ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊನೆಗೂ ಪ್ರಚಾರ ವಾಹನದ ಮೇಲೆ ‘ಹಸ್ತ’

ಬಿಜೆಪಿಗೆ ಸೇರುವ ಸುದ್ದಿಯಿಂದ ಪ್ರಮೋದ್ ಮಧ್ವರಾಜ್ ತಬ್ಬಿಬ್ಬು
Last Updated 27 ಮಾರ್ಚ್ 2018, 11:46 IST
ಅಕ್ಷರ ಗಾತ್ರ

ಉಡುಪಿ: ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಅವರ ಪ್ರಚಾರ ವಾಹನಕ್ಕೆ ಕಾಂಗ್ರೆಸ್ ಪಕ್ಷದ ಹಸ್ತದ ಚಿಹ್ನೆ ಅಳವಡಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸೇವಾ ಸಂಘ ಮಾಡಿದೆ.

ಪ್ರಮೋದ್ ಅವರ ಐದು ವರ್ಷಗಳ ಸಾಧನೆಗಳನ್ನು ವಿಡಿಯೊ ಮೂಲಕ ಹೇಳುವ ಹಾಗೂ ಹಾಡಿನ ಮೂಲಕ ಜನರಿಗೆ ಮುಟ್ಟಿಸುವಪ್ರಚಾರ ಯೋಜನೆಯನ್ನು ಸಂಘ ಮಾಡುತ್ತಿದೆ. ಮಾರ್ಚ್‌ 15ರಿಂದಲೇ ಜಿಲ್ಲೆಯ ವಿವಿಧ ಭಾಗಗಳಿಗೆ ತೆರಳುತ್ತಿರುವ ವಾಹನ ಪ್ರಚಾರದಲ್ಲಿ ನಿತರವಾಗಿದೆ. ಆದರೆ, ಮೊದಲು ವಾಹನದ ಮೇಲೆ ಪ್ರಮೋದ್ ಮಧ್ವರಾಜ್ ಅವರ ನಾನಾ ಭಂಗಿಯ ಚಿತ್ರವನ್ನು ಮಾತ್ರ ಮುದ್ರಿಸಲಾಗಿತ್ತು. ಕಾಂಗ್ರೆಸ್ ಪಕ್ಷದ ಮುಖಂಡರ ಅಥವಾ ಹಸ್ತದ ಚಿಹ್ನೆಯನ್ನು ಮುದ್ರಿಸಿರಲಿಲ್ಲ.

ಇದು ಸಚಿವರು ಬಿಜೆಪಿ ಸೇರುವ ಸುದ್ದಿಗೆ ಇಂಬು ಕೊಟ್ಟಿತ್ತು. ಆದರೆ, ಸೋಮವಾರದಿಂದ ಪ್ರಚಾರ ವಾಹನದಲ್ಲಿ ಹಸ್ತದ ಚಿಹ್ನೆ ಅಳವಡಿಸಲಾಗಿದೆ. ವಾಹನದ ಎಲ್ಲ ಬದಿಗಳಲ್ಲಿಯೂ ಇದನ್ನು ಕಾಣಬಹುದಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಪ್ರಮೋದ್ ಮಧ್ವರಾಜ್ ಅಭಿಮಾನಿಗಳ ಸೇವಾ ಸಂಘದ ರಾಜ್ಯ ಘಟಕದ ಅಧ್ಯಕ್ಷ ರಾಹುಲ್, ‘ಅಭಿವೃದ್ಧಿ ಕೆಲಸದಲ್ಲಿ ಮುಂಚೂಣಿಯಲ್ಲಿರುವ ಪ್ರಮೋದ್ ಅವರ ಸಾಧನೆಗಳನ್ನು ಕ್ಷೇತ್ರದ ಎಲ್ಲ ಜನರಿಗೂ ಮುಟ್ಟಿಸಬೇಕು ಎಂಬುದು ಸಂಘದ ಆಶಯವಾಗಿತ್ತು. ಅದಕ್ಕಾಗಿಯೇ ಎಲ್ಲರೂ ಕುಳಿತು ಚರ್ಚಿಸಿ ಪ್ರಚಾರ ವಾಹನ ವಿನ್ಯಾಸ ಮಾಡುವ ನಿರ್ಣಯ ಮಾಡಿದ್ದೆವು. ಅದರಂತೆ ವಾಹನ ಸಿದ್ಧಗೊಳಿಸಲಾಯಿತು. ಇದು ಅಭಿಮಾನಿಗಳ ಸಂಘವಾದ ಕಾರಣ ಕಾಂಗ್ರೆಸ್ ಚಿಹ್ನೆಯನ್ನು ವಾಹನದಲ್ಲಿ ಅಳವಡಿಸಿರಲಿಲ್ಲ’ ಎಂದರು.

*

ಪ್ರಮೋದ್ ಅವರು ಶಾಸಕರಾಗಿ ಆಯ್ಕೆಯಾದ ನಂತರ ಮಾಡಿರುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಅರ್ಧ ಗಂಟೆಯ ವಿಡಿಯೊದಲ್ಲಿ ತೋರಿಸಲಾಗಿದೆ. ಪ್ರಮುಖ ಕೆಲಸಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನೂ ನೀಡಲಾಗಿದೆ. ಎಲ್‌ಸಿಡಿ ಪರದೆಯಲ್ಲಿ ಈ ವಿಡಿಯೊ ಮೂಡುತ್ತದೆ. ವಿಡಿಯೊದಲ್ಲಿ ಮಾತ್ರ ಮುಖ್ಯಮಂತ್ರಿ ಹಾಗೂ ಪಕ್ಷದ ಮುಖಂಡರ ಪ್ರಸ್ತಾಪ ಇದೆ. ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲ ಭಾಗಗಳಿಗೆ ತೆರಳುವ ವಾಹನ ಕಿರುಚಿತ್ರವನ್ನು ಪ್ರದರ್ಶಿಸುತ್ತಿದೆ.

ಜನರು ಹೆಚ್ಚು ಸೇರುವ ಜಂಕ್ಷನ್, ರಸ್ತೆ ಹಾಗೂ ಸಂತೆಗಳಲ್ಲಿ ಹೆಚ್ಚಾಗಿ ಪ್ರಚಾರ ಮಾಡಲಾಗುತ್ತಿದೆ. ಅಲ್ಲದೆ ಪ್ರಮೋದ್ ಅವರ ಸಾಧನೆ, ವ್ಯಕ್ತಿತ್ವ ಸಾರುವ ಹಾಡುಗಳನ್ನು ಗಾಯಕರ ಮೂಲಕ ಹಾಡಿಸಲಾಗುತ್ತಿದೆ. ಗಾಯಕರು ಹಾಗೂ ವಾದ್ಯ ತಂಡ ಇರುವ ಇನ್ನೊಂದು ವಾಹನ ಸಹ ಪ್ರಚಾರದಲ್ಲಿ ತೊಡಗಿದೆ. ಎರಡೂ ವಾಹನಗಳು ಒಟ್ಟಾಗಿಯೇ ಸಾಗುತ್ತವೆ. ‘ಅಭಿವೃದ್ಧಿಯ ಹರಿಕಾರ ನಮ್ಮ ಪ್ರೀತಿಯ ಸರದಾರ’ ಎಂಬ ಹಾಡನ್ನು ಇದಕ್ಕಾಗಿಯೇ ರೆಕಾರ್ಡ್ ಮಾಡಲಾಗಿದೆ.

**

ಪ್ರಚಾರದಿಂದಾಗಿ ಪ್ರಮೋದ್ ಅವರು ಮಾಡಿರುವ ಕೆಲಸಗಳ ಮಾಹಿತಿಯನ್ನು ಜನರಿಗೆ ನೀಡಲು ಸಾಧ್ಯವಾಗಿದೆ. ಈ ಮೂಲಕ ಕ್ಷೇತ್ರದ ಸಂಪೂರ್ಣ ಮಾಹಿತಿ ಸಿಗುತ್ತಿದೆ.

-ರಾಹುಲ್, ಅಭಿಮಾನಿ ಸಂಘದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT