ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರಮ್ಯ ರಜಾಕಾಲ...

Last Updated 30 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಟಿ.ವಿ. ಹಚ್ಚಬೇಡ್ರೋ, ನಿದ್ದೆ ಮಾಡಿದ್ದು ಸಾಕು ಎದ್ದೇಳು, ಓದ್ಕೋಬೇಕು, ಈ ಫಾರ್ಮುಲಾ ಬಾಯಿಪಾಠ ಮಾಡು, ಈ ಥೀರಮ್ಮು ಕೇಳ್ತಾರೆ ಹೇಳು ನೋಡೋಣ’ ಎಂಬಿತ್ಯಾದಿ ಸಂಭಾಷಣೆಗಳಿಂದ ಯುದ್ಧದ ಶಿಬಿರಗಳಂತೆ ಗಂಭೀರಗೊಂಡಿದ್ದ ಮನೆಗಳೆಲ್ಲ ‘ಅಬ್ಬಾ! ಅಂತೂ ಪರೀಕ್ಷೆಗಳೆಲ್ಲಾ ಮುಗೀಯಿತಪ್ಪ’ ಎಂದು ನಿಟ್ಟುಸಿರುಬಿಡುತ್ತಿವೆ. ಹಚ್ಚುವವರಿಲ್ಲದೆ ತೆಪ್ಪಗೆ ಕೂತಿದ್ದ ಟಿ.ವಿ. ಪಿಳಿಪಿಳಿ ಕಣ್ಣು ಬಿಡುತ್ತಿದೆ. ನಗರಗಳ ಅಪಾರ್ಟ್‌ಮೆಂಟಿನ ಮೆಟ್ಟಿಲುಗಳು ದಡದಡ ಓಡುವ ಪುಟ್ಟ ಕಾಲುಗಳ ಅವಿರತ ದಾಳಿಗೆ ಸಜೀವಗೊಂಡಿವೆ. ಹೋ... ಎಂದು ಅರಚುತ್ತ, ಕೇಕೆ ಹಾಕುತ್ತಾ ಅಂಗಳದ ತುಂಬಾ ಎಗರಾಡುವ ಎಳೆಜೀವಿಗಳ ಲವಲವಿಕೆಗೆ ಸಾಥ್ ಕೊಡಲೆಂಬಂತೆ ಬೀದಿನಾಯಿಗಳೂ ಬಾಲ ಅಲ್ಲಾಡಿಸುತ್ತ ಗೇಟಿನಾಚೀಚೆ ಸುಳಿಯತೊಡಗಿವೆ.

ಮಕ್ಕಳನ್ನು ಹಿಡಿದು ಕೂರಿಸಿ ಓದಿಸುವಾಗ ಬೇಸತ್ತ ಅಮ್ಮಂದಿರು ‘ಈ ದರಿದ್ರ ಪರೀಕ್ಷೆಗಳು ಯಾವಾಗ ಮುಗಿಯುತ್ತಪ್ಪ ದೇವ್ರೇ. ನಾವೇ ಓದಿ ಬರಿಯೋದಾಗಿದ್ರೆ ಎಷ್ಟು ಚೆನ್ನಾಗಿತ್ತು. ಈ ಕಪಿಗಳನ್ನು ಹಿಡಿದು ಓದಿಸೋ ಕಷ್ಟ ಯಾವ ವೈರಿಗೂ ಬೇಡಪ್ಪಾ’ ಅಂತ ಅಲವತ್ತುಕೊಂಡವರೆಲ್ಲ ತಮ್ಮದೇ ಪರೀಕ್ಷೆ ಮುಗಿದವರಂತೆ ನಿರಾಳವಾಗಿದ್ದಾರೆ. ಆದರೆ ಈಗವರಿಗೆ ಹೊಸ ಕಷ್ಟ ಶುರುವಾಗಿದೆ. ಹಗಲಿಡೀ ಮನೆಯಲ್ಲೇ ಇರುವ ಕಪಿಸೈನ್ಯವನ್ನು ಸಂಭಾಳಿಸಬೇಕು. ಊಟದ ಡಬ್ಬಿಯಲ್ಲಿ ಹಾಕಿಕೊಟ್ಟಿದ್ದನ್ನು ತೆಪ್ಪಗೆ ತಿಂದು ಬರುತ್ತಿದ್ದ ಹುಡುಗರು ಮನೆಯಲ್ಲೇ ತಿನ್ನುವಾಗ ನೂರೆಂಟು ಕಳ್ಳನೆಪ ತೆಗೆಯುತ್ತಾರೆ. ಅದು ಬೇಡ, ಇದು ಬೇಕು ಅಂತ ತಕರಾರು ತೆಗೆಯುತ್ತಾರೆ. ಆಗೀಗ ಚಿಪ್ಸ್, ಲೇಸ್ ಅಂತ ಬಾಯಾಡಿಸಿಕೊಂಡು ಊಟದ ವೇಳೆಗೆ ಹಸಿವಿಲ್ಲ ಎಂದು ರಗಳೆ ಮಾಡುತ್ತಿದ್ದಾರೆ. ಹೊರಗೆ ಆಡಿ ಬರುವ ಮಕ್ಕಳು ನೀರು ಕುಡಿದು ಹೊಟ್ಟೆಯಲ್ಲಿ ಜಾಗವಿಲ್ಲ ಎನ್ನುತ್ತಿವೆ. ಸಂಜೆಯಾಗುತ್ತಿದ್ದಂತೆ ರಸ್ತೆ ಪಕ್ಕದ ಚಾಟ್ಸ್ ಕೊಡಿಸೆಂದು ಗಲಾಟೆ ಮಾಡುತ್ತಿವೆ. ರಾತ್ರಿ ಎಷ್ಟು ಹೊತ್ತಾದರೂ ನಿದ್ರೆ ಮಾಡದೇ ಕಂಪ್ಯೂಟರ್ ಗೇಮುಗಳಲ್ಲಿ, ಮೊಬೈಲ್ ಗೇಮುಗಳಲ್ಲಿ ಮುಳುಗಿಕೊಂಡು ಬೆಳಿಗ್ಗೆ ಏಳಲು ಸತಾಯಿಸುತ್ತಿವೆ.  ‘ಆಗ್ಲೇ ಗಂಟೆ ಒಂಬತ್ತಾಯ್ತು ಏಳ್ರೋ, ತಿಂಡಿ ಆರಿ ಹೋಗ್ತಿದೆ ಬನ್ರೋ, ಆಗ್ಲಿಂದ ಕೂಗಿ ಕೂಗಿ ಗಂಟಲು ಹರ್ಕೋತಿದೀನಿ ಸ್ನಾನಕ್ಕೆ ಹೋಗ್ರೋ’ – ಹೀಗೆ ಅಮ್ಮಂದಿರು ಮತ್ತೆ ತಮ್ಮ ಧ್ವನಿಪೆಟ್ಟಿಗೆಯ ತಾರಕ ಸ್ವಿಚ್ಚನ್ನು ಒತ್ತಿದ್ದಾರೆ; ಶಬ್ದಗಳಷ್ಟೇ ಬೇರೆಯಾಗಿವೆ.

ನಾವೆಲ್ಲ ಚಿಕ್ಕವರಿದ್ದಾಗ, ಅಂದರೆ ಈಗೊಂದು ಮೂರು ದಶಕದ ಹಿಂದೆ ಪರೀಕ್ಷೆ ಮುಗಿದದ್ದೇ ತಡ ಅಜ್ಜನ ಮನೆಗೆ, ಅಜ್ಜಿಯ ಹಳ್ಳಿಗೆ ಓಡಿಬಿಡುತ್ತಿದ್ವಿ. ಅದಕ್ಕಾಗಿ ರೈಲು, ವಿಮಾನದ ಟಿಕೆಟು ಕಾದಿರಿಸುವ ಅಗತ್ಯ ಇರಲಿಲ್ಲ. ಹಳ್ಳಿಯಿಂದ ಅಜ್ಜ ಅಥವಾ ಮಾವ ಯಾರಾದರೂ ಬಂದು ಕರೆದೊಯ್ಯುತ್ತಿದ್ದರು. ಸ್ವಲ್ಪ ದೊಡ್ಡ ಹುಡುಗರಾದರೆ ಅವರನ್ನಷ್ಟೇ ಬಸ್ಸು ಹತ್ತಿಸಿ ಪರಿಚಯದ ಡ್ರೈವರ್-ಕಂಡಕ್ಟರುಗಳಿಗೆ ಹೇಳಿ ‘ನಮ್ಮ ಹುಡುಗರನ್ನು ಇಂಥಾ ಕಡೆ ಇಳಿಸಿ’ ಅಂತ ಕಳಿಸುತ್ತಿದ್ದರು. ದೊಡ್ಡವರು ಯಾರು ಜೊತೆಗಿಲ್ಲದೇ ನಾವು-ನಾವೇ ಪ್ರಯಾಣ ಬೆಳೆಸುವ ಮೊದಲ ಅನುಭವಗಳು ಎವರೆಸ್ಟ್ ಪರ್ವತ ಹತ್ತಿದಷ್ಟೇ ರೋಮಾಂಚನದ ಸುಖವನ್ನು ಕೊಡುತ್ತಿದ್ದವು. ಬಸ್ಸು ಹೊರಟಾಗ ‘ಕಿಟಕಿ ಹೊರಗೆ ಹುಶಾರು, ಜೋಪಾನ’ ಎಂದು ಕೈ ಬೀಸುವ ಆತಂಕದ ಮುಖಗಳು ಕಣ್ಮರೆಯಾದೊಡನೆ ಒಳಗೆ ದೃಷ್ಟಿ ಹಾಯಿಸಿದಾಗ ಒಂದು ಕ್ಷಣ ಎದೆ ಝಲ್ಲೆನಿಸುತ್ತಿತ್ತು. ‘ನಾವೀಗ ದೊಡ್ಡೋರಾಗಿದೀವಿ ಹೆದರಬಾರ್ದು’ ಅಂತೆಲ್ಲ ಒಳಗೊಳಗೆ ಧೈರ್ಯ ಹೇಳಿಕೊಂಡು ಕುಳಿತಮೇಲೆ ಹೊರಗಿನ ಗಿಡಮರಗಳು ನಮ್ಮೊಂದಿಗೆ ಓಡುತ್ತ ಧೈರ್ಯ ಕೊಡುತ್ತಿದ್ದವು. ಹಳ್ಳಿ ತಲುಪಿ ಬಸ್ಸು ಇಳಿಯುವಾಗಲಂತೂ ಕಾರ್ಗಿಲ್ ಗೆದ್ದ ಯೋಧರ ರೇಂಜಿಗೆ ಹೆಮ್ಮೆಯುಕ್ಕಿ ಹರಿಯುತ್ತಿತ್ತು. ಅಜ್ಜನ ಮನೆ ತಲುಪಿದ ಮೇಲೆ ಹುಡುಗರ ದಂಡನ್ನು ನಿಯಂತ್ರಿಸುವವರೇ ಇರಲಿಲ್ಲ. ಗುಡ್ಡ-ಬೆಟ್ಟ, ಹೊಳೆ-ಜಲಪಾತ, ಕಾಡು-ಬೇಣ, ಗದ್ದೆ-ತೋಟಗಳನ್ನೆಲ್ಲ ನಮ್ಮ ಸುಪರ್ದಿಗೆ ತೆಗೆದುಕೊಂಡು ನಿರಂಕುಶ ರಾಜರಂತೆ ಮೆರೆಯುತ್ತಿದ್ದೆವು. ಈಗ ಹಿಂದಿರುಗಿ ನಿಂತು ನೋಡಿದಾಗ ಅರ್ಥವಾಗುವುದೆಂದರೆ ಬಾಲ್ಯದ ರಜಾಕಾಲವೆಂಬ ಸುವರ್ಣಸಮಯವೇ ನಮ್ಮ ವ್ಯಕ್ತಿತ್ವವನ್ನು ರೂಪಿಸಿರುವ ಅದ್ಭುತ ಅವಧಿ. ನಿಸರ್ಗದ ಗೂಢಗಳನ್ನು ಅರಿಯಲು, ಮನುಷ್ಯಸಂಬಂಧಗಳನ್ನು ತಿಳಿಯಲು, ಹಬ್ಬ-ವ್ರತ-ನೇಮಗಳ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ನಾವು ಸಮರ್ಥರಾಗಿದ್ದೇ ಈ ರಜೆಯೆಂಬ ರಮ್ಯಕಾಲದಲ್ಲಿ. ಶಾಲೆಯ ಪಾಠಗಳು ಕಲಿಸಿದ್ದು ಬರೀ ಅಕ್ಷರಜ್ಞಾನವನ್ನು. ಜೀವನಪಾಠವನ್ನು ಕಲಿಸಿದ್ದು ಬೇಸಿಗೆಯ ಬಿಡುವೆಂಬ ದಿವ್ಯ ಗಳಿಗೆಗಳು.

ಇಂದಿನ ಮಕ್ಕಳಿಗೆ ಅಜ್ಜನ ಮನೆಗಳು ಎಷ್ಟರ ಮಟ್ಟಿಗೆ ಉಳಿದುಕೊಂಡಿವೆಯೋ ಹೇಳುವುದು ಕಷ್ಟ. ನಗರದ ಮಕ್ಕಳಿಗೆ ಹಳ್ಳಿವಾಸದ ಸುಖವೂ ಅಲಭ್ಯವಾಗಿರಬಹುದು. ಆದರೆ ಅಮ್ಮಂದಿರು ಈ ಕುರಿತು ಆಲೋಚನೆ ಮಾಡುವುದಕ್ಕೆ ಇದು ಸಕಾಲ. ಆಧುನಿಕ ಬದುಕಿನ ಸಂಕೀರ್ಣತೆಯ ಝಳವನ್ನು ಅನುಭವಿಸಿರುವ ನಾವು ಕೊಂಚ ಬೇರೆ ದಿಕ್ಕಿನಲ್ಲಿ ಆಲೋಚನೆ ಮಾಡಬೇಕಾಗಿದೆ. ನಗರಗಳಲ್ಲಿ ಪರೀಕ್ಷೆಗಳು ಮುಗಿಯುವ ಮೊದಲೇ ದೊಡ್ಡ ದೊಡ್ಡ ಬ್ಯಾನರುಗಳು ಕೈ ಬೀಸಿ ಕರೆಯುತ್ತವೆ. ಮುಂದಿನ ತರಗತಿಯ ಟ್ಯೂಶನ್, ಅಬಾಕಸ್, ವೇದಗಣಿತ ಮುಂತಾದ ಕೋಚಿಂಗ್ ತರಗತಿಯ ಜಾಹೀರಾತುಗಳು ಜಾಣಮಕ್ಕಳ ತಾಯಿಯಾಗಬೇಕೆಂದು ಕನಸು ಕಾಣುತ್ತಿರುವವರನ್ನು ಸೆಳೆಯುತ್ತಿವೆ. ನಮ್ಮ ಮಕ್ಕಳ ವ್ಯಕ್ತಿತ್ವವನ್ನು ಪರಿಪೂರ್ಣವಾಗಿ ರೂಪಿಸಲಿಕ್ಕೆ ಮೆದುಳನ್ನು ಹರಿತಗೊಳಿಸಿದರೆ ಸಾಕೆ? ಮನುಷ್ಯನಿಗೆ ಇಂಟಲಿಜೆಂಟ್ ಕೋಷಂಟ್ (ಐಕ್ಯೂ) ಇರುವ ತರಹವೇ ಇಮೋಶನಲ್ ಕೋಷಂಟ್ (ಇಕ್ಯೂ) ಕೂಡ ಇದೆ. ಈ ಭಾವಕೋಶವನ್ನು ತುಂಬಿಸುವುದು, ಸದೃಢಗೊಳಿಸುವುದು ನಮ್ಮ ಆದ್ಯತೆಯಾಗಬೇಕು. ಕೇವಲ ಬುದ್ಧಿವಂತಿಕೆಯನ್ನಷ್ಟೇ ಬೆಳೆಸಿಕೊಂಡ ಮಕ್ಕಳು ಭಾವನಾತ್ಮಕವಾಗಿ ಬಡವಾಗುತ್ತಿರುವುದರಿಂದಲೇ ಇವತ್ತು ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ರಕ್ತದ ಮಡುವಿನಲ್ಲಿ ಬಿದ್ದವನ ಸಹಾಯಕ್ಕೆ ಹೋಗದೆ ವಿಡಿಯೊ ಮಾಡುವ ಘಟನೆ ನಡೆಯುತ್ತಿದೆ. ಡ್ಯಾಡಿ-ಮಮ್ಮಿಗಳ ಜೊತೆಗೆ ಮಾತ್ರ ವಾಸಿಸುತ್ತಿರುವ ಇಂದಿನ ಮಕ್ಕಳಿಗೆ ಇನ್ನೊಂದಿಷ್ಟು ಸಂಬಂಧಗಳ ಪರಿಚಯವಾಗುವಂತಹ ವಾತಾವರಣದಲ್ಲಿ ಕೆಲವು ದಿನಗಳನ್ನು ಕಳೆಯಲು ಸಾಧ್ಯವಾಗುವಂತೆ ರಜೆಯ ಯೋಜನೆ ಹಾಕಿಕೊಂಡರೆ ಚೆನ್ನಾಗಿರುತ್ತದೆ. ಸಸ್ಯಪ್ರಭೇದಗಳನ್ನು, ಪಶು-ಪಕ್ಷಿಗಳನ್ನು ಸಮೀಪದಿಂದ ನೋಡಿ ನಿಸರ್ಗದ ಸೋಜಿಗವನ್ನು ಅರಿತುಕೊಳ್ಳುವಂತಹ ಅವಕಾಶವಿರುವ ಕಡೆಗೆ ಪ್ರವಾಸ ಮಾಡಿದರೆ ಮಕ್ಕಳಿಗೆ ಈ ಭೂಮಿಯ ಮೇಲೆ ಹಕ್ಕಿರುವುದು ಕೇವಲ ಮಾನವನಿಗಷ್ಟೇ ಅಲ್ಲ, ಕೋಟ್ಯಾನುಕೋಟಿ ಜೀವಿಗಳಲ್ಲಿ ಮನುಷ್ಯನೂ ಒಬ್ಬ ಎಂಬ ಸತ್ಯದ ಸಾಕ್ಷಾತ್ಕಾರವಾಗಬಹುದೇನೊ? ದೈನಂದಿನ ಬದುಕಿನ ಅದೇ ಅದೇ ಜಂಜಡಗಳಿದ ಏಕತಾನಗೊಂಡಿರುವ ಅಮ್ಮಂದಿರಿಗೂ ಇಂತಹ ಪ್ರವಾಸಗಳು ಅದ್ಭುತವಾದ ಬದಲಾವಣೆಯನ್ನು ತರುತ್ತವೆ. ಸಮುದ್ರತೀರಗಳಲ್ಲಿ ಮರಳಿನ ಗೂಡು ಕಟ್ಟುತ್ತ, ನದಿ ದಂಡೆಗಳಲ್ಲಿ ನೀರಾಡುತ್ತ, ನಿಶ್ಶಬ್ದದ ರಾತ್ರಿಗಳಲ್ಲಿ ಕಾಡಿನ ಸದ್ದುಗಳಿಗೆ ರೋಮಾಂಚಿತರಾಗುತ್ತ ಕೆಲವೇ ದಿನಗಳನ್ನು ಕಳೆದರೂ ಚೈತನ್ಯದ ಮರುಭರಣವಾಗಿ, ನಮ್ಮ ವಯಸ್ಸು ಮರೆತು ಬಾಲ್ಯವೇ ಮರುಕಳಿಸಿದಂತಾಗಿ ಮನಸ್ಸು ಸಣ್ಣಗೆ ಸಿಳ್ಳೆ ಹಾಕುತ್ತದೆ.

ಕಾರಣಾಂತರಗಳಿಂದ ಎಲ್ಲೂ ಬೇರೆ ಊರಿಗೆ ಹೋಗಲಾಗುತ್ತಿಲ್ಲ ಎನ್ನುವವರೂ ಇದ್ದಲ್ಲಿಯೇ ಹೊಸತನವನ್ನು ತಂದುಕೊಳ್ಳಬಹುದು. ಅದಕ್ಕಾಗಿ ಅಮ್ಮ-ಮಕ್ಕಳ ದಿನಚರಿ ಬದಲಾಗಬೇಕಾಗುತ್ತದೆ. ಶಾಲೆಯ ಡಬ್ಬಿಗಳಿಗಾಗಿ ತಯಾರಾಗುತ್ತಿದ್ದ ಚಪಾತಿ-ಚಿತ್ರಾನ್ನಗಳಂಥ ಮಾಮೂಲಿ ತಿಂಡಿಗಳನ್ನು ಬಿಟ್ಟು ಬೇರೆ ರೀತಿಯ ಅಂದರೆ ಮಾಡಲಿಕ್ಕೆ ಹೆಚ್ಚಿನ ಸಮಯ, ಪರಿಶ್ರಮಗಳನ್ನು ಬೇಡುವ ತಿಂಡಿಗಳನ್ನು ಮಾಡಬಹುದು. ಇದಕ್ಕಾಗಿ ಮಕ್ಕಳನ್ನೂ ಸಹಾಯಕರಂತೆ ಒಳಗೆ ಸೇರಿಸಿಕೊಂಡರೆ ಅವರಿಗೂ ಹೊಸ ಸಾಹಸ ಮಾಡಿದಂತೆ ಖುಷಿಯಾಗುತ್ತದೆ. ನಮ್ಮ ಊರುಗಳಲ್ಲಿಯೇ ನಾವು ನೋಡದಿರುವ ಅನೇಕ ಸ್ಥಳಗಳಿರಬಹುದು. ಊರಾಚೆಯ ಬೆಟ್ಟ, ಹಳೆಯ ದೇವಸ್ಥಾನ, ಅಥವಾ ತೋಟಗಳು ಇತ್ಯಾದಿ. ಆಚೀಚೆ ಮನೆಯ ಕೆಲವು ಸ್ನೇಹಿತೆಯರ ಸಂಸಾರಗಳನ್ನೆಬ್ಬಿಸಿಕೊಂಡು ಒಂದೊಂದು ದಿನ ಒಂದೊಂದು ಕಡೆ ಹೋಗಿ ಕುಣಿದು ಕುಪ್ಪಳಿಸಿ ಊಟ ಕೊಂಡೊಯ್ದು ತಿಂದು ಬಂದರೆ ಒಳ್ಳೆಯ ಬದಲಾವಣೆಯಾಗುತ್ತದೆ. ಇದನ್ನು ವನಭೋಜನ, ನದೀಭೋಜನ ಮುಂತಾದ ಹೆಸರುಗಳಿಂದ ಕರೆಯಬಹುದು. ಆಯಾ ಸ್ಥಳಗಳ ಕುರಿತು ಮಾಹಿತಿ
ಯನ್ನು ತಿಳಿದುಕೊಂಡರೆ ಮಕ್ಕಳ ಲೋಕಜ್ಞಾನವೂ ಹೆಚ್ಚುತ್ತದೆ. ನೆರೆ-ಹೊರೆಯ ಸಂಸಾರಗಳು ಸೇರಿಕೊಂಡು ಕೊಂಚ ವಿಶಾಲವಾದ ಟೆರೇಸಿನ ಮೇಲೆ ಬೆಳದಿಂಗಳೂಟ ಮಾಡಬಹುದು. ಒಬ್ಬೊಬ್ಬರು ಒಂದೊಂದು ಡಿಶ್ ತಯಾರಿಸಿಕೊಂಡರೆ ಸಖತ್ ಭೂರಿ ಭೋಜನ ಸಿಗುತ್ತದೆ. ಆಹಾರ ಕೊಂಡೊಯ್ದು ಜೋಡಿಸಿಡುವ, ಬಡಿಸುವ ಸ್ವಚ್ಛ ಮಾಡುವ ಕೆಲಸಗಳನ್ನು ಮಕ್ಕಳಿಂದಲೇ ಮಾಡಿಸಿದರೆ ಉತ್ತಮ ಸಾಂಘಿಕ ಜೀವನದ ಸೊಗಸು ಅರ್ಥವಾಗುತ್ತದೆ. ಜಾತಿ-ಧರ್ಮಗಳ ಭೇದ-ಭಾವ ಮಾಡದೇ ಎಲ್ಲ ನೆರೆ-ಹೊರೆಯವರನ್ನು ಪ್ರೀತಿಸುವ, ಅವರೊಂದಿಗೆ ಖುಷಿಯಿಂದ ಬದುಕುವ ಜೀವನಧರ್ಮವನ್ನು ಕಲಿಸಲು ಈ ರಜಾಕಾಲವೇ ಸೂಕ್ತ.

ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ಕೊಡಲು ಸಾಧ್ಯವಾದರೆ ನಮ್ಮ ಸಹಜೀವಿಗಳ ಕಷ್ಟವನ್ನು ಅರ್ಥಮಾಡಿಕೊಳ್ಳುವುದು ಕೂಡ ನಮ್ಮ ಸಾಮಾಜಿಕ ಕರ್ತವ್ಯವೆಂಬ ಮಾನವೀಯತೆಯ ಮೊದಲ ಪಾಠವನ್ನು ಕಲಿಸಬಹುದು. ನಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿ, ಕಾಲೊನಿಗಳಲ್ಲಿ ಅಥವಾ ಓಣಿಗಳಲ್ಲಿ ಎಲ್ಲರ ಮನೆಯಿಂದ ಬಟ್ಟೆ, ಆಟಿಕೆ, ಪುಸ್ತಕ, ಪೆನ್ನು – ಇತ್ಯಾದಿಗಳನ್ನು ಸಂಗ್ರಹಿಸಿ ಒಂದು ದಿನ ಅನಾಥಾಶ್ರಮಗಳಿಗೆ ಹೋಗಿ ಕೊಟ್ಟು ಬರುವ ಕೆಲಸವನ್ನು ಹುಡುಗರಿಂದಲೇ ಮಾಡಿಸಿದರೆ ಅವರ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ತರಬಹುದು. ಸುತ್ತಮುತ್ತಲಿನ ಮಕ್ಕಳೆಲ್ಲ ಸೇರಿಕೊಂಡು ಸಮೂಹನೃತ್ಯವನ್ನೋ, ಚಿಕ್ಕಪುಟ್ಟ ನಾಟಕಗಳನ್ನೋ ಅಭ್ಯಾಸ ಮಾಡಿಸಿ, ಮೇ ಒಂದರಂದು ಮನೆಕೆಲಸ ಮಾಡುವವರನ್ನು, ಓಣಿ ಗುಡಿಸುವ ಮುನ್ಸಿಪಾಲಿಟಿ ನೌಕರರನ್ನು ಕೂಡಿಸಿ ಅವರಿಗೊಂದು ಗುಲಾಬಿ ಕೊಟ್ಟು ಅವರೆದುರು ಮನೋರಂಜನೆ ಕಾರ್ಯಕ್ರಮ ಮಾಡಿದರೆ ಅವರಿಗೂ ಅಪರಿಮಿತ ಖುಷಿಯಾಗಬಹುದು. ರಿಹರ್ಸಲ್ ಮಾಡುವ ಹತ್ತಿಪ್ಪತ್ತು ದಿನಗಳ ಸಡಗರದ ಅನುಭವವೇ ಮಕ್ಕಳಿಗೆ ಬಹುದೊಡ್ಡ ಸಂತೋಷವನ್ನು ತಂದುಕೊಡುತ್ತದೆ.

ಕ್ರಿಯಾಶೀಲವಾಗಿ ಯೋಚಿಸುವ ಮನಸ್ಸಿಗೆ ಇಂತಹ ನೂರಾರು ಹೊಸ ವಿಚಾರಗಳು ಹೊಳೆಯಬಹುದು. ಯಾರದ್ದೋ ಹೊಟ್ಟೆಪಾಡಿಗೆ ನಡೆಸುವ ಶಿಬಿರಗಳಿಗಿಂತ ನಮ್ಮದೇ ಕನಸಿನ ದಿನಚರಿಯೊಂದಿಗೆ ನಮ್ಮ ಮಕ್ಕಳು ವಿನೂತನವಾಗಿ ಚೈತನ್ಯವನ್ನು ತುಂಬಿಕೊಂಡು ರೆಕ್ಕೆ ಮೂಡಿದ ಹಕ್ಕಿಯಂತೆ, ಬಂಡನುಂಡ ಚಿಟ್ಟೆಯಂತೆ ಮಳೆಯಲಿ ಮಿಂದ ಹೂವಿನಂತೆ ತಾಜಾಗೊಳ್ಳಲು ನಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT