ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವಲಿದ್ದ ಶಿಕ್ಷಕರಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ

Last Updated 1 ಏಪ್ರಿಲ್ 2018, 19:48 IST
ಅಕ್ಷರ ಗಾತ್ರ

ನವದೆಹಲಿ: ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಿದ್ದ ಕೊಠಡಿಯ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕರೇ ಕೇಂದ್ರೀಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ (ಸಿಬಿಎಸ್‌ಇ) 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ದೆಹಲಿ ಅಪರಾಧ ವಿಭಾಗದ ಪೊಲೀಸರು ಖಾಸಗಿ ಶಾಲೆಯೊಂದರ ಇಬ್ಬರು ಶಿಕ್ಷಕರು ಮತ್ತು ತರಬೇತಿ ಕೇಂದ್ರವೊಂದರ ಮಾಲೀಕನನ್ನು ಬಂಧಿಸಿದ್ದಾರೆ.

ಪೊಲೀಸರು  ಮೂವರನ್ನೂ ನ್ಯಾಯಾಲಯದ ಎದುರು ಹಾಜರುಪಡಿಸಿದ್ದು, ಎರಡು ದಿನಗಳ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

ಬಂಧಿತರಲ್ಲಿ ರಿಷಭ್ ಮತ್ತು ರೋಹಿತ್ ಇಲ್ಲಿನ ‘ಮದರ್ ಖಜಾನಿ ಕಾನ್ವೆಂಟ್’ನಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ; ಮತ್ತೊಬ್ಬ ಆರೋಪಿ ತೌಕೀರ್ ಇಲ್ಲಿನ ಭಾವನ ಎಂಬಲ್ಲಿ ತರಬೇತಿ ಕೇಂದ್ರವನ್ನು ನಡೆಸುತ್ತಿದ್ದಾನೆ. ರಿಷಭ್‌ನ ಸೂಚನೆ ಮೇರೆಗೆ ರೋಹಿತ್ ಈ ಕೆಲಸ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಅರ್ಥಶಾಸ್ತ್ರ ಪರೀಕ್ಷೆ ಆರಂಭವಾಗುವುದಕ್ಕೆ ಸುಮಾರು 40 ನಿಮಿಷ ಮೊದಲು ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದ್ದಕ್ಕೆ ಇಬ್ಬರೂ ಎಷ್ಟು ಹಣ ಪಡೆದಿದ್ದಾರೆ ಮತ್ತು ಈ ಇಬ್ಬರೂ ಬೇರೆ ಪತ್ರಿಕೆಗಳನ್ನೂ ಸೋರಿಕೆ ಮಾಡಿದ್ದಾರೆಯೇ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಪತ್ತೆಗೆ ನೆರವಾದ ಚಿತ್ರ: ವಾಟ್ಸ್‌ಆ್ಯಪ್‌ ಗ್ರೂಪ್‌ಗಳಲ್ಲಿ ಹರಿದಾಡಿದ್ದ ಪ್ರಶ್ನೆಪತ್ರಿಕೆಯ ಚಿತ್ರವನ್ನು ಆಧಾರವಾಗಿಟ್ಟುಕೊಂಡು ಆರೋಪಿಗಳನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಪ್ರಶ್ನೆಪತ್ರಿಕೆಗಳ ಮೇಲ್ಭಾಗದ ಬಲತುದಿಯಲ್ಲಿ ಪರೀಕ್ಷಾ ಕೇಂದ್ರದ ಕೋಡ್ ಮುದ್ರಿತವಾಗಿರುತ್ತದೆ. ಆರೋಪಿಗಳು ಸೆರೆಹಿಡಿದಿದ್ದ ಪ್ರಶ್ನೆಪತ್ರಿಕೆಯ ಚಿತ್ರದಲ್ಲಿ ಈ ಕೋಡ್‌ ಸಹ ಸೆರೆಯಾಗಿತ್ತು. ಆ ಕೋಡ್‌ನ ಸಹಾಯದಿಂದ ಆ ಪರೀಕ್ಷಾ ಕೇಂದ್ರ ಅರ್ಥಾತ್ ಶಾಲೆಯನ್ನು ಗುರುತಿಸಲಾಯಿತು. ಜತೆಗೆ ಪ್ರಶ್ನೆಪತ್ರಿಕೆ ಪಡೆದುಕೊಂಡಿದ್ದ ವಿದ್ಯಾರ್ಥಿ ಸಹ ತೌಕೀರ್‌ ಬಗ್ಗೆ ಮಾಹಿತಿ ನೀಡಿದ್ದ ಅವರು ಹೇಳಿದ್ದಾರೆ.

ಪರೀಕ್ಷೆಯ ದಿನ ತೌಕೀರ್ ಬೆಳಿಗ್ಗೆ 9.45ಕ್ಕೇ ತನ್ನ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆಯ ಚಿತ್ರಗಳನ್ನು ವಾಟ್ಸ್‌ಆ್ಯಪ್ ಮಾಡಿದ್ದ. ಆ ಅವಧಿಯಲ್ಲಿ ಪ್ರಶ್ನೆಪತ್ರಿಕೆಗಳು ಇನ್ನೂ ಪ್ರಶ್ನೆಪತ್ರಿಕೆಗಳ ಕೊಠಡಿಯಲ್ಲೇ ಇರುತ್ತವೆ. ಆ ದಿನ ಪ್ರಶ್ನೆಪತ್ರಿಕೆ ಕೊಠಡಿಯ ಮೇಲ್ವಿಚಾರಣೆಗೆ ನಿಯೋಜನೆಗೊಂಡಿದ್ದ ಶಿಕ್ಷಕರನ್ನು ವಿಚಾರಣೆ ನಡೆಸಿದಾಗ ಪ್ರಶ್ನೆಪತ್ರಿಕೆಯ ಚಿತ್ರ ತೆಗೆದವರು ಅವರೇ ಎಂಬುದು ಪತ್ತೆಯಾಯಿತು. ತೌಕೀರ್ ಸಹ ಈ ಬಗ್ಗೆ ಬಾಯ್ಬಿಟ್ಟಿದ್ದ. ಬಂಧಿತ ಶಿಕ್ಷಕರು ಪ್ರಶ್ನೆಪತ್ರಿಕೆ ಕೊಠಡಿಯಲ್ಲಿದ್ದ ಪ್ರಶ್ನೆಪತ್ರಿಕೆಗಳ ಕಟ್ಟನ್ನು ಒಡೆದು, ಅದರ ಚಿತ್ರ ಸೆರೆಹಿಡಿದು ತೌಕೀರ್‌ಗೆ ರವಾನಿಸಿದ್ದಾರೆ. ಆತ ಅದನ್ನು ತನ್ನ ವಿದ್ಯಾರ್ಥಿಗಳಿಗೆ ರವಾನಿಸಿದ್ದಾನೆ ಎಂದು ಅವರು ವಿವರಿಸಿದ್ದಾರೆ.

ಎರಡು ಪ್ರಕರಣ ದಾಖಲು: ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ. ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮಾರ್ಚ್ 27ರಂದು ಮೊದಲ ಪ್ರಕರಣ ದಾಖಲಾಗಿದ್ದರೆ, ಗಣಿತ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿದಂತೆ ಮಾರ್ಚ್ 28ರಂದು ಎರಡನೇ ಪ್ರಕರಣ ದಾಖಲಾಗಿದೆ. ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ತರಬೇತಿ ಕೇಂದ್ರದ ಮಾಲೀಕರೂ ಸೇರಿ ಈವರೆಗೆ 60ಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ಹಂಚಿಕೊಳ್ಳಲಾಗಿದ್ದ 10 ವಾಟ್ಸ್‌ಆ್ಯಪ್ ಗುಂಪುಗಳ ನಿರ್ವಾಹಕರನ್ನೂ ವಿಚಾರಣೆ ನಡೆಸಲಾಗಿದೆ. ಸೋರಿಕೆಯಾಗಿರುವ ಪ್ರಶ್ನೆಪತ್ರಿಕೆಯನ್ನು ತಮಗೆ ಮತ್ಯಾರೋ ಕಳುಹಿಸಿದ್ದು ಎಂದೇ ವಿಚಾರಣೆ ವೇಳೆ ಎಲ್ಲರೂ ಹೇಳಿಕೆ ನೀಡಿದ್ದಾರೆ.

ಮಾಹಿತಿ ನೀಡಿದವರ ವಿಚಾರಣೆ
10ನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವ ಬಗ್ಗೆ ಸಿಬಿಎಸ್‌ಇ ಮುಖ್ಯಸ್ಥೆ ಅನಿತಾ ಕರ್‌ವಾಲ್‌ಗೆ ಮಾಹಿತಿ ನೀಡಿದ್ದ ವಿದ್ಯಾರ್ಥಿ ಮತ್ತು ಆತನ ತಂದೆಯನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪರೀಕ್ಷೆಯ ಹಿಂದಿನ ರಾತ್ರಿ ಸುಮಾರು 1.30ರ ವೇಳೆಗೆ ವಿದ್ಯಾರ್ಥಿಯು ಅನಿತಾ ಅವರಿಗೆ ಇ–ಮೇಲ್ ಮಾಡಿದ್ದ. ವಾಟ್ಸ್‌ಆ್ಯಪ್‌ನಲ್ಲಿ ತನಗೆ ದೊರೆತಿದ್ದ ಪ್ರಶ್ನೆಪತ್ರಿಕೆಗಳ ಚಿತ್ರಗಳನ್ನು ಆತ ಇ–ಮೇಲ್‌ನಲ್ಲಿ ಲಗತ್ತಿಸಿದ್ದ. ಜತೆಗೆ ಪರೀಕ್ಷೆಯನ್ನು ರದ್ದುಪಡಿಸುವಂತೆಯೂ ಆತ ಮನವಿ ಮಾಡಿಕೊಂಡಿದ್ದ ಎಂದು ಮೂಲಗಳು ಹೇಳಿವೆ.

ಗೂಗಲ್‌ನ ನೆರವು ಪಡೆದು ಇ–ಮೇಲ್ ಎಲ್ಲಿಂದ ಬಂದಿತ್ತು ಎಂಬುದನ್ನು ಹುಡುಕಿ, ಆ ವಿದ್ಯಾರ್ಥಿಯನ್ನು ಗುರುತಿಸಲಾಗಿತ್ತು. ಸಿಬಿಎಸ್‌ಇ ಮುಖ್ಯಸ್ಥರಿಗೆ ಮೇಲ್ ಮಾಡಲು ಆತ ತನ್ನ ತಂದೆಯ ಇ–ಮೇಲ್ ಬಳಸಿಕೊಂಡಿದ್ದ. ಆತನಿಗೆ ಪ್ರಶ್ನೆಪತ್ರಿಕೆ ಹೇಗೆ ದೊರೆಯಿತು ಎಂಬುದನ್ನು ಪತ್ತೆ ಮಾಡುವ ಸಲುವಾಗಿ ವಿಚಾರಣೆ ನಡೆಸಲಾಗುತ್ತಿದೆ.

‘ಹಾಳೆಯಲ್ಲಿ ಬರೆದು,ಚಿತ್ರ ತೆಗೆದು ಗಣಿತದ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿದೆ. ಹೀಗಾಗಿ ಸೋರಿಕೆ ಮಾಡಿದವರು ಯಾರು ಎಂಬುದನ್ನು ಪತ್ತೆ ಮಾಡುವುದು ಕಷ್ಟವಾಗಿದೆ’ ಎಂದು ಮೂಲಗಳು ಹೇಳಿವೆ.

**

ಪ್ರಶ್ನೆಪತ್ರಿಕೆಗಳು ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿವೆ. ಆದರೆ ಪ್ರಶ್ನೆಪತ್ರಿಕೆಗಳನ್ನು ಹಂಚಿದವರೆಲ್ಲಾ ಪ್ರತಿಯಾಗಿ ಹಣ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯ ದೊರೆತಿಲ್ಲ
- ತನಿಖಾಧಿಕಾರಿ

**

ಸೋರಿಕೆ ಬಗ್ಗೆ ಪ್ರಧಾನಿ ಮೋದಿ ಬಾಯ್ಬಿಡಲಿ: ಕಾಂಗ್ರೆಸ್ ಒತ್ತಾಯ
ನವದೆಹಲಿ (ಪಿಟಿಐ):
ಸಿಬಿಎಸ್‌ಇ ಪ್ರಶ್ನೆಪತ್ರಿಕೆಗಳ ಸೋರಿಕೆ ಸಂಬಂಧ ಜಾರ್ಖಂಡ್‌ನಲ್ಲಿ ಪೊಲೀಸರು ಎಬಿವಿಪಿ ನಾಯಕನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮಾತನಾಡಬೇಕು, ಸಂತ್ರಸ್ತ

ವಿದ್ಯಾರ್ಥಿಗಳಿಗೆ ಪರಿಹಾರ ಸೂಚಿಸಬೇಕು ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಒತ್ತಾಯಿಸಿದ್ದಾರೆ.

‘ಪ್ರಶ್ನೆಪತ್ರಿಕೆ ಸೋರಿಕೆಯಿಂದ ದೆಹಲಿಯ ವಿದ್ಯಾರ್ಥಿಗಳಿಗೆ ಮಾತ್ರ ತೊಂದರೆಯಾಗಿದೆ ಎಂದು ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಆದರೆ ಪೊಲೀಸರ ವಶದಲ್ಲಿರುವ ಎಬಿವಿಪಿ ನಾಯಕ ಜಾರ್ಖಂಡ್‌ನಲ್ಲಿ ತರಬೇತಿ ಕೇಂದ್ರ ನಡೆಸುತ್ತಿದ್ದಾನೆ. ಆತನ ಕೈಗೆ ಪ್ರಶ್ನೆಪತ್ರಿಕೆಗಳು ಹೇಗೆ ದೊರೆತವು ಎಂಬುದು ಇನ್ನೂ ಪತ್ತೆಯಾಗಿಲ್ಲ. ದೇಶದ ಹಲವೆಡೆ ಸೋರಿಕೆಯಾಗಿದೆ. ಸರ್ಕಾರದಲ್ಲಿರುವ ವ್ಯಕ್ತಿಗಳು ಮತ್ತು ಬಿಜೆಪಿಯ ನಾಯಕರ ಜತೆ ಈತನಿಗೆ ಸಂಪರ್ಕವಿದೆ’ ಎಂದು ಅವರು ಆರೋಪಿಸಿದ್ದಾರೆ.

‘ಮೊದಲು ಎಸ್‌ಎಸ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿದ್ದವು. ಈಗ ಸಿಬಿಎಸ್‌ಇಯ ಸರದಿ. ಮಧ್ಯಪ್ರದೇಶದ ವ್ಯಾಪಂ ಹಗರಣವನ್ನು ಬಿಜೆಪಿ ರಾಷ್ಟ್ರೀಕರಣ ಮಾಡುತ್ತಿದೆ’ ಎಂದು ಅವರು ವ್ಯಂಗ್ಯವಾಡಿದ್ದಾರೆ.

‘ಈ ಎಲ್ಲಾ ಬೆಳವಣಿಗೆಗಳಿಂದ ನಮ್ಮ ಯುವಕರು ಸಿನಿಕರಾಗುತ್ತಿರುವುದು ದುರದೃಷ್ಟಕರ. ಅವರು ಎತ್ತುತ್ತಿರುವ ಪ್ರಶ್ನೆಗಳಿಗೆ ಅರುಣ್ ಜೇಟ್ಲಿ ಉತ್ತರಿಸುತ್ತಿಲ್ಲ, ರವಿಶಂಕರ್ ಪ್ರಸಾದ್‌ ಸಹ ಮಾತನಾಡುತ್ತಿಲ್ಲ. ಸ್ಮೃತಿ ಇರಾನಿಯಂತೂ ತುಟಿಬಿಚ್ಚುತ್ತಿಲ್ಲ. ಇನ್ನು ಪ್ರಧಾನಿ ಮೋದಿಯಷ್ಟೇ ಮಾತನಾಡಬೇಕು’ ಎಂದು ಅವರು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT