ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದರ್ಶವಾದದ ವಿಷ!

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ವಿಷಗಳಲ್ಲಿ ಸಾವಿರದೊಂದು ಬಗೆಯಿರಬಹುದು; ಆದರೆ ಆದರ್ಶ ವಾದದಷ್ಟು ಅಪಾಯಕಾರಿಯಾದ ವಿಷ ಮತ್ತೊಂದಿಲ್ಲ’ (There are a thousand and one poisons, but nothing like idealism - it is the most poisonous of all poisons) - ಹೀಗೆಂದು ಓಶೋ ತಮ್ಮ ಗ್ರಂಥವೊಂದರ ಆರಂಭದಲ್ಲಿಯೇ ಘೋಷಿಸಿರುವ ಮಾತು.

ಧರ್ಮಕ್ಕೆ ವಿರುದ್ಧವಾದುದು ಈ ಪ್ರವೃತ್ತಿ – ಎನ್ನುತ್ತಾರೆ, ಅವರು.

ನಾವೆಲ್ಲರೂ ಆದರ್ಶಗಳ ಬಗ್ಗೆ ತುಂಬ ಆದರ್ಶಮಯವಾಗಿಯೇ ಮಾತನಾಡುತ್ತಿರುತ್ತೇವೆ. ಆದರೆ ಓಶೋ ಮಾತ್ರ ‘ಆದರ್ಶವಾದ’ ವನ್ನು ಗೇಲಿ ಮಾಡುತ್ತಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣವಾದರೂ ಏನು?

‘ಧರ್ಮವು ಯಾವುದೇ ಆದರ್ಶಗಳನ್ನು ನಂಬುವುದಿಲ್ಲ. ಯಾವುದೇ ರೀತಿಯ ಆದರ್ಶವಾದಕ್ಕೆ ಸ್ಥಾನ ಇಲ್ಲ ಎಂಬ ಎಚ್ಚರಿಕೆಯೇ ಧರ್ಮದ ಲಕ್ಷಣ’ ಎನ್ನುವುದು ಅವರ ವಾದ. ‘ಈ ಕ್ಷಣದಲ್ಲಿ, ಇಲ್ಲಿಯೇ ಬದುಕುವುದು; ಆದರೆ ಆದರ್ಶವಾದ ಎನ್ನುವುದು ನಿಮ್ಮನ್ನು ಎಲ್ಲಿಯೋ ಯಾವಾಗಲೋ ಬದುಕಬೇಕೆಂದು ನಿಮ್ಮ ಬುದ್ಧಿಯನ್ನು ಸಿದ್ಧಗೊಳಿಸುತ್ತದೆ; ಇದು ಅವರು ಆದರ್ಶವಾದವನ್ನು ಟೀಕಿಸಲು ಪ್ರಧಾನ ಕಾರಣ.

‘ಇಲ್ಲಿ, ಈ ಕ್ಷಣ – ಇರುವುದಷ್ಟೆ ನಮ್ಮ ಜೀವನಕ್ಕೆ ಒಗ್ಗುವ ದಾರಿ. ನೀವು ಇಲ್ಲಿರಬಹುದೆ ಹೊರತು ಅಲ್ಲಿ ಇರಲಾರಿರಿ. ನಾಳೆ ಎನ್ನುವುದಕ್ಕೆ ಅಸ್ತಿತ್ವವೇ ಇರದು. ಅದು ಎಂದಿಗೂ ಬರುವುದೇ ಇಲ್ಲ. ಆದರೆ ಆದರ್ಶವಾದವು ನಾಳೆಯನ್ನು ನಂಬುತ್ತದೆ. ಅದು ಈ ದಿನವನ್ನು ನಾಳೆಗೋಸ್ಕರ ಬಲಿ ಕೊಡುತ್ತದೆ. ಅದು ಮತ್ತೆ ಮತ್ತೆ ನಿಮಗೆ ಉಪದೇಶ ಕೊಡುತ್ತಲೇ ಇರುತ್ತದೆ: ‘ಏನನ್ನಾದರೂ ಮಾಡು – ಉದ್ಧಾರವಾಗು. ಏನನ್ನಾದರೂ ಮಾಡು – ನಿನ್ನನ್ನು ನೀನು ಬದಲಾಯಿಸಿಕೋ. ಏನನ್ನಾದರೂ ಮಾಡು – ಪರ್‌ಫೆಕ್ಟ್‌ ಆಗು.’ ಈ ಕೂಗು ನಮ್ಮ ಅಹಂಕಾರವನ್ನು ತೃಪ್ತಿ ಮಾಡುತ್ತಿರುತ್ತದೆ. ಆದುದರಿಂದಲೇ ನಾವೆಲ್ಲರೂ ಆದರ್ಶವಾದಿಗಳಾಗಲು ಹಾತೊರೆಯುತ್ತಿರುತ್ತೇವೆ.

ಹೀಗಾಗಿಯೇ ಆದರ್ಶವಾದವನ್ನು ಅಹಂಕಾರರಾಜ್ಯದ ಮುದ್ದಿನ ಪ್ರಜೆ ಎನ್ನಬಹುದು. ಈಗ ನಾವಿರುವುದಕ್ಕಿಂತಲೂ ಹೆಚ್ಚು ಪರಿಪೂರ್ಣರಾಗಬಹುದು ಎಂದು ಈ ಆದರ್ಶವಾದ ನಮ್ಮನ್ನು ಎತ್ತಿಕಟ್ಟುತ್ತಿರುತ್ತದೆ. ಆದರೆ ವಾಸ್ತವವಾಗಿ ನಾವು ಇರುವುದೇ ಪರಿಪೂರ್ಣಸ್ಥಿತಿಯಲ್ಲಿ. ಒಂದೊಂದು ಕ್ಷಣವೂ ಪರಿಪೂರ್ಣವಾದುದು; ಈ ಕ್ಷಣಕ್ಕಿಂತಲೂ ಪರಿಪೂರ್ಣವಾದ ಮತ್ತೊಂದು ಕ್ಷಣ ಇರಲು ಸಾಧ್ಯವೇ ಇಲ್ಲವೆನ್ನಿ!

ಈಗ ನಮ್ಮಲ್ಲಿರುವ ಪರಿಪೂರ್ಣತೆಯನ್ನೂ ನೆಮ್ಮದಿಯನ್ನೂ ಕಣ್ಣೆತ್ತಿಯೂ ನೋಡದೆ ಎಂದೂ ಇರದ ಮತ್ತು ಸಿಗದ ನಾಳೆಯ ಸಂತೋಷಕ್ಕಾಗಿ ಅಲೆಯುವುದನ್ನೇ ನಾವು ಆದರ್ಶವಾದ ಎಂದುಕೊಂಡಿದ್ದೇವೆ. ಎಲ್ಲೂ ಇರದ ಲೋಕಕ್ಕಾಗಿ ಈಗ ಇರುವ ಪ್ರಪಂಚವನ್ನು ನಾಶ ಮಾಡುತ್ತಿರುತ್ತೇವೆ. ಆದರ್ಶವಾದವನ್ನು ಅಂಟಿಸಿಕೊಂಡ ಮನಸ್ಸು ಸದಾ ಭವಿಷ್ಯಕಾಲಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿರುತ್ತದೆ. ಇದೊಂದು ದುಃಸ್ವಪ್ನ. ಇದು ಹೇಗಿರುತ್ತದೆ ಎಂದರೆ – ಎಂದೂ ಆರಂಭವೇ ಆಗದ ಪ್ರಯಾಣಕ್ಕಾಗಿ ಎಂದೂ ಮುಗಿಯದ ಸಿದ್ಧತೆಯಂತಿರುತ್ತದೆ! ಸಾವಿರಾರು ರೀತಿಯಲ್ಲಿ ಆ ಮನಸ್ಸು ಏನೋನೋ ಯೋಚನೆಗಳನ್ನು ಹೆಣೆಯುತ್ತಲೇ ಇರುತ್ತದೆ. ಆದರೆ ಇದು ಅರ್ಥಹೀನ ಪ್ರಯಾಸ; ಏಕೆಂದರೆ ಅದು ಪ್ರತಿ ಕ್ಷಣವನ್ನೂ ನಿರಾಕರಿಸುತ್ತಲೇ ಇರುತ್ತದೆಯಲ್ಲವೆ?

ಜೀವನಪ್ರಯಾಣದಲ್ಲಿ ನಾವೇನಾದರೂ ಮೊದಲನೆಯ ಹೆಜ್ಜೆಯನ್ನೇ ತಪ್ಪಾಗಿ ಇಟ್ಟರೆ, ಆಗ ಒಟ್ಟು ಪ್ರಯಾಣವೇ ದಿಕ್ಕು ತಪ್ಪುತ್ತದೆ. ಹೀಗಾಗಿ ಜೀವನದಲ್ಲಿ ನಾವು ತೆಗೆದುಕೊಳ್ಳುವ ಮೊದಲ ನಿರ್ಧಾರದ ಬಗ್ಗೆ ತುಂಬ ಎಚ್ಚರವಾಗಿರಬೇಕು. ನಾಳೆಗಾಗಿಯೇ ನಾವು ಬದುಕಿರುವುದು ಎಂದುಕೊಂಡು ಅದರಂತೆಯೇ ನಡೆದುಕೊಳ್ಳಲು ಆರಂಭಿಸಿದರೆ ಇಂದಿನ ದಿನದ ಸವಿಯನ್ನು ಕಳೆದುಕೊಳ್ಳುತ್ತಿದ್ದೇವೆ ಎಂದೇ ಅದರ ಅರ್ಥ. ಜೀವನಪೂರ್ತಿ ನಾವು ಕಾಯುತ್ತಲೇ ಇರುತ್ತೇವೆ; ಆದರೆ ನಾವು ಯಾವುದಕ್ಕೆ ಕಾಯುತ್ತಿರುತ್ತೇವೆಯೋ ಅದು ಎಂದಿಗೂ ಬಾರದ ಅತಿಥಿ!

ನಾವು ಊಟ ಮಾಡುತ್ತಿರಬೇಕಾದರೆ ನಮ್ಮ ಮನಸ್ಸು ಅದರಲ್ಲಿಯೇ ತಲ್ಲೀನವಾಗಿರಬೇಕು. ಓದುವಾಗ ಆ ಓದಿನಲ್ಲಿಯೇ ತಲ್ಲೀನರಾಗಿರಬೇಕು. ನಿದ್ರೆಯಲ್ಲಿರಬೇಕಾದರೆ ನಿದ್ರೆಯಲ್ಲಿಯೇ ತಲ್ಲೀನರಾಗಿರಬೇಕು. ಹೂವನ್ನು ನೋಡುತ್ತಿರಬೇಕಾದರೆ ಆ ನೋಟದಲ್ಲಿಯೇ ತಲ್ಲೀನರಾಗಿರಬೇಕು. ಹೀಗೆ ಆಯಾ ಕ್ಷಣವನ್ನು ತಲ್ಲೀನರಾಗಿ ಅನುಭವಿಸುವುದೇ ನಿಜವಾದ ಜೀವನ. ಅಂಥ ಜೀವನವನ್ನು ನಮ್ಮದಾಗಿಸಿಕೊಳ್ಳಲು ನಾವು ಸದಾ ಸಿದ್ಧರಾಗಿರಬೇಕು. ಇದೇ ಓಶೋ ಅವರ ‘ಆದರ್ಶವಾದ’ದ ತಿರುಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT