ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾನೂನು ಉಲ್ಲಂಘಿಸಿದರೆ ಕ್ರಮ’

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

* ಆರ್‌ಟಿಇ ಅಡಿ ದಾಖಲಾದ ಮಕ್ಕಳ ಪೋಷಕರನ್ನು ಖಾಸಗಿ ಶಾಲೆಗಳು ಸುಲಿಗೆ ಮಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿದೆಯೇ?

ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ಬೋಧನಾ ಶುಲ್ಕವನ್ನು ಸರ್ಕಾರವೇ ಭರಿಸುತ್ತದೆ. ರಾಜ್ಯ ಪಠ್ಯಕ್ರಮ ಇರುವ ಶಾಲೆಗಳಲ್ಲಿ ದಾಖಲಾಗುವ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ಪುಸ್ತಕಗಳನ್ನು ಕೊಡುತ್ತೇವೆ. ಸಿಬಿಎಸ್ಇ, ಐಸಿಎಸ್ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳಿಗೆ ಪ್ರವೇಶ ಪಡೆದಂತಹ ಮಕ್ಕಳು ಮಾತ್ರ ಪುಸ್ತಕಗಳನ್ನು ಖರೀದಿಸಬೇಕು. ‘ನಾವು ಹೇಳಿದ ಕಡೆಯಿಂದ ಅಥವಾ ಶಾಲೆಯಿಂದಲೇ ಖರೀದಿಸಬೇಕು’ ಎಂದು ಪೋಷಕರ ಮೇಲೆ ಒತ್ತಡ ಹಾಕುವಂತಿಲ್ಲ. ಅವರು ಎಲ್ಲಿಂದ ಬೇಕಾದರೂ ಪುಸ್ತಕಗಳನ್ನು ಖರೀದಿಸಬಹುದು. ಮಕ್ಕಳ ಸಾರಿಗೆ ವೆಚ್ಚವನ್ನು ಪೋಷಕರು ಭರಿಸಬೇಕಾಗುತ್ತದೆ.

* ಈ ಬಗ್ಗೆ ಎಷ್ಟು ದೂರುಗಳು ಬಂದಿವೆ?

ಆ ಕುರಿತು ಪೂರ್ಣ ಮಾಹಿತಿ ಇಲ್ಲ. ಕಳೆದ ವರ್ಷ ಐದು ದೂರುಗಳು ಬಂದಿದ್ದವು. ಆರ್‌ಟಿಇ ಅಡಿ ಪ್ರವೇಶ ನೀಡಲು ನಿರಾಕರಿಸಿದ ಮೈಸೂರಿನ ಕೌಟಿಲ್ಯ ಶಾಲೆಗೆ ದಂಡ ಹಾಕಲಾಯಿತು. ಅವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದರು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಗಳಿವೆ. ದೂರುಗಳು ಬಂದಾಗ ಪ್ರಾಧಿಕಾರದವರು ಪರಿಶೀಲನೆ ಮಾಡಿ, ತಪ್ಪುಗಳು ಆಗಿರುವುದು ಕಂಡುಬಂದರೆ ಕ್ರಮ ಕೈಗೊಳ್ಳುತ್ತಾರೆ.

* ಕೆಲವು ಶಾಲೆಗಳು ಬೇರೆ ಬೇರೆ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರುಗಳು ಬಂದಿದ್ದು, ಕ್ರಮ ಕೈಗೊಳ್ಳುವಂತೆ ನಿಮ್ಮ ಇಲಾಖೆಗೆ ಶಿಫಾರಸು ಮಾಡಿದ್ದಾರಲ್ಲಾ?

ಇದುವರೆಗೆ ನಮಗೆ ವರದಿ ಬಂದಿಲ್ಲ. ಆಯೋಗದವರು ಈ ಬಗ್ಗೆ ವರದಿ ಕೊಟ್ಟಿದ್ದರೆ, ಪರಿಶೀಲನೆ ಮಾಡಿ ಕ್ರಮಕೈಗೊಳ್ಳುತ್ತೇವೆ. ಆಯೋಗ ಮತ್ತು ನಾವು ಒಟ್ಟಿಗೆ ಸೇರಿ ಕೆಲಸ ಮಾಡಬೇಕಾಗುತ್ತದೆ. ಅವರು ನೀಡಿರುವ ವರದಿಯಲ್ಲಿ ಸತ್ಯಾಂಶವಿದೆ ಎಂದು ಅನಿಸಿದರೆ ಜಿಲ್ಲಾ ಮಟ್ಟದ ಪ್ರಾಧಿಕಾರಗಳು ದಂಡ ವಿಧಿಸುವುದು, ಮಾನ್ಯತೆ ರದ್ದು ಮಾಡುವುದು ಸೇರಿದಂತೆ ಕಠಿಣ ಕ್ರಮಕೈಗೊಳ್ಳಲಿವೆ. ಇದಕ್ಕೆ ಕಾಯ್ದೆಯಲ್ಲಿ ಅವಕಾಶ ಇದೆ. ಶಾಲೆಯವರು ಕಿರುಕುಳ ನೀಡಿದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ, ಉಪ ನಿರ್ದೇಶಕರಿಗೆ ದೂರು ನೀಡುವಂತೆ ಸುತ್ತೋಲೆ ಹೊರಡಿಸಲಾಗಿದೆ.

* ಅಂತಹ ಶಾಲೆಗಳ ಮಾನ್ಯತೆ ರದ್ದು ಮಾಡುತ್ತೀರಾ?

ವರದಿ ನೋಡದೆ ಈಗಲೇ ಆ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರ ಶಿಫಾರಸುಗಳಲ್ಲಿ ಏನಿದೆ ಎಂದು ಗೊತ್ತಿಲ್ಲ.

* ಆರ್‌ಟಿಇ ಅಡಿ ದಾಖಲಾದ ಮಕ್ಕಳನ್ನು ನಿರ್ಲಕ್ಷ್ಯ ಮಾಡುವುದು, ತಾರತಮ್ಯದಿಂದ ನೋಡುವುದು ನಿಮ್ಮ ಗಮನಕ್ಕೆ ಬಂದಿಲ್ಲವೇ?

ಇಲ್ಲ. ಅಂತಹ ಬೆಳವಣಿಗೆಗಳು ನಡೆದಿಲ್ಲ. ಎಲ್ಲ ಮಕ್ಕಳನ್ನು ಸಮಾನವಾಗಿ ನೋಡಬೇಕು. ಸಮಗ್ರ ಮತ್ತು ನಿರಂತರವಾಗಿ ಮಕ್ಕಳ ಕಲಿಕಾ ಮಟ್ಟವನ್ನು ಮೌಲ್ಯಮಾಪನ ಮಾಡುವ ಮೂಲಕ ಕಲಿಕೆಗೆ ಉತ್ತೇಜನ ನೀಡುವ ಕೆಲಸ ಆಗುತ್ತಿದೆ. ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರು ಇದ್ದಾರೆ. ಎಲ್ಲ ರೀತಿಯ ಅನುಕೂಲಗಳನ್ನೂ ಕಲ್ಪಿಸಲಾಗಿದೆ. ಶೋಷಣೆ ಮಾಡುತ್ತಿರುವ ಬಗ್ಗೆ ಪೋಷಕರು ದೂರು ನೀಡಿದರೆ ಖಂಡಿತ
ಕ್ರಮಕೈಗೊಳ್ಳುತ್ತೇವೆ.

* ಕೇಂದ್ರೀಯ ವಿದ್ಯಾಲಯಗಳಲ್ಲಿ ಆರ್‌ಟಿಇ ಅಡಿ ದಾಖಲಾದ ಮಕ್ಕಳಿಗೆ ಶಿಕ್ಷಣ ಭತ್ಯೆ ನೀಡಲಾಗುತ್ತದೆ. ನಿಮ್ಮಲ್ಲಿ ಯಾಕೆ ಇಲ್ಲ?

ನಮ್ಮಲ್ಲಿ ಆ ವ್ಯವಸ್ಥೆ ಇಲ್ಲ. ಉಚಿತವಾಗಿ ಶಿಕ್ಷಣ ನೀಡಬೇಕು ಎಂಬುದು ಈ ಕಾಯ್ದೆಯ ಆಶಯ. ಆ ಕೆಲಸ ಆಗುತ್ತಿದೆ. ಆರ್‌ಟಿಇ ಕಾಯ್ದೆಯ 12(1)ಸಿ ಪ್ರಕಾರ ಉಚಿತ ಶಿಕ್ಷಣ ನೀಡಬೇಕು. ಯಾವ ಖಾಸಗಿ ಶಾಲೆಯೂ ಶುಲ್ಕ ಪಡೆಯಬಾರದು. ಇದರಲ್ಲಿ ಯಾವುದೇ ರಾಜಿ ಇಲ್ಲ.

* ಈ ವರ್ಷ ಎಷ್ಟು ಸೀಟುಗಳು ಲಭ್ಯವಿವೆ?

ಒಟ್ಟಾರೆ ಈ ಬಾರಿ ಆರ್‌ಟಿಇ ಅಡಿ 1.30 ಲಕ್ಷ ಸೀಟುಗಳು ಲಭ್ಯವಿದ್ದು, 2.38 ಲಕ್ಷ ಅರ್ಜಿಗಳು ಬಂದಿವೆ.

* ಯಾವಾಗ ಸೀಟು ಹಂಚಿಕೆ ಆಗಲಿದೆ?

30 ಸಾವಿರ ಅರ್ಜಿಗಳು ಪರಿಶೀಲನೆಗೆ ಬಾಕಿ ಇವೆ. ಹತ್ತು ದಿನಗಳಲ್ಲಿ ಆ ಕೆಲಸ ಆಗಲಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಯೋಗದ ಗಮನಕ್ಕೆ ತಂದು ಆ ಬಳಿಕ ಸೀಟು ಹಂಚಿಕೆ ಮಾಡುತ್ತೇವೆ. ನೀತಿ ಸಂಹಿತೆ ಅಡ್ಡಿಯಾಗುವುದಿಲ್ಲ. ಅದರೆ, ಮುಂದೆ ಯಾರೂ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬಾರದು ಎಂಬುದು ನಮ್ಮ ಆಶಯ.

* ಲಾಟರಿ ಮೂಲಕ ಆಯ್ಕೆ ಮಾಡುವುದರಿಂದ ನಿಜವಾದ ದುರ್ಬಲ ವರ್ಗದವರು ಸೀಟು ಪಡೆಯುವ ಅವಕಾಶದಿಂದ ವಂಚಿತರಾಗುತ್ತಿದ್ದಾರೆ ಎಂಬ ಆರೋಪ ಇದೆಯಲ್ಲಾ?

ಎಚ್ಐವಿ ಪೀಡಿತ ಪೋಷಕರ ಮಕ್ಕಳು, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳು ಸೇರಿದಂತೆ ವಿಶೇಷ ಪ್ರವರ್ಗದಡಿ ಬರುವ ಮಕ್ಕಳಿಗೆ ಲಾಟರಿ ಇಲ್ಲದೇ ಸೀಟು ಹಂಚಿಕೆ ಮಾಡಲಾಗುತ್ತದೆ. ಇನ್ನುಳಿದ ಸುಮಾರು ಒಂದು ಲಕ್ಷ ಸೀಟುಗಳನ್ನು ಲಾಟರಿ ಮೂಲಕ ಪಾರದರ್ಶಕವಾಗಿ ಭರ್ತಿ ಮಾಡಲಾಗುತ್ತದೆ. ಆದಾಯ ಪ್ರಮಾಣ ಪತ್ರಗಳು ಅಸಲಿಯೋ, ನಕಲಿಯೋ ಎಂದು ಪರಿಶೀಲನೆ ಮಾಡುವ ಅಧಿಕಾರ ನಮಗೆ ಇಲ್ಲ. ಆ ಕೆಲಸವನ್ನು ಕಂದಾಯ ಇಲಾಖೆ ಮಾಡುತ್ತದೆ. ಆದಾಯ ಪ್ರಮಾಣ ಪತ್ರದ ಆಧಾರದ ಮೇಲೆ ಯಾರು ಬಡವರು, ದುರ್ಬಲರು ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಿಟ್ಟು ಬೇರೆ ವ್ಯವಸ್ಥೆ ನಮ್ಮಲ್ಲಿ ಇಲ್ಲ.

* ಈ ವರ್ಷ ಏನಾದರೂ ಬದಲಾವಣೆ ಇದೆಯೇ?

ಅನುದಾನಿತ ಶಾಲೆಗಳಿಗೂ ಆರ್‌ಟಿಇ ವಿಸ್ತರಣೆ ಆಗಿದೆ. ಕಂದಾಯ ಇಲಾಖೆ ನೀಡುವ ಪ್ರಮಾಣ ಪತ್ರಗಳನ್ನು ಈ ಬಾರಿ ಆನ್‌ಲೈನ್‌
ನಲ್ಲಿಯೇ ಪರಿಶೀಲನೆ ಮಾಡುತ್ತೇವೆ. ಇದರಿಂದ ಆಯ್ಕೆ ಪ್ರಕ್ರಿಯೆ ಸರಳವಾಗಲಿದೆ.

‘ದೂರಿಗೆ ಸ್ಪಂದಿಸದ ಅಧಿಕಾರಿಗಳು’

* ರಾಜ್ಯದಲ್ಲಿ ಆರ್‌ಟಿಇ ಕಾಯ್ದೆಯ ಅನುಷ್ಠಾನ ಸರಿಯಾಗಿ ಆಗಿದೆಯೇ?

ಶಿಕ್ಷಣ ಹಕ್ಕು ಕಾಯ್ದೆಯ ಸೆಕ್ಷನ್ 12(1)ಸಿ ಅಡಿ ಖಾಸಗಿ ಶಾಲೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಮಕ್ಕಳಿಗೆ ಕೊಡಿಸುವುದರಲ್ಲಿ ಕರ್ನಾಟಕ ಸರ್ಕಾರ ಮುಂಚೂಣಿಯಲ್ಲಿದೆ. ಶಾಲಾ ಕಟ್ಟಡ, ಕಾಂಪೌಂಡ್, ಶೌಚಾಲಯಗಳಿವೆ. ಆದರೆ, ಶಾಲೆಗಳಲ್ಲಿ ಇರಬೇಕಾದ ವ್ಯವಸ್ಥೆ ಮತ್ತು ಕಲಿಕಾ ಸೌಲಭ್ಯದಲ್ಲಿ ಹಿಂದೆ ಇದ್ದೇವೆ. ಕಲಿಯಲು ಬರುವ ಮಕ್ಕಳ ಭವಿಷ್ಯಕ್ಕೆ ನೆರವಾಗುವಲ್ಲಿ ವಿಫಲರಾಗಿದ್ದೇವೆ. ಶಿಕ್ಷಣ ಹಕ್ಕು ಬದಲು ಕಲಿಕೆಯ ಹಕ್ಕು ಆಗಬೇಕಿತ್ತು. ಆ ರೀತಿ ಆಗಿಲ್ಲ.

* ಈ ಕಾಯ್ದೆಯಲ್ಲಿ ಏನಾದರೂ ಲೋಪಗಳು ಇವೆಯೇ?

ಕಾಯ್ದೆ ಪ್ರಕಾರ ಪ್ರವೇಶ ಪಡೆದ ಬಡವರು, ದುರ್ಬಲ ವರ್ಗದ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ಸಿಗಬೇಕು. ಆದರೆ, ಆ ರೀತಿ ಆಗುತ್ತಿಲ್ಲ. ಪಠ್ಯಪುಸ್ತಕ, ಸಮವಸ್ತ್ರ, ಶೂ, ಪ್ರಯೋಗಾಲಯ, ಶಾಲಾ ವಾರ್ಷಿಕೋತ್ಸವ, ಪರೀಕ್ಷಾ ಶುಲ್ಕ, ಸಾರಿಗೆ ವೆಚ್ಚ ಇತ್ಯಾದಿ ಹೆಸರಿನಲ್ಲಿ ₹ 15 ಸಾವಿರದಿಂದ ₹ 25 ಸಾವಿರದವರೆಗೆ ಪಡೆಯಲಾಗುತ್ತಿದೆ. ದುರ್ಬಲ ವರ್ಗದವರು ಇಷ್ಟೊಂದು ಹಣ ಎಲ್ಲಿಂದ ತರುತ್ತಾರೆ? ಈ ಬಗ್ಗೆ ದೂರು ನೀಡಲು ಸರಿಯಾದ ವ್ಯವಸ್ಥೆಯೂ ಇಲ್ಲ.

* ಈ ಬಗ್ಗೆ ಕಾರ್ಯಪಡೆಗೆ ದೂರುಗಳು ಬಂದಿವೆಯೇ?

ಪ್ರತಿ ತಿಂಗಳು 5- 6 ದೂರುಗಳು ಬರುತ್ತವೆ. ಅವುಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಕಳುಹಿಸಿಕೊಡುತ್ತೇವೆ. ಆದರೆ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಕೆಲವೊಮ್ಮೆ ಅವರೇ ಸಂಧಾನ ಮಾಡಿಸುತ್ತಾರೆ. ಶಾಲೆಯವರು ಹತ್ತು ಸಾವಿರ ಕೇಳಿದರೆ, ಆರು ಸಾವಿರ ರೂಪಾಯಿ ಕೊಡಿ ಎಂದು ಸಲಹೆ ನೀಡುತ್ತಾರೆ. ಅನ್ಯಾಯದ ವಿರುದ್ಧ ಪೋಷಕರು ಧ್ವನಿ ಎತ್ತಿದರೆ, ಆರ್ಥಿಕವಾಗಿ ಪ್ರಬಲವಾಗಿರುವ ಖಾಸಗಿ ಶಾಲೆಗಳ ಆಡಳಿತ ಮಂಡಳಿಯವರು, ಅಂತಹವರನ್ನು ಜೈಲಿಗೆ ಕಳುಹಿಸುತ್ತಾರೆ. ಎರಡು ಪ್ರಕರಣಗಳಲ್ಲಿ ಈ ರೀತಿ ಆಗಿದೆ. ಹೀಗಾಗಿ ಪೋಷಕರು ಮುಂದೆ ಬರುತ್ತಿಲ್ಲ.

* ಕಾಯ್ದೆಯಲ್ಲಿ ಏನಾದರೂ ಬದಲಾವಣೆ ಅಗತ್ಯವಿದೆಯೇ?

ಬಡವರು, ದುರ್ಬಲ ವರ್ಗದ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ಸಿಗಬೇಕು ಎಂಬುದು ಕಾಯ್ದೆಯ ಆಶಯ. ಆದರೆ, ಆರ್‌ಟಿಇ ಅಡಿ ಅರ್ಜಿ ಸಲ್ಲಿಸುವವರು ಬಹುತೇಕ ಮಧ್ಯಮ ವರ್ಗದವರಾಗಿರುತ್ತಾರೆ. ಆದಾಯ ಪ್ರಮಾಣ ಪತ್ರ ನೀಡುವಾಗಲೂ ಕೆಲವೊಮ್ಮೆ ಲೋಪಗಳು ಆಗುತ್ತಿವೆ. ಲಾಟರಿ ಮೂಲಕ ಸೀಟು ಹಂಚಿಕೆ ಮಾಡುವುದರಿಂದ ಕೆಲವೊಮ್ಮೆ ದುರ್ಬಲ ವರ್ಗದವರು ಅವಕಾಶದಿಂದ ವಂಚಿತರಾಗುತ್ತಾರೆ. ಆಯ್ಕೆ ಪ್ರಕ್ರಿಯೆಯಲ್ಲಿ ಬದಲಾವಣೆ ತರಬೇಕು.

ಈಗ ಒಂದರಿಂದ ಎಂಟನೇ ತರಗತಿವರೆಗೆ ಆರ್‌ಟಿಇ ಅನ್ವಯವಾಗುತ್ತಿದೆ. ಎಂಟನೇ ತರಗತಿಯ ನಂತರ ಮುಂದೇನು ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತಿದೆ. ಅದೇ ಶಾಲೆಯಲ್ಲಿ ಶಿಕ್ಷಣ ಮುಂದುವರಿಸಿದರೆ ದುಪ್ಪಟ್ಟು ಶುಲ್ಕ ವಸೂಲಿ ಮಾಡುತ್ತಾರೆ. ಕಡಿಮೆ ಹಣ ನೀಡಿದರೆ ಒಪ್ಪುವುದಿಲ್ಲ. ಆದ್ದರಿಂದ ಹತ್ತನೇ ತರಗತಿವರೆಗೆ ಇದನ್ನು ವಿಸ್ತರಿಸಬೇಕು.

* ಆರ್‌ಟಿಇ ಅಡಿ ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಶಾಲೆಗಳಲ್ಲಿ ಪ್ರವೇಶ ಕೊಡಿಸಲು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಯೇ?

ದೂರುಗಳು ಬಂದಾಗ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ತಕ್ಷಣ ಸ್ಪಂದಿಸಬೇಕು. ಆದರೆ, ಆ ರೀತಿ ಆಗುತ್ತಿಲ್ಲ. ದೂರು ಕೊಟ್ಟ 2-3 ತಿಂಗಳ ನಂತರ ವಿಚಾರಿಸುತ್ತಾರೆ. ಅಷ್ಟೊತ್ತಿಗೆ ಮಗುವನ್ನು ಆ ಶಾಲೆಯಿಂದ ಬಿಡಿಸಿ ಮತ್ತೊಂದು ಶಾಲೆಗೆ ಸೇರಿಸಿರುತ್ತಾರೆ. ಪೋಷಕರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಇಲ್ಲದಂತಾಗಿದೆ. ಸರಿಯಾದ ಮೇಲ್ವಿಚಾರಣೆ ಇಲ್ಲದೆ ಇರುವುದರಿಂದ ಈ ರೀತಿ ಆಗುತ್ತಿದೆ. ಇದನ್ನು ತಪ್ಪಿಸಲು ದೂರು ಬಂದ ಕೂಡಲೇ ಅಧಿಕಾರಿಗಳು  ಸ್ಪಂದಿಸಬೇಕು.

* ಪ್ರವೇಶ ನಿರಾಕರಣೆ, ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆಯೇ?

ಶಾಲೆಯವರು ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡುತ್ತಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ದೂರುಗಳು ಬರುತ್ತವೆ. ಆದರೆ, ಬೇರೆ ಕಡೆ ಬೆಳಕಿಗೆ ಬರುವುದಿಲ್ಲ. ಶಾಲಾ ವಾರ್ಷಿಕೋತ್ಸವಕ್ಕೆ ಒಂದು ಸಾವಿರ ರೂಪಾಯಿ ನೀಡುವಂತೆ ಕೇಳುತ್ತಿದ್ದಾರೆ ಎಂದು ದೂರು ಬಂದಿತ್ತು. ಈ ಹಣವನ್ನು ಯಾವುದಕ್ಕೆ ಬಳಸುತ್ತೀರಿ ಎಂದು ಶಾಲೆಯವರನ್ನು ಕೇಳಿದಾಗ ‘ಲುಂಗಿ ಡಾನ್ಸ್‌ಗೆ’ ಎಂಬ ಉತ್ತರ ಬಂತು. ಇಷ್ಟೇ ಅಲ್ಲದೆ ಬೇರೆ ಬೇರೆ ಹೆಸರಿನಲ್ಲಿ ಹಣ ಪಡೆಯುತ್ತಾರೆ. ರಸೀದಿ ಕೊಡುವುದಿಲ್ಲ. ಕೊಟ್ಟರೂ ಅದರಲ್ಲಿ ಟಿನ್ ನಂಬರ್ ಇರುವುದಿಲ್ಲ. ಹೀಗಾಗಿ ಕೋರ್ಟ್‌ಗೆ  ಹೋದರೆ ಅದು ನಕಲಿ ರಸೀದಿ ಎನ್ನುತ್ತಾರೆ. ನ್ಯಾಯ ಸಿಗುವುದಿಲ್ಲ.

ಕೇಳಿದಷ್ಟು ಹಣ ಕೊಡದೆ ಇದ್ದರೆ, ಕೆಲವು ಶಾಲೆಗಳಲ್ಲಿ ಅಂತಹ ಮಕ್ಕಳತ್ತ ಗಮನಹರಿಸದೆ ನಿರ್ಲಕ್ಷ್ಯ ಮಾಡುತ್ತಾರೆ. ಕಿರು ಪರೀಕ್ಷೆಗಳಲ್ಲಿ ಪೂರ್ಣ ಅಂಕ ನೀಡುತ್ತಾರೆ. ಆದರೆ, ಪಠ್ಯೇತರ ವಿಷಯಗಳಲ್ಲಿ ಅವರಿಗೆ ಮಹತ್ವ ನೀಡದೆ ತಾರತಮ್ಯ ಮಾಡುತ್ತಾರೆ.

* ಇಂತಹ ಸಂದರ್ಭಗಳಲ್ಲಿ ಪೋಷಕರು ಏನು ಮಾಡಬೇಕು?

ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಬಡವರ ಮಕ್ಕಳಿಗೆ ಇದೊಂದು ಒಳ್ಳೆಯ ಅವಕಾಶ. ಇದನ್ನು ಕಿತ್ತುಕೊಳ್ಳಲು ಬಿಡಬಾರದು. ಬಡವರಿಗೆ ಅವರ ಹಕ್ಕುಗಳು ಸಿಗಲೇಬೇಕು. ಪೋಷಕರು ಜಾಗೃತರಾಗಬೇಕು. ಪಾರದರ್ಶಕವಾಗಿ, ಕಾನೂನು ಪ್ರಕಾರ ನಡೆದುಕೊಳ್ಳದೆ ಇದ್ದಾಗ, ಅಂತಹ ಶಾಲೆಗಳ ವಿರುದ್ಧ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT