ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥವತ್ತಾದ ಹಾಸ್ಯ ಕೆಡಿಸಿದಾಗ...

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮುಂಜಾನೆಯ ಚುಮು ಚುಮು ಚಳಿ. ಕೈಯಲ್ಲಿ ಮೊಬೈಲ್‌ ಹಿಡಿದು ಸಂಗೀತ ಆಲಿಸುತ್ತಾ ತರುಣಿಯೊಬ್ಬಳು ಉದ್ಯಾನದಲ್ಲಿ ವಾಕಿಂಗ್‌ ಹೊರಟಿರುತ್ತಾಳೆ. ನಾಯಕ ನಟನ ಸ್ನೇಹಿತನಿಗೆ ಆಕೆಯನ್ನು ಹಿಂಬಾಲಿಸುವುದೇ ಕೆಲಸ. ಆಕೆಯ ಪಕ್ಕಕ್ಕೆ ತೆರಳುವ ಆತ ಅವಳ ಹೆಸರು ಕೇಳುತ್ತಾನೆ. ನನ್ನ ಹೆಸರು ಮಡೋನಾ ಎನ್ನುತ್ತಾಳೆ. ತಕ್ಷಣ ಆತನ ಉತ್ತರಕ್ಕೆ ಕಡುಕೋಪಗೊಂಡ ಆಕೆ ಅವನ ಕೆನ್ನೆಗೆ ಬಾರಿಸುತ್ತಾಳೆ. ಕೊನೆಗೆ, ಆತ ಇಂಗುತಿಂದ ಮಂಗನ ಮುಖ ಮಾಡಿಕೊಂಡು ಅಲ್ಲಿಂದ ಕಾಲಿಗೆ ಬುದ್ಧಿ ಹೇಳುತ್ತಾನೆ.

ಇಂತಹ ದ್ವಂದ್ವಾರ್ಥ ಸಂಭಾಷಣೆಯ ಹಾಸ್ಯ ದೃಶ್ಯಗಳು ಇಂದಿನ ಜನಪ್ರಿಯ ಮಾದರಿಯ ಸಿನಿಮಾಗಳಲ್ಲಿ ವಿಜೃಂಭಿಸುತ್ತಿವೆ. ಕಮರ್ಷಿಯಲ್‌ ಸಿನಿಮಾದ ಯಶಸ್ಸಿಗಾಗಿ ಈ ಮಾದರಿಯ ಹಾಸ್ಯ ಸೂತ್ರಕ್ಕೆ ಜೋತುಬಿದ್ದವರು ಚಂದನವನದಲ್ಲಿ ಹೆಚ್ಚು. ಆದರೆ, ಇಂತಹ ಅನಗತ್ಯ ಪಾತ್ರಗಳನ್ನು ಕತ್ತರಿಸಿ ಪಕ್ಕಕ್ಕಿಟ್ಟರೂ ಸಿನಿಮಾದ ಕಥನ ಹಾಗೂ ಅದರ ನಿರೂಪಣೆಗೆ ಕಿಂಚಿತ್ತೂ ಧಕ್ಕೆಯಾಗುವುದಿಲ್ಲ. ಜೊತೆಗೆ, ದುಡ್ಡು ಕೊಟ್ಟ ಪ್ರೇಕ್ಷಕರು ಕೊಂಚ ನಿರಾಳರಾಗಿ ಸಿನಿಮಾ ವೀಕ್ಷಿಸಲು ಸಹಕಾರಿಯಾಗುತ್ತದೆ.

ದ್ವಂದ್ವಾರ್ಥದ ಸಂಭಾಷಣೆಯ ಚೌಕಟ್ಟು ಬಿಟ್ಟು ಹೊರಬರಲು ನಿರ್ದೇಶಕರು ಸಿದ್ಧರಿಲ್ಲ. ಇತ್ತೀಚೆಗೆ ಯಶಸ್ವಿ ಸಿನಿಮಾಗಳ ನಿರ್ದೇಶಕರೂ ಇದೇ ಜಾಡು ಹಿಡಿದಿರುವುದು ವ್ಯಂಗ್ಯ. ಹಾಗಾಗಿ, ಕಥೆಯಲ್ಲಿಯೇ ಹಾಸ್ಯ ಬೆರೆಸಿ ಹೇಳುವ ಸಿನಿಮಾಗಳು ಕನ್ನಡದಲ್ಲಿ ಅತಿವಿರಳವಾಗುತ್ತಿವೆ.

‘ಸತ್ಯಹರಿಶ್ಚಂದ್ರ’ ಸಿನಿಮಾದಲ್ಲಿ ನರಸಿಂಹರಾಜು ಅವರು ನಿರ್ವಹಿಸಿದ ‘ನಕ್ಷತ್ರಿಕ’ನ ಪಾತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ಅಂದಿನ ಕಾಲದ ಬಾಲಕೃಷ್ಣ, ದಿನೇಶ್, ಮುಸುರಿ ಕೃಷ್ಣಮೂರ್ತಿ, ಎನ್.ಎಸ್. ರಾವ್‌, ದ್ವಾರಕೀಶ್ ಅವರ ಪಾತ್ರಗಳನ್ನು ಸಿನಿಮಾದ ಚೌಕಟ್ಟಿನಿಂದ ಬಿಡಿಸಿ ನೋಡಲು ಸಾಧ್ಯವೇ ಇಲ್ಲ. ಅವರ ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುತ್ತಿದ್ದವು. ಇಂದಿನ ಸಿನಿಮಾಗಳಲ್ಲಿ ಇದಕ್ಕೆ ತದ್ವಿರುದ್ಧವಾದ ಸ್ಥಿತಿ ಇದೆ. ಬಹುತೇಕ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಿಗೆ ನಿಜವಾದ ಅಸ್ವಿತ್ವವೇ ಇರುವುದಿಲ್ಲ. ಇದು ಕನ್ನಡ ಚಿತ್ರರಂಗದ ಪಾಲಿನ ದೌರ್ಭಾಗ್ಯ ಎನ್ನದೇ ವಿಧಿಯಿಲ್ಲ.

‘ಪ್ರಸ್ತುತ ಚಂದನವನ ಹಾಸ್ಯ ಬರಹಗಾರರ ಕೊರತೆ ಎದುರಿಸುತ್ತಿರುವುದು ನಿಜ. ಕನ್ನಡದಲ್ಲಿ ಒಳ್ಳೆಯ ಹಾಸ್ಯಗಾರರು ಇದ್ದಾರೆ. ಎಲ್ಲರೂ ಚೆನ್ನಾಗಿ ನಟಿಸುತ್ತಿದ್ದಾರೆ. ದ್ವಂದ್ವಾರ್ಥದ ಸಂಭಾಷಣೆ ಬಿಡಬೇಕು. ಸನ್ನಿವೇಶ ಆಧಾರಿತ ಕಾಮಿಡಿ ದೃಶ್ಯಗಳಿಗೆ ಒತ್ತು ನೀಡಬೇಕು. ಆದರೆ, ನಿಜ ಅರ್ಥದಲ್ಲಿ ಇದಕ್ಕೆ ಒತ್ತು ಸಿಗುತ್ತಿಲ್ಲ’ ಎಂದು ಒಪ್ಪಿಕೊಳ್ಳುತ್ತಾರೆ ಹಿರಿಯ ಹಾಸ್ಯನಟ ದ್ವಾರಕೀಶ್‌.

‘ಸಿನಿಮಾದಲ್ಲಿ ಹಾಸ್ಯ ಬೇಕು. ಆದರೆ, ಹಾಸ್ಯವೇ ಚಿತ್ರವೊಂದಕ್ಕೆ ಮುಖ್ಯವಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಸಿನಿಮಾದ ಯಶಸ್ಸಿಗೆ ಗಟ್ಟಿಯಾದ ಕಥೆ ಬಹುಮುಖ್ಯ. ಹಾಸ್ಯಕ್ಕಾಗಿ ದೃಶ್ಯ ಮಾಡುವುದು ಸಲ್ಲದು. ಚಿತ್ರವೇ ಅದನ್ನು ಕೇಳಬೇಕು. ಕಥೆಯೊಂದಿಗೆ ಹಾಸ್ಯ ಸಾಗಿದರೆ ಚೆನ್ನಾಗಿರುತ್ತದೆ. ಆಗ ಸಿನಿಮಾ ಸಹ ಯಶಸ್ವಿಯಾಗುತ್ತದೆ. ನಿರ್ದೇಶಕನ ಶ್ರಮವೂ ಸಾರ್ಥಕವಾಗುತ್ತದೆ’ ಎನ್ನುವುದು ಅವರ ಅಭಿಮತ.

ಹಾಸ್ಯಗಾರನಿಗೆ ಒಳ್ಳೆಯ ಸ್ಕ್ರಿಪ್ಟ್ ಇರಬೇಕು. ಆಗ ಆತ ಎಂತಹ ಸವಾಲನ್ನೂ ಎದುರಿಸುತ್ತಾನೆ. ಸನ್ನಿವೇಶ ಆಧಾರಿತ ಕಾಮಿಡಿ ಬಹುಬೇಗ ಜನಪ್ರಿಯವಾಗುತ್ತದೆ. ನಿರ್ದೇಶಕರು, ನಿರ್ಮಾಪಕರಿಗೆ ಈ ಸತ್ಯದ ಅರಿವಾಗಬೇಕಿದೆ. ನಾವು ನಗಿಸಲು ಪ್ರಯತ್ನ ಮಾಡಬಾರದು. ನಗು ತಾನಾಗಿಯೇ ಉಕ್ಕಿ ಬರಬೇಕು’ ಎನ್ನುತ್ತಾರೆ ಅವರು.

‘ನಮ್ಮ ಕಾಲದಲ್ಲಿ ಹುಣಸೂರು ಕೃಷ್ಣಮೂರ್ತಿ, ಚಿ. ಉದಯಶಂಕರ್‌ ಅವರಂತಹ ಉತ್ತಮ ಬರಹಗಾರರಿದ್ದರು. ಅವರಿಂದ ಒಳ್ಳೆಯ ಚಿತ್ರಕಥೆ ಮೂಡಿಬರುತ್ತಿತ್ತು. ಸಿನಿಮಾಗಳಲ್ಲಿ ಅಂತಹ ಹಾಸ್ಯ ಸನ್ನಿವೇಶ ಬರೆಯುತ್ತಿದ್ದರು. ‘ಬಂಗಾರದ ಮನುಷ್ಯ’ ಚಿತ್ರದಲ್ಲಿನ ಹಾಸ್ಯ ಜನರಿಗೆ ಇಷ್ಟವಾಗಿದ್ದು ಇದೇ ಕಾರಣಕ್ಕೆ. ಅರ್ಥವತ್ತಾದ ಹಾಸ್ಯಕ್ಕೆ ಒತ್ತು ನೀಡುತ್ತಿದ್ದರು. ಇದರಲ್ಲಿ ಒಳ್ಳೆಯ ಸಂದೇಶವೂ ಅಡಗಿರುತ್ತಿತ್ತು. ನರಸಿಂಹರಾಜು ಅವರ ಕಾಲದಲ್ಲಿಯೂ ಒಳ್ಳೆಯ ಸ್ಕ್ರಿಪ್ಟ್‌ಗೆ ಒತ್ತು ನೀಡಲಾಗುತ್ತಿತ್ತು. ಅವರು ನಗಿಸಲು ಪ್ರಯತ್ನಿಸುತ್ತಿರಲಿಲ್ಲ. ಅವರು ಪರದೆ ಮೇಲೆ ಬಂದರೇ ಜನರು ನಗೆಯ ಹೊನಲಿನಲ್ಲಿ ತೇಲುತ್ತಿದ್ದರು’ ಎಂದು ನೆನಪಿನ ಬುತ್ತಿ ಬಿಚ್ಚಿಟ್ಟರು.

ಕಾಮಿಡಿ ಮಾಡುವಾಗ ಕೆಲವೊಮ್ಮೆ ಹಾಸ್ಯನಟರು ಅಪಮಾನಕ್ಕೀಡಾಗುವುದು ಉಂಟು. ಇದಕ್ಕೆ ಎದೆಗುಂದಬೇಕಿಲ್ಲ. ಆ ಕ್ಷಣಕ್ಕೆ ಅದನ್ನು ಮರೆತು ಬಿಡಬೇಕು. ಸ್ಫೂರ್ತಿಯಿಂದ ಸ್ವೀಕರಿಸುವುದನ್ನು ಕಲಿಯಬೇಕು. ಅದು ಒಳ್ಳೆಯ ಹಾಸ್ಯನಟನ ಗುಣವೂ ಹೌದು ಎನ್ನುವುದು ಅವರ ಸಲಹೆ.

‘ನನ್ನ ಕಾಲದಲ್ಲಿ ನಾಯಕ ನಟನಿಗೆ ಸರಿಸಮನಾಗಿ ಹಾಸ್ಯನಟನೂ ಇರುತ್ತಿದ್ದ. ಇದಕ್ಕಿಂತ ಹೆಮ್ಮೆಯ ವಿಷಯ ಬೇರೊಂದಿಲ್ಲ. ಚಿತ್ರಕಥೆಯಲ್ಲಿ ಅವನ ‍ಪಾತ್ರಕ್ಕೂ ವಿಶೇಷತೆ ಇತ್ತು. ಆತನಿಗೂ ಹಾಡು ಇರುತ್ತಿತ್ತು. ಅಂತಹ ಸನ್ನಿವೇಶಗಳೇ ಈಗಿಲ್ಲ. ಕಮರ್ಷಿಯಲ್‌ ಚಿತ್ರದ ಯಶಸ್ಸಿಗಾಗಿ ಒಂದೆರೆಡು ಹಾಸ್ಯ ದೃಶ್ಯ ತುರುಕುವಂತಹ ಸ್ಥಿತಿಯನ್ನು ಕಾಣಬಹುದು. ಇಂತಹ ಮಾದರಿ ಅನುಸರಿಸುವುದು ಒಳ್ಳೆಯದಲ್ಲ’ ಎಂಬುದು ಅವರ ಹಿತನುಡಿ.

‘ನಾನು ಪರದೆ ಮೇಲೆ ಬಂದಾಗ ಜನರು ಶಿಳ್ಳೆ ಹಾಕುತ್ತಿದ್ದರು. ಡೈಲಾಗ್‌ ಹೇಳಿದಾಗ ಚ‍ಪ್ಪಾಳೆ ತಟ್ಟುತ್ತಿದ್ದರು. ಪ್ರೇಕ್ಷಕರು ನನ್ನನ್ನು ಇಷ್ಟಪಡುತ್ತಿದ್ದ ರೀತಿಗೆ ಖುಷಿಯಾಗುತ್ತಿತ್ತು. ಒಬ್ಬ ಹಾಸ್ಯನಟನಿಗೆ ಇದಕ್ಕಿಂತ ಸಂತೋಷ ಬೇರೊಂದಿಲ್ಲ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT