ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ತಿಳಿದಿದ್ದರೂ ಸಿಬಿಎಸ್‍ಇ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು ಯಾಕೆ?

Last Updated 30 ಮಾರ್ಚ್ 2018, 13:34 IST
ಅಕ್ಷರ ಗಾತ್ರ

ನವದೆಹಲಿ: 10ನೇ ತರಗತಿಯ ಗಣಿತ ಮತ್ತು 12ನೇ ತರಗತಿಯ ಅರ್ಥಶಾಸ್ತ್ರ ವಿಷಯದ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗಿರುವ ಸಂಗತಿ ಮುಂಚಿತವಾಗಿ ಗೊತ್ತಾದರೂ ಅಧಿಕಾರಿಗಳು ಈ ಬಗ್ಗೆ ಮೌನ ವಹಿಸಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

ಕಳೆದ ಸೋಮವಾರ ಹನ್ನೆರಡನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆ ನಡೆದಿತ್ತು. ಆದರೆ ದೆಹಲಿಯ ರಾಜಿಂದರ್ ನಗರದ ಕೋಚಿಂಗ್ ಸೆಂಟರ್ ಮಾಲೀಕರ ಕೈಗೆ ಪ್ರಶ್ನೆ ಪತ್ರಿಕೆ ಸಿಕ್ಕಿದೆ ಎಂಬ ಮಾಹಿತಿ ಸಿಬಿಎಸ್‍ಇ ಅಧಿಕಾರಿಗಳಿಗೆ ಶುಕ್ರವಾರವೇ ಫ್ಯಾಕ್ಸ್ ಸಂದೇಶ ಮೂಲಕ ಲಭಿಸಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಎರಡು ಶಾಲೆಗಳ ಹೆಸರು ಅದರಲ್ಲಿತ್ತು. ಅರ್ಥಶಾಸ್ತ್ರ ಪರೀಕ್ಷೆ ನಡೆದ ಸೋಮವಾರ ಸಂಜೆ ಸಿಬಿಎಸ್‍ಇ ಅಕಾಡೆಮಿಕ್ ಕೇಂದ್ರಕ್ಕೆ ಪರೀಕ್ಷೆಯ ಉತ್ತರಗಳಿರುವ ನಾಲ್ಕು ಪೇಪರ್‍‍ಗಳು ಕೊರಿಯರ್‍‍ನಲ್ಲಿ ಲಭಿಸಿತ್ತು. ನಾಲ್ಕು ಮೊಬೈಲ್ ಸಂಖ್ಯೆಗಳನ್ನೂ ಇದರಲ್ಲಿ ಉಲ್ಲೇಖಿಸಲಾಗಿತ್ತು.

ಬುಧವಾರ ನಡೆದ ಗಣಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಮಂಗಳವಾರವೇ ಸಿಬಿಎಸ್ಇ ಅಧಿಕೃತರಿಗದೆ ಮತ್ತು ದೆಹಲಿ ಪಂಜಾಬಿ ಬಾಗ್ ಪೊಲೀಸರಿಗೆ  ಫೋನ್ ಸಂದೇಶ ಲಭಿಸಿತ್ತು. ಸಂದೇಶ ಲಭಿಸಿದ ಹಿನ್ನೆಲೆಯಲ್ಲಿ ಪೊಲೀಸರ ತಂಡವೊಂದು ಮಾದಿಪುರದ ಕೋಚಿಂಗ್ ಕೇಂದ್ರಕ್ಕೆ ಬಂದು ವಿದ್ಯಾರ್ಥಿಗಳನ್ನು ವಿಚಾರಣೆಗೊಳಪಡಿಸಿತ್ತು. ಗಣಿತ ಪರೀಕ್ಷೆಯ ಒಂಬತ್ತು ಪ್ರಶ್ನೆಗಳು ವಾಟ್ಸ್ಆ್ಯಪ್‍ನಲ್ಲಿ ಹರಿದಾಡಿತ್ತು. ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದರೂ ಮುಂದಿನ ತನಿಖೆ ನಡೆಯಲಿಲ್ಲ. ಸಿಬಿಎಸ್‍ಇ ಅಧಿಕಾರಿಗಳು ಪ್ರಶ್ನೆ ಸೋರಿಕೆ ಆಗಿಲ್ಲ ಎಂದು ಹೇಳಿ ಪರೀಕ್ಷೆ ನಡೆಸಲು ಅನುಮತಿ ನೀಡಿದ್ದರು. ಪರೀಕ್ಷೆ ಮುಗಿದ ಕೂಡಲೇ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದೆ ಎಂದು ಪರೀಕ್ಷೆಯನ್ನು ರದ್ದುಗೊಳಿಸಲಾಯಿತು.

ಎಲ್ಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಹಾಗಾಗಿ ಎಲ್ಲ ಪರೀಕ್ಷೆಗಳನ್ನು ರದ್ದು ಮಾಡಿ ಮರು ಪರೀಕ್ಷೆ ಮಾಡಿ ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆಗಳನ್ನು ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಆರೋಪಿ ರಜಿಂದರ್ ನಗರದ ವಿದ್ಯಾ ಕೋಚಿಂಗ್ ಸೆಂಟರ್ ಮಾಲೀಕ ವಿಕಿ ವಾದ್ವಿ ಎಂಬಾತನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.18 ವಿದ್ಯಾರ್ಥಿಗಳು ಸೇರಿದಂತೆ 25 ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದೆ. ದೆಹಲಿ ಪೊಲೀಸರ ಜತೆಗೆ ಅಪರಾಧ ನಿಗ್ರಹ ದಳವೂ ತನಿಖೆ ನಡೆಸುತ್ತಿದೆ.

ಹೊಸ ದಿನಾಂಕ ನಿಗದಿಯಾಗಿಲ್ಲ
ಇದೀಗ ರದ್ದು ಮಾಡಿರುವ ಪರೀಕ್ಷೆಗಳ ಮರುಪರೀಕ್ಷೆ ಯಾವಾಗ ನಡೆಸಲಾಗುವುದು ಎಂಬುದರ ಬಗ್ಗೆ ಈವರೆಗೆ ಮಾಹಿತಿ ಸಿಕ್ಕಿಲ್ಲ. ಮರು ಪರೀಕ್ಷೆ ದಿನಾಂಕದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಧವಿಧದ ಸುದ್ದಿಗಳು ಹರಿದಾಡುತ್ತದೆ. ಆದರೆ ಯಾವ ದಿನ ಪರೀಕ್ಷೆ ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT