ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಡೆಯುವುದೇ ಕನ್ನಡಿಗರ ಕಮಾಲ್‌?

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅದು 2014ರ ಐಪಿಎಲ್‌ ಟೂರ್ನಿಯ ಫೈನಲ್‌ ಪಂದ್ಯ. ಬೆಂಗಳೂರಿನಲ್ಲಿ ನಡೆದ ಆ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ನೀಡಿದ್ದ 200 ರನ್‌ ಗುರಿಯನ್ನು ಮುಟ್ಟಿ ಕೋಲ್ಕತ್ತ ನೈಟ್‌ ರೈಡರ್ಸ್‌ ಟ್ರೋಫಿ ಎತ್ತಿ ಹಿಡಿದಿತ್ತು. ಗೌತಮ್ ಗಂಭೀರ್‌, ಯೂಸುಫ್‌ ಪಠಾಣ್‌, ಶಕೀಬ್‌ ಅಲ್ ಹಸನ್‌ ಹೀಗೆ ರೈಡರ್ಸ್‌ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಬೇಗನೆ ಔಟಾಗಿದ್ದರು. ಆದರೆ ಮನೀಷ್‌ ಪಾಂಡೆ 50 ಎಸೆತಗಳಲ್ಲಿ 94 ರನ್ ಗಳಿಸಿ ರೈಡರ್ಸ್‌ ಪಡೆ ಚಾಂಪಿಯನ್‌ ಆಗಲು ಕಾರಣರಾಗಿದ್ದರು.

ಅದೇ ಆವೃತ್ತಿಯಲ್ಲಿ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್‌ ರಾಬಿನ್‌ ಉತ್ತಪ್ಪ ಒಟ್ಟು 660 ರನ್ ಗಳಿಸಿ ಹೆಚ್ಚು ರನ್‌ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಹೀಗೆ ಪ್ರತಿ ಆವೃತ್ತಿಯಲ್ಲಿಯೂ ಮಿಂಚುತ್ತಿರುವ ಕರ್ನಾಟಕದ ಆಟಗಾರರು ಈ ಬಾರಿಯ ಐಪಿಎಲ್‌ನಲ್ಲಿಯೂ ರನ್‌ ಹೊಳೆ ಹರಿಸಲು ಸಜ್ಜಾಗಿದ್ದಾರೆ.

(ಕೆ.ಎಲ್‌.ರಾಹುಲ್‌)

ಪ್ರತಿ ಆವೃತ್ತಿಯಲ್ಲಿ ರಾಜ್ಯದ ಹೊಸ ಆಟಗಾರರು ಸ್ಥಾನ ಪಡೆದುಕೊಳ್ಳುತ್ತಿದ್ದಾರೆ. ಅನಿರುದ್ಧ ಜೋಶಿ, ಧಾರವಾಡದ ಪವನ ದೇಶಪಾಂಡೆ ಅವರಿಗೆ ಈ ಬಾರಿ ಅವಕಾಶ ಸಿಕ್ಕಿದೆ. ಏ. 7ರಿಂದ ಆರಂಭವಾಗಲಿರುವ ಐಪಿಎಲ್‌ 11ನೇ ಆವೃತ್ತಿಯಲ್ಲಿ ಕರ್ನಾಟಕದ ಒಟ್ಟು ಹತ್ತು ಆಟಗಾರರು ಇದ್ದಾರೆ.

ಆರ್‌ಸಿಬಿಯಲ್ಲಿ ಅನಿರುದ್ಧ ಜೋಶಿ, ಪವನ ದೇಶಪಾಂಡೆ, ಕೋಲ್ಕತ್ತ ನೈಟ್‌ ರೈಡರ್ಸ್‌ನಲ್ಲಿ ರಾಬಿನ್‌ ಉತ್ತಪ್ಪ, ವಿನಯ್‌ ಕುಮಾರ್‌, ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡದಲ್ಲಿ ಕರುಣ್‌ ನಾಯರ್‌, ಕೆ.ಎಲ್‌. ರಾಹುಲ್‌, ಮಯಂಕ್‌ ಅಗರವಾಲ್‌, ಸನ್‌ರೈಸರ್ಸ್‌ ಹೈದರಾಬಾದ್‌ನಲ್ಲಿ ಮನೀಷ್ ಪಾಂಡೆ, ರಾಜಸ್ಥಾನ ರಾಯಲ್ಸ್‌ ಬಳಗದಲ್ಲಿ ಆಫ್‌ ಸ್ಪಿನ್ನರ್‌ ಕೆ. ಗೌತಮ್‌ ಮತ್ತು ಶ್ರೇಯಸ್‌ ಗೋಪಾಲ್‌ ಸ್ಥಾನ ಹೊಂದಿದ್ದಾರೆ.

ಹೆಚ್ಚಿದ ಬೆಲೆ

ಸ್ಪರ್ಧೆಗೆ ತಕ್ಕಂತೆ ಕರ್ನಾಟಕದ ಆಟಗಾರರು ಆಡುವ ಶೈಲಿ ಬದಲಿಸಿಕೊಂಡಿದ್ದಾರೆ. ಅಭಿಮಾನಿಗಳು ಮೆಚ್ಚುವಂತೆ ಆಕರ್ಷಕ ಬೌಂಡರಿ, ಸಿಕ್ಸರ್‌ಗಳನ್ನು ಬಾರಿಸುವ ಕೌಶಲ ರೂಢಿಸಿಕೊಂಡಿದ್ದಾರೆ. ಈ ಬಾರಿಯ ಹರಾಜಿನಲ್ಲಿ ರಾಜ್ಯದ ಆಟಗಾರರಿಗೆ ಲಭಿಸಿದ ಬೇಡಿಕೆಯೇ ಇದಕ್ಕೆ ಸಾಕ್ಷಿ. ರಾಹುಲ್‌ ಮತ್ತು ಮನೀಷ್‌ ಪಾಂಡೆ ತಲಾ ₹ 11 ಕೋಟಿಗೆ ಮಾರಾಟವಾದರು. ಇದರಿಂದ ಅವರು 11ನೇ ಆವೃತ್ತಿಯಲ್ಲಿ ಹೆಚ್ಚು ಬೆಲೆಗೆ ಮಾರಾಟವಾದ ಭಾರತದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿದರು. ಜಯದೇವ ಉನದ್ಕತ್‌ (ರಾಜಸ್ಥಾನ ರಾಯಲ್ಸ್ ತಂಡ ₹ 11.5 ಕೋಟಿ) ಮೊದಲ ಸ್ಥಾನದಲ್ಲಿದ್ದಾರೆ.

ಮಯಂಕ್‌ ಮೇಲೆ ಕಣ್ಣು

ಎರಡು–ಮೂರು ವರ್ಷಗಳ ಹಿಂದೆ ದೇಶಿ ಕ್ರಿಕೆಟ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ್ದ ಬಲಗೈ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್ ಈಗ ಐಪಿಎಲ್‌ ಫ್ರಾಂಚೈಸ್‌ಗಳ ಕಣ್ಣು ಕುಕ್ಕುವಂತೆ ರನ್‌ ಹೊಳೆ ಹರಿಸಿದ್ದಾರೆ. ರಣಜಿ, ವಿಜಯ ಹಜಾರೆ ಟೂರ್ನಿಯಲ್ಲಿ ನೀಡಿದ ಅಪೂರ್ವ ಆಟ ಅವರಿಗೆ ತಾರಾ ಪಟ್ಟ ತಂದುಕೊಟ್ಟಿದೆ.

(ಮಯಂಕ್‌ ಅಗರವಾಲ್)

2017–18ರ ರಣಜಿ ಟೂರ್ನಿಯಲ್ಲಿ ಎಂಟು ಪಂದ್ಯಗಳಲ್ಲಿ ಆಡಿದ್ದ ಅವರು ಒಂದು ತ್ರಿಶತಕ ಸಿಡಿಸಿದ್ದರು. ಐದು ಶತಕ, ಎರಡು ಅರ್ಧಶತಕ ಸೇರಿದಂತೆ ಒಟ್ಟು 1160 ರನ್‌ ಕಲೆ ಹಾಕಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದರು. ಫೆಬ್ರುವರಿಯಲ್ಲಿ ನಡೆದ ವಿಜಯ ಹಜಾರೆ ಟೂರ್ನಿಯಲ್ಲಿ ಒಡಿಶಾ, ಹೈದರಾಬಾದ್‌ ವಿರುದ್ಧದ ಪಂದ್ಯಗಳಲ್ಲಿ ಶತಕ ಹೊಡೆದು ಅಲ್ಲಿಯೂ ಅಗ್ರಸ್ಥಾನ ಪಡೆದರು. ಇದರಿಂದ ಅವರು ಒಂದೇ ದೇಶಿ ಋತುವಿನ ಎಲ್ಲ ಮಾದರಿಗಳಿಂದ ಒಟ್ಟು ಹೆಚ್ಚು ರನ್‌ (2,141 ರನ್‌) ಗಳಿಸಿದ ಬ್ಯಾಟ್ಸ್‌ಮನ್‌ ಎನ್ನುವ ಗೌರವಕ್ಕೆ ಪಾತ್ರರಾದರು. ಟ್ವೆಂಟಿ–20 ಕ್ರಿಕೆಟ್‌ನ ಪರಿಣತ ಬ್ಯಾಟ್ಸ್‌ಮನ್‌ ಮನೀಷ್‌, ರಾಬಿನ್‌ ಉತ್ತಪ್ಪ ಅವರ ಮೇಲೂ ಹೆಚ್ಚು ನಿರೀಕ್ಷೆಯಿದೆ.

ವಿವಿಧ ವಯೋಮಿತಿಯೊಳಗಿನ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಮಾಡಿರುವ ಪವನ್‌ ದೇಶಪಾಂಡೆ ಮತ್ತು ಅನಿರುದ್ಧ ಜೋಶಿ ಅವರಿಗೆ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗುವುದೇ ಎನ್ನುವ ಕುತೂಹಲವಿದೆ.

ಒಂದೂ ಪ್ರಥಮ ದರ್ಜೆ ಪಂದ್ಯವಾಡದ ಜೋಶಿ ಹತ್ತು ಲೀಸ್ಟ್‌ ‘ಎ’ ಮತ್ತು 16 ಟಿ–20 ಪಂದ್ಯಗಳಲ್ಲಿ ಆಡಿದ್ದಾರೆ. ಹೋದ ವರ್ಷ ಮೊಹಾಲಿಯಲ್ಲಿ ಮಹಾರಾಷ್ಟ್ರ ವಿರುದ್ಧ ಪಂದ್ಯವಾಡುವ ಮೂಲಕ ಪವನ್‌ ರಣಜಿಗೆ ಪದಾರ್ಪಣೆ ಮಾಡಿದ್ದರು. ಮೊದಲ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿದ್ದರು. 11 ಟಿ–20 ಪಂದ್ಯಗಳಿಂದ 336 ರನ್‌ ಗಳಿಸಿದ್ದಾರೆ.

ಟೂರ್ನಿಯ ಮೊದಲ ಆವೃತ್ತಿಯಿಂದಲೂ ಕರ್ನಾಟಕದ ಆಟಗಾರರು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಚೊಚ್ಚಲ ಟೂರ್ನಿಯಲ್ಲಿ ರಾಹುಲ್‌ ದ್ರಾವಿಡ್‌, ಕೆ.ಪಿ ಅಪ್ಪಣ್ಣ , ಭರತ್‌ ಚಿಪ್ಲಿ, ಅನಿಲ್ ಕುಂಬ್ಳೆ, ಆರ್‌. ವಿನಯ ಕುಮಾರ್‌, ಜೆ. ಅರುಣ್‌ ಕುಮಾರ್‌, ಸುನೀಲ್‌ ಜೋಶಿ (ಎಲ್ಲರೂ ಆರ್‌ಸಿಬಿ), ಮನೀಷ್‌ ಪಾಂಡೆ, ರಾಬಿನ್ ಉತ್ತಪ್ಪ (ಇಬ್ಬರೂ ಮುಂಬೈ ಇಂಡಿಯನ್ಸ್‌) ತಂಡಗಳಲ್ಲಿದ್ದರು. ಆರಂಭದಿಂದ ಇಲ್ಲಿಯವರೆಗೆ ನಡೆದ ಹತ್ತು ಆವೃತ್ತಿಗಳಲ್ಲಿ ಹಲವರು ಬಂದು ಹೋದರೂ ಆಡುವ ಹನ್ನೊಂದರ ಬಳಗದಲ್ಲಿ ಗಟ್ಟಿ ನೆಲೆ ಉಳಿಸಿಕೊಳ್ಳಲು ಹೆಚ್ಚು ಆಟಗಾರರಿಗೆ ಸಾಧ್ಯವಾಗಿಲ್ಲ.

(ವಿನಯ ಕುಮಾರ್‌)

ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಬೌಲಿಂಗ್‌ ಮಾಡುವ ವೇಗಿಗಳಾದ ಅಭಿಮನ್ಯು ಮಿಥುನ್‌, ಎಸ್‌. ಅರವಿಂದ್, ವಿಕೆಟ್‌ ಕೀಪರ್‌ ಸಿ.ಎಂ. ಗೌತಮ್‌ ಹೀಗೆ ಪ್ರಮುಖ ಆಟಗಾರರನ್ನು ಈ ಬಾರಿಯ ಟೂರ್ನಿಯಲ್ಲಿ ಯಾವ ತಂಡಗಳೂ ಖರೀದಿಸಿಲ್ಲ. ಆದ್ದರಿಂದ ಅವಕಾಶ ಪಡೆದುಕೊಂಡಿರುವ ಆಟಗಾರರಿಗೆ ತಂಡದಲ್ಲಿ ಕಾಯಂ ಸ್ಥಾನ ಉಳಿಸಿಕೊಳ್ಳುವ ಸವಾಲಿದೆ. ಆದ್ದರಿಂದ ಪ್ರತಿ ವರ್ಷದ ಟೂರ್ನಿ ಆರಂಭವಾದಾಗಲೂ ರಾಜ್ಯದ ಆಟಗಾರರ ಮೇಲೆ ಕರ್ನಾಟಕದ ಕ್ರಿಕೆಟ್‌ ಪ್ರೇಮಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ.‌

**

ಸಂಭ್ರಮ ಹೆಚ್ಚಿಸಲಿದೆ ಕನ್ನಡ ಹಾಡು

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳು ನಡೆಯುವ ವೇಳೆ ಅಭಿಮಾನಿಗಳನ್ನು ರಂಜಿಸಲು ಕನ್ನಡ ಚಿತ್ರಗೀತೆಗಳ ಹಾಡುಗಳನ್ನು ಹಾಕುವುದು ಸಾಮಾನ್ಯ. ಆದರೆ ಈ ಬಾರಿಯ ಟೂರ್ನಿಯಲ್ಲಿ ಐಪಿಎಲ್‌ ಸಲುವಾಗಿಯೇ ಪ್ರತ್ಯೇಕ ಹಾಡು ಪ್ರಸಾರವಾಗಲಿದೆ.

ಹಿಂದಿನ ಆವೃತ್ತಿಗಳಲ್ಲಿ ಹಿಂದಿಯಲ್ಲಿ ಥೀಮ್‌ ಸಾಂಗ್‌ ಇರುತ್ತಿತ್ತು. ಈ ಬಾರಿ ಕನ್ನಡಿಗ ಸಿದ್ಧಾರ್ಥ ಬಸ್ರೂರು ಅವರು ‘ಶೂರರ ವೀರರ ಆಟವಿದು, ರೋಮಾಂಚಕ ರೋಚಕ ಕೂಟವಿದು, ಶಬ್ಧಗಳಿಲ್ಲ ಬಣ್ಣಿಸಲು, ಚಂಡ ಪ್ರಚಂಡರು ಇಲ್ಲಿ, ಪ್ರತಿ ಕದನವೂ ಇಲ್ಲಿ ಬಲು ಕಠಿಣ...’ ಎನ್ನುವ ಸುಂದರ ಕನ್ನಡ ಹಾಡನ್ನು ರಚನೆ ಮಾಡಿದ್ದಾರೆ. ಒಂದು ನಿಮಿಷದ ಹಾಡಿನ ವಿಡಿಯೊ ಈಗ ಜನಪ್ರಿಯತೆ ಪಡೆದುಕೊಂಡಿದೆ.

(ಪವನ್‌ ದೇಶಪಾಂಡೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT