ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಂದ್ರದ ವಿರುದ್ಧ ತಮಿಳರ ಸತ್ಯಾಗ್ರಹ

ಕಾವೇರಿ ನಿರ್ವಹಣಾ ಮಂಡಳಿಗಾಗಿ ಪ್ರತಿಭಟನೆಗೆ ನಿರ್ಧಾರ
Last Updated 30 ಮಾರ್ಚ್ 2018, 19:37 IST
ಅಕ್ಷರ ಗಾತ್ರ

ಚೆನ್ನೈ: ಕಾವೇರಿ ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಮತ್ತು ವಿರೋಧ ಪಕ್ಷ ಡಿಎಂಕೆ ತೀವ್ರ ಪ್ರತಿಭಟನೆ ನಡೆಸಲು ನಿರ್ಧರಿಸಿವೆ.

ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆ ಹೂಡಲು ತಮಿಳುನಾಡು ಸರ್ಕಾರ ನಿರ್ಧರಿಸಿದ್ದರೂ ಪಕ್ಷಗಳು ಪ್ರತಿಭಟನೆಗೆ ಮುಂದಾಗಿವೆ.

‘ಎಐಎಡಿಎಂಕೆಯ ಶಾಸಕರು, ಸಂಸದರು ಮತ್ತು ನಾಯಕರು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸೋಮವಾರ ದಿನಪೂರ್ತಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ಮಾಹಿತಿ ನೀಡಿದ್ದಾರೆ.

‘ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಶನಿವಾರ ಅರ್ಜಿ ಸಲ್ಲಿಸುತ್ತೇವೆ’ ಎಂದು ಪಳನಿಸ್ವಾಮಿ ಹೇಳಿದ್ದಾರೆ. ಈ ಸಂಬಂಧ ರಾಜ್ಯದ ಅಡ್ವೊಕೇಟ್ ಜನರಲ್ ಜತೆ ಚರ್ಚಿಸಿದ ನಂತರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ. ಆದರೆ ಯಾವ ಸ್ವರೂಪದ ಅರ್ಜಿ ಸಲ್ಲಿಸಲಾಗುವುದು ಮತ್ತು ಅರ್ಜಿಯಲ್ಲಿ ಏನನ್ನು ಪ್ರತಿಪಾದಿಸಲಾಗುವುದು ಎಂಬುದರ ಬಗ್ಗೆ ಅವರು ಮಾಹಿತಿ ಬಹಿರಂಗಪಡಿಸಿಲ್ಲ.

‘ಆರು ವಾರಗಳ ಗಡುವಿನ ಒಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸದ ಕೇಂದ್ರ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗುತ್ತದೆ’ ಎಂದು ಗುರುವಾರ ಸಂಜೆ ನಡೆಸಿದ್ದ ಸಂಪುಟ ಸಭೆಯಲ್ಲಿ ತಮಿಳುನಾಡು ಸರ್ಕಾರ ನಿರ್ಧಾರ ತೆಗೆದುಕೊಂಡಿತ್ತು.

ರಾಜೀನಾಮೆಗೆ ಕಮಲ್ ಕರೆ: ‘ಅಧಿಕಾರದಲ್ಲಿರುವವರು ರಾಜ್ಯದ ಹಿತಾಸಕ್ತಿಗಾಗಿ ಸ್ವಲ್ಪ ತ್ಯಾಗ ಮಾಡಬೇಕಾಗುತ್ತದೆ. ಶಾಸಕರು ಮತ್ತು ಸಂಸದರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡುವ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಿಸಬೇಕು’ ಎಂದು ಈಚೆಗಷ್ಟೇ ರಾಜಕಾರಣಕ್ಕೆ ಬಂದಿರುವ ನಟ ಕಮಲ್ ಹಾಸನ್ ಕರೆ ನೀಡಿದ್ದಾರೆ.

ಆದರೆ ಶಾಸಕರು ಮತ್ತು ಸಂಸದರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದಿರುವ ಮುಖ್ಯಮಂತ್ರಿ, ಕಮಲ್ ಹಾಸನ್‌ ಅವರ ಕರೆಯನ್ನು ತಿರಸ್ಕರಿಸಿದ್ದಾರೆ. ಆದರೆ ರಾಜ್ಯಸಭೆಯಲ್ಲಿ ಎಐಎಡಿಎಂಕೆ ಸದಸ್ಯರಾಗಿರುವ ಎಸ್‌.ಮುತ್ತುಕರುಪ್ಪನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಕಮಲ್‌ ಅವರ ಸಲಹೆಯನ್ನು ಡಿಎಂಕೆ ಸ್ವಾಗತಿಸಿದೆ.

ಸಮಾನ ಮನಸ್ಕ ಪಕ್ಷಗಳ ಜತೆ ಡಿಎಂಕೆ ಸಭೆ: ‘ಶಾಸಕ, ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ  ಸಮಾನ ಮನಸ್ಕ ಪಕ್ಷಗಳ ಜತೆ ಮಾತುಕತೆ ನಡೆಸುತ್ತೇವೆ. ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ರಕ್ಷಿಸಲು ಏನೆಲ್ಲಾ ಮಾಡಬಹುದು ಎಂಬುದನ್ನು ಚರ್ಚಿಸುತ್ತೇವೆ’ ಎಂದು ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಹೇಳಿದ್ದಾರೆ. ಈ ಸಂಬಂಧ ಡಿಎಂಕೆ ನೇತೃತ್ವದಲ್ಲಿ ಹಲವು ಪಕ್ಷಗಳು ಸೋಮವಾರ (ಏಪ್ರಿಲ್ 1) ಸಭೆ ನಡೆಸಲಿವೆ.

ತಮಿಳುನಾಡು ರೈತ ಸಂಘಟನೆಗಳ ಒಕ್ಕೂಟವೂ ಶುಕ್ರವಾರ ಸಭೆ ನಡೆಸಿದೆ. ಏಪ್ರಿಲ್ 11ರಂದು ರಾಜ್ಯದಾದ್ಯಂತ ಬಂದ್ ನಡೆಸುವ ಬಗ್ಗೆ ರೈತ ಸಂಘಟನೆಗಳು ಚರ್ಚೆ ನಡೆಸಿವೆ. ಆದರೆ ಆ ಬಗ್ಗೆ ಇನ್ನಷ್ಟೇ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT