ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಜಿಸ್ಯಾಟ್‌–6ಎ’ ಉಪಗ್ರಹ ಸಂಪರ್ಕ ಕಳೆದುಕೊಂಡ ಇಸ್ರೊ

Last Updated 1 ಏಪ್ರಿಲ್ 2018, 8:37 IST
ಅಕ್ಷರ ಗಾತ್ರ

ಬೆಂಗಳೂರು: ಮಾ.29ರಂದು ಉಡಾವಣೆ ಮಾಡಿದ್ದ 'ಜಿಸ್ಯಾಟ್–6ಎ’ ಉಪಗ್ರಹ ಸಂಪರ್ಕ ಕಳೆದುಕೊಂಡಿರುವುದಾಗಿ ಇಸ್ರೊ ಭಾನುವಾರ ಹೇಳಿದೆ.

₹260 ಕೋಟಿ ವೆಚ್ಚ, 2140 ಕೆ.ಜಿ. ತೂಕದ ಸ್ವದೇಶಿ ನಿರ್ಮಿತ ಉಪಗ್ರಹ ಜಿಸ್ಯಾಟ್‌–6ಎ ಶನಿವಾರ ಬೆಳಗಿನವರೆಗೂ ಕಾರ್ಯನಿರ್ವಹಣೆ ಸರಿಯಾಗಿರುವುದನ್ನು ಗಮನಿಸಲಾಗಿತ್ತು. ಅದೇ ದಿನ(ಮಾ.31) ಉಪಗ್ರಹವನ್ನು ಮುಂದಿನ ಕಕ್ಷೆಗೆ ಏರಿಸುವ ಪ್ರಕ್ರಿಯೆಯ ಭಾಗವಾಗಿ ಲಿಕ್ವಿಡ್‌ ಅಪೋಜಿ ಮೋಟಾರ್(ಲ್ಯಾಮ್‌) ಇಂಜಿನ್ ಅನ್ನು 53 ನಿಮಿಷ ಉರಿಸಲಾಗಿತ್ತು.

ಉಪಗ್ರಹ ಮುನ್ನುಗಿಸುವ ಮೂರನೇ ಹಾಗೂ ಅಂತಿಮ ಹಂತ ಭಾನುವಾರ ನಿಗದಿಯಾಗಿತ್ತು. ಆದರೆ, ಉಪಗ್ರಹ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಇಸ್ರೊ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

ಜಿಸ್ಯಾಟ್‌–6ಎ ಅನ್ನು ಹೊತ್ತಿದ್ದ ಭೂಸ್ಥಾಯಿ ಉಪಗ್ರಹ ಉಡಾವಣಾ ವಾಹನ (ಜಿಎಸ್‌ಎಲ್‌ವಿ)– ಎಫ್08  ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ನಭಕ್ಕೆ ಚಿಮ್ಮಿತು. ಪೂರ್ವನಿಗದಿಯಂತೆ ಮುಂದಿನ 18 ನಿಮಿಷಗಳಲ್ಲಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿತ್ತು.

ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ದತ್ತಾಂಶ ರವಾನೆ ಸಾಧ್ಯವಾಗಿಸುವ ಎಸ್‌–ಬ್ಯಾಂಡ್ ತರಂಗಾಂತರದ ಉಪಗ್ರಹ ಜಿಸ್ಯಾಟ್‌–6ಎ. ಭಾರತದಲ್ಲಿ ಮೊಬೈಲ್ ಸೇವೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಉಪಗ್ರಹ ಉಡಾವಣೆಯಾಗಿತ್ತು.

ಮತ್ತೆ ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಲು ಇಸ್ರೊ ನಿರಂತರ ಪ್ರಯತ್ನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT