ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ ಕಾಲ ಹೆಂಗಿತ್ತು ಗೊತ್ತಾ?

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ವ್ಯಂಗ್ಯಚಿತ್ರ ಕಲೆಯ ಗತಕಾಲ ನೆನಪಾದಾಗ ಹೆಮ್ಮೆ ಪಡುವಂತಹ ಅನೇಕ ವ್ಯಂಗ್ಯಚಿತ್ರಕಾರರ ಕೃತಿಗಳು ಕಣ್ಣ ಮುಂದೆ ಹಾದು ಹೋಗುತ್ತವೆ. ಅದು 60ರ ದಶಕ ಇರಬೇಕು. ಮೂರ್ತಿ ಮತ್ತು ರಘು ದಿನಪತ್ರಿಕೆಗಳಲ್ಲಿ ರಾರಾಜಿಸಿದ್ದರು. ಬಹಳಷ್ಟು ಮಂದಿ ಹವ್ಯಾಸಿಯಾಗಿ ನಗೆಯ ಅಲೆಯನ್ನು ಎಬ್ಬಿಸಿದ್ದರು. ಅಂತಹವರಲ್ಲಿ ರಾಜ್ಯದ ಇಬ್ಬರು ಯುವಕರಿಗೆ ಮಾತ್ರ ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡುತ್ತೇವೆ ಎಂಬ ಅಚಲ ವಿಶ್ವಾಸವಿತ್ತು. ಒಬ್ಬರು ಮೈಸೂರಿನ ಆರ್. ಕೆ. ಲಕ್ಷ್ಮಣ್. ಇನ್ನೊಬ್ಬರು ಧಾರವಾಡದ ವಿ.ಜಿ. ನರೇಂದ್ರ.

ಲಕ್ಷ್ಮಣ್ ಬಹಳ ಎತ್ತರಕ್ಕೇರಿದ್ದು ಎಲ್ಲರಿಗೂ ಗೊತ್ತು. ನರೇಂದ್ರರು ಕೂಡಾ ಅದೇ ಆಕಾಂಕ್ಷೆಯನ್ನಿಟ್ಟುಕೊಂಡು ಮುಂಬೈ ರೈಲು ಹತ್ತಿದ್ದು. ಆದರೆ ಅವರಿಗೆ ಅಲ್ಲಿ ಆಗೊಮ್ಮೆ ಈಗೊಮ್ಮೆ ಮಾತ್ರ ‘ಫ್ರೀ ಪ್ರೆಸ್ ಜರ್ನಲ್’ ನಲ್ಲಿ ರಾಜಕೀಯ ವ್ಯಂಗ್ಯಚಿತ್ರಗಳನ್ನು ಮಾಡುವ ಅವಕಾಶ ಸಿಕ್ಕಿತ್ತು. ಅದೇ ಸಮಯಕ್ಕೆ ಉಡುಪಿಯ ಅನಂತ್ ಪೈ ಆರಂಭಿಸಿದ ಕಾರ್ಟೂನ್ ಸಿಂಡಿಕೇಟ್ ಸಂಸ್ಥೆಗಾಗಿ ದಿನಾ ಪಾಕೆಟ್ ಕಾರ್ಟೂನ್ (ರಿಪೋರ್ಟರ್ ಸಂಜು) ಬರೆದರು. ಇದು ದೇಶದ ವಿವಿಧ ಭಾಷೆಯ ದಿನಪತ್ರಿಕೆಗಳಲ್ಲಿ ಪ್ರಕಟವಾಗುತಿತ್ತು. ಅದು ನರೇಂದ್ರರು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡ ಕ್ಷಣಗಳು.


ಮರು ನಾಮಕರಣ ಕಾರ್ಯಕ್ರಮ : ಎ.ಐ.ಸಿ.ಸಿ (ಓ) ಪಕ್ಷಕ್ಕೆ ಹೊಸ ಹೆಸರನ್ನು ಕೊಡಬೇಕೆನ್ನುವ ಸಲಹೆ ಉದ್ಭವ

ಒಂದು ದಿವಸ ಅವರ ಮುಂದೆ ಆಕಾಶಕ್ಕೇರುವ ಏಣಿ ಕಂಡಿತು. ಆ ಕಾಲದಲ್ಲಿ ವ್ಯಂಗ್ಯಚಿತ್ರಕಾರರಿಗೆಲ್ಲಾ ದೇವರಂತಿದ್ದ ಶಂಕರ್ ಪಿಳ್ಳೈ ಅವರಿಂದ ಉತ್ಸಾಹಿ ನರೇಂದ್ರರಿಗೆ ಆಹ್ವಾನ! ಅಂದು ‘ಶಂಕರ್ಸ್ ವೀಕ್ಲಿ’ ಅಂದರೆ ಪ್ರಧಾನಿ ನೆಹರೂ ಕೂಡಾ ಗೌರವ ಕೊಡುತ್ತಿದ್ದ ವ್ಯಂಗ್ಯಚಿತ್ರ ವಾರಪತ್ರಿಕೆಯಾಗಿತ್ತು. ಕಾಲೇಜು ದಿವಸಗಳಲ್ಲಿ ‘ಶಂಕರ್ಸ್ ವೀಕ್ಲಿ’ ಯನ್ನು ಆರಾಧಿಸುತ್ತಿದ್ದ ನರೇಂದ್ರ ಅದೇ ಪತ್ರಿಕೆಗೆ ಸಾರಾಸಗಟಾಗಿ ರಾಜಕೀಯ ವ್ಯಂಗ್ಯಚಿತ್ರ ರಚಿಸಿದರು. ದುರಾದೃಷ್ಟವಶಾತ್ ಪತ್ರಿಕೆ 1975 ರ ತುರ್ತು ಪರಿಸ್ಥಿತಿಗೆ ಸಿಕ್ಕಿ ಗುಡ್ ಬೈ ಅಂದಿತು. ಅಲ್ಲಿ ನರೇಂದ್ರರಿಗೆ ತನ್ನ ಪ್ರತಿಭೆ ತೋರಿಸುವುದಕ್ಕೆ ಸಿಕ್ಕಿದ್ದು ಎರಡೂವರೆ ವರ್ಷಗಳು ಮಾತ್ರ.

ಮುಂದೆ ಅವರು ‘ಸಂಯುಕ್ತ ಕರ್ನಾಟಕ’ ದ ಮೂಲಕ ಪ್ರಸಿದ್ಧರಾದರೂ, ಶಂಕರ್ ಜೊತೆ ಕೆಲಸ ಮಾಡಿದ್ದು ಮತ್ತು ಅಲ್ಲಿ ಮೂಡಿ ಬಂದ ವ್ಯಂಗ್ಯಚಿತ್ರಗಳು ಅವಿಸ್ಮರಣೀಯವೆಂದು ಪರಿಗಣಿಸಿದ್ದಾರೆ. ಅದಕ್ಕೆ ಅವರು ಈಚೆಗಷ್ಟೇ ಹೊರ ತಂದ ‘ಮೈ ಟೈಮ್ಸ್ ಮೈ ವ್ಯೂಸ್’ ಸಂಕಲನವೇ ಸಾಕ್ಷಿ. ಎಲ್ಲಾ ಹಿರಿಯರೂ ‘ನಮ್ಮ ಕಾಲದಲ್ಲಿ ಹಾಗಿತ್ತು, ಹೀಗಿತ್ತು’ ಅನ್ನುವುದು ಮಾಮೂಲಿ. ಇಲ್ಲಿ ನರೇಂದ್ರರು ಅದನ್ನೇ ತಮ್ಮ ವಕ್ರದೃಷ್ಟಿಯಲ್ಲಿ ಹೇಳಿದ್ದಾರೆ. ಆಹಾ! ಐವತ್ತು ವರ್ಷಗಳ ಹಿಂದಿನ ಸವಿನೆನಪುಗಳು. ಹಳೆಯದಾದರೂ ಇನ್ನೂ ಬಾಯಿಚಪ್ಪರಿಸಿಕೊಳ್ಳುವಂತಹ ಉಪ್ಪಿನಕಾಯಿಯ ರುಚಿ! ಅಂದಿನ ಪ್ರಧಾನಿ ಇಂದಿರಾಜೀ ಅವರ ಮೇಲೆ ಯಾವುದೇ ಕನಿಕರ ತೋರಿಸದೆ ಚುಚ್ಚಿದ್ದಾರೆ.


ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ....!

ಅವರ ಮಂತ್ರಿಮಂಡಲದಲ್ಲಿದ್ದವರ ಹೀನಾಯ ಸ್ಥಿತಿಯನ್ನು ಎಷ್ಟು ಲೇವಡಿ ಮಾಡಬಹುದೋ ಅಷ್ಟು ಮಾಡಿದ್ದಾರೆ. ಇಂದಿರಾಜೀಯ ಹುಟ್ಟಡಗಿಸಲು ಉದಯವಾದ ವ್ಯಕ್ತಿ ಜಯಪ್ರಕಾಶ್ ನಾರಾಯಣ್. ಅವರ ಹಿಂದೆ ಮೊರಾರ್ಜಿ ದೇಸಾಯಿ, ಚರಣ್ ಸಿಂಗ್ ಮತ್ತಿತರರು. ನರೇಂದ್ರರ ವ್ಯಂಗ್ಯಚಿತ್ರಗಳಿಗೆ ಇವರುಗಳೇ ಪಾತ್ರಧಾರಿಗಳು. ಏನೇನೋ ಮೇಕಪ್ ಮಾಡಿ ಅವರನ್ನು ವೇದಿಕೆಗೆ ಕಳಿಸಿಬಿಡುವುದು ಇವರ ನಿತ್ಯದ ಕೆಲಸ. ‘ರಾಜಕೀಯ ವ್ಯಂಗ್ಯಚಿತ್ರಗಳಲ್ಲಿ ನಾಟಕದ ವಾತಾವರಣ ಸೃಷ್ಟಿ ಮಾಡು!’ ಎಂದು ಗುರು ಶಂಕರ್ ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸಲೇಬೇಕಲ್ಲ! ರಾಜಕೀಯ ನಾಯಕರನ್ನು ಮಹಿಳಾಮಣಿಗಳಾಗಿ ರಚಿಸುವ ಗುರುವಿನ ಶೈಲಿ ಶಿಷ್ಯನಲ್ಲೂ ಕರಗತವಾಗಿತ್ತು.


ಇಂದಿರಾಜೀ ಒಮ್ಮೆ ವಿರೋಧ ಪಕ್ಷಗಳಿಗೆ ‘ನೀವು ನಿಮ್ಮ ಪಕ್ಷಗಳನ್ನು ಗಟ್ಟಿಮುಟ್ಟಾಗಿಡಬೇಕು’ ಎಂದು ಸೂಚಿಸಿದ್ದರು. ಇದಕ್ಕೆ ನರೇಂದ್ರರ ಪ್ರತಿಕ್ರಿಯೆ.

ನರೇಂದ್ರರು ಆರಂಭಿಕ ಹಂತದಲ್ಲಿದ್ದುದರಿಂದಲೋ ಏನೋ ಅವರ ದಪ್ಪ ಗೆರೆಗಳಲ್ಲಿ ಸ್ವಲ್ಪ ಶಂಕರ್, ಇನ್ನು ಸ್ವಲ್ಪ ಲಕ್ಷ್ಮಣ್ ಕಾಣುತ್ತಾರೆ. ‘ಸಂಯುಕ್ತ ಕರ್ನಾಟಕ’ ಮತ್ತು ‘ಕನ್ನಡ ಪ್ರಭ’ ದ ನರೇಂದ್ರರನ್ನು ನೋಡಿದವರಿಗೆ ಈ ಸಂಕಲನ ‘ಅರೆ! ಇದು ನರೇಂದ್ರರ ವ್ಯಂಗ್ಯಚಿತ್ರಗಳೇ?’ ಎಂಬಷ್ಟು ಅಚ್ಚರಿಯಾಗಬಹುದು. ಆದರೆ ‘ಮೈ ಟೈಮ್ಸ್ ಮೈ ವ್ಯೂಸ್’ ನಲ್ಲಿ ಖ್ಯಾತ ವ್ಯಂಗ್ಯಚಿತ್ರಕಾರನೊಬ್ಬ ತನ್ನ ‘ಪಳಿಯುಳಿಕೆಗಳನ್ನು’ ಹೆಮ್ಮೆಯಿಂದ ತೋರಿಸುವ ಖುಷಿ ಕಾಣುತ್ತದೆ. ಓದುಗರಲ್ಲೂ ಅದೇ ಖುಷಿ ಮೂಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT