ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಕೆಟ್ ಪೈಪೋಟಿ ಅಂತಿಮ ಹಂತಕ್ಕೆ

ಕಾರ್ಕಳ: ಅಸಲಿ ಕದನ ಆರಂಭವಾಗುವುದು ಟಿಕೆಟ್ ಘೋಷಣೆಯ ನಂತರ
Last Updated 27 ಮಾರ್ಚ್ 2018, 11:51 IST
ಅಕ್ಷರ ಗಾತ್ರ

ಉಡುಪಿ: ಕಾಂಗ್ರೆಸ್ ಮುಖಂಡರ ಟಿಕೆಟ್ ಪೈಪೋಟಿಯಿಂದ ಕಾರ್ಕಳ ವಿಧಾನಸಭಾ ಕ್ಷೇತ್ರ ಇಡೀ ರಾಜ್ಯದ ಗಮನ ಸೆಳೆದಿದೆ. ಪ್ರಬಲ ಆಕಾಂಕ್ಷಿಗಳಿಂದಾಗಿ ಈ ಕ್ಷೇತ್ರದಲ್ಲಿ ಈಗಾಗಲೇ ಹಲವು ಸುತ್ತಿನ ಜಿದ್ದಾಜಿದ್ದಿನ ರಾಜಕೀಯ ಬೆಳವಣಿಗೆಗಳು ನಡೆದು ಹೋಗಿವೆ.

ಸಂಸದ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಹಾಗೂ ಯುವ ನಾಯಕನಾಗಿ ಹೊರ ಹೊಮ್ಮಿರುವ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರ ಮಧ್ಯೆ ಟಿಕೆಟ್‌ಗಾಗಿ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಶಾಸಕರೂ ಆದ ಕೆ. ಗೋಪಾಲ ಭಂಡಾರಿ ಮತ್ತೊಬ್ಬ ಆಕಾಂಕ್ಷಿಯಾಗಿದ್ದಾರೆ.

ಟಿಕೆಟ್ ಮೇಲೆ ಕಣ್ಣಿಟ್ಟುಕೊಂಡೇ ಉದಯ ಶೆಟ್ಟಿ ಅವರು ಒಂದು ವರ್ಷದಿಂದ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಇಡೀ ಕ್ಷೇತ್ರದಲ್ಲಿ ನಿರಂತರ ಸುತ್ತಾಟ ನಡೆಸುತ್ತಿದ್ದಾರೆ. ಅವರದ್ದೇ ಚಾರಿಟಬಲ್ ಟ್ರಸ್ಟ್ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ. ಸಂಘ– ಸಂಸ್ಥೆಗಳಿಗೆ ದೇಣಿಗೆ ನೀಡುವುದು, ವೈಯಕ್ತಿಕವಾಗಿಯೂ ಸಹಾಯ ಮಾಡುವುದು ನಡೆದೇ ಇದೆ. ಕಾರ್ಯಕರ್ತರೆಲ್ಲರೂ ತಮ್ಮ ಪರವಾಗಿ ಇದ್ದಾರೆ ಎಂಬ ಭಾವನೆಯಲ್ಲಿದ್ದ ಅವರು ಮಾಜಿ ಶಾಸಕ ಕೆ. ಗೋಪಾಲ ಭಂಡಾರಿ ಅವರ ಬದಲಿ ತಮಗೇ ಟಿಕೆಟ್ ಸಿಗಲಿದೆ ಎಂದೇ ಭಾವಿಸಿದ್ದರು.

ಮಗನನ್ನು ಇದೇ ಕ್ಷೇತ್ರದಿಂದ ಕಣಕ್ಕಿಳಿಸಲು ವೀರಪ್ಪ ಮೊಯಲಿ ಅವರು ಮುಂದಾದ ನಂತರ ಇಡೀ ಕ್ಷೇತ್ರದಲ್ಲಿ ಸಂಚಲನ ಮೂಡಿದೆ. ಆರು ಬಾರಿ ಕಾರ್ಕಳ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದ ಮೊಯಿಲಿ ಅವರನ್ನು ತಾಲ್ಲೂಕಿನ ಕಾಂಗ್ರೆಸ್ ಹೈಕಮಾಂಡ್ ಎಂದು ಭಾವಿಸಲಾಗುತ್ತದೆ. ಅವರ ಆಶೀರ್ವಾದದಿಂದಲೇ ಗೋಪಾಲ ಭಂಡಾರಿ ಟಿಕೆಟ್ ಪಡೆದು ಗೆದ್ದಿದ್ದರು. ಆದರೆ, ಮೊಯಿಲಿ ಅವರೇ ಖುದ್ದು ಮಗನನ್ನು ಸ್ಪರ್ಧೆಗಿಳಿಸುವ ಆಶಯ ವ್ಯಕ್ತಪಡಿಸಿದಾಗ ಭಂಡಾರಿ ಅವರಿಗೆ ಒಪ್ಪಿಕೊಳ್ಳದೆ ಬೇರೆ ಮಾರ್ಗ ಇರಲಿಲ್ಲ. ಆದ್ದರಿಂದ ಅವರು ಆ ಬಗ್ಗೆ ಆಕ್ಷೇಪ ವ್ಯಕ್ತಪಡಿಸದೆ, ಭಿನ್ನಮತೀಯರಾಗದೆ ತಟಸ್ಥರಾಗಿದ್ದಾರೆ.

ಹರ್ಷ ಮೊಯಿಲಿ ಸ್ಪರ್ಧೆ ಭಂಡಾರಿಗೆ ಶಾಕ್ ನೀಡಿದರೆ, ಉದಯ ಶೆಟ್ಟಿ ಪೈಪೋಟಿ ಖುದ್ದು ವೀರಪ್ಪ ಮೊಯಿಲಿ ಅವರಿಗೇ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇಂತಹ ಬೆಳವಣಿಗೆಯನ್ನು ನಿರೀಕ್ಷಿಸಿರದ ಮೊಯಿಲಿ ಅವರು ಈಗ ಖುದ್ದು ಪುತ್ರನಿಗೆ ಟಿಕೆಟ್ ಕೊಡಿಸಲು ಪರದಾಡುವಂತಾಗಿದೆ. ‘ಟಿಕೆಟ್ ಹಂಚಿಕೆಯಲ್ಲಿ ಗುತ್ತಿಗೆದಾರರು ಹಾಗೂ ಲೋಕೋಪಯೋಗಿ ಸಚಿವರ ಪ್ರಭಾವ ತಪ್ಪಿಸಬೇಕು’ ಎಂಬ ಮೊಯಿಲಿ ಅವರ ಟ್ವೀಟ್ (ತಾವು ಮಾಡಿದ್ದಲ್ಲ ಎಂಬುದು ಅವರ ಸ್ಪಷ್ಟನೆ) ರಾಜ್ಯ ರಾಜಕೀಯದಲ್ಲಿಯೇ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

ಪೂರ್ವಭಾವಿ ಪರೀಕ್ಷೆಯಲ್ಲಿ ಪಾಸ್: ಉದ್ಯಮಿ, ಗುತ್ತಿಗೆದಾರ ಆಗಿರುವ ಉದಯ ಶೆಟ್ಟಿ ಅವರು ಇನ್ನಿಲ್ಲದ ಪೈಪೋಟಿ ನೀಡುತ್ತಿರುವುದನ್ನು ಹಲವು ಸಂಗತಿಗಳು ದೃಢಪಡಿಸಿವೆ. ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಪ್ರಸ್ತುತ ಪ್ರಣಾಳಿಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಮೊಯಿಲಿ ಅವರೊಂದಿಗೆ ಉದಯ ಶೆಟ್ಟಿ ಸ್ಪರ್ಧೆ ನಡೆಸಲಾಗದು ಎಂದೇ ಎಲ್ಲರೂ ಭಾವಿಸಿದ್ದರು. ಟಿಕೆಟ್ ಬಗ್ಗೆ ಶಿಫಾರಸು ಮಾಡಲು ಎಐಸಿಸಿ ನೇಮಿಸಿರುವ ಸಮಿತಿಯು ಅವರ ಹೆಸರನ್ನು ಕೈಬಿಡಬಹುದು ಎನ್ನಲಾಗುತ್ತಿತ್ತು. ಆದರೆ, ಆಶ್ಚರ್ಯಕರ ಬೆಳವಣಿಗೆಯಲ್ಲಿ ಉದಯ ಶೆಟ್ಟಿ ಹೆಸರಿಗೆ ಅಲ್ಲಿ ಒಪ್ಪಿಗೆ ಸಿಕ್ಕಿದೆ. ಅದು ಮುಂದಿನ ಹಂತಕ್ಕೂ ಹೋಗಿದೆ.

ವಾಸ್ತವವಾಗಿ ಇದು ಹೊಸ ನಾಯಕನ ಎರಡನೇ ಜಯವಾಗಿದೆ. ಉಡುಪಿಗೆ ಜಿಲ್ಲೆಗೆ ವೀಕ್ಷಕರು ಬಂದಾಗ ಹರ್ಷ ಮೊಯಿಲಿ ಅವರ ಹೆಸರನ್ನು ಮಾತ್ರ ನೀಡಬೇಕು ಎಂದು ಯೋಜನೆ ರೂಪಿಸಲಾಗಿತ್ತು. ಹಾಗೆ ಮಾಡಿದರೆ ರಾಜ್ಯ ಮಟ್ಟದ ಸಮಿತಿಯಲ್ಲಿ ಗೊಂದಲ ಇರುವುದಿಲ್ಲ, ಸುಲಭವಾಗಿ ಟಿಕೆಟ್ ಗಿಟ್ಟಿಸಬಹುದು ಎಂಬುದು ತಂತ್ರವಾಗಿತ್ತು. ಆಯಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬ್ಲಾಕ್ ಕಾಂಗ್ರೆಸ್‌ನ ಅಧ್ಯಕ್ಷರು ಮಾತ್ರ ಹೆಸರನ್ನು ನೀಡಬೇಕು ಎಂಬ ಸೂಚನೆ ನೀಡಲಾಗಿತ್ತು. ಹರ್ಷ ಹೆಸರನ್ನು ಮಾತ್ರ ನೀಡುವಂತೆ ನೋಡಿಕೊಳ್ಳಲಾಗಿತ್ತು.

ಆದರೆ, ಮೊದಲ ಹಂತದಲ್ಲಿಯೇ ಸೀನಿಯರ್ ಮೊಯಿಲಿ ಅವರ ತಂತ್ರವನ್ನು ಹೊಸ ನಾಯಕ ವಿಫಲಗೊಳಿಸಿದ್ದರು. ಬೆಂಬಲಿಗರೊಂದಿಗೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಬಂದಿದ್ದ ಉದಯ ಶೆಟ್ಟಿ ಅವರು ತಮ್ಮ ಹೆಸರನ್ನು ಸಹ ನೀಡಿದ್ದರು. ಇದು ಗೊತ್ತಾಗುತ್ತಿದ್ದಂತೆ ಗೋಪಾಲ ಭಂಡಾರಿ ಅವರ ಹೆಸರನ್ನು ಸಹ ನೀಡಲಾಗಿತ್ತು. ಆದ್ದರಿಂದ ವೀಕ್ಷಕರು ಅನಿವಾರ್ಯವಾಗಿ ಕಾರ್ಕಳ ಕ್ಷೇತ್ರಕ್ಕೆ ಮೂರು ಹೆಸರು ಶಿಫಾರಸು ಮಾಡಿದ್ದರು.

ಇನ್ನೇನು ಚುನಾವಣೆ ಹಾಗೂ ಟಿಕೆಟ್ ಎರಡೂ ಘೋಷಣೆಯಾಗಲಿದೆ. ಖುದ್ದು ವೀರಪ್ಪ ಮೊಯಿಲಿ ಅವರೇ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿ ‘ಹೈಕಮಾಂಡ್ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ’ ಎಂದು ಹೇಳಿದ್ದಾರೆ. ಮೊಯಿಲಿ ಮಗನಿಗೆ ಟಿಕೆಟ್ ಕೊಡಿಸಲು ಯಶಸ್ವಿಯಾಗುವರೇ, ಎದುರಾಳಿ ಉದಯ ಶೆಟ್ಟಿ ಅವರಿಗೆ ಟಿಕೆಟ್ ತಪ್ಪಿಸಲು ಗೋಪಾಲ ಭಂಡಾರಿಗೆ ಸಿಗುವಂತೆ ನೋಡಿಕೊಳ್ಳುವರೇ ಅಥವಾ ಹಿರಿಯರ ಎಲ್ಲ ತಂತ್ರಗಳಿಗೆ ತಿರುಗೇಟು ನೀಡಿ ಉದಯ ಶೆಟ್ಟಿ ಅಧಿಕೃತ ಅಭ್ಯರ್ಥಿಯಾಗುವರೇ ಎಂಬುದು ಕುತೂಹಲ ಕೆರಳಿಸಿದೆ.

ಅಂದಹಾಗೆ ಮುಖ್ಯವಾದ ವಿಷಯವೆಂದರೆ, ಕಾರ್ಕಳ ಕ್ಷೇತ್ರದ ಅಸಲಿ ಹಾಗೂ ಹೈ ವೋಲ್ಟೇಜ್ ಕದನ ಆರಂಭವಾಗುವುದು ಟಿಕೆಟ್ ಘೋಷಣೆಯಾದ ನಂತರ.

ಬಿಜೆಪಿಯ ಸುನೀಲ್ ಕುಮಾರ್ ತಯಾರು

ಬಿಜೆಪಿ ಮಟ್ಟಿಗೆ ಟಿಕೆಟ್ ವಿಷಯದಲ್ಲಿ ಗೊಂದಲ ಇಲ್ಲದ ಅಖಾಡ ಎಂದರೆ ಅದು ಕಾರ್ಕಳ. ಬಿಜೆಪಿ ಭಾರೀ ನಿರೀಕ್ಷೆ ಇಟ್ಟುಕೊಂಡಿರುವ ಕ್ಷೇತ್ರವೂ ಇದಾಗಿದೆ. ಇಲ್ಲಿ ಹಾಲಿ ಶಾಸಕ ವಿ. ಸುನೀಲ್ ಕುಮಾರ್ ಮತ್ತೊಮ್ಮೆ ಅಖಾಡಕ್ಕಿಳಿಯಲಿದ್ದಾರೆ. ಕೆಲವು ತಿಂಗಳ ಹಿಂದೆಯೇ ಚುನಾವಣಾ ಮೂಡ್‌ಗೆ ಬಂದಿರುವ ಅವರು, ಅದಕ್ಕಾಗಿ ಭರ್ಜರಿ ತಯಾರಿ ಆರಂಭಿಸಿದ್ದಾರೆ. ಮನೆ ಮನೆಗೂ ಭೇಟಿ ನೀಡುತ್ತಿದ್ದಾರೆ.

ತಮ್ಮ ಸಾಧನೆಯನ್ನು ಹೇಳುವುದರ ಜತೆಗೆ ಕಾಂಗ್ರೆಸ್ ಸರ್ಕಾರದ ಹಾಗೂ ಹಿಂದಿನ ಶಾಸಕರ ವೈಫಲ್ಯವನ್ನು ಹೇಳುತ್ತಾ ಜನರ ಮನ ಸೆಳೆಯಲು ಅವರು ಪ್ರಯತ್ನಿಸುತ್ತಿದ್ದಾರೆ. ದೊಡ್ಡ ಯುವ ಪಡೆಯೊಂದಿಗೆ ಅವರು ಮತದಾರರನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.

-ಎಂ. ನವೀನ್‌ ಕುಮಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT