ಸೇವೆ ಸುಧಾರಿಸಲು ಪ್ರಯಾಣಿಕರ ಒತ್ತಾಯ

ಸಂಚಾರ ದಟ್ಟಣೆ ಅವಧಿಯಲ್ಲಿ ರೈಲು ಕೊರತೆ

ನಗರದ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕೆಲದಿನಗಳ ಹಿಂದಷ್ಟೇ ಎಂಟು ಸಬ್‌ಅರ್ಬನ್‌ ರೈಲುಗಳ ಸಂಚಾರ ಆರಂಭಿಸಲಾಗಿದೆ. ಆದರೆ, ಪ್ರಯಾಣಿಕರನ್ನು ಕಾಡುತ್ತಿರುವ ಇಂತಹ ಕೆಲವು ಪ್ರಶ್ನೆಗಳಿಗೆ ಈಗಲೂ ಉತ್ತರ ಸಿಕ್ಕಿಲ್ಲ.

ಸಂಚಾರ ದಟ್ಟಣೆ ಅವಧಿಯಲ್ಲಿ ರೈಲು ಕೊರತೆ

ಬೆಂಗಳೂರು: ನಗರದಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುವ ಸಮಯದಲ್ಲಿ ಸಬ್‌ಅರ್ಬನ್‌ ರೈಲುಗಳು ಕಡಿಮೆ ಇರುವುದೇಕೆ? ಹೊಸೂರು ಮಾರ್ಗದಲ್ಲಿ ರಾತ್ರಿ 7ರ ಬಳಿಕ ಏಕೆ ರೈಲುಗಳಿಲ್ಲ? ಈ ಸೇವೆಯನ್ನು ಇನ್ನಷ್ಟು ಬಲಪಡಿಸುವ ಸಲುವಾಗಿ ಜೋಡಿ ಹಳಿಗಳನ್ನು ಅಳವಡಿಸುವುದು ಯಾವಾಗ? ನಗರದ ಎಲ್ಲ ಮಾರ್ಗಗಳ ವಿದ್ಯುದೀಕರಣ ಪೂರ್ಣಗೊಳ್ಳುವುದು ಯಾವಾಗ?

ನಗರದ ಸಂಚಾರ ದಟ್ಟಣೆ ಸಮಸ್ಯೆ ಕಡಿಮೆ ಮಾಡುವ ಉದ್ದೇಶದಿಂದ ಕೆಲದಿನಗಳ ಹಿಂದಷ್ಟೇ ಎಂಟು ಸಬ್‌ಅರ್ಬನ್‌ ರೈಲುಗಳ ಸಂಚಾರ ಆರಂಭಿಸಲಾಗಿದೆ. ಆದರೆ, ಪ್ರಯಾಣಿಕರನ್ನು ಕಾಡುತ್ತಿರುವ ಇಂತಹ ಕೆಲವು ಪ್ರಶ್ನೆಗಳಿಗೆ ಈಗಲೂ ಉತ್ತರ ಸಿಕ್ಕಿಲ್ಲ.

ಹೊರವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಸಿಲ್ಕ್‌ಬೋರ್ಡ್‌ ಜಂಕ್ಷನ್‌, ಹೊಸೂರು ರಸ್ತೆಗಳಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚು ಇರುವುದು ಬೆಳಿಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ. ರಸ್ತೆಗಳೆಲ್ಲ ಸ್ತಬ್ಧಗೊಳ್ಳುವ ಈ ಅವಧಿಯಲ್ಲೇ ಉ‍ಪನಗರ ರೈಲುಗಳ ಅವಶ್ಯಕತೆ ಹೆಚ್ಚು ಇದೆ. ಆದರೆ, ಈ ಅವಧಿಯಲ್ಲಿ ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ರೈಲುಗಳ ಕೊರತೆ ಇದೆ.

ಸಂಚಾರ ದಟ್ಟಣೆ ಹೆಚ್ಚು ಇಲ್ಲದ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈಲುಗಳನ್ನು ಒದಗಿಸಿಯೂ ಪ್ರಯೋಜನವಿಲ್ಲ. ಈ ರೈಲುಗಳು ಕನಿಷ್ಠ ಪಕ್ಷ 30 ಕಿ.ಮೀ ದೂರವಾದರೂ ಸಂಚರಿಸಬೇಕು. ಸಮಯಕ್ಕೆ ಸರಿಯಾಗಿ ನಿಲ್ದಾಣಕ್ಕೆ ಬರಬೇಕು. ದೂರದ ಊರುಗಳಿಗೆ ಸಂಚರಿಸುವ ರೈಲುಗಳಿಗಿಂತ (ಶತಾಬ್ದಿ ರಾಜಧಾನಿ ಎಕ್ಸ್‌ಪ್ರೆಸ್‌ನಂತಹ ರೈಲುಗಳನ್ನು ಹೊರತುಪಡಿಸಿ) ನಗರದ ವ್ಯಾಪ್ತಿಯಲ್ಲಿ ಸಂಚರಿಸುವ ರೈಲುಗಳಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸುತ್ತಾರೆ. ‘ಸಿಟಿಜನ್ಸ್‌ ಫಾರ್‌ ಬೆಂಗಳೂರು’ ಸಂಘಟನೆಯ ಭವಿನ್‌ ಗಾಂಧಿ. ‘ಮುಂಬೈನಲ್ಲೂ ಇದೇ ಮಾದರಿಯನ್ನು ಅನುಸರಿಸಲಾಗುತ್ತದೆ’ ಎಂದು ತಿಳಿಸಿದರು.

‘ಈಗಿನ ರೈಲ್ವೆ ವೇಳಾಪಟ್ಟಿಯನ್ನುನೋಡಿಕೊಂಡು, ಖಾಲಿ ಇರುವ ಅವಧಿಯಲ್ಲಿ ಉಪನಗರ ರೈಲುಗಳನ್ನು ಆರಂಭಿಸಲಾಗಿದೆ.  ದೂರದ ಊರುಗಳಿಗೆ ಸಂಚರಿಸುವ ರೈಲುಗಳಿಗೆ ಅವು ದಾರಿ ಬಿಟ್ಟುಕೊಡಬೇಕಾಗುತ್ದೆ. ಹಾಗಾಗಿ ಉಪನಗರ ರೈಲುಗಳು ಸಮಯಕ್ಕೆ ಸರಿಯಾಗಿ ಸಂಚರಿಸುವುದು ತೀರಾ ಕಡಿಮೆ’ ಎಂದು ದೂರುತ್ತಾರೆ ಪುಷ್ಪಾ ಪಾಟೀಲ.

‘ರೈಲು ಸರಿಯಾದ ಸಮಯಕ್ಕೆ ಬರಲಿದೆ ಎಂಬುದು ನಮಗೆ ಖಾತರಿಯಾದರೆ ನಾವು ಪ್ರಯಾಣದ ಬಗ್ಗೆ ಮೊದಲೇ ಯೋಜನೆ ಹಾಕಿಕೊಳ್ಳಬಹುದು. ಪ್ರಸ್ತುತ ರೈಲುಗಳು ಒಂದರಿಂದ ಒಂದೂವರೆ ಗಂಟೆಯಷ್ಟು ತಡವಾಗಿ ಬರುತ್ತಿವೆ. ಸ್ಥಳೀಯ ರೈಲುಗಳಿಗೆ ಪ್ರತ್ಯೇಕ ಹಳಿಯನ್ನು ಹೊಂದುವುದೊಂದೇ ಈ ಸಮಸ್ಯೆಗೆ ಪರಿಹಾರ’ ಎಂದು ಅಭಿಪ್ರಾಯಪಟ್ಟರು.

‘ಬೈಯಪ್ಪನಹಳ್ಳಿಯಿಂದ ಬೆಳಿಗ್ಗೆ 9 ಗಂಟೆಗೆ ಹೊಸೂರು ಕಡೆಗೆ ಹೊರಡುವ ರೈಲು ಬೇಕು’ ಎನ್ನುತ್ತಾರೆ ಸಾಫ್ಟ್‌ವೇರ್‌ ಎಂಜಿನಿಯರ್‌ ರಾಘವೇಂದ್ರ. ಬೆಳ್ಳಂದೂರು ತಲುಪಲು ಬೈಯಪ್ಪನಹಳ್ಳಿಯವರೆಗೆ ಮೆಟ್ರೊದಲ್ಲಿ ಪ್ರಯಾಣಿಸುವ ಅವರು, ಅಲ್ಲಿಂದ ರೈಲಿನಲ್ಲಿ ಹೋಗುತ್ತಾರೆ.

‘ಈ ಹೊತ್ತಿನಲ್ಲಿ ವರ್ತುಲ ರಸ್ತೆಯಲ್ಲಿ ವಾಹನ ದಟ್ಟಣೆ ವಿಪರೀತ ಜಾಸ್ತಿ ಇರುತ್ತದೆ. ನಾನು ರಸ್ತೆಯ ಮೂಲಕ ಪ್ರಯಾಣಿಸಿದರೆ ಕಚೇರಿ ತಲುಪಲು ಏನಿಲ್ಲವೆಂದರೂ 1 ಗಂಟೆ ಬೇಕಾಗುತ್ತದೆ. ಈ ಸಮಯದಲ್ಲಿ ರೈಲು ಇದ್ದರೆ ಒಳ್ಳೆಯದು. ಬೆಳ್ಳಂದೂರು ರಸ್ತೆ ನಿಲ್ದಾಣದಲ್ಲಿ ಇಳಿದುಕೊಂಡು, ಸೆಸ್ನಾ ಟೆಕ್‌ ಪಾರ್ಕ್‌ನಲ್ಲಿರುವ ನನ್ನ ಕಚೇರಿಯನ್ನು ಸುಲಭವಾಗಿ ತಲುಪಬಹುದು’ ಎಂದು ಅವರು ತಿಳಿಸಿದರು.

‘ಹೀಲಳಿಗೆ ಕಡೆಯಿಂದ ಬರುವ ರೈಲೊಂದು ಬೈಯಪ್ಪನಹಳ್ಳಿ ನಿಲ್ದಾಣವನ್ನು ಪ್ರವೇಶಿಸಲು 20 ನಿಮಿಷ ಕಾಯುತ್ತಾ ನಿಲ್ಲುತ್ತದೆ. ಇಂತಹ ಸಮಸ್ಯೆಗೆ ಸದ್ಯಕ್ಕಂತೂ ಪರಿಹಾರ ಕಂಡುಕೊಳ್ಳುವುದು ಕಷ್ಟ’ ಎನ್ನುತ್ತಾರೆ ‘ಉಪನಗರ ರೈಲು ಬೇಕು’ ಅಭಿಯಾನದ ರೂವಾರಿಗಳಲ್ಲಿ ಒಬ್ಬರಾದ ‘ಪ್ರಜಾರಾಗ್‌’ ಸಂಘಟನೆಯ ಸಂಜೀವ ದ್ಯಾಮಣ್ಣವರ್‌.

‘ಹೊಸೂರು ಕಡೆಯಿಂದ ಬರುವ ರೈಲುಗಳು ಬೈಯಪ್ಪನಹಳ್ಳಿ ನಿಲ್ದಾಣ ಪ್ರವೇಶಿಸುವ ಮುನ್ನವೇ ಮುಖ್ಯ ಮಾರ್ಗವನ್ನು ಸೇರುತ್ತವೆ. ಇದನ್ನು ತಪ್ಪಿಸಬೇಕಾದರೆ ಬೈಯಪ್ಪನಹಳ್ಳಿ ನಿಲ್ದಾಣದಿಂದಲೇ ಹೊಸೂರು ಕಡೆಗೆ ಪ್ರತ್ಯೇಕ ಮಾರ್ಗ ನಿರ್ಮಿಸಬೇಕಾಗುತ್ತದೆ’ ಎಂದು ಅವರು ಸಲಹೆ ನೀಡಿದರು.

‘ಈ ಸಮಸ್ಯೆ ನೀಗಿಸಿದರೆ ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಸಾಮರ್ಥ್ಯ ಶೇ40ರಷ್ಟು ಹೆಚ್ಚಳವಾಗುತ್ತದೆ. ಹೊಸೂರು ಮಾರ್ಗದ ಪ್ರಯಾಣಿಕರು ತಾಸುಗಟ್ಟಲೆ ಕಾಯುವುದು ತಪ್ಪುತ್ತದೆ’ ಎಂದರು.

ಬಾಣಸವಾಡಿ– ಹೊಸೂರು ನಡುವೆ ಹೊಸ ರೈಲು ಆರಂಭಿಸಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದನ್ನು ಯಶವಂತಪುರದವರೆಗೆ ವಿಸ್ತರಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ಕೊನೆಯ ತಾಣದ ಸಂಪರ್ಕ ಹೆಚ್ಚಲಿ
ರೈಲ್ವೆ ನಿಲ್ದಾಣದಿಂದ ಪ್ರಯಾಣಿಕರು ಕೊನೆಯ ತಾಣವನ್ನು ಸೇರಲು ಅನುಕೂಲವಾಗುವಂತೆ ಪೂರಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾದ ಅಗತ್ಯ ಇದೆ ಎನ್ನುತ್ತಾರೆ ಪ್ರಯಾಣಿಕರು. ಚಂದಾಪುರ ವೃತ್ತದಲ್ಲಿ ಬ್ಯಾಂಕ್‌ ಅಧಿಕಾರಿಯಾಗಿರುವ ಪ್ರತಾಪ್‌ ಅವರು ಹೀಲಳಿಗೆ ರೈಲು ನಿಲ್ದಾಣದಿಂದ ಕಚೇರಿ ತಲುಪಲು ‘ಶೇರ್‌ಡ್‌ ಆಟೊ’ ಬಳಸುತ್ತಾರೆ. 

ಎಲೆಕ್ಟ್ರಾನಿಕ್‌ ಸಿಟಿಯ ಖಾಸಗಿ ಕಂಪನಿಯೊಂದರ ಉದ್ಯೋಗಿಗಳು ಹೀಲಳಿಗೆ ನಿಲ್ದಾಣದಿಂದ ಕಚೇರಿ ತಲುಪಲು ಹಾಗೂ ಕಚೇರಿಯಿಂದ ರೈಲುನಿಲ್ದಾಣಕ್ಕೆ ಪ್ರಯಾಣಿಸಲು 40 ಆಸನಗಳ ವ್ಯವಸ್ಥೆಯುಳ್ಳ ಬಸ್‌ ಅನ್ನು ಬಾಡಿಗೆಗೆ ಪಡೆದಿದ್ದಾರೆ.

ನಿಲ್ದಾಣಗಳ ಸಂಖ್ಯೆ ಹೆಚ್ಚಲಿ
ಯಶವಂತಪುರ, ಬಾಣಸವಾಡಿ, ಬೈಯಪ್ಪನಹಳ್ಳಿ, ಹೀಲಳಿಗೆ ಮತ್ತು ಹೊಸೂರು ನಡುವೆ ಉಪನಗರ ರೈಲಿಗಾಗಿಯೇ ಪ್ರತ್ಯೇಕ ಹಳಿಯ ಅಗತ್ಯವಿದೆ. ಇಲ್ಲಿನ ಕಗ್ಗದಾಸಪುರ, ಮಾರತಹಳ್ಳಿ, ಸೂರ್ಯನಗರದಲ್ಲಿ ಹೊಸ ನಿಲ್ದಾಣಗಳನ್ನು ನಿರ್ಮಿಸಬೇಕಿದೆ.

ಹೊಸೂರು ಮಾರ್ಗದಲ್ಲಿ ಜೋಡಿ ಹಳಿ ನಿರ್ಮಾಣ ಹಾಗೂ ಇಲ್ಲಿನ ನಿಲ್ದಾಣಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಉಪನಗರ ರೈಲು ಇನ್ನಷ್ಟು ಪ್ರಯಾಣಿಕ ಸ್ನೇಹಿ ಆಗಲಿದೆ. ಇದು ಸಾಕಾರ ಆಗಬೇಕಾದರೆ ಈ ಯೋಜನೆಗೆ ಆದಷ್ಟುಬೇಗ ವಿವಿಧ ಉದ್ದೇಶದ ಘಟಕವನ್ನು (ಎಸ್‌ಪಿವಿ) ಸ್ಥಾಪಿಸಬೇಕು ಎಂದು ಸಂಜೀವ ದ್ಯಾಮಣ್ಣವರ್‌ ಒತ್ತಾಯಿಸಿದರು.

Comments
ಈ ವಿಭಾಗದಿಂದ ಇನ್ನಷ್ಟು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

ಬೆಂಗಳೂರು
ಗೌರಿ ಹತ್ಯೆ; ಚಾರ್ಜ್‌ಶೀಟ್ ಸಿದ್ಧ

26 Apr, 2018

ಪೊಲೀಸರಿಂದ ಭದ್ರತೆ
ವಿಮಾನನಿಲ್ದಾಣ ರಸ್ತೆ ಎರಡೂ ಕಡೆ ಶುಲ್ಕ ಸಂಗ್ರಹ

‘ಪೊಲೀಸ್‌ ಭದ್ರತೆಯಲ್ಲಿ ಶುಲ್ಕ ಸಂಗ್ರಹ ಆರಂಭಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೋಗುವ ಮಾರ್ಗದಲ್ಲಿ 15 ಶುಲ್ಕ ವಸೂಲಾತಿ ಕೇಂದ್ರಗಳಿವೆ. ಹೆಚ್ಚುವರಿಯಾಗಿ ನಾಲ್ಕು ಮೊಬೈಲ್‌ ಕೇಂದ್ರಗಳನ್ನು ಆರಂಭಿಸಲಾಗಿದೆ’...

26 Apr, 2018
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

ಬೆಂಗಳೂರು/ಶಿವಮೊಗ್ಗ
ಅಭ್ಯರ್ಥಿ ಶ್ರೀನಿವಾಸ್ ರಾಜೀನಾಮೆ ನೋಟಿಸ್ ಜಾರಿಗೆ ಹೈಕೋರ್ಟ್ ಆದೇಶ

26 Apr, 2018

ಬೆಂಗಳೂರು
ಒಳಚರಂಡಿ ಪೈಪ್‌ಲೈನ್‌ ಸಮರ್ಪಕ ಅಳವಡಿಕೆಗೆ ಆದೇಶ

‘ಮಂಜುನಾಥ ನಗರ ವ್ಯಾಪ್ತಿಯ ಒಳಚರಂಡಿ ಪೈಪ್‌ಲೈನುಗಳನ್ನು ಬೆಂಗಳೂರು ಜಲಮಂಡಳಿಯು ಆರು ವಾರಗಳಲ್ಲಿ ಸಮಪರ್ಕವಾಗಿ ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬೆಂಗಳೂರು ನಗರ ಗ್ರಾಹಕರ ವ್ಯಾಜ್ಯಗಳ...

26 Apr, 2018

ಕಬ್ಬನ್‌ ಪಾರ್ಕ್‌ ಕೆನೈನ್ಸ್‌, ಬಿಬಿಎಂಪಿ ವತಿಯಿಂದ ಅಭಿಯಾನ
472 ಸಾಕುನಾಯಿಗಳಿಗೆ ಪರವಾನಗಿ

ಕಬ್ಬನ್‌ ಪಾರ್ಕ್‌ ಕೆನೈನ್ಸ್‌ (ಸಿಪಿಸಿ) ಹಾಗೂ ಬಿಬಿಎಂಪಿ ಆಶ್ರಯದಲ್ಲಿ ಕಬ್ಬನ್‌ ಉದ್ಯಾನದಲ್ಲಿರುವ ನಾಯಿ ಉದ್ಯಾನದಲ್ಲಿ (ಡಾಗ್‌ ಪಾರ್ಕ್‌) ಹಮ್ಮಿಕೊಂಡಿದ್ದ ‘3ನೇ ಸಾಕುನಾಯಿ ಪರವಾನಗಿ ಅಭಿಯಾನ’ದಲ್ಲಿ...

26 Apr, 2018