ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ವಿರೂಪ ಪ್ರಕರಣ: ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ಗೆ 12 ತಿಂಗಳ ನಿಷೇಧ

Last Updated 28 ಮಾರ್ಚ್ 2018, 9:42 IST
ಅಕ್ಷರ ಗಾತ್ರ

ಸಿಡ್ನಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಸ್ಟೀವ್ ಸ್ಮಿತ್ ಮತ್ತು ಡೇವಿಡ್‌ ವಾರ್ನರ್‌ಗೆ ಒಂದು ವರ್ಷದ ನಿಷೇಧ ಹೇರಿರುವುದಾಗಿ ವರದಿಯಾಗಿದೆ.

ಚೆಂಡು ವಿರೂಪಗೊಳಿಸಿದ ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ಗೆ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಒಂಬತ್ತು ತಿಂಗಳು ಅಮಾನತು, ಸ್ಟೀವ್‌ ಸ್ಮಿತ್‌ ಮತ್ತು ಡೇವಿಡ್‌ ವಾರ್ನರ್‌ಗೆ 12 ತಿಂಗಳ ನಿಷೇಧ ವಿಧಿಸಿರುವುದಾಗಿ ಇಎಸ್‌ಪಿಎನ್‌ಕ್ರಿಕ್‌ಇನ್ಫೋ ವರದಿ ಮಾಡಿದೆ. 

ಐಪಿಎಲ್‌ ನಾಯಕತ್ವ ತೊರೆದು..
ಐಪಿಎಲ್‌ನ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ನಾಯಕ ಸ್ಥಾನದಿಂದ ಡೇವಿಡ್ ವಾರ್ನರ್ ಹೊರ ಬಂದಿರುವುದಾಗಿ ಫ್ರಾಂಚೈಸಿ ಬುಧವಾರ ಪ್ರಕಟಿಸಿದೆ.

2018ನೇ ಸಾಲಿನ ಐಪಿಎಲ್‌ ಪಂದ್ಯಾವಳಿಗೆ ಸನ್‌ರೈಸರ್ಸ್‌ ಹೈದರಾಬಾದ್‌ ಡೇವಿಡ್‌ ವಾರ್ನರ್ ಅವರನ್ನು ₹12.5 ಕೋಟಿಗೆ ತಂಡದಲ್ಲಿ ಉಳಿಸಿಕೊಂಡಿತ್ತು. ಇದೇ ಏಪ್ರಿಲ್‌ 7ರಿಂದ ಐಪಿಎಲ್‌ ಪಂದ್ಯಗಳು ಪ್ರಾರಂಭವಾಗಲಿದ್ದು, ಅದಕ್ಕೂ ಮುನ್ನ ಈ ನಿರ್ಧಾರ ಹೊರ ಬಿದ್ದಿದೆ.

ಸೋಮವಾರ ಸ್ಟೀವ್ ಸ್ಮಿತ್ ಐಪಿಎಲ್‌ನಲ್ಲಿ ಆಡುವ ರಾಜಸ್ತಾನ ರಾಯಲ್ಸ್‌ ತಂಡದ ನಾಯಕ ಸ್ಥಾನವನ್ನು ತೊರೆದಿದ್ದರು.  ತಂಡವನ್ನು ಅಜಿಂಕ್ಯಾ ರಹಾನೆ ಮುನ್ನಡೆಸಲಿದ್ದಾರೆ.

ಹಿನ್ನೆಲೆ: ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ನ ಮೂರನೇ ದಿನ ಬ್ಯಾಟ್ಸ್‌ಮನ್‌ ಬ್ಯಾಂಕ್ರಾಫ್ಟ್‌ ಹರಿತವಾದ ಸಾಧನದಿಂದ ಚೆಂಡನ್ನು ಕೆರೆದಿದ್ದರು. ನಂತರ ಆ ವಸ್ತುವನ್ನು ಒಳ ಉಡುಪಿನೊಳಗೆ ಬಚ್ಚಿಟ್ಟಿದ್ದರು. ಇದು ಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿತ್ತು.

ಇದು ಬಯಲಾದ ನಂತರ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ನಾಯಕ ಸ್ಮಿತ್ ಮತ್ತು ಉಪನಾಯಕ ಡೇವಿಡ್ ವಾರ್ನರ್ ಅವರನ್ನು ಅವರ ಸ್ಥಾನದಿಂದ ವಜಾಗೊಳಿಸಿತ್ತು. ನಾಯಕತ್ವದ ಜವಾಬ್ದಾರಿಯನ್ನು ವಿಕೆಟ್ ಕೀಪರ್‌ ಟಿಮ್ ಪೈನೆಗೆ ವಹಿಸಿತ್ತು.

ಐಸಿಸಿ, ಸ್ಮಿತ್ ಮೇಲೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹಾಗೂ ಪಂದ್ಯ ಶುಲ್ಕದ ಶೇ ನೂರರಷ್ಟು ದಂಡ ಹೇರಿತ್ತು. ಕ್ಯಾಮರಾನ್‌ ಬ್ಯಾಂಕ್ರಾಫ್ಟ್‌ಗೆ ಪಂದ್ಯ ಶುಲ್ಕದ ಶೇ 75ರಷ್ಟು ದಂಡ ಹೇರಿತ್ತು.

ಪ್ರಕರಣದ ತನಿಖೆ ನಡೆಸಿದ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ತಂಡದ ಕೋಚ್ ಡರೆನ್‌ ಲೆಹ್ಮನ್ ಅವರಿಗೆ ಕ್ಲೀನ್‌ ಚಿಟ್‌ ನೀಡಿ, ಸ್ಥಾನದಲ್ಲಿ ಮುಂದುವರಿಸಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT