ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಯಶ್ಚಿತ್ತದ ಮೊದಲ ಹೆಜ್ಜೆ ಇಟ್ಟ ವೈಲಿ

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ನೀವು ಏನಾದರೂ ತಪ್ಪು ಮಾಡಿದ್ದರೆ ಮೊದಲು ಅದನ್ನು ಒಪ್ಪಿಕೊಳ್ಳಿ. ಸಂಬಂಧಿಸಿದವರಿಗೆ ನೀವು ಮಾಡಿರುವ ತಪ್ಪಿನ ಬಗ್ಗೆ ಹೇಳಿ. ನಾನು ನನ್ನ ಮೊದಲ ಹೆಜ್ಜೆ ಇಟ್ಟಿದ್ದೇನೆ...’

ಲಂಡನ್‌ನ ಪ್ರೆಸ್‌ಕ್ಲಬ್‌ನಲ್ಲಿ ಕಿಕ್ಕಿರಿದಿದ್ದ ಮಾಧ್ಯಮ ಪ್ರತಿನಿಧಿಗಳ ಎದುರು ಕ್ರಿಸ್ಟೋಫರ್ ವೈಲಿ ನೀಡಿದ ಭಾವುಕ ಹೇಳಿಕೆ ಇದು.

ಐದು ಕೋಟಿ ಜನರ ಫೇಸ್‌ಬುಕ್ ಪ್ರೊಫೈಲ್‌ ಕದ್ದು, ಅದೇ ದಾಖಲೆಗಳನ್ನು ವಿಶ್ಲೇಷಿಸಿ, ಅಮೆರಿಕ ಅಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಜನರ ಮನಸ್ಥಿತಿ ಪ್ರಭಾವಿಸಲು ಡೊನಾಲ್ಡ್‌ ಟ್ರಂಪ್‌ ಅವರಿಗೆ ನೆರವಾದ ‘ಕೇಂಬ್ರಿಜ್ ಅನಲಿಟಿಕಾ’ದ ಕಾರ್ಯವೈಖರಿಯನ್ನು ಜಗತ್ತಿನೆದುರು ತೆರೆದಿಟ್ಟ ದಿಟ್ಟ ಈ ವೈಲಿ. ಅದೇ ಕಂಪನಿಯಲ್ಲಿ ದತ್ತಾಂಶ ನಿರ್ದೇಶಕನ ಜವಾಬ್ದಾರಿ ಹೊತ್ತಿದ್ದ ವ್ಯಕ್ತಿ ಈತ ಎನ್ನುವುದು ಗಮನಾರ್ಹ ಸಂಗತಿ.

‘ನಾನು ಸಲಿಂಗಕಾಮಿ (ಗೇ), ಸಸ್ಯಾಹಾರಿ (ವೆಗಾನ್). ಅದು ಹೇಗೋ ಸ್ಟೀವ್‌ ಬ್ಯಾನನ್ ರೂಪಿಸಿದ ಮನಸುಗಳನ್ನು ಪ್ರಭಾವಿಸುವ ತಂತ್ರದಲ್ಲಿ ಪಾಲುದಾರನಾಗಿಬಿಟ್ಟೆ’ ಎಂಬುದು ಅವನ ಹಳಹಳಿಕೆ. ಬ್ರಿಟನ್‌ನ ‘ಗಾರ್ಡಿಯನ್’ ಪತ್ರಿಕೆಯಲ್ಲಿ ಪ್ರಕಟವಾದ ವೈಲಿಯ ಈ ಹಳಹಳಿಕೆ ವಿಶ್ವದಾದ್ಯಂತ ಸಂಚಲನ ಮೂಡಿಸಿದವು. ಇದರ ಪರಿಣಾಮ ಎನ್ನುವಂತೆ ಜನರು ಸಾಮಾಜಿಕ ಮಾಧ್ಯಮಗಳ ಕಾರ್ಯವೈಖರಿ
ಯನ್ನು ಪ್ರಶ್ನಿಸುತ್ತಿದ್ದಾರೆ. ವಿಶ್ವದ ಜನಪ್ರಿಯ ಮತ್ತು ಪ್ರಭಾವಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ ಈಗ ಆರೋಪಿ ಸ್ಥಾನದಲ್ಲಿ ನಿಂತಿದೆ.

ತಲೆ ಕೂದಲಿಗೆ ತಿಳಿ ಗುಲಾಬಿ ಬಣ್ಣ ಹಚ್ಚಿಕೊಂಡಿರುವ ಕ್ರಿಸ್ಟೋಫರ್ ವೈಲಿಗೆ ಫ್ಯಾಷನ್ ಲೋಕದಲ್ಲಿ ಆಸಕ್ತಿ. ತನ್ನ 24ನೇ ವಯಸ್ಸಿನಲ್ಲಿ ಫ್ಯಾಷನ್ ಟ್ರೆಂಡ್‌ಗಳನ್ನು ಗುರುತಿಸಿ, ಬದಲಾವಣೆಗಳ ಮುನ್ಸೂಚನೆ ಕೊಡುವ ವಿಷಯದಲ್ಲಿ ಪಿ.ಎಚ್‌ಡಿ ಸಂಶೋಧನೆ ಆರಂಭಿಸಿದ. ಇದಕ್ಕಾಗಿ ಫೇಸ್‌ಬುಕ್ ಬಳಕೆ ಶುರುವಾಯಿತು. ಇದೇ ಸಂದರ್ಭ ಫೇಸ್‌ಬುಕ್ ಮೂಲಕ ಅಮೆರಿಕ ಮತದಾರರ ಸಾರ್ವಜನಿಕ ಮತ್ತು ಖಾಸಗಿ ಮಾಹಿತಿಗಳನ್ನು ಸಂಗ್ರಹಿಸಿ, ವಿಶ್ಲೇಷಿಸುವ ಸಾಧ್ಯತೆ ಹೊಳೆಯಿತು. ಮತದಾರರ ಮನಸ್ಥಿತಿ ಅರ್ಥೈಸಿಕೊಳ್ಳುವ ಮೂಲಕ ರಾಜಕೀಯ ಒಲವು ಅರಿಯುವುದು ವೈಲಿಯ ಉದ್ದೇಶವಾಗಿತ್ತು. ಹೀಗೆ ಸಂಗ್ರಹಿಸಿದ ದತ್ತಾಂಶ ವಿಶ್ಲೇಷಿಸಿ ನಿರ್ದಿಷ್ಟ ರೀತಿಯ ರಾಜಕೀಯ ಜಾಹೀರಾತುಗಳನ್ನು ಪುಶ್ ಮಾಡುವುದು ಅವನು ರೂಪಿಸಿದ ತಂತ್ರ.

ನಮ್ಮ ಆಪ್ತರಂತೆ ಸೋಗು ಹಾಕಿ, ನಮ್ಮಿಂದ ಎಲ್ಲ ಮಾಹಿತಿ ಅರಿತುಕೊಂಡವರು, ಅವರ ಸ್ವಾರ್ಥಕ್ಕೆ ನಮ್ಮನ್ನು ಕುಣಿಸುವ ಕೀಳು ಬ್ಲ್ಯಾಕ್‌ಮೇಲ್ ತಂತ್ರವನ್ನೇ ಇದು ಹೋಲುತ್ತದೆ. ಏನಾಗುತ್ತಿದೆ ಎಂಬ ಅರಿವೇ ಇಲ್ಲದೆ ಅಮೆರಿಕ ಮತದಾರರು ‘ಕೇಂಬ್ರಿಜ್ ಅನಲಿಟಿಕಾ’ದ ತಾಳಕ್ಕೆ ಕುಣಿದರು. ಶ್ವೇತಭವನದಲ್ಲಿ ಅಧ್ಯಕ್ಷ ಗಾದಿ ಅಲಂಕರಿಸುವ ಟ್ರಂಪ್ ಕನಸು ನನಸಾಗುವಲ್ಲಿ ತನಗೆ ಅರಿವೇ ಇಲ್ಲದೆ ವೈಲಿ ಕೂಡಾ ದಾಳವಾಗಿದ್ದರು.

ಕ್ರಿಸ್ಟೋಫರ್ ವೈಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ರಾಜಧಾನಿ ವಿಕ್ಟೋರಿಯ ನಗರದಲ್ಲಿ ಹುಟ್ಟಿ ಬೆಳೆದವ (ಜನನ 1989). ವೈದ್ಯ ದಂಪತಿ ಡಾ.ಕೆವಿನ್ ವೈಲಿ ಮತ್ತು ಡಾ.ಜೋನ್ ಕ್ಯಾರಥರ್ಸ್ ಇವನ ತಂದೆ–ತಾಯಿ. ಶಾಲೆಯಲ್ಲಿದ್ದಾಗ ಡಿಸ್ಲೆಕ್ಸಿಯಾ (ಕಲಿಕೆಯ ನ್ಯೂನತೆ) ಮತ್ತು ಅತಿಚಟುವಟಿಕೆಯ ಸಮಸ್ಯೆಗಳು ವೈಲಿಯನ್ನು ಬಾಧಿಸಿದ್ದವು. ಆರನೇ ವಯಸ್ಸಿನಲ್ಲಿ ಮಾನಸಿಕ ಅಸ್ವಸ್ಥನೊಬ್ಬನಿಂದ ಶೋಷಣೆಯೂ ನಡೆದಿತ್ತು. ಶಾಲೆ ಅದನ್ನು ಮುಚ್ಚಿಹಾಕಲು ಯತ್ನಿಸಿದಾಗ ಕೆವಿನ್ ಕಾನೂನು ಸಮರ ನಡೆಸಿ, 2.90 ಲಕ್ಷ ಕೆನಡಾ ಡಾಲರ್ (ಸುಮಾರು ₹1.4 ಕೋಟಿ) ಪರಿಹಾರ ಪಡೆದುಕೊಂಡರು.

‘ಶಾಲೆಯನ್ನು ನಾನು ದ್ವೇಷಿಸುತ್ತಿದ್ದೆ’ ಎನ್ನುವುದು ವೈಲಿಯದ್ದೇ ಮಾತು. 16ನೇ ವಯಸ್ಸಿನಲ್ಲಿ ಯಾವುದೇ ಪದವಿ ಪಡೆಯದೆ ಶಾಲೆಯಿಂದ ಹೊರಬಂದ. 17ನೇ ವಯಸ್ಸಿನಲ್ಲಿ ಕೆನಡಾದ ಪ್ರತಿಪಕ್ಷ ನಾಯಕರಾಗಿದ್ದ ಮೈಕೆಲ್ ಇಗ್ನಾಟಿಫ್ ಅವರ ಪ್ರಚಾರ ಕಚೇರಿಯಲ್ಲಿ ಕೆಲಸ ಆರಂಭಿಸಿದ. 19ನೇ ವಯಸ್ಸಿನಲ್ಲಿ ಸ್ವಯಂ ಪ್ರಯತ್ನದಿಂದ ಕಂಪ್ಯೂಟರ್ ಕೋಡಿಂಗ್ ಕಲಿತದ್ದು ವೈಲಿಯ ಬದುಕು ಬದಲಿಸಿದ ಗಳಿಗೆಗಳಲ್ಲಿ ಒಂದು.

20ನೇ ವಯಸ್ಸಿಗೆ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕಾನೂನು ಅಭ್ಯಾಸ ಆರಂಭಿಸಿದ. ಈ ಸಂದರ್ಭ ಲಿಬರಲ್ ಡೆಮಾಕ್ರಟ್ಸ್ ಪಕ್ಷವು ಮತದಾರರ ಮಾಹಿತಿ ಸಂಗ್ರಹಿಸುವ, ತಮ್ಮ ಬೆಂಬಲಿಗರ ಪಟ್ಟಿ ಪರಿಷ್ಕರಿಸುವ ಕೆಲಸ ಆರಂಭಿಸಿತ್ತು. ವೈಲಿಗೆ ಅದೊಂದು ಪಾರ್ಟ್‌ಟೈಂ ಉದ್ಯೋಗಾವಕಾಶವೂ ಆಗಿತ್ತು. ಕಾಲೇಜಿನಲ್ಲಿ ಓದುವಾಗಲೇ ದತ್ತಾಂಶ ಮತ್ತು ತಂತ್ರಜ್ಞಾನವನ್ನು ರಾಜಕಾರಣಕ್ಕೆ ಬೆಸೆಯುವ ಕೆಲಸದಲ್ಲಿಯೂ ವೈಲಿ ತೊಡಗಿಕೊಂಡ. ಇದೇ ಸಂಪರ್ಕ ವೈಲಿಯನ್ನು ಕೇಂಬ್ರಿಜ್ ಅನಲಿಟಿಕಾದ ಮಾತೃಸಂಸ್ಥೆ ‘ಎಸ್‌ಸಿಎಲ್ ಎಲೆಕ್ಷನ್ಸ್‌’ಗೆ ಕರೆತಂದಿತು.

ಬಹುದೊಡ್ಡ ಪ್ರಮಾಣದ ಮಾಹಿತಿ ಸಂಚಯಿಸುವುದು, ನಂತರ ಅದನ್ನು ವಿಶ್ಲೇಷಿಸಿ ಇಚ್ಛಿತ ಫಲಿತಾಂಶಕ್ಕೆ ಬೆಸೆಯುವ ತಂತ್ರ ಮಿಲಿಟರಿಗಳಲ್ಲಿ ಬಳಕೆಯಲ್ಲಿದೆ. ಈ ಪರಿಕಲ್ಪನೆಗೆ ‘ಮಾಹಿತಿ ಕಾರ್ಯಾಚರಣೆ’ (ಇನ್‌ಫರ್ಮೇಶನ್ ಆಪರೇಶನ್) ಎಂದು ಹೆಸರು. ಇದೇ ತಂತ್ರವನ್ನು ಫೇಸ್‌ಬುಕ್‌ಗೆ ಬೆಸೆದು ಗೆಲ್ಲುವ ಪರಿಕರವನ್ನು (ಟೂಲ್) ವೈಲಿ ರೂಪಿಸಿದ. ಹೀಗೆ ಮಾಡುವಾಗ, ‘ಇದು ಸರಿಯಲ್ಲ’ ಎನ್ನುವ ಕ್ಷೀಣ ಒಳದನಿಯೊಂದು ಅವನಲ್ಲಿ ಪಿಸುಗುಡುತ್ತಿತ್ತು. ‘ನಾವು ಫೇಸ್‌ಬುಕ್ ಹ್ಯಾಕ್ ಮಾಡುವುದು ಸರಿಯೇ?’ ಎಂದು ತನ್ನ ಬಾಸ್ ಸ್ಟೀವ್ ಬ್ಯಾನನ್‌ನನ್ನು ಕೇಳಿಯೂ ಇದ್ದ. ಆದರೆ, ತಾನೇ ರೂಪಿಸಿದ ಪರಿಕರದ ಬಳಕೆಯ ಸಾಧ್ಯತೆಗಳ ಬಗ್ಗೆ ಅನುಮಾನ ತೀವ್ರಗೊಂಡ ನಂತರ (2014ರಲ್ಲಿ) ‘ಕೇಂಬ್ರಿಜ್ ಅನಲಿಟಿಕಾ’ದಿಂದ ಹೊರ ನಡೆದ.

ಆದರೆ ಸಂಚಯಿಸಿದ್ದ ದತ್ತಾಂಶ ಮತ್ತು ಅದರ ವಿಶ್ಲೇಷಣೆಯನ್ನು ಆಧರಿಸಿದ ಕಾರ್ಯಾಚರಣೆ ಜನರ ಮನಸಿನ ಮೇಲೆ ನಿರೀಕ್ಷಿತ ಫಲ ನೀಡಲು ಆರಂಭಿಸಿತ್ತು. 2016ರ ಅಮೆರಿಕ ಅಧ್ಯಕ್ಷ ಚುನಾವಣೆಯಲ್ಲಿ ಟ್ರಂಪ್ ಮುಖ್ಯವಾಗಿ ಪ್ರಸ್ತಾಪಿಸಿದ್ದು, ಅಮೆರಿಕನ್ನರ ಶ್ರೇಷ್ಠತೆ, ವಲಸಿಗರ ಸಮಸ್ಯೆ, ಮೆಕ್ಸಿಕೊ ಗಡಿಯಲ್ಲಿ ತಡೆಗೋಡೆ ವಿಚಾರಗಳನ್ನು. ನಿರ್ದಿಷ್ಟವಾಗಿ ಇಂಥದ್ದೇ ಅಂಶಗಳನ್ನು ಪ್ರಸ್ತಾಪಿಸಿದರೆ ಜನಾಭಿಪ್ರಾಯ ಟ್ರಂಪ್ ಪರ ತಿರುಗಬಹುದು ಎಂಬುದು ಕೇಂಬ್ರಿಜ್ ಅನಲಿಟಿಕಾದ ವಿಶ್ಲೇಷಣೆ
ಯಾಗಿತ್ತು.

‘ಟ್ರಂಪ್ ಅಧ್ಯಕ್ಷರಾಗಿ ಶ್ವೇತಭವನದಲ್ಲಿ ಪ್ರತಿಷ್ಠಾಪಿತರಾದ ನಂತರ ನನಗೆ ಸುಮ್ಮನಿರುವುದು ಸಾಧ್ಯವಾಗಲಿಲ್ಲ. ಜನರಿಗೆ ಸತ್ಯ ತಿಳಿಸಲೇಬೇಕು ಎನಿಸಿತು’ ಎಂದು ವೈಲಿ ತಾನು ಮಾಧ್ಯಮದ ಎದುರು ಬರಲು ಕಾರಣವಾದ ಸಂಗತಿಯನ್ನು ತೆರೆದಿಡುತ್ತಾನೆ.

ಮನದ ಮಾತು
ಕೇಂಬ್ರಿಜ್‌ ಅನಲಿಟಿಕಾ ಹಗರಣ ಬೆಳಕಿಗೆ ಬಂದ ನಂತರ ಕೆನಡಾದ ಸಿಬಿಸಿ ವಾಹಿನಿಗೆ ನೀಡಿದ ಸಂದರ್ಶನಲ್ಲಿ ವೈಲಿ ಆಡಿರುವ ಮಾತುಗಳು ಅವನ ಮನಸ್ಥಿತಿಗೆ ಕನ್ನಡಿ ಹಿಡಿಯುವಂತಿವೆ.

‘ಮಾನಸಿಕ ಮತ್ತು ಭಾವುಕ ಸೆಳೆತಕ್ಕೆ ಒಳಪಡಬಲ್ಲವರನ್ನು ನಮ್ಮ ಉದ್ದೇಶಕ್ಕೆ ತಕ್ಕಂತೆ ಪ್ರಭಾವಿಸುವುದು ನಮ್ಮ ಗುರಿಯಾಗಿತ್ತು. ನಮಗೆ ಇಷ್ಟವಾಗದವರ ನಡವಳಿಕೆಗಳನ್ನು ಬದಲಿಸುವುದು, ನಮ್ಮ ಪಕ್ಷದ ಬದ್ಧ ಮತದಾರರನ್ನು ಗುರುತಿಸಿ ಅವರ ಬೆಂಬಲ ಉಳಿಸಿಕೊಳ್ಳುವುದು ನಮ್ಮ ತಂತ್ರಗಾರಿಕೆಯ ಭಾಗವಾಗಿತ್ತು. ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಈ ತಂತ್ರ ಕಾರ್ಯಸಾಧು ಎನ್ನುವುದು ಮನವರಿಕೆಯಾಯಿತು. ವಿಶ್ವದ ಹಲವು ದೇಶಗಳಲ್ಲಿ  ಕೇಂಬ್ರಿಜ್‌ ಅನಲಿಟಿಕಾ ಕೆಲಸ ಮಾಡುತ್ತಿದೆ. ಅಮೆರಿಕ ಅಧ್ಯಕ್ಷರ ಚುನಾವಣೆಯಷ್ಟೇ ಅಲ್ಲ, ಸಣ್ಣಪುಟ್ಟ ದೇಶಗಳ ಪ್ರಾಂತೀಯ ಚುನಾವಣೆಗಳಲ್ಲೂ ಈ ಸಂಸ್ಥೆ ಕರಾಮತ್ತು ತೋರುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ಕೊಟ್ಟ ಮಾಹಿತಿ ಹೇಗೆಲ್ಲಾ ಬಳಕೆಯಾಗುತ್ತದೆ ಎನ್ನುವುದು ಜನರಿಗೆ ಅರ್ಥ ಮಾಡಿಸಬೇಕೆಂದು ಮಾಧ್ಯಮದ ಎದುರು ಬಂದೆ.

‘ನನ್ನ ಉದ್ದೇಶವೇನೋ ಚೆನ್ನಾಗಿದೆ. ಆದರೆ ಸತ್ಯವನ್ನು ಸಾರಿಹೇಳಲು ಸಂಕಲ್ಪ ಮಾಡಿದ ಕ್ಷಣದಿಂದ ನನಗೆ ಭಯವಾಗುತ್ತಿತ್ತು. ಈಗಲೂ ಭಯವಾಗುತ್ತಿದೆ. ರಿಪಬ್ಲಿಕನ್ ಪಕ್ಷದ ಕೋಟ್ಯಧೀಶರು ಮತ್ತು ಪ್ರಭಾವಿಗಳ ವಿರುದ್ಧ ನಾನು ಮಾತನಾಡಿದ್ದೇನೆ. ಸಾಮಾಜಿಕ ಮಾಧ್ಯಮ ದಿಗ್ಗಜ ಫೇಸ್‌ಬುಕ್ ವಿರುದ್ಧ ಮಾತನಾಡಿದ್ದೇನೆ. ನನ್ನ ಮೇಲೆ ನಡೆಯುವ ಪ್ರತಿದಾಳಿ ಹೇಗಿರಬಹುದು ಎಂದು ಹಲವು ಸಲ ಯೋಚನೆ ಮಾಡಿದ್ದೇನೆ. ಆದರೆ ಜನರ ಮನಸಿನ ಜೊತೆಗೆ ಆಟವಾಡುವ ಈ ಕಂಪನಿಯ ಶಕ್ತಿಯನ್ನು ಜನರಿಗೆ ತಿಳಿಸಬೇಕು ಎಂಬ ಬದ್ಧತೆ ಆ ಭಯವನ್ನು ಮೀರಿ ನಿಲ್ಲಲು ಕಾರಣವಾಯಿತು. ನನ್ನಿಂದ ಒಂದು ದೊಡ್ಡ ತಪ್ಪು ನಡೆದಿದೆ. ನಾನು ನನ್ನ ಪಾಲನ್ನು ಒಪ್ಪಿಕೊಂಡಿದ್ದೇನೆ. ಸಾಮಾಜಿಕ ಮಾಧ್ಯಮಗಳನ್ನು ಮುನ್ನಡೆಸುವ ಕಂಪನಿಗಳು ತಮ್ಮತಮ್ಮ ಹೊಣೆಗಾರಿಕೆಯನ್ನು ಒಪ್ಪಿಕೊಳ್ಳಬೇಕಾದ ಕಾಲ ಬಂದಿದೆ. ನನ್ನ ಪ್ರಕಾರ ಫೇಸ್‌ಬುಕ್ ಕೂಡ ತನ್ನಿಂದ ಆಗಿರುವ ತಪ್ಪನ್ನು ಒಪ್ಪಿಕೊಳ್ಳಲೇಬೇಕು’ ಎಂದು ತನ್ನ ಮಾತು ಮುಗಿಸುತ್ತಾನೆ.

ಇದೇ ವೈಲಿ ಮತ್ತೊಂದೆಡೆ ಹೀಗೆ ಹೇಳಿದ್ದಾನೆ: ‘ಫೇಸ್‌ಬುಕ್ ಅಂದ್ರೆ ಸರ್ಕಾರವಲ್ಲ, ಫೇಸ್‌ಬುಕ್ ಅಂದ್ರೆ ದೇಶವಲ್ಲ’. ಈ ಮಾತು ಭಾರತದ ಸಂದರ್ಭದಲ್ಲಿಯೂ ನಿಜವಲ್ಲವೇ? ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಮತದಾರರನ್ನು ಸೆಳೆಯುವ ಗಾಳಗಳಾಗಿ ಪರಿಭಾವಿಸಿರುವ ಕರ್ನಾಟಕದ ಸಂದರ್ಭದಲ್ಲಿ ವೈಲಿ ಹೇಳುವ ಮಾತು ಹೊಳೆಯಿಸುವ ಅರ್ಥದ ಸಾಧ್ಯತೆಗಳು ಅಗಾಧ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT