಿರದ ವರ್ಕ್‌ಶಾಪ್‌ಗಳಲ್ಲಿ ಈ ಸಾಧನಗಳನ್ನು ವಿನ್ಯಾಸ ಮಾಡಿಸಿಕೊಂಡು ತಂದಿದ್ದಾರೆ.
ವಿನ್ಯಾಸ: ಮೇವುಣಿಕೆಗಳ ವಿನ್ಯಾಸ ತುಂಬಾ ಸರಳ ಅನ್ನುತ್ತಾರೆ ನ್ಯಾರಪ್ಪ ರೆಡ್ಡಿ. ಎರಡು ಅಡಿ ಅಗಲ, ಆರು ಅಡಿ ಉದ್ದ. ನಾಲ್ಕು ಮೂಲೆಯಲ್ಲಿ ಕಬ್ಬಿಣದ ಕಾಲುಗಳು. ಇವುಗಳನ್ನು ಬಂಧಿಸಲು ಒಂದು, ಎರಡು ಮತ್ತು ಎರಡೂವರೆ ಅಥವಾ ಮೂರು ಅಡಿ ಎತ್ತರದಲ್ಲಿ ಅಡ್ಡ ಸರಳುಗಳು. ಒಂದು ಅಡಿ ಎತ್ತರದಲ್ಲಿ ಆರರಿಂದ ಎಂಟು ಇಂಚು ಎತ್ತರದ ಕಬ್ಬಿಣ ತಗಡಿನ ಬಾಣಲೆ (ಟ್ರೇ) ಇಡಬೇಕು. ಕುರಿಗಳಿಗೆ ಎರಡೂವರೆ - ಮೂರು ಅಡಿ ಒಟ್ಟು ಎತ್ತರ ಸಾಕು. ತುಂಟ ಮೇಕೆಗಳಿಗೆ ಇನ್ನೂ ಸ್ವಲ್ಪ ಎತ್ತರವಿದ್ದರೆ ಒಳ್ಳೆಯದೇ.

ಗೇಜು ಕಡಿಮೆ ಇರುವ ಕಬ್ಬಿಣ ಬಳಸಿದರೆ 5-6 ಸಾವಿರ ರೂಪಾಯಿ ವೆಚ್ಚ. ಇನ್ನೂ ಸ್ವಲ್ಪ ಉತ್ತಮ ಕಬ್ಬಿಣ ಬಳಸಿದರೆ 6-8 ಸಾವಿರ ರೂಪಾಯಿ ಬೇಕು. ನಾಲ್ಕಾರು ನೂರು ರೂಪಾಯಿಗಳಲ್ಲಿ ಮೇವುಣಿಕೆಗಳನ್ನು ಮಾಡಿಕೊಂಡಿದ್ದಾರೆ ವೆಂಕಟೇಶಪ್ಪ. ನಾಲ್ಕು ಬದಿಯಲ್ಲಿ ನಾಲ್ಕು ಮರದ ರಿಪೀಸ್‌ಗಳು. ಒಂದು ಅಡಿ ಎತ್ತರದಲ್ಲಿ ಮನೆಯಲ್ಲಿಯೇ ಇರುವ ತಗಡನ್ನು ಬಾಣಲೆಯಾಗಿ ಪರಿವರ್ತಿಸಿ ನಿಲ್ಲಿಸಿದ್ದಾರೆ. ಬಾಣಲೆಯ ಮೇಲೆ ಒಂದು ತಂತಿಯನ್ನು ನಾಲ್ಕು ಕಡೆಯೂ ಎಳೆದಿದ್ದಾರೆ.

ಹಲವೆಡೆ ರೈತರು ಮೇವುಣಿಕೆಗಳನ್ನು ಅತ್ಯಂತ ಸರಳ ಮತ್ತು ಕಡಿಮೆ ವೆಚ್ಚದಲ್ಲಿ ನಿರ್ಮಿಸಿಕೊಂಡಿದ್ದಾರೆ. ಹನ್ನೆರಡು ಇಂಚಿನ ಪಿವಿಸಿ ಪೈಪನ್ನು ಅರ್ಧ ಚಂದ್ರಾಕಾರಕ್ಕೆ ಸೀಳಿ, ಅನುಕೂಲಕರ ಉದ್ದಕ್ಕೆ ಕತ್ತರಿಸಿ ಪಶುಆಹಾರ ಮತ್ತು ಮೇವನ್ನು ನೀಡಲು ಬಳಸುತ್ತಾರೆ. ಹಾಗೆಯೇ ಪ್ಲಾಸ್ಟಿಕ್ ಡ್ರಮ್‌ಗಳನ್ನು ಅರ್ಧಕ್ಕೆ ಸೀಳಿ ಅದಕ್ಕೆ ಒಪ್ಪುವ ಸ್ಟ್ಯಾಂಡ್ ಮಾಡಿಸಿ ಬಳಸುತ್ತಾರೆ. ಚಾಮರಾಜನಗರದ ಹರವೆ ಉಪಜಲಾನಯನ ಪ್ರದೇಶದಲ್ಲಿ ಸುಜಲ ಯೋಜನೆಯಡಿ ಇಂತಹ ಮೇವುಣಿಕೆಗಳನ್ನು ರೈತರಿಗೆ ಪರಿಚಯಿಸಲಾಗಿದೆ. ಇನ್ನೂ ಕೆಲವರು ಈ ಸಾಧನದ ಉದ್ದ ಸರಳುಗಳಿಗೆ 10-12 ಇಂಚು ಅಂತರದಲ್ಲಿ ಅಡ್ಡ ಸರಳುಗಳನ್ನು ಹಾಕಿಸಿ ಒಂದೊಂದು ಕುರಿ-ಮೇಕೆ ಮೇವು ತಿನ್ನಲು ಬಾಣಲೆಗೆ ತಲೆ ಹಾಕಿದರೆ ಮತ್ತೆ ಮತ್ತೆ ಹೊರತೆಗೆಯದಂತೆ ಮಾಡುತ್ತಾರೆ. ಇಲ್ಲಿ ಬೇಕಾಗಿರುವುದು ಜಾಣ್ಮೆಯಷ್ಟೇ. ಮನೆಯಲ್ಲಿಯೇ ಇರುವ ವಸ್ತುಗಳಿಂದ ಅಥವಾ ಸ್ಥಳೀಯವಾಗಿ ಲಭ್ಯವಿರುವ ಸೌಲಭ್ಯಗಳಿಂದ ಮೇವುಣಿಕೆಗಳನ್ನು ಮಾಡಿಕೊಳ್ಳಬಹುದು. ಸಾಧ್ಯವಾದಷ್ಟು ಮೇವು ಪೋಲಾಗುವುದನ್ನು ತಡೆಯಬೇಕು ಅಷ್ಟೇ. ಮಳೆಯಾಶ್ರಿತ ಪ್ರದೇಶಗಳಲ್ಲಿ ಒಂದೊಂದು ಎಳೆ ಮೇವೂ ಮುಖ್ಯವೇ. ಇರುವ ಕನಿಷ್ಠ ಸಂಪನ್ಮೂಲಗಳನ್ನು ಜಾಗರೂಕತೆಯಿಂದ ಉತ್ಪಾದಕತೆಗೆ ಬಳಸುವುದು ಸರಿಯಲ್ಲವೇ?

ಕುರಿ–ಮೇಕೆಗಳ ಜೀವನದ ವಿವಿಧ ಹಂತಗಳಲ್ಲಿ ಪೂರಕ ಪಶು ಆಹಾರ ಅಥವಾ ದಾಣಿ ಮಿಶ್ರಣ ಬೇಕಾಗುತ್ತದೆ. ಕುರಿ-ಮೇಕೆ ಮರಿಗಳಲ್ಲಿ 8-9 ತಿಂಗಳವರೆಗೆ ಬೆಳವಣಿಗೆ ಅತಿ ಹೆಚ್ಚು. ಈ ಅವಧಿಯಲ್ಲಿ ಮೇಯಿಸುವುದರ ಜೊತೆಗೆ ವಯಸ್ಸಿನ ಅನುಗುಣವಾಗಿ ಪ್ರತಿದಿನ 50-150ಗ್ರಾಮ್‌ನಷ್ಟು ದಾಣಿಯ ಜತೆಗೆ ದ್ವಿದಳ ಧಾನ್ಯದ ಸೊಪ್ಪು ಅಥವಾ ಮೇವಿನ ಮರಗಳ ಸೊಪ್ಪು ನೀಡುವುದರಿಂದ ಉತ್ತಮ ಬೆಳವಣಿಗೆ ಸಾಧ್ಯ. ಈ ರೀತಿ ಸಾಕಿದರೆ 8-9 ತಿಂಗಳಲ್ಲಿ 18-20 ಕೆ.ಜಿ. ತೂಕವನ್ನು ಕಾಣಬಹುದು ಎನ್ನುತ್ತಾರೆ ಪಶುವೈದ್ಯಕೀಯ ಮಹಾವಿದ್ಯಾಲಯದ ಆಹಾರಶಾಸ್ತ್ರಜ್ಞ ಡಾ. ಸುರೇಶ್.

ಹಾಗೆಯೇ ಸಂವರ್ಧನಾ ಅವಧಿಯಲ್ಲಿ ಹೆಣ್ಣು ಕುರಿ-ಮೇಕೆಗಳಿಗೆ 150-200 ಗ್ರಾಮ್‌ನಷ್ಟು ಪಶುಆಹಾರ ನೀಡುವುದರಿಂದ ಒಂದಕ್ಕಿಂತ ಹೆಚ್ಚು ಅಂಡಾಣುಗಳು ಬಿಡುಗಡೆಯಾಗಿ ಅವಳಿ ಅಥವಾ ತ್ರಿವಳಿ ನೀಡುವ ಸಾಧ್ಯತೆ ಹೆಚ್ಚಾಗುವುದು. ಗರ್ಭಾವಸ್ಥೆಯ ಕೊನೆಯ ತಿಂಗಳು ಮತ್ತು ಮರಿ ಹಾಕಿದ ನಂತರ ಒಂದೆರಡು ತಿಂಗಳು ಹೆಣ್ಣು ಕುರಿ-ಮೇಕೆಗಳಿಗೆ ಪ್ರತಿದಿನ ಸುಮಾರು 200 ಗ್ರಾಂನಷ್ಟು ದಾಣಿ ಮಿಶ್ರಣ ನೀಡಬೇಕು. ಇದರಿಂದ ಮರಿಗಳಿಗೆ ಉತ್ತಮ ಹಾಲು ದೊರೆಯುವುದಲ್ಲದೆ ತಾಯಿ ಆರೋಗ್ಯವೂ ಕಾಪಾಡುವುದು. ಟಗರು ಮತ್ತು ಹೋತಗಳಿಗೆ 200-250 ಗ್ರಾಂನಷ್ಟು ಪಶುಆಹಾರ ನೀಡುವುದರಿಂದ ವೀರ್ಯದ ಗುಣ ಮತ್ತು ಪ್ರಮಾಣವೂ ಉತ್ತಮಗೊಂಡು ಕುರಿ-ಮೇಕೆಗಳಲ್ಲಿ ಫಲೀಕರಣ ಹೆಚ್ಚಾಗುವುದು. ಹೀಗೆ ಪೂರಕ ಆಹಾರ ನೀಡಲೂ ಇಂತಹ ಮೇವುಣಿಕೆಗಳು ಸಹಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT