ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕು ಆರಿಸುವ ಚಿತ್ರಗಳು

Last Updated 1 ಏಪ್ರಿಲ್ 2018, 16:06 IST
ಅಕ್ಷರ ಗಾತ್ರ

ಎಲ್ಲರಿಗೂ ಆಗುವಂತೆ ಅವನಿಗೂ ಅವಳಿಗೂ ಅಂದರೆ ಅವರಿಗೂ ಅಲ್ಲಲ್ಲ ಅವರಿಬ್ಬರಿಗೂ ಮದುವೆಯಾಗಿಹೋಯಿತು. ಮದುವೆಯಾಗಲು ಅಂಥ ಅರ್ಹತೆಗಳೇನೂ ಬೇಕಾಗುವುದಿಲ್ಲವಲ್ಲ. ಅವನ ಹೆಸರು ನರಸಿಂಹ ಯಾನೆ ಸುಣ್ಣಸಂದ್ರದ ಹೋಟ್ಲು ನರಸಿಂಹ, ಅವಳ ಹೆಸರು ಶಾರದಾ ಯಾನೆ ನವಿಲುಗವಿಲಿನ ಶಾರದಾ.

ನವಿಲುಗವಿಲು ಅಂದರೆ ಒಂದು ಎಂಟು ಹತ್ತು ಮನೆಗಳಿರುವ ಕುಗ್ರಾಮ. ಹೆಚ್ಚಿನವರು ಹಾಸಲೂ ಇಲ್ಲದ ಹೊದೆಯಲೂ ಇಲ್ಲದ, ಅಷ್ಟೇ ಅಲ್ಲ ತಮ್ಮಲ್ಲಿ ಏನೂ ಇಲ್ಲ ಎಂಬುದು ಗೊತ್ತೂ ಇಲ್ಲದ ಮುಗ್ದರು. ಶಾರದಾಳ ತಂದೆ ಆ ಊರಿನ ಶ್ರೀರಂಗನಾಥಸ್ವಾಮಿ ದೇವಸ್ಥಾನದ ಅರ್ಚಕರಾದ ರಂಗಯ್ಯನವರು. ಭಕ್ತರಿಗೇ ಹೊಟ್ಟೆಗಿಲ್ಲದ ಮೇಲೆ ಇನ್ನು ಅವರ ದೇವರಿಗಾದರೂ ಏನಿದ್ದೀತು? ದೇವಸ್ಥಾನಕ್ಕೆಂದು ಸ್ವಲ್ಪ ಹೊಲವೂ ಇದ್ದದ್ದರಿಂದ ಹೇಗೋ ದಿನ ದೂಡಬಹುದಿತ್ತು. ಶಾರದಾಳ ಅಮ್ಮ ನಾಗವೇಣಿ ಕೈ ಹಿಡಿತದ ಹೆಂಗಸಾದ್ದರಿಂದ ಇದ್ದದ್ದರಲ್ಲಿ ನಿಭಾಯಿಸಿಕೊಂಡು ಹೋಗುತ್ತಿದ್ದಳು. ಧಾಳಾಧೂಳೀ ಮಾಡಿಬಿಡುತ್ತಾಳೆ ಎಂದು ಆಕೆ ಶಾರದಾಳನ್ನು ಅಡುಗೆ ಕೋಣೆಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಇದು ನಮ್ಮ ಶಾರುವಿಗೆ ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಮಾತಾಡುವ ಚಟ ವಿಪರೀತವಿದ್ದುದರಿಂದ ಬಟ್ಟೆ ಒಗೆಯಲೆಂದೋ, ಪಾತ್ರೆ ತೊಳೆಯಲೆಂದೋ, ನೀರು ತರಲೆಂದೋ ಮನೆ ಹೊರಗೆ ಕಾಲಿರಿಸಿದಳೆಂದರೆ ಮತ್ತೆ ರಾತ್ರಿಯೇ ಮನೆಗೆ ವಾಪಾಸ್ಸಾಗುತ್ತಿದ್ದುದು.

‘ಬಟ್ಟೆ ತೆಕ್ಕೊಂಡ್ ಬಾರೇ ಲಚ್ಚೀ... ಒಗ್ದು ಒಣಗಿಸ್ಕೊಂಡ್ ಬರಾಣ’ ಎಂದು ಶಾರು ಯಾರನ್ನಾದರೂ ಕೂಗಿ ಹೇಳಿದಳೆಂದರೆ ಮುಗಿಯಿತು. ಅದರ ಅರ್ಥ ಎಲ್ಲರಿಗೂ ಆಗುತ್ತಿತ್ತು. ಮನೆಯೊಳಗಿನ ಕೆಲವು ಕಣ್ಣುಗಳು ಹೋಗುವುದು ಬೇಡ ಎಂದು ಸನ್ನೆ ಮಾಡಿದರೆ, ಈ ಆರುವರ ಉಡ್ಗಿ ಮದುವೆ ಆದ್ಮೇಲೆ ಏನ್ಮಾಡ್ತದೋ? ಎಂದು ಯಾವುದಾದರು ಒಂದು ಕವಳ ತುಂಬಿದ ಬಾಯಿ ಹೇಳದೆ ಉಳಿಯುತ್ತಿರಲಿಲ್ಲ. ‘ಲಚ್ಚೀ ಬಾರೆ ಹೊತ್ತಾಯ್ತು’ ಪುನಃ ಶಾರುವಿನ ದನಿ ಜೋರಾದರೆ, ‘ಕೆಲ್ಸ ಐತೆ ನಾನ್ ಬರಾಕಿಲ್ಲ... ಅಂತ ಹೇಳೇ’ ಎಂದು ಹಿನ್ನೆಲೆ ದನಿಯೊಂದು ಉಸುರುತ್ತಿತ್ತು. ‘ಓ ಎಲ್ಲ ಗೊತ್ತಾಯ್ತು ಬುಡು, ನಿನೊಬ್ಳೇನಾ ಇರೋದು ಈ ಊರ‍್ನಾಗೆ’ ಎಂದು ಮೂತಿ ತಿರುವಿ ಹೊರಟುಹೋಗುತ್ತಿದ್ದಳು. ಆದರೂ ಶಾರುವಿಗೆ ಬಾಯಿತುಂಬ ಮಾತಾಡಲು ದೇವರು ಒಬ್ಬರಲ್ಲದಿದ್ದರೆ ಇನ್ನೊಬ್ಬರನ್ನಾದರೂ ಒದಗಿಸಿಕೊಡುತ್ತಿದ್ದ. ‘ಏ ಪಾಚಿ ಹುಣ್ಸೆಬೀಜ ತರ‍್ತೀನಿ ಅಂತ ಹೇಳ್ತಾ ಇದ್ಯಲ್ಲೇ ತಂದಿದೀಯ?’ ಅಂತಲೋ, ‘ಹೊಳೆಯಿಂದ ಕಲ್ಲು ತಂದಿದೀನಿ ಕಲ್ಲಾಟ ಆಡೋಣ ಬರ‍್ತೀಯಾ?’ ಎಂದೋ ಏನೋ ಒಂದು ನೆಪ ಹೇಳಿ ತನ್ನ ಓರಗೆಯವರನ್ನು ಆಟಕ್ಕೆ ಕರೆದು ಅವರನ್ನು ಬಾಯಿ ತೆರೆಯಲು ಬಿಡದಂತೆ ತಾನೇ ಮಳೆಗಾಲದ ಕಪ್ಪೆಯಂತೆ ವಟಗುಟ್ಟುತ್ತಿದ್ದಳು. ಏನೇ ಆದರೂ ಮಾತಾಡದೆ ಇರುವುದು ಮಾತ್ರ ಅವಳಿಂದಾಗುವ ಕೆಲಸವಾಗಿರಲಿಲ್ಲ.

ಹೀಗೆ ಇದ್ದಂತಹ ಶಾರುವಿಗೆ ಹತ್ತನೇ ತರಗತಿ ಮುಗಿದ ಕೂಡಲೆ ಮದುವೆಯೂ ಆಗಿಹೋಯಿತು. ಬಾಯಿಚಪಲ ಅಂದರೆ ಮಾತಾಡುವ ಚಪಲದೊಂದಿಗೆ ರುಚಿರುಚಿಯಾದ ತಿಂಡಿ ತಿನಿಸುಗಳನ್ನು ಮೆಲ್ಲುವುದೂ ಶಾರುವಿಗೆ ಇಷ್ಟವಾದ ವಿಷಯವೇ ಆಗಿದ್ದರಿಂದ ಹೋಟ್ಲಿನ ಗಂಡು ಎಂದು ಗೊತ್ತಾದ ಕೂಡಲೆ ಹಿಂದು ಮುಂದು ನೋಡದೆ ಒಪ್ಪಿಗೆ ಕೊಟ್ಟುಬಿಟ್ಟಳು. ‘ಈ ಅಮ್ಮ ಮಾಡುವ ಗೊಡ್ಡು ಸಾರು ತಿಂದು ತಿಂದು ನಾಲಗೆ ಜಡ್ಡುಗಟ್ಟಿಹೋಗಿದೆ ಕಣೆ, ಮದ್ವೆ ಆದ್ಮೇಲೆ ಹೋಟ್ಲಿನ ರುಚಿ ರುಚಿಯಾದ ತಿಂಡಿಗಳನ್ನೆಲ್ಲ ತಿನ್ಬೋದು..ಪ್ಚ್ ಪ್ಚ್..’ ಎಂದು ಗೆಳತಿಯರೆದುರು ಅಭಿನಯಿಸಿ ತೋರಿಸುತ್ತಿದ್ದಳು. ದೇವರು ಒಂದು ಕೊಟ್ಟರೆ ಇನ್ನೊಂದು ಕಿತ್ತುಕೊಳ್ತಾನೆ ಎನ್ನುವ ಹಾಗೆ ಮದುವೆಯಾದ ಮೇಲೆ ಶಾರುವಿನ ತಿನ್ನುವ ಚಪಲವೇನೋ ತೀರುತ್ತಿತ್ತು. ಆದರೆ ತನ್ನ ಗಂಡ ಮಾತೇ ಇಲ್ಲದ ಮೂಕಪ್ಪಸ್ವಾಮಿ ಎಂಬುದು ಮಾತ್ರ ಅವಳಿಗೆ ದುಃಖವನ್ನೇ ತರಿಸುತ್ತಿತ್ತು. ಎಷ್ಟುಬೇಕೋ ಅಷ್ಟು ಮಾತ್ರ ಮಾತು. ಇವರ‍್ಯಾಕೆ ಹೀಗೆ ಮಾತನ್ನು ತಕ್ಕಡಿಯಲ್ಲಿಟ್ಟು ತೂಗಿ ತೂಗಿ ಆಡ್ತಾರೆ? ಎಂದು ಕೆಲವೊಮ್ಮೆ ಅವನನ್ನೇ ಆಶ್ಚರ್ಯದಿಂದ ನೋಡುತ್ತಿದ್ದಳು. ‘ನಾಳೆ ಬರೋವಾಗ ಸಾಲ್ದೋಸೆ ತನ್ರೀ..’ ಎಂದು ಆಕೆ ಹೇಳಿದರೆ ಹೂಂ ಎಂದಷ್ಟೇ ಉತ್ತರಿಸುತ್ತಿದ್ದ. ‘ತರ‍್ತೀರಲ್ಲ ಮತ್ತೆ’ ಎಂದರೆ ಹೂಂ ಎಂದು ಮತ್ತೆ ಹೂಂಗುಟ್ಟುತ್ತಿದ್ದ. ಸ್ವಲ್ಪ ಮಾತಾಡಿದ್ರೆ ಇವ್ರ್ ಗಂಟೇನು ಹೋಗುತ್ತಪ್ಪಾ ಎಂದು ಶಾರು ಒಳಹೋಗಿ ತನ್ನಷ್ಟಕ್ಕೆ ಗೊಣಗಿಕೊಳ್ಳುತ್ತಿದ್ದಳು.

ಈ ಸುಣ್ಣಸಂದ್ರಕ್ಕೆ ಬಂದಲ್ಲಿಂದ ನಮ್ಮ ಶಾರುವಿಗೆ ಏನೋ ಒಂದು ಉದಾಸೀನ ಭಾವ. ಹತ್ತಿರದ ಮನೆಯವರು ಬೆಳಗ್ಗೆ ರಂಗೋಲೆ ಇಟ್ಟು ಬಾಗಿಲು ಮುಚ್ಚಿಬಿಟ್ಟರೆ ಮತ್ತೆ ಇಡೀ ಮನೆಯೇ ಈ ಭೂಮಿಯ ಮೇಲೆ ಇಲ್ಲವೆಂಬಂತೆ. ಒಂದು ಸಲ ಹೊಸ್ತಿಲು ತೊಳೆಯುತ್ತಿರುವಾಗ ಶಾರು ಓಡಿ ಹೋಗಿ ಆಚೆ ಮನೆಯಾಕೆಯನ್ನು ಮಾತಾಡಿಸಲು ಪ್ರಯತ್ನಿಸಿದ್ದುಂಟು. ‘ಏನ್ರೀ ರಂಗೋಲೆ ಇಡ್ತಾ ಇದ್ದೀರಾ?’ ಅಂತ ನಗುನಗುತ್ತಲೇ ಕೇಳಿದ್ದುಂಟು. ಆದರೆ ಆಕೆ ಮಾತ್ರ ನರಸಿಂಹನ ಸೋದರ ಸೊಸೆಯೋ ಎಂಬಂತೆ ಕೇವಲ ಹೂಂಗುಟ್ಟಿ ಒಳಹೋಗಿಬಿಟ್ಟಿದ್ದಳು. ಏನೋಪ್ಪ ಈ ಊರಲ್ಲಿ ಎಲ್ರೂ ಹೂಂಗುಟ್ಟುವವರೇ ಯಾರಿಗೂ ಇಲ್ಲಿ ಬಾಯಿಯೂ ಬರಲ್ಲ ಮಾತೂ ಬರಲ್ಲ... ಅಂದುಕೊಂಡು ಅವಳ ಮನೆಯ ಮುಚ್ಚಿದ ಬಾಗಿಲನ್ನೇ ನೋಡುತ್ತಾ ನಿಂತಿದ್ದಳು ಶಾರು. ಆ ನಂತರ ಅವಳು ಮನೆಗೆ ಬರುವ ಬೀಡಾಡಿ ನಾಯಿಗಳಲ್ಲಿ, ಉಂಡಾಡಿ ಬೆಕ್ಕುಗಳಲ್ಲಿ, ಬೀದಿ ಬಾಗಿಲಲ್ಲಿ ನಿಂತು ಆಚೆ ಈಚೆ ಹೋಗುವವರಲ್ಲಿ, ಯಾರೂ ಸಿಕ್ಕದಿದ್ದಾಗ ತನ್ನ ತವರುಮನೆದೇವರಾದ ನವಿಲುಗವಿಲೆಯ ಶ್ರೀರಂಗನಾಥನಲ್ಲಿ ಮಾತಾಡಿಯೇ ಮಾತಾಡಿದಳು. ಗಂಡನ ಸಂಬಂಧಿಕರೆಲ್ಲ ಹತ್ತಿರವೇ ಇದ್ದರೂ ಅತ್ತೆಯವರಾಗಲೀ, ನಾದಿನಿಯರಾಗಲೀ ಯಾರು ಇವಳಲ್ಲಿ ಮಾತಾಡಲು ಇಷ್ಟಪಡುತ್ತಿರಲಿಲ್ಲ. ಈ ನಡುವೆ ಎರಡು ಮಕ್ಕಳೂ ಆಗಿ, ಈಗ ಮಕ್ಕಳನ್ನು ಆಡಿಸುವ ನೆಪದಲ್ಲೋ, ಅವುಗಳಿಗೆ ಊಟ ಮಾಡಿಸುವ ನೆಪದಲ್ಲೋ ಬೀದಿ ಬಾಗಿಲಲ್ಲಿ ನಿಲ್ಲಲು ಅವಕಾಶವಾಗುತ್ತಿತ್ತು. ‘ಊರಿಂದ ಬರ‍್ತಾ ಇದ್ದೀರೇನೋ’ ಅಂತಲೋ, ‘ಮಗ್ಳು ಚೆನ್ನಾಗಿದ್ದಾಳಾ?’ ಅಂತಲೋ, ‘ಬಸ್‌ರಿ ಅಲ್ವಾ, ನೋಡೋಕೋಗಿದ್ರೇನೋ?’ ಅಂತ ಕೆಲವೊಮ್ಮೆ ಪ್ರಶ್ನೆ ಉತ್ತರ ಎರಡನ್ನು ತಾನೇ ಹೇಳಿಬಿಡುತ್ತಲೋ, ಇನ್ನು ಕೆಲವೊಮ್ಮೆ ಸೊಪ್ಪಿನ ತಾಯವ್ವಳಲ್ಲೋ, ತರಕಾರಿ ಸುಬ್ಬನಲ್ಲಿ ಕಷ್ಟ ಸುಖ ಮಾತಾಡುತ್ತಲೋ, ಅಂತು ಇಂತು ಹೇಗೋ ಏನೋ ಒಂದು ದಿನದಲ್ಲಿ ತಾನು ನವಿಲುಗವಿಲೆಯಲ್ಲಿ ಮಾತಾಡಿದಷ್ಟು ಮಾತನ್ನು ಇಲ್ಲಿಯೂ ಆಡಿಯೇ ಆಡುತ್ತಿದ್ದಳು. ಬರೀ ಆಡುತ್ತಿದ್ದಳು ಅಷ್ಟೆ, ಬಾಲ್ಯದ ಆ ಸುಖ ಸಖ್ಯಗಳು ಜೀವನದಲ್ಲಿ ಮತ್ತೆ ಸಿಗಲು ಸಾಧ್ಯವೇ?

ಮೊದಲಿಂದಲೂ ನರಸಿಂಹನಿಗೆ ಹೋಟ್ಲಿನಲ್ಲಿ ಭಾರೀ ವ್ಯಾಪಾರವೇನೂ ಆಗುತ್ತಿರಲಿಲ್ಲ. ಹಿರಿಯರ ಮನೆ ಅಂತ ಒಂದು ಇದ್ದದ್ದರಿಂದ ಜೀವನ ಸರಿದೂಗಿಸಬಹುದಿತ್ತು ಅಷ್ಟೆ. ಗರುಡಗಂಬದಂತೆ ನಿಂತು ಇಷ್ಟು ವರ್ಷ ವ್ಯಾಪಾರಮಾಡಿದ್ದ ನರಸಿಂಹನಿಗೆ ಇದ್ದಕ್ಕಿದ್ದಂತೆ ಒಂದು ದಿನ ಎದೆಯಲ್ಲಿ ಕಾಣಿಸಿಕೊಂಡ ನೋವು ಆತನನ್ನು ಗಲ್ಲ ಹತ್ತದಂತೆ ಮಾಡಿತ್ತು. ಕನಿಷ್ಠ ಆರು ತಿಂಗಳುಗಳಾದರೂ ವಿಶ್ರಾಂತಿಬೇಕೆಂದು ವೈದ್ಯರು ಹೇಳಿದ್ದರು. ಇನ್ನೇನು ದಾರಿ? ದೂರದ ಸಂಬಂಧಿ ಉಂಡಾಡಿ ಹುಡುಗ ವಿಷ್ಣುವನ್ನು ಕರೆಸಲಾಯಿತು. ಅವನು ತನ್ನ ಕಿಸೆಗೆ ಬೇಕಾದಷ್ಟು ಕಾಸು, ಹೊಟ್ಟೆಗೆ ಬೇಕಾದಷ್ಟು ತಿನಿಸು ಮಾಡಿಕೊಂಡು ದೇಹ ಬೆಳೆಸಿದನೇ ಹೊರತು ವ್ಯಾಪಾರದಲ್ಲೇನು ಏಳಿಗೆ ತೋರಿಸಲಿಲ್ಲ. ಕೊನೆಗೆ ಬೇರೆ ದಾರಿಯಿಲ್ಲದೆ ಶಾರುವೇ ಗಲ್ಲಾಪೆಟ್ಟಿಗೆ ಹತ್ತಬೇಕಾಯಿತು.

ನವಿಲುಗವಿಲೆಯ ರಂಗನಾಥಸ್ವಾಮಿಯ ಸಣ್ಣ ಫೋಟೊ ಒಂದನ್ನು ಗೋಡೆಗೆ ನೇತು ಹಾಕಿ ಕೈ ಮುಗಿದು ಕಾಪಾಡಪ್ಪ ತಂದೆ, ತಪ್ಪಾಗದ ಹಾಗೆ ನೋಡಿಕೋಪ್ಪಾ ಎಂದು ಶಾರು ಭಕ್ತಿಯಿಂದ ಬೇಡಿಕೊಂಡಳು. ವಿಷ್ಣುವಿನಿಂದ ಈಗಾಗಲೇ ಸಾಕಷ್ಟು ಹಾನಿಯಾಗಿತ್ತು. ಇಬ್ಬರು ನಿಷ್ಠಾವಂತ ಕೆಲಸಗಾರರು ಇವನ ಪುಂಡಾಟಿಕೆಯಿಂದ ಬೇಸತ್ತು ನಗರದ ಹೋಟ್ಲಿನಲ್ಲಿ ಕೆಲಸ ಹಿಡಿದು ಹೊರಟುಹೋಗಿದ್ದರು. ಅವರ ಜಾಗಕ್ಕೆ ಸೊಪ್ಪಿನ ತಾಯವ್ವನ ಪರಿಚಯದ ಇಬ್ಬರು ಹೆಂಗಸರನ್ನು ನೇಮಿಸಿಕೊಳ್ಳಲಾಯಿತು. ಅವರಿಗೆ ಕೆಲಸ ಮೂಲದಿಂದ ಕಲಿಸಬೇಕಾಗಿತ್ತು. ಪಟಪಟನೆ ಮಾತಾಡುತ್ತಾ ಎಲ್ಲರ ವಿಶ್ವಾಸಗಳಿಸಿಕೊಳ್ಳುವುದು ಶಾರುವಿಗೆ ಕಷ್ಟವಾಗಲೇ ಇಲ್ಲ. ಒಂದು ತಿಂಗಳಲ್ಲೇ ಯಜಮಾನ್ರಿಗಿಂತ ಅಮ್ಮಾವ್ರೇ ಆಗಬಹುದು ಎಂಬ ತೀರ್ಮಾನಕ್ಕೆ ಎಲ್ಲರು ಬಂದಿದ್ದರು. ಬೆಳಗ್ಗೆ ಬಂದು ‘ರಾಮಣ್ಣಾ ಹೇಗಿದ್ದೀಯಾ? ನಿನ್‌ಹೆಣ್ತಿ ಜ್ವರ ವಾಸಿಯಾಯ್ತಾ?’ ಎಂದು ಕಷ್ಟದಲ್ಲಿರುವ ಯಾರನ್ನಾದರೂ ವಿಚಾರಿಸಿಕೊಳ್ಳುವಲ್ಲಿಂದ ಹಿಡಿದು, ಕತ್ತಲಾಗಿ ‘ನಾನು ಬರ‍್ತೀನ್ ಕಣೋ ಜೋಪಾನ’ ಎಂದು ಹೋಟ್ಲಿನಲ್ಲಿ ಮಲಗುವ ಈರನಲ್ಲಿ ಹೇಳುವವರೆಗೂ ಅವಳು ಮಾತಾಡುತ್ತಿದ್ದಳು. ಎಲ್ಲರನ್ನೂ ಕಕ್ಕುಲಾತಿಯಿಂದ ವಿಚಾರಿಸಿಕೊಂಡೇ ಮನೆಗೆ ಹೊರಡುತ್ತಿದ್ದಳು. ಗಿರಾಕಿಗಳು ಇಲ್ಲದಾಗ, ಆದಷ್ಟು ಎಲ್ಲರ ಬಳಿ ಹೋಗಿ ಮಾತಾಡಿ ಉತ್ಸಾಹ ತುಂಬುತ್ತಿದ್ದಳು. ಹನುಮಂತಪ್ಪನ ಸಾಲ ಹನುಮಂತನ ಬಾಲದಂತೆ ಬೆಳೆಯುತ್ತಿದ್ದುದನ್ನು ನೋಡಿ ಪಗಾರದಲ್ಲಿ ಸ್ವಲ್ಪ ಹಿಡಿದುಕೊಂಡು ಉಳಿದುದನ್ನು ಅವನ ಹೆಂಡತಿಯನ್ನು ಕರೆಸಿ ಅವಳ ಕೈಯಲ್ಲಿಡುತ್ತಿದ್ದಳು. ಕೆಲವೊಮ್ಮೆ ಹಣ ಕೊಡಲು ಬಂದ ಗ್ರಾಹಕರಲ್ಲೂ ಸುಖದುಃಖ ಮಾತಾಡುವುದಿತ್ತು. ಅವರ ಸಮಸ್ಯೆಗಳಿಗೆ ತನಗೆ ತೋಚಿದ ಪರಿಹಾರ ಹೇಳುವುದಿತ್ತು. ಇದರಿಂದ ಹೋಟ್ಲಿಗೆ ಬರುವ ಗಿರಾಕಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿತ್ತು. ಸುಣ್ಣಸಂದ್ರ ತಾಲೂಕು ಕೇಂದ್ರವಾದ್ದರಿಂದ ಸುತ್ತಮುತ್ತಲಿನ ಹಳ್ಳಿಯವರೆಲ್ಲ ಏನಾದರೊಂದು ಕೆಲಸಕ್ಕೆ ಬರುತ್ತಿದ್ದರು. ಬಂದವರು ಈಗ ಶಾರುವಿನ ಹೋಟ್ಲಿನಲ್ಲಿ ಟೀ ಕುಡಿಯುವುದನ್ನು ತಪ್ಪಿಸುತ್ತಿರಲಿಲ್ಲ. ‘ಓ ಏನ್ ಪುಟ್ಟಣ್ಣ ಮಗ್ಳ ಮದುವೆ ಜವ್ಳಿಗ್ ಬಂದ್ಯಾ?’ ಅಂತ ಶಾರು ಕೇಳಿದರೆ ಸಾಕು ಆತ ಮದುವೆಯ ವಿಷಯವನ್ನೆಲ್ಲ ಚಾಚೂ ತಪ್ಪದೆ ಹೇಳಿ ಆಹ್ವಾನ ಪತ್ರಿಕೆ ಕೊಟ್ಟೇ ಹೋಗುತ್ತಿದ್ದ. ಬರಬರುತ್ತಾ ಶಾರು ಶಾರದಮ್ಮ ಆಗಿ, ಶಾರದಮ್ಮ ಹೊಟ್ಲು ಶಾರದಮ್ಮ ಆಗಿ ಸುತ್ತಮುತ್ತಲಿನ ಹಳ್ಳಿಯಲೆಲ್ಲ ಪ್ರಸಿಧ್ಧವಾಗಿ ಹೋದಳು. ಯಾವಾಗಲು ಹೋಟ್ಲಿನಲ್ಲಿ ಜನವೋ ಜನ, ವ್ಯಾಪಾರವೋ ವ್ಯಾಪಾರ.

***

ಒಂದು ದಿನ ತಾಯವ್ವ ಶಾರುವನ್ನು ಕಾಣಲೆಂದು ಹೋಟ್ಲಿಗೆ ಬಂದಳು. ಗ್ರಾಹಕರಲ್ಲಿ ಸಾಸಿವೆ ಸಿಡಿದಂತೆ ಚಟಪಟನೆ ಮಾತಾಡುತ್ತಿದ್ದ ಶಾರುವನ್ನು ನೋಡಿ ಅವಳ ಮಾತು ಮುಗಿಯಲೆಂದು ದೂರ ನಿಂತು ಕಾಯತೊಡಗಿದಳು. ಜನ ಒಬ್ಬರಾದ ಮೇಲೆ ಒಬ್ಬರು ಬರುತ್ತಿದ್ದಂತೆ ಶಾರುವಿನ ಮಾತು ಮುಂದುವರಿಯತ್ತಲೇ ಇತ್ತು. ಕಾದು ಕಾದು ಸಾಕಾಗಿ ಕೊನೆಗೆ ಅವಳಿಗೆ ಕಾಣುವಂತೆ ನಿಂತುಕೊಂಡಳು. ತಾಯವ್ವನನ್ನು ಕಂಡ ಕೂಡಲೇ, ‘ಓ ತಾಯವ್ವ ಬಾ ಬಾ ತಿಂಡಿ ತಿಂತೀಯಾ? ಟೀ ಕುಡಿತೀಯಾ?’ ಎಂದು ಉಪಚಾರ ಮಾಡಿದಳು. ‘ಬೇಡ ಸಾರವ್ವ’ ಎಂದಳು. ‘ಹಾಗಿದ್ರೆ ಕೂತ್ಕೊ, ಸ್ವಲ್ಪ ಹೊತ್ತು.... ಮಾತಾಡಿ ಹೋಗುವಿಯಂತೆ’ ಎಂದಳು ಶಾರು. ಅಷ್ಟೊತ್ತಿಗೆ ಹೋಟ್ಲಿನ ಜಂಗುಳಿ ಕೊಂಚ ಕಡಿಮೆಯಾಗಿತ್ತು. ತಾಯವ್ವ ತನ್ನ ಚೀಲದಿಂದ ಎರಡು ಪಾಸ್ ಪೋರ್ಟ್ ಅಳತೆಯ ಫೋಟೊಗಳನ್ನು ತೆಗೆದು ಶಾರುವಿನ ಎದುರು ಇರಿಸಿದಳು. ‘ಏನ್ ತಾಯವ್ವ ಇದು?’

‘ಇದು ನಮ್ಮಗೀನ ಕೇಳ್ಕೊಂಡ್ ಬಂದ ಗಂಡುಗಳ ಪಟ ಕಣವ್ವಾ, ಇವ್ರಿಬ್ರ್ ಮನೆಯವ್ರೂ ಹೊಲ ಗಿಲ ಮಾಡ್ಕೊಂಡು ಅನುಕೂಲವಾಗೇ ಅವ್ರೆ. ಎಲ್ಲ ಇಚಾರ‍್ಸಿದಿನಿ, ಈಗ ನೀವೇ ಯೋಳ್ಬೇಕು ಸಾರವ್ವ, ಇದ್ರಲ್ಲಿ ಯಾರು...’

‘ಮಗು ಅಂದ್ರೆ ಮೊಮ್ಮಗಳಾ.. ಇವ್ಳು ನಿನ್ಜೊತೆ ಸೊಪ್ಪಿಗ್ ಬರ‍್ತಾ ಇದ್ದವ್ಳಾ? ಹಾ.. ಸತ್ಯ ಅಲ್ವಾ ಹೆಸ್ರು?’

‘ಅದೇ ಮೊಗ ಕಾಣವ್ವ. ವಸಿ ನೋಡಿ ಯೋಳಿ’

ಶಾರು ಎರಡು ಚಿತ್ರಗಳನ್ನೂ ಸೂಕ್ಷ್ಮವಾಗಿ ಗಮನಿಸಿದಳು. ಇಬ್ಬರು ತಕ್ಕಮಟ್ಟಿಗೆ ಲಕ್ಷಣವಾಗಿಯೇ ಇದ್ದರು. ಯಾರನ್ನು ಆಯ್ಕೆ ಮಾಡುವುದು? ಒಂದೊಮ್ಮೆ ನಾನು ಆಯ್ಕೆ ಮಾಡಿ ಮುಂದಕ್ಕೆ ಏನಾದರು ಆಗಬಾರದ್ದು ಆದರೆ... ಈ ಉಸಾಬರಿಗಳೆಲ್ಲ ನನಗ್ಯಾಕೆ ಅಂದುಕೊಂಡು... ‘ಇಬ್ರು ಚೆನ್ನಾಗಿಯೇ ಇದಾರಲ್ಲ ತಾಯವ್ವಾ’ ಎಂದಳು.

‘ಅದೇ ಈಗ ಕಷ್ಟಕ್ಕ್ ಬಂದಿರೋದು ಕಣವ್ವಾ’

‘ನಿನ್ನ ಮೊಮ್ಮಗ್ಳನ್ನೇ ಕೇಳು. ಅವ್ಳೇನ್ ಹೇಳ್ತಾಳೋ ಹಾಗೆ...’

‘ಅಯ್ಯೋ ಅದಕ್ಕೇನ್ ತಿಳೀತದವ್ವಾ... ನೀವೇ ಒಂದು ಯೋಳ್ಬುಡಿ, ಸಿವಾಂತ ಮದುವೆ ಮಾಡಿ ಕಳುಸ್‌ಬುಡ್ತೀನಿ... ತಾಯಿಲ್ದ ತಬ್ಲೀನ ಎಷ್ಟು ದಿನಾ ಅಂತ..’ ಎಂದು ಸೆರಗಿನ ತುದಿಯಲ್ಲಿ ಕಣ್ಣೊರೆಸಿಕೊಂಡಳು.

ಏನಾದರೂ ಇವಳು ಬಿಡುವವಳಲ್ಲ ಎಂದು ಶಾರು ಪುನಃ ಒಮ್ಮೆ ಫೋಟೊಗಳ ಮೇಲೆ ಕಣ್ಣಾಡಿಸಿದಳು. ಇಬ್ಬರಲ್ಲು ಅನೇಕ ಸಾಮ್ಯತೆಗಳಿದ್ದರೂ ಒಬ್ಬನ ಕಣ್ಣುಗಳಲ್ಲಿ ಕೊಂಚ ನೈರಾಶ್ಯ ಭಾವವು ಇಣುಕುತ್ತಿದ್ದಂತೆ ಕಂಡಿತು. ‘ದೇವರೇ.. ಸ್ವಾಮೀ... ನವಿಲುಗವಿಲು ರಂಗನಾಥ ಆ ಮಗುವಿಗೆ ಒಳ್ಳೆಯದನ್ನೇ ಮಾಡಪ್ಪಾ ತಂದೆ’ ಎಂದು ಮನಸ್ಸಿನಲ್ಲೇ ಪ್ರಾರ್ಥಿಸಿ ನಿರಾಶೆಯ ಕಣ್ಣುಗಳ ಚಿತ್ರವನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ತೆಗೆದು ತಾಯವ್ವನ ಕೈಯಲ್ಲಿರಿಸಿದಳು.

‘ಬೋ ಒಳ್ಳೆದಾಯ್ತು ಕಣವ್ವ.. ದೇವ್ರು ನಿಮ್ನ ಚೆಂದಾಕಿಟ್ಟಿರ‍್ಲಿ..’ ಎನ್ನುತ್ತಾ ಚಿತ್ರಗಳನ್ನು ಚೀಲದಲ್ಲಿ ತುಂಬಿಸಿಕೊಂಡ ತಾಯವ್ವ ಶಾರು ತರಿಸಿಕೊಟ್ಟ ಟೀ ಕುಡಿದು ಹೊರಟುಹೋದಳು. ‘ಇನ್ನು ಈ ರೀತಿಯ ಪರೀಕ್ಷೆಗಳನ್ನು ನನ್ನೆದುರು ಒಡ್ಡಬೇಡ ದೇವರೇ’ ಎಂದು ರಂಗನಾಥ ಸ್ವಾಮಿಯ ಪಟಕ್ಕೆ ಕೈ ಮುಗಿದಳು ಶಾರು.

ತಾಯವ್ವನ ಮೊಮ್ಮಗಳ ಮದುವೆ ಚಂದದಲ್ಲಿ ನಡೆಯಿತು. ಶಾರು ಐನೂರರ ಎರಡು ನೋಟುಗಳನ್ನು ತಾಯವ್ವನ ಕೈಗಿಟ್ಟು, ‘ಇಟ್ಕೊ ಅಡ್ಡ ಖರ್ಚಿಗಾಗುತ್ತೆ’ ಎಂದಿದ್ದಳು. ಮದುವೆ ನಡೆದು ಮೊಮ್ಮಗಳನ್ನು ಕಳುಹಿಸಿಕೊಟ್ಟು ಇನ್ನೂ ಒಂದು ವಾರ ಆಗಿತ್ತಷ್ಟೆ, ಅಷ್ಟರಲ್ಲೇ ಒಂದು ಸುದ್ದಿ ತಾಯವ್ವನ ಕಿವಿಗೆ ಬಿದ್ದಿತ್ತು. ಅದೆಂದರೆ ಸತ್ಯಳನ್ನು ನೋಡಲು ಬಂದಿದ್ದ ಇನ್ನೊಂದು ಗಂಡು ಯಾವುದೋ ಹಳೆಯ ಕಳವಿನ ಕೇಸೊಂದರಲ್ಲಿ ಸಿಕ್ಕಿ ಹಾಕಿಕೊಂಡು ಜೈಲುಪಾಲಾಗಿದ್ದಾನೆ ಎಂದು. ಆ ದಿನ ಇಡೀ ತಾಯವ್ವ ತನ್ನ ಮನೆ ದೇವತೆಯಾದ ಚೌಡಿಗೆ ಕೈ ಮುಗಿದದ್ದೇ ಮುಗಿದದ್ದು, ಹರಕೆ ಹೊತ್ತದ್ದೇ ಹೊತ್ತದ್ದು. ಸಂಜೆಯಾಗುತ್ತಲೆ ಇದೇ ಖುಷಿಯಲ್ಲಿ ಕಂಠಮಟ್ಟ ಕುಡಿದು ಬಾಯಿಗೆ ಬಂದಂತೆ ಮಾತಾಡತೊಡಗಿದಳು. ‘ಸಾರವ್ವ ಓ ಸಾರವ್ವ ನೀನು ದೇವತೆ ಕಣವ್ವ ದೇವತೆ... ಆವತ್ತು ನೀನು ನಮ್ಮಗೀಗೆ ಒಳ್ಳೆ ಗಂಡನ್ನೇ ತೋರ್ಸಿಬಿಟ್ಟೆ. ಇಲ್‌ದಿದ್ರೆ ನನ್ಮೊಗ ಈ ಒತ್ತು ಜೈಲ್ನತ್ರ ಕುಂತ್‌ಗೊಂಡು ಲಬೊಲಬೋ ಅಂತ ಬಾಯಿ ಬಾಯಿ ಬಡ್ಕೊಬೇಕಾಗಿತ್ತು. ಸಾರವ್ವ ಓ ಸಾರವ್ವ ಕೇಳ್ಸ್‌ತೈತ ನಾನ್ ಯೋಳೋದು... ನೀನಿಲ್‌ದಿದ್ರೆ ನನ್ ಮೊಗ ಲಬೋ ಲಬೋ ಅಂತ..... ಲಬೊ ಲಬೊ ಅಂತ...’ ಹೀಗೆ ಹೇಳಿದ್ದನ್ನೇ ಹೇಳುತ್ತಾ ರಾತ್ರಿ ಹನ್ನೆರಡರವರೆಗೂ ತಾಯವ್ವನ ಬೀದಿ ಪ್ರಹಸನ ನಡೆದಿತ್ತು. ಅಂತೂ ವಿಷಯ ಊರಿನವರಿಗೆಲ್ಲ ಗೊತ್ತಾಯ್ತು. ಮರುದಿನ ಬೆಳಗ್ಗೆ ಕೆಲವರು ಬಂದು ಹೆಚ್ಚುವರಿಯಾಗಿ ವಿಚಾರಿಸಿಕೊಂಡು ಹೋದರು. ತಾಯವ್ವ ಶಾರುವಿಗೂ ವಿಷಯ ಮುಟ್ಟಿಸಿದಳು. ಶಾರುವಿಗೆ ಒಂದು ಸಲಕ್ಕೆ ಬಚಾವಾದೆ ಅನಿಸಿತು. ಮುಂದೆ ಇನ್ನೇನು ಕಾದಿದೆಯೋ ದೇವರಿಗೇ ಗೊತ್ತು ಎಂದುಕೊಳ್ಳುತ್ತಾ, ರಂಗನಾಥ ಸ್ವಾಮಿಯ ಪಟಕ್ಕೆ ಮತ್ತೊಮ್ಮೆ ಕೈ ಮುಗಿದಳು.

ಇದೆಲ್ಲ ಆಗಿ ಒಂದು ವಾರವಾಗಿತ್ತಷ್ಟೆ. ಗಂಡ ಹೆಂಡಿರಿಬ್ಬರು ಶಾರುವನ್ನು ಹುಡುಕಿಕೊಂಡು ಹೋಟ್ಲಿಗೆ ಬಂದಿದ್ದರು. ಚೀಲದಲ್ಲಿದ್ದ ಏಳೆಂಟು ಫೋಟೊಗಳನ್ನು ತೆಗೆದು ಅವಳೆದುರು ಹರಡಿ, ‘ಇದ್ರಲ್ಲಿ ಒಂದು ಆರ‍್ಸಿ ಕೊಡವ್ವ, ನಿನ್ನ ಕೈ ಗುಣದಿಂದ ಒಳ್ಳೇದಾಗೋದಾದ್ರೆ ಆಗ್ಲಿ’ ಎಂದಳು ಬಂದಿದ್ದ ಹೆಂಗಸು. ಶಾರು ಹೌಹಾರಿಹೋದಳು.

‘ಇದೇನು ಇದು?, ನೀವ್ಯಾರೋ ನನ್ಗೊತ್ತಿಲ್ಲ..’

‘ನಾವ್ಯಾರಾದ್ರೇನವ್ವಾ, ನಮ್ಮಕ್ಳು ಚೆನ್ನಾಗಿರ್ಬೇಕು ಅಂತ ಅಷ್ಟೆ... ಹಿರಿಸೊಸೆ ಮದುವೆಯಾದ ಒಂದು ವರ್ಷಕ್ಕೆ ತೀರ್‌ಕೊಂಡ್ಳು, ಎರಡ್ನೇ ಸೊಸೆ ಹಾದ್ರ ಮಾಡ್ಕೊಂಡು ಒಬ್ನ್ ಜೊತೆ ಓಡೋದ್ಳು. ನಮ್ಮ್ ಕಿರಿ ಮಗ್‌ನ ಜೀವ್ನ ಆದ್ರೂ ಸರಿಯಾಗಿರ‍್ಲಿ ಅಂತ ಬಂದ್ವಿ ತಾಯಿ, ದೊಡ್ಡ್ ಮನಸ್ ಮಾಡಿ ಒಂದು ಆರ‍್ಸಿ ಕೊಡವ್ವಾ...’ ಎಂದು ಅವಳ ಕಾಲು ಹಿಡಿಯಲೆಂಬಂತೆ ಬಗ್ಗಿದರು.

‘ಅಯ್ಯಯ್ಯೋ ಬೇಡಿ...’ ಎನ್ನುತ್ತಾ ಶಾರು ಎದ್ದು ನಿಂತಳು. ಇನ್ನೇನು ಹೇಳಿದರೂ ಇವರು ಬಿಡಲಾರರು ಎಂದು ತಿಳಿದು, ‘ಆಯ್ತು ದೇವ್ರ್ ಮೇಲೆ ಭಾರ ಹಾಕಿ ಆರ‍್ಸಿ ಕೊಡ್ತೀನಿ... ಮುಂದುಕ್ಕೇನಾದ್ರು ತೊಂದ್ರೆ ಆದ್ರೆ ಅದ್ಕೆ ನಾನ್ ಹೊಣೆ ಅಲ್ಲ... ನೀವು ಹಿರಿಯರು...’ ಅಂದಳು ಶಾರು.

‘ನಿನ್ನ ಕೈ ಗುಣದ್ ಮೇಲೆ ಸಂಶಯ ಉಂಟೇ ತಾಯೀ’ ಎಂದಳು ಆ ವೃದ್ಧ ಹೆಂಗಸು. ಶಾರು ನವಿಲುಗವಿಲಿನ ರಂಗನಾಥನನ್ನು ಕಣ್ಣುಮುಚ್ಚಿ ಧ್ಯಾನಿಸಿ ಎಲ್ಲ ಫೊಟೊಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಒಂದು ಮುಗ್ಧ ಮುಖದ ಚಿತ್ರವನ್ನು ಆರಿಸಿ ಕೊಟ್ಟಳು. ಕೃತಜ್ಞತೆಯಿಂದ ಕೈ ಮುಗಿದ ಅವರು ಬೇಡ ಬೇಡವೆಂದರೂ ನೂರರ ಐದು ನೋಟುಗಳನ್ನು ಮೇಜಿನ ಮೇಲಿರಿಸಿ ಹೊರಟುಹೋದರು. ಇದೆಲ್ಲ ಏನು ಎಂದು ಅರ್ಥ ಆಗುವ ಮೊದಲೇ ಎಲ್ಲ ನಡೆದು ಮುಗಿದುಹೋಗಿತ್ತು. ನಾನು ಮಾಡುತ್ತಿರುವುದು ಸರಿಯೇ? ಶಾರು ತನ್ನನ್ನೇ ಪ್ರಶ್ನಿಸಿಕೊಂಡಳು. ಇದಾಗಿ ಒಂದು ವಾರದ ನಂತರ ಆ ದಂಪತಿಗಳು ಪುನಃ ಬಂದು ಲಗ್ನಪತ್ರಿಕೆಯೊಂದನ್ನು ಶಾರುವಿನ ಕೈಯಲ್ಲಿರಿಸಿ ಮದುವೆಗೆ ಆಹ್ವಾನಿಸಿ ಹೊರಟು ಹೋದರು. ಇದು ದಿನನಿತ್ಯದ ವಿದ್ಯಮಾನವಾಯಿತು.

ದಿನಕ್ಕೆ ಏಳೆಂಟು ಸಾರಿ ನವಿಲುಗವಿಲಿನ ರಂಗನಾಥನನ್ನು ನೆನೆದು ಚಿತ್ರ ಆರಿಸಿಕೊಡುವಲ್ಲಿಗೆ ಬಂದು ಮುಟ್ಟಿತು. ಹೋಟ್ಲಿನ ಸಂಪಾದನೆಯನ್ನೂ ಹಿಂದಿಕ್ಕಿ ಇದು ಮುಂದೆ ಮುಂದೆ ಓಡತೊಡಗಿತು. ಇದನ್ನೆಲ್ಲ ಕುಳಿತು ಸಾವಕಾಶವಾಗಿ ಯೋಚಿಸುವಷ್ಟು ಪುರುಸೋತ್ತಾಗಲೀ, ವ್ಯವಧಾನವಾಗಲೀ ಅವಳಲ್ಲಿರಲಿಲ್ಲ. ಯಾವುದೋ ಒಂದು ಅವ್ಯಕ್ತ ನಾದಕ್ಕೆ ಹೆಡೆಯಾಡಿಸುವ ನಾಗರನಂತೆ ಆಗಿತ್ತು ಅವಳ ಸ್ಥಿತಿ. ಈಗ ಹೋಟ್ಲಿನ ವ್ಯವಹಾರದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗದೆ ಗಲ್ಲದಲ್ಲಿ ಪುನಃ ವಿಷ್ಣುವೇ ಪ್ರತಿಷ್ಠಾಪನೆಯಾಗಿದ್ದ. ಶಾರು ಮನೆಯಲ್ಲೇ ಚಿತ್ರ ಆರಿಸಿಕೊಡಲು ಪ್ರಾರಂಭಿಸಿದ್ದಳು. ಕೆಲವರು ಚಿತ್ರದ ಬದಲು ಹೆಸರು ಬರೆದು ತಂದು ಆರಿಸಿಕೊಡಲು ಹೇಳಿದರೆ ಅವಳು ಅದನ್ನು ನಿರಾಕರಿಸಿಬಿಡುತ್ತಿದ್ದಳು. ಈಗ ನವಿಲುಗವಿಲಿನ ರಂಗನಾಥನ ಹೆಸರು ಬಿಟ್ಟರೆ ಬೇರೆ ಯಾವ ಮಾತೂ ಅವಳ ತುಟಿಯಿಂದ ಬರುತ್ತಿರಲಿಲ್ಲ. ಹೆಚ್ಚುಕಡಿಮೆ ಮೌನಿಯೇ ಆಗಿ ಹೋಗಿದ್ದಳು. ಬಂದವರು ಹೇಳಿದ್ದನ್ನು ಕೇಳಿಸಿಕೊಳ್ಳುವುದಷ್ಟೇ ಅವಳ ಕೆಲಸವಾಗಿತ್ತು. ಇದೆಲ್ಲ ಬಿಟ್ಟು ಓಡಿ ಹೋಗುವ ಅಂತ ಅನ್ನಿಸುತ್ತಿತ್ತು, ಆದರೆ ಎಲ್ಲಿಗೆ ಎಂಬ ಪ್ರಶ್ನೆಗೆ ಅವಳಲ್ಲಿ ಉತ್ತರ ಇರಲಿಲ್ಲ. ಹೀಗೆಲ್ಲ ಇರುವಾಗ ಒಂದು ದಿನ ತಾಯವ್ವ ಶಾರುವನ್ನು ಕಂಡು ಮಾತಾಡಿಸಿಕೊಂಡು ಹೋಗಲು ಬಂದಿದ್ದಳು. ಬಂದವರ ಭೇಟಿ ಮುಗಿಯುವವರೆಗೆ ಕಾದು ಕುಳಿತಿದ್ದಳು. ತಾಯವ್ವನನ್ನು ಕಂಡ ಕೂಡಲೆ ಶಾರುವಿಗೆ ದುಃಖ ಒತ್ತರಿಸಿ ಬಂದು ‘ನೋಡು ತಾಯವ್ವ ನನ್ನ ಸ್ಥಿತಿ ಎಲ್ಲಿಗ್ ಬಂತು..ಹೆಸ್ರಿಗೆ ಮಾತ್ರ ಶಾರದ ಆಗಿದ್ದೀನಿ ಅಷ್ಟೆ. ಒಂದು ಮಾತಿಲ್ಲ ಕಥೆಯಿಲ್ಲ..ನನ್ಗೆ ಇದೆಲ್ಲ ಬೇಡ ತಾಯವ್ವಾ..’ ಅಂತ ಜೋರಾಗಿ ದನಿ ತೆಗೆದು ಅಳಲು ಪ್ರಾರಂಭಿಸಿದಳು. ಅವಳ ದನಿಯನ್ನು ಅವಳು ಕೇಳದೆಯೇ ಎಷ್ಟೋ ಸಮಯವಾಗಿ ಹೋಗಿತ್ತು.

‘ಅಯ್ ಬಿಡ್ತು ಅನ್ನಿ ಏಟೊಂದು ಜನಕ್ಕೆ ನಿಮ್ಮಿಂದ ಉಪ್ಕಾರ ಆಗೈತೆ ಗೊತ್ತಾ ನಿಮ್ಗೆ..’

ಇಲ್ಲ ತಾಯವ್ವ ನಾನು ಪುನಃ ಮೊದಲಿನ ಶಾರು ಆಗ್ಬೇಕು... ಸೊಪ್ಪು ಬೇಕವ್ವಾ ಸೊಪ್ಪೂ ಅಂತ ನೀನು ಕೂಗುತ್ತಾ ಬರುವಾಗ ನಾನು ಬೀದಿ ಬಾಗ್ಲಲ್ಲಿ ನಿಂತು ಕಾಯ್ತಾ ಇರ‍್ಬೇಕು... ಆಮೇಲೆ ಸುಖ ದುಃಖ ಮಾತಾಡಿ ನೀನು ಮುಂದೆ ಹೋಗ...’ ಅನ್ವೇಕು.

‘ಬಿಡಿ ಸಾರವ್ವಾ ಅದರ‍್ಲೇನ್ ಸುಖ ಐತೆ, ಎಲ್ರನ್ನೂ ಬಾಯಿ ತುಂಬ ಮಾತಾಡಿಸ್ತಾ ಇದ್ರಲ್ಲ ಅದ್ಕೇ ದೇವ್ರು ಯಾರ‍್ಗು ಕೊಡದ ಸಕ್ತಿ ನಿಮ್ಗೆ ಕೊಟ್ ಬುಟ್ಟವ್ನೆ. ಇಂಗೇ ಚೆನ್ನಾಕಿರಿಯವ್ವಾ.. ಅಪಸಕುನ ಯಾಕೆ ಮಾತಾಡ್ತೀರಾ... ದಿರಿಷ್ಟಿ ಗಿರಿಷ್ಟಿ ಆಗೈತೋ ಏನೋ..’ ಎಂದು ಶಾರುವಿನ ಕೆನ್ನೆಯನ್ನು ಎರಡು ಕೈಗಳಲ್ಲಿ ಸವರಿ ಲಟಲಟಕ್ಕೆಂದು ನೆಟಿಗೆ ಮುರಿದಳು. ಆಕೆಯ ಕೆನ್ನೆಯಲ್ಲಿ ಹರಿಯುತ್ತಿದ್ದ ಕಣ್ಣೀರು ತಾಯವ್ವನ ಕೈಗೂ ಮೆತ್ತಿಕೊಂಡಿತು. ಕೈಯನ್ನು ಸೀರೆಯ ಸೆರಗಿನಲ್ಲಿ ಒರೆಸಿಕೊಳ್ಳುತ್ತಾ ತಾಯವ್ವ ಶಾರುವಿನ ಮುಖವನ್ನೇ ನೋಡತೊಡಗಿದಳು. ಶಾರುವಿನ ಕಣ್ಣಿಂದ ಹರಿಯುತ್ತಿದ್ದ ನೀರು ಅವಳ ಮಡಿಲಿಗೆ ಬಿದ್ದು ಸೀರೆಯಲ್ಲಿದ್ದ ಹೂವಿನ ಚಿತ್ರದೊಳಗೆ ಇಂಗಿ ಇಂಗಿ ಹೋಗುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT