ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳನ್ನು ಮೆಚ್ಚಿಸುವ ಮಹಾನುಭಾವರು..!

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಕ್ಕಳ ಸಹವಾಸ ತುಸು ಕಷ್ಟ. ಸಹವಾಸ ಅಂದರೆ ಅವರ ಜೊತೆ ಒಡನಾಡುವುದು, ಅವರ ಮನಸ್ಸನ್ನು ಒಂದು ವಿಷಯದ ಕಡೆ ಸೆಳೆದು ಹಿಡಿದಿಟ್ಟುಕೊಳ್ಳುವುದು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವುದು... ಇವೆಲ್ಲವೂ ಕಷ್ಟ. ದೊಡ್ಡವರ ಪ್ರಶ್ನೆಗಳಿಗೆ ಉತ್ತರ ಕೊಟ್ಟುಬಿಡಬಹುದು. ಆದರೆ ಮಕ್ಕಳು ಕೇಳುವ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಸಮಾಧಾನ ಮಾಡುವುದು ಸಾಮಾನ್ಯವೇ?! ಅವರನ್ನು ಒಂದು ಕಡೆ ಕೂರಿಸಿ, ಅವರಿಗೆ ಖುಷಿಯಾಗುವಂತೆ ಮಾಡುವುದು ಸುಲಭವೇ?!

ವಿವಿಧ ಟಿ.ವಿ. ವಾಹಿನಿಗಳಲ್ಲಿ ಪ್ರಸಾರವಾಗುವ ಕಾರ್ಟೂನ್‌ ಕಾರ್ಯಕ್ರಮಗಳಿವೆಯಲ್ಲ? ಅವುಗಳ ಬಗ್ಗೆ ಆಲೋಚಿಸಿ. ಅವು ಮಕ್ಕಳನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತವೆ? ಅಲ್ಲದೆ, ಮಕ್ಕಳೆಂಬ ‘ಪ್ರಶ್ನೆ ಕೇಳುವ ಫ್ಯಾಕ್ಟರಿಗಳು’ ತಮ್ಮನ್ನು ಪ್ರಶ್ನಿಸದಂತೆಯೂ ಮಾಡಿಬಿಡುತ್ತವಲ್ಲ ಈ ಕಾರ್ಟೂನ್‌ ಪಾತ್ರಗಳು? ಇಂಥ ಪಾತ್ರಗಳ ಪೈಕಿ ನಮ್ಮ ಪುಟಾಣಿಗಳು ಇಷ್ಟಪಡುತ್ತಿರುವುದು ಯಾವುವನ್ನು? ಈ ಪ್ರಶ್ನೆಗಳನ್ನು ಇಟ್ಟುಕೊಂಡು, ಮಕ್ಕಳಿಗೆ ಇಷ್ಟವಾಗುವ ಪಾತ್ರಗಳನ್ನು ಪರಿಚಯಿಸುವ ಪುಟ್ಟ ಕೆಲಸ ‘ಮುಕ್ತಛಂದ’ದ್ದು.

ಛೋಟಾ ಭೀಮ್‌: ಈ ಪಾತ್ರದ ಹೆಸರನ್ನು ಕೇಳದ ಇಂದಿನ ತಲೆಮಾರಿನ ಮಕ್ಕಳು ಇಲ್ಲವೇ ಇಲ್ಲ ಎನ್ನಬಹುದು. ರಾಜೀವ್ ಚಿಲಕ ಅವರ ಕಲ್ಪನೆಯಲ್ಲಿ ಅರಳಿದ ಪಾತ್ರ ಇದು. ಛೋಟಾ ಭೀಮ್‌ ವಾಸ ಮಾಡುವುದು ಢೋಲಕಪುರ ಎಂಬ ಊರಿನಲ್ಲಿ. ಜೊತೆಗೆ ಚುಟ್ಕಿ, ರಾಜು ಕೂಡ. ಇಲ್ಲಿನ ರಾಜನ ಹೆಸರು ಇಂದ್ರವರ್ಮ. ಭೀಮ್‌ ತನ್ನ ಸ್ನೇಹಿತರನ್ನು, ತನ್ನೂರಿನ ಜನರನ್ನು ಸಂಕಷ್ಟಗಳಿಂದ ಪಾರು ಮಾಡುತ್ತಾನೆ. ಕೆಲವು ಸಂದರ್ಭಗಳಲ್ಲಿ ಭೀಮ್‌ ರಾಜನಿಗೂ ಸಹಾಯ ಮಾಡುತ್ತಾನೆ. ಭೀಮನಿಗೆ ಲಾಡುಗಳು ಅಚ್ಚುಮೆಚ್ಚು.

ಪಕ್ಡಂ ಪಕ್ಡಾಯ್‌: ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಟ್ಯಾಟ್‌–ಎ–ರ್‍ಯಾಟ್‌’ ಎಂಬ ಹೆಸರಿನಲ್ಲಿ ಖ್ಯಾತಿ ಪಡೆದಿರುವ ಕಾರ್ಯಕ್ರಮ ಭಾರತದಲ್ಲಿ ‘ಪಕ್ಡಂ ಪಕ್ಡಾಯ್‌’ ಎಂದು ಪ್ರಸಾರವಾಗುತ್ತಿದೆ. ಇದು ಫ್ರಾನ್ಸ್‌ನ ಕಾರ್ಟೂನ್‌ ಕಾರ್ಯಕ್ರಮ ‘ಆಗ್ಗಿ ಅಂಡ್‌ ದಿ ಕಾಕ್ರೋಚಸ್‌’ನಿಂದ ಪ್ರೇರಣೆ ಪಡೆದಿರುವಂಥದ್ದು ಎಂಬ ಮಾತಿದೆ. ‘ಆಗ್ಗಿ ಅಂಡ್‌ ದಿ ಕಾಕ್ರೋಚಸ್‌’ಗೆ ಸ್ಫೂರ್ತಿ ಎಲ್ಲರ ಪ್ರೀತಿಯ ಟಾಮ್‌ ಮತ್ತು ಜೆರ್‍ರಿ! ಮೋಟು, ಚೋಟು ಮತ್ತು ಲಂಬು ಈ ಕಾರ್ಯಕ್ರಮದ ಮೂರು ಇಲಿಗಳು. ಇದರಲ್ಲಿ ಡಾನ್‌ ಎನ್ನುವ ನಾಯಿ ಈ ಮೂರು ಇಲಿಗಳ ವಿರುದ್ಧ ಹೋರಾಟ ನಡೆಸುತ್ತಿರುತ್ತದೆ. ಡಾನ್‌ಗೆ ಕೋಪ ಬರಿಸುವಂತೆ ಮಾಡುವ ಕೆಲಸ ಮೂರು ಇಲಿಗಳದ್ದು. ಇಲಿಗಳಿಗೆ ಪಾಠ ಕಲಿಸಬೇಕು ಎಂದು ಡಾನ್‌ ಬಯಸುತ್ತಾನಾದರೂ, ಅದರಲ್ಲಿ ಆತ ಯಶಸ್ಸು ಕಾಣುವುದಿಲ್ಲ. ಇಲಿಗಳ ಗುಂಪಿನ ನಾಯಕ ಛೋಟು.


ಚುಟ್ಕಿ ಜೊತೆ ಭೀಮ್

ಟಾಮ್‌ ಮತ್ತು ಜೆರ್‍ರಿ: ಟಾಮ್ ಮತ್ತು ಜೆರ್‍ರಿ ಎನ್ನುವ ಎರಡು ಪಾತ್ರಗಳ ಬಗ್ಗೆ ಹೆಚ್ಚಿನ ವಿವರಣೆ ಯಾರಿಗೂ ಬೇಕಿಲ್ಲ. ಮಾತೇ ಬಾರದ ಪುಟಾಣಿಗಳಿಂದ ಆರಂಭಿಸಿ, ಬೊಚ್ಚು ಬಾಯಿಯ ಅಜ್ಜಂದಿರವರೆಗೆ ಎಲ್ಲರೂ ವೀಕ್ಷಿಸಬಹುದಾದ ಕಾರ್ಯಕ್ರಮ ಇದು. ವಿಲಿಯಂ ಹನ್ನಾ ಮತ್ತು ಜೋಸೆಫ್‌ ಬರ್ಬರಾ 1940ರಲ್ಲಿ ಸೃಷ್ಟಿಸಿದ ಟಾಮ್‌ ಎಂಬ ಬೆಕ್ಕು ಮತ್ತು ಜೆರ್‍ರಿ ಎಂಬ ಇಲಿ ಅಂದಿನಿಂದ ಇಂದಿನವರೆಗೆ ಎಲ್ಲ ವಯೋಮಾನದವರ ಮನಸ್ಸನ್ನು ಸೂರೆಗೈದಿವೆ. ಈ ಕಾರ್ಟೂನ್‌ ಸರಣಿಯ ಕಥೆಗಳಲ್ಲಿ ಸಾಮ್ಯತೆ ಖಂಡಿತ ಇದೆ. ಜೆರ್‍ರಿಯನ್ನು ಹೇಗಾದರೂ ಮಾಡಿ ಹಿಡಿಯಬೇಕು ಎಂಬುದು ಟಾಮ್‌ನ ಹಟ. ಆದರೆ ಚೂಟಿ ಜೆರ್‍ರಿ ಟಾಮ್‌ನ ಕೈಗೆ ಸುಲಭಕ್ಕೆ ಸಿಗುವುದಿಲ್ಲ. ಜೆರ್‍ರಿಯನ್ನು ಹಿಡಿಯುವ ಭರದಲ್ಲಿ ಟಾಮ್‌ ಸೃಷ್ಟಿಸುವ ಅವಾಂತರಗಳು ಪುಟಾಣಿಗಳ ಮೊಗದಲ್ಲಿ ಮಂದಹಾಸ ಮೂಡಿಸುತ್ತವೆ, ಹೊಟ್ಟೆ ಹುಣ್ಣಾಗುವಷ್ಟು ನಗುವಂತೆಯೂ ಮಾಡುತ್ತವೆ! ಟಿ.ವಿ. ಲೋಕದಲ್ಲಿ ಸೃಷ್ಟಿಯಾದ ಸಾವಿಲ್ಲದ ಪಾತ್ರಗಳ ಸಾಲಿನಲ್ಲಿ ಟಾಮ್‌ ಮತ್ತು ಜೆರ್‍ರಿ ಖಂಡಿತ ಇರುತ್ತವೆ.

ಡೋರೆಮಾನ್‌: ಚಿಣ್ಣರ ಮನಸ್ಸು ಗೆದ್ದಿರುವ ಕಾರ್ಟೂನ್‌ ಸರಣಿಗಳಲ್ಲಿ ಡೋರೆಮಾನ್‌ ಕೂಡ ಸೇರಿದೆ. ‘ಡೋರೆಮಾನ್‌’ ಹೆಸರಿನ ರೋಬೊ ಬೆಕ್ಕಿನ ಪಾತ್ರವನ್ನು ಸೃಷ್ಟಿಸಿದವರು ಜಪಾನಿನ ಫುಜಿಕೊ ಎಫ್‌. ಫುಜಿಯೊ. ಡೋರೆಮಾನ್‌ ಸರಣಿಯಲ್ಲಿ ಬರುವ ನೊಬಿತಾ ಎನ್ನುವ ಪಾತ್ರಕ್ಕೆ ಸಹಾಯ ಮಾಡಲು ಭವಿಷ್ಯತ್ ಕಾಲದಿಂದ ಭೂತಕಾಲಕ್ಕೆ ಹಿಂದಿರುಗುವ ಪಾತ್ರ ಈ ರೋಬೊ ಬೆಕ್ಕು. ಈ ಬೆಕ್ಕಿಗೆ ವಿಶೇಷ ಕಿಸೆ ಇದೆ. ಇದನ್ನು ಬಳಸಿ ಡೋರೆಮಾನ್‌ ಎಲೆಕ್ಟ್ರಾನಿಕ್‌ ಗ್ಯಾಜೆಟ್‌, ಔಷಧ, ವಿವಿಧ ಬಗೆಯ ಸಲಕರಣೆಗಳನ್ನು ಸಿದ್ಧಪಡಿಸಬಲ್ಲದು. ಡೋರೆಮಾನ್‌ ಸರಣಿಯು ಹಾಸ್ಯದ ಜೊತೆಯಲ್ಲೇ ತಾಳ್ಮೆ, ಪ್ರೀತಿ, ಪ್ರಾಮಾಣಿಕತೆಯಂತಹ ನೈತಿಕ ಮೌಲ್ಯಗಳ ಬಗ್ಗೆಯೂ ಮಕ್ಕಳಿಗೆ ಸಂದೇಶ ನೀಡುತ್ತದೆ ಎನ್ನುವುದು ಈ ಕಾರ್ಯಕ್ರಮವನ್ನು ವೀಕ್ಷಿಸುವವರ ಹೇಳಿಕೆ.ಈ ಪಾತ್ರದಲ್ಲಿ ಸಿನಿಮಾ ಕೂಡ ಬಂದಿದೆ.

ಮಿಸ್ಟರ್‌ ಬೀನ್‌ (ಕಾರ್ಟೂನ್ ಸರಣಿ): ಹಾವ–ಭಾವಗಳ ಮೂಲಕವೇ ಎಲ್ಲರನ್ನೂ ನಗಿಸಿದ ಮಿಸ್ಟರ್ ಬೀನ್‌ನ ಕಾರ್ಟೂನ್‌ ರೂಪ ಇದು. ಮಿಸ್ಟರ್‌ ಬೀನ್‌ ಎನ್ನುವ ಪಾತ್ರಕ್ಕೆ ಜೀವ ತುಂಬಿದವರು ರೋವನ್ ಅಟ್ಕಿನ್‌ಸನ್‌. ಕಾರ್ಟೂನ್‌ ಸರಣಿಯಲ್ಲಿ ಕೂಡ ಮಾತು ಬಹಳ ಕಡಿಮೆ. ಮಿಸ್ಟರ್‌ ಬೀನ್‌ನ ಮುಖಭಾವ, ಆತನ ಆಂಗಿಕ ಚೇಷ್ಟೆಗಳೇ ನಗು ತರಿಸಲು ಸಾಕು. ಈ ಪಾತ್ರದಲ್ಲಿ ಕೂಡ ಸಿನಿಮಾ ಬಂದಿದೆ.

ಬೆನ್ ಟೆನ್ನಿಸನ್: ‘ಬೆನ್ ಟೆನ್’ ಕಾರ್ಟೂನ್ ಸರಣಿಯ ನಾಯಕ ಈತ. ವಾಚಿನಂತೆ ಕಾಣಿಸುವ ‘ಆಮ್ನಿಟ್ರಿಕ್ಸ್’ ಎನ್ನುವ ಸಾಧನ ಈತನ ಬಳಿ ಇದೆ. ಇದನ್ನು ಬಳಸಿ ಬೆನ್, ಶತ್ರುಗಳ ವಿರುದ್ಧ ಹೋರಾಡುತ್ತಾನೆ. ತನ್ನ ಕುಟುಂಬದವರು ಮತ್ತು ಸಹಾಯದ ಅಗತ್ಯ ಇರುವವರಿಗೆ ನೆರವು ನೀಡಲು ಬೆನ್‌ ಯಾವತ್ತೂ ಹಿಂಜರಿಯುವುದಿಲ್ಲ. ಕೆಲವು ಸಂದರ್ಭಗಳಲ್ಲಿ ಬೆನ್‌ ಮೂರ್ಖನಂತೆ ವರ್ತಿಸಿದರೂ, ತಾನು ಚೂಟಿ ವ್ಯಕ್ತಿ ಎನ್ನುವುದನ್ನು ಅವ ಸಂದರ್ಭ ಬಂದಾಗಲೆಲ್ಲ ತೋರಿಸುತ್ತಲೇ ಇರುತ್ತಾನೆ.

ಮೋಟು- ಪತ್ಲು: ಈ ಕಾರ್ಯಕ್ರಮದ ಎರಡು ಪ್ರಮುಖ ಪಾತ್ರಗಳ ಪೈಕಿ ಮೋಟು ಒಬ್ಬ. ಈ ಡುಮ್ಮನಿಗೆ ಸಮೋಸಾ ತಿನ್ನುವುದು ಅಂದರೆ ಬಹಳ ಖುಷಿ. ಹಾಗೆಯೇ, ಸಮೋಸಾ ತಿಂದು ಆತ ಶಕ್ತಿ ಹೆಚ್ಚಿಸಿಕೊಳ್ಳುತ್ತಾನೆ. ಮೋಟುವಿನ ಖಾಸಾ ಸ್ನೇಹಿತ ಪತ್ಲು. ಸುಲಭವಾಗಿ ಹಣ ಸಂಪಾದಿಸುವುದು, ಗಮ್ಮತ್ತು ಮಾಡುವುದು ಮೋಟುವಿಗೆ ಬಹಳ ಇಷ್ಟವಾಗುವ ಕೆಲಸಗಳು ಎನ್ನುತ್ತಾರೆ ಪುಟಾಣಿಗಳು. ಕೆಲವು ಸಂದರ್ಭಗಳಲ್ಲಿ ಈತ ಫಜೀತಿಗೆ ಸಿಲುಕಿಕೊಳ್ಳುವುದೂ ಇದೆ. ಮೋಟುವಿನ ಸ್ನೇಹಿತ ಪತ್ಲು, ನಗರದ ಅತ್ಯಂತ ಬುದ್ಧಿವಂತ ಎಂಬಂತೆ ಬಿಂಬಿಸಲಾಗಿದೆ. ಈತ ಕೂಡ ಮೋಟುವಿನ ಜೊತೆಯಲ್ಲಿ ಆಗಾಗ ಸಮಸ್ಯೆಗೆ ಸಿಲುಕಿಕೊಳ್ಳುತ್ತ ಇರುತ್ತಾನೆ. ಹೀಗಿದ್ದರೂ, ಏನಾದರೂ ಮಾಡಿ ಸಮಸ್ಯೆಯಿಂದ ಪಾರಾಗಿ ಬರುತ್ತಾರೆ ಈ ಸ್ನೇಹಿತರು.


ಮೋಟು ಮತ್ತು ಪಟ್ಲು

ಕ್ರಿಸ್‌: ಶ್ರೀಕೃಷ್ಣನ ಕಥೆಗೆ ಆಧುನಿಕ ರೂಪ ನೀಡಿರುವ ಕಾರ್ಟೂನ್‌ ಎಂಬ ಹೆಗ್ಗಳಿಕೆ ಹೊಂದಿರುವ ಸರಣಿ ‘ರೋಲ್‌ ನಂ. 21’. ಇದರಲ್ಲಿ ಕಂಸ ಮತ್ತು ಕೃಷ್ಣನ ಕಥೆಯನ್ನು ಹೊಸ ರೂಪದಲ್ಲಿ ಹೇಳಲಾಗಿದೆ. ಈ ಕಾರ್ಟೂನ್ ಸರಣಿಯಲ್ಲಿ ಬರುವ ಕ್ರಿಸ್‌ ನಮ್ಮ ಪುಟಾಣಿಗಳ ಪಾಲಿಗೆ ಒಬ್ಬ ಪುಟ್ಟ ಹೀರೊ. ಮಥುರಾ ಅನಾಥಾಶ್ರಮದ ಮುಖ್ಯಸ್ಥ ಕನಿಶ್ಕನ ಕೆಟ್ಟ ಯೋಜನೆಗಳನ್ನು ವಿಫಲಗೊಳಿಸಲು ಹುಟ್ಟಿ ಬಂದವ ಕ್ರಿಸ್. ಶ್ರೀಕೃಷ್ಣನ ಮೈಬಣ್ಣದಂತೆಯೇ ಕ್ರಿಸ್‌ನ ಮೈಬಣ್ಣ ಕೂಡ ನೀಲಿ. ಅವನಂತೆಯೇ ಇವ ಕೂಡ ಬೆಣ್ಣೆ ಪ್ರಿಯ. ಕ್ರಿಸ್‌ಗೆ ಆಟ ಆಡುವುದು ಅಂದರೆ ಇಷ್ಟ, ಶಾಲೆಯ ಓದಿನ ಬಗ್ಗೆ ಅಷ್ಟೇನೂ ಆಸಕ್ತಿ ಇಲ್ಲ.

ಬಾಲು: ತೊಂಬತ್ತರ ದಶಕದಲ್ಲಿ ದೂರದರ್ಶನ ವಾಹಿನಿ ವೀಕ್ಷಿಸುತ್ತಿದ್ದವರು ‘ಟೇಲ್ಸ್‌ಪಿನ್‌’ ಕಾರ್ಟೂನ್‌ ಸರಣಿಯನ್ನು ಮರೆಯಲಿಕ್ಕಿಲ್ಲ. ಹಾಗೆಯೇ, ಆ ಸರಣಿಯ ಹೀರೊ ಬಾಲು ಎನ್ನುವ ಕರಡಿಯನ್ನು ಕೂಡ ಮರೆಯಲು ಆಗದು. ಈ ಬಾಲು ಸಾಮಾನ್ಯನಲ್ಲ. ಈತ ಒಂದು ಸರಕು ಸಾಗಣೆ ವಿಮಾನದ ಪೈಲಟ್. ಎಂತಹ ಕಷ್ಟದ ಪರಿಸ್ಥಿತಿ ಬಂದರೂ ವಿಮಾನ ಹಾರಿಸಬಲ್ಲ ಸಾಮರ್ಥ್ಯ ಈತನಿಗೆ ಇದೆ. ಇವನ ಬಳಿ ಇರುವ ವಿಮಾನ ನೀರಿನ ಮೇಲೆ ಕೂಡ ಇಳಿಯಬಲ್ಲದು, ಅಲ್ಲಿಂದಲೇ ಟೇಕ್‌ಆಫ್‌ ಆಗಬಲ್ಲದು!

ಇವು ಕೆಲವಷ್ಟು ಕಾರ್ಟೂನ್‌ ಸರಣಿಗಳು ಮತ್ತು ಪಾತ್ರಗಳ ವಿವರಣೆ ಮಾತ್ರ. ಇವರೆಲ್ಲ ಮಕ್ಕಳ ಪಾಲಿಗೆ ಮಾತ್ರವಲ್ಲದೆ, ದೊಡ್ಡವರ ಪಾಲಿಗೂ ಹೀರೊಗಳು. ಹಾಗೆಯೇ, ಹೀರೊಗಳು ಇವರು ಮಾತ್ರ, ಬೇರೆಯವರು ಅಲ್ಲ ಎನ್ನುವಂತಿಲ್ಲ. ಆದರೆ ಈ ಪಾತ್ರಗಳು ಮಕ್ಕಳಿಗೆ ಇಷ್ಟವಾಗುತ್ತವೆ ಎಂದು ಖಂಡಿತ ಹೇಳಬಹುದು. ಏಕೆ ಅಂದರೆ, ಇವರು ಮಕ್ಕಳು ಒಂದು ಕಡೆ ಕೂತು ಟಿ.ವಿ. ವೀಕ್ಷಿಸುವಂತೆ ಮಾಡಿ ಮಕ್ಕಳ ಗಲಾಟೆ ಕಡಿಮೆ ಮಾಡುವಂತಹ ಮಹಾನುಭಾವರು! ರಜೆ ಬೇರೆ ಬಂದಿತಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT