ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಣಾ ಸ್ಟೋರ್ಸ್‌ನ ರುಚಿಯ ಇತಿಹಾಸ

Last Updated 28 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಆಗಷ್ಟೇ ಸೂರ್ಯ ತನ್ನ ಪ್ರಖರತೆ ಹೆಚ್ಚಿಸಿಕೊಳ್ಳುತ್ತಿದ್ದ. ಹೊಟ್ಟೆ ಹಸಿವು ಜೋರಾಗಿತ್ತು. ಮಲ್ಲೇಶ್ವರ ರಸ್ತೆಯಲ್ಲಿ ಸಾಲು ಸಾಲು ಹೊಟೇಲ್‌ಗಳು ಸಿಕ್ಕರೂ ಮನಸ್ಸು ಯಾಕೋ ಹೊಸತನ ಬಯಸುತ್ತಿತ್ತು. ನಾಲ್ಕೈದು ಹೊಟೇಲ್ ಎದುರು ಗಾಡಿ ನಿಲ್ಲಿಸಿ ಇಲ್ಲಿ ಬೇಡ ಎಂದು ಮುಂದೆ ಬರುತ್ತಿದ್ದವಳು, ಇನ್ನು ಸಿಕ್ಕಿದ ಹೊಟೇಲ್‌ಗೆ ಹೋಗಿಡಬಿಡುವುದೇ ಎಂದು ನಿರ್ಧರಿಸಿದೆ. ದಾರಿಯಲ್ಲಿ ಒಂದು ಚಿಕ್ಕ ಅಂಗಡಿ ಮುಂದೆ ಜನ ಸಾಲುಗಟ್ಟಿದ್ದರು. ಕೆಲವರ ತಟ್ಟೆಯಲ್ಲಿ ಇಡ್ಲಿ ವಡಾ ಕಾಣಿಸಿತು. ಗಾಡಿ ನಿಲ್ಲಿಸಿ ಕ್ಯೂನಲ್ಲಿ ಸೇರಿಕೊಂಡೆ.

ನನ್ನ ಸರದಿ ಬರುವಷ್ಟರಲ್ಲಿ ಹೊಟ್ಟೆ ಹಸಿವು ಜೋರಾಗಿತ್ತು. ಇಡ್ಲಿ, ವಡಾ ಕೈಸೇರಿತು. ಬಾಯಲ್ಲಿ ಇಟ್ಟರೆ ಕರಗುವ ಇಡ್ಲಿ, ಗರಿಗರಿಯಾಗಿ ಹದವಾಗಿ ತಯಾರಾದ ವಡಾ ಹಸಿದ ಹೊಟ್ಟೆ ಸೇರುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು.

ಇದು ಮಲ್ಲೇಶ್ವರ ಮಾರ್ಗೊಸಾ ರಸ್ತೆಯ 15ನೇ ಕ್ರಾಸ್‌ನಲ್ಲಿರುವ ವೀಣಾ ಸ್ಟೋರ್ಸ್‌ನಲ್ಲಾದ ಅನುಭವ. 1977ರಿಂದಲೂ ರುಚಿಕರ ತಿನಿಸುಗಳಿಗೆ ಹೆಗ್ಗುರುತು ಎನಿಸಿಕೊಂಡಿರುವ ಈ ಪುಟ್ಟ ಅಂಗಡಿಗೆ ಈಗ 41ರ ಹರೆಯ. ಇಲ್ಲಿ ಸಿಗುವ ಸಿಹಿ ಪೊಂಗಲ್‌, ಬಿಸಿ ಬೇಳೆ ಬಾತ್‌, ಶಾವಿಗೆ ಬಾತ್‌, ಅವಲಕ್ಕಿ ಬಾತ್‌ ಜೊತೆಗೆ ಮಲೆನಾಡಿನ ರುಚಿಕರವಾದ ಕಷಾಯವನ್ನು ಹೀರಿದರೆ ಸಿಗುವ ಖುಷಿ ಅಷ್ಟಿಷ್ಟಲ್ಲ.

‘ವೀಣಾ ಸ್ಟೋರ್ಸ್‌, ಅಪ್ಪ ಸೂರ್ಯನಾರಾಯಣ ಅವರ ಕನಸಿನ ಕೂಸು. ನಾನು ಒಬ್ಬನೇ ಮಗ. ತಂಗಿ ಇದ್ದಾಳೆ. ಎಲೆಕ್ಟ್ರಾನಿಕ್ಸ್‌ ವಿಭಾಗದಲ್ಲಿ ಡಿಪ್ಲೊಮಾ ಮಾಡಿಕೊಂಡಿದ್ದೇನೆ. ಆದರೆ ಹೊಟೇಲ್ ವೃತ್ತಿಯಲ್ಲಿಯೇ ಮುಂದುವರಿಯಲು ನಿರ್ಧರಿಸಿದೆ. ವಾರಾಂತ್ಯದಲ್ಲಿ ಹೆಚ್ಚು ಗ್ರಾಹಕರು ಇರುತ್ತಾರೆ. ಪ್ರತಿನಿತ್ಯ ಕ್ಯೂ ಇದ್ದೇ ಇರುತ್ತದೆ. ಆದರೆ ನಮ್ಮ ಗುಣಮಟ್ಟದಲ್ಲಿ ಯಾವುದೇ ಬದಲಾವಣೆ ಆಗಿಲ್ಲ’ ಎನ್ನುವುದು ಮಾಲೀಕ ಪ್ರದೀಪ್ ಅವರ ಮಾತು.

‘ಅಪ್ಪನ ಕಾಲದಲ್ಲಿಯೇ ಪ್ರಖ್ಯಾತಿ ಗಳಿಸಿದ್ದ ಕಾರಣ ನಾನು ಹೊಟೇಲ್‌ನಲ್ಲಿ ಯಾವುದೇ ಬದಲಾವಣೆ ಮಾಡದೆ ಅದೇ ಮಾದರಿಯಲ್ಲಿ ನಡೆಸುತ್ತಿದ್ದೇನೆ. ಈಗ ಎಂಟು ಜನ ಕೆಲಸಕ್ಕೆ ಇದ್ದಾರೆ. ಹಬ್ಬದ ದಿನಗಳಲ್ಲಿ ಪೊಂಗಲ್‌ಗೆ ಹೆಚ್ಚು ಬೇಡಿಕೆ ಇರುತ್ತದೆ’ ಎನ್ನುತ್ತಾರೆ ಪ್ರದೀಪ್‌.

ಬೆಳ್ಳುಳ್ಳಿ–ಈರುಳ್ಳಿ ಇಲ್ಲ

‘ನಮ್ಮದು ಸಾಂಪ್ರದಾಯಿಕ ಬ್ರಾಹ್ಮಣರ ಕುಟುಂಬ. ಅದಕ್ಕಾಗಿ ಊಟ ತಿಂಡಿಗೆ ಮನೆಯಲ್ಲೂ ಬೆಳ್ಳುಳ್ಳಿ, ಈರುಳ್ಳಿ ಬಳಸುವುದಿಲ್ಲ. ಮೊದಲು ಮಲ್ಲೇಶ್ವರದಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ಆಗ ನಮಗೆ ವ್ಯಾಪಾರ ಜೋರಾಗಿತ್ತು. ಈಗ ಗ್ರಾಹಕರು ಬದಲಾಗಿದ್ದಾರೆ. ಹಾಗಂತ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಈಗಲೂ ಬಳಸುತ್ತಿಲ್ಲ. ರುಚಿಯನ್ನೂ ಬದಲಿಸಿಲ್ಲ’ ಎಂದು ಅವರು ತಮ್ಮ ‘ಹೋಟೆಲ್‌’ನ ಸ್ವಾದದ ಗುಟ್ಟನ್ನು ವಿವರಿಸುತ್ತಾರೆ.

ಕಷಾಯ ವಿಶೇಷ

ಪ್ರದೀಪ್‌ ತಂದೆ ಸೂರ್ಯನಾರಾಯಣ ಅವರು ಮೂಲತಃ ಶಿರಸಿ ತಾಲ್ಲೂಕಿನವರು. ಹಾಗಾಗಿ ಅಲ್ಲಿನ ಸೊಗಡೂ ಆಹಾರದಲ್ಲಿ ಬೆರೆತಿದೆ. ಇಲ್ಲಿ ಕಾಫಿ, ಟೀ, ಹಾಲು, ಬಾದಾಮಿ ಹಾಲು ಅಲ್ಲದೆ ಕಷಾಯವೂ ಲಭ್ಯ. ಆದರೆ ಬೆಂಗಳೂರಿನ ಬಹುತೇಕರು ಕಷಾಯ ಅಂದರೆ ಅನಾರೋಗ್ಯದ ಸಮಯದಲ್ಲಿ ಮಾತ್ರ ಕುಡಿಯುವುದು ಅಂದುಕೊಂಡಿದ್ದಾರೆ. ಆದರೂ ಮಲೆನಾಡಿನ ಕಡೆಯವರಿಗೆ ಕಷಾಯ ಈಗಲೂ ಅಚ್ಚುಮೆಚ್ಚು.

ಈ ಹೋಟೆಲ್‌ನಲ್ಲಿ ಅವಲಕ್ಕಿ, ಪೊಂಗಲ್‌, ಬಿಸಿ ಬೇಳೆಬಾತ್‌, ಪುಳಿಯೋಗರೆ ಹೀಗೆ ‘ಬಾತ್‌’ಗಳ ಬೆಲೆ ₹35. ಒಂದು ಪ್ಲೇಟ್ ಇಡ್ಲಿಗೆ ₹45. ಹೊಟೇಲ್‌ನಲ್ಲಿ ಕ್ಯೂ ನಿಂತು ತಿನ್ನಲು ಇಷ್ಟವಿಲ್ಲದವರು ಕರೆ ಮಾಡಿ ಆರ್ಡರ್‌ ಮಾಡಿದರೆ ತಿಂಡಿ ಪೊಟ್ಟಣ ತಯಾರಾಗಿರುತ್ತದೆ.

ಸಂಪರ್ಕಕ್ಕೆ: 94484 30405, 080 2334 4838. 

ಡಾ.ರಾಜ್‌ ಕುಟುಂಬ, ದೀಪಿಕಾ ಮೆಚ್ಚಿದ ಸ್ವಾದ

ಡಾ.ರಾಜ್‌ಕುಮಾರ್‌ ಅವರು ವೀಣಾ ಸ್ಟೋರ್ಸ್‌ ತಿಂಡಿಯ ರುಚಿಗೆ ಮಾರುಹೋಗಿದ್ದರಂತೆ. ರಾಜ್‌ ಕುಟುಂಬದವರು ಈಗಲೂ ಇಲ್ಲಿಗೆ ಬರುತ್ತಾರೆ. ಸಮಯ ಇಲ್ಲದಿದ್ದರೆ ಮನೆಗೇ ತರಿಸಿಕೊಂಡು ತಿನ್ನುತ್ತಾರೆ. ಪುನೀತ್ ರಾಜ್‌ಕುಮಾರ್ ಅವರಿಗೂ ಇಲ್ಲಿಯ ತಿಂಡಿ ಅಂದ್ರೆ ಪ್ರೀತಿ. ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಹಾಗೂ ಅವರ ಕುಟುಂಬದವರು ಇಲ್ಲಿ ಬಂದು ತಿಂಡಿ ತಿಂದು ಹೋಗುತ್ತಾರೆ. ಶಾಲೆಯ ದಿನಗಳಿಂದಲೂ ದೀಪಿಕಾ ಇಲ್ಲಿಗೆ ಬರುತ್ತಿದ್ದರು. ಈಗ ಮುಂಬೈನಿಂದ ಬಂದಾಗಲೆಲ್ಲ ಬಂದು ತಿಂಡಿ ತಿಂದು ಹೋಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT