ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಮನರು ಕಂಡ ತ್ರಿವಿಕ್ರಮ ಮರ!

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಪ್ರತಿ ಶನಿವಾರ ಶಾಲೆಗಳಲ್ಲಿ ‘ನೋ ಬ್ಯಾಗ್ ಡೇ’ ಆಚರಿಸಬೇಕೆಂಬ ಸೂಚನೆ ಇದ್ದುದರಿಂದ ನಮ್ಮ ಶಾಲೆಯಲ್ಲೂ ಆ ದಿನ ಪುಸ್ತಕಗಳ ತಂಟೆಗೆ ಹೋಗದೆ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದೆವು. ‘ಒಂದು ಶನಿವಾರ ವನಯಾತ್ರೆ ಹಮ್ಮಿಕೊಂಡು, ಕಣಿಯಾರು ಕಾಡಿನ ಆ ಭಾರೀ ಗಾತ್ರದ ಮರವನ್ನು ಈ ಸಲವಾದರೂ ಯಾಕೆ ನೋಡಿಕೊಂಡು ಬರಬಾರದು’ ಎಂಬ ಮುಖ್ಯೋಪಾಧ್ಯಾಯರ ಸಲಹೆಗೆ ಎಲ್ಲರೂ ಒಕ್ಕೊರಲಿನಿಂದ ಒಪ್ಪಿದರು.

ಎರಡು ವರ್ಷಗಳ ಹಿಂದೆ ಅನುಭವಿಸಿದ ಸೋಲು ಪುನರಾವರ್ತನೆ ಆಗಬಾರದೆಂದು ಆ ಮರದ ಸ್ಥಳ ಪರಿಚಯವಿರುವ ಅರಣ್ಯ ಕಾವಲುಗಾರರೊಬ್ಬರ ಸಹಾಯ ಬೇಡಲು ನಿರ್ಧರಿಸಿದೆವು.

ಎರಡು ವರ್ಷಗಳ ಹಿಂದೆ ಅನುಭವಿಸಿದ ಆ ಸೋಲು ಯಾವುದು ಅಂತೀರಾ? ‘ಕಣಿಯಾರು ಕಾಡಿನಲ್ಲಿ ಒಂದು ಭಾರೀ ದೊಡ್ಡ ಮರವಿದೆಯಂತೆ. ನಾವೆಲ್ಲರೂ ಅಲ್ಲಿಗೆ ಹೋಗೋಣ’ ಎಂದು ನಮ್ಮ ಮುಖ್ಯೋಪಾಧ್ಯಾಯರು ಹೇಳಿದ್ದರು. ಆ ದಿನಕ್ಕಾಗಿ ಕಾದಿದ್ದ ನಾವೆಲ್ಲರೂ ಕಾಡಿನತ್ತ ಪಯಣ ಬೆಳೆಸಿದ್ದೆವು. ಕಾಡಿನೊಳಗಿನ ರಸ್ತೆಯಲ್ಲಿ ಆರು ಕಿ.ಮೀ. ನಡೆದು, ಆ ಮರ ಇದೆಯೆಂದು ಹೇಳಿದ ಜಾಗವನ್ನು ಅಂದಾಜಿಸಿ ಹೊರಟೆವು. ಸ್ವಲ್ಪ ಹೊತ್ತಿನಲ್ಲಿ ದಾರಿ ತಪ್ಪಿದ್ದು ಅರಿವಾಗಿ ಹಿಂದೆ ಬಂದು ಬೇರೊಂದು ಕಡೆಯಿಂದ ನುಗ್ಗಿದೆವು. ರಬ್ಬರ್ ಟ್ಯಾಪಿಂಗ್ ಮಾಡುವ ತಮಿಳು ಕಾಲೊನಿಯವರು ರಕ್ಷಿತಾರಣ್ಯದೊಳಗೆ ಸ್ಮಶಾನ ನಿರ್ಮಿಸಿಕೊಂಡದ್ದು ನಮಗೆ ಹೇಗೆ ತಿಳಿಯ ಬೇಕು? ಗೋರಿಗಳ ನಡುವೆಯೇ ಸಾಗಿದ್ದೆವು. ದಾರಿಯಲ್ಲಿ ಸಿಕ್ಕಿದ ಕೆಲವು ಕಾಡು ಹಣ್ಣುಗಳು ನಮ್ಮ ಹೊಟ್ಟೆ ಸೇರಿದ್ದರೂ ಮಧ್ಯಾಹ್ನದ ಹೊತ್ತಿಗೆ ಹಸಿವು ಜೋರಾಗತೊಡಗಿತ್ತು. ಕಾಡಿನ ದಟ್ಟ ನೆರಳಲ್ಲೂ ಏಪ್ರಿಲ್ ಸೆಕೆ ನಮ್ಮ ದಣಿವನ್ನು ಹೆಚ್ಚಿಸಿತ್ತು. ಕೊನೆಗೂ ನಾವು ಹುಡುಕಿ ಬಂದ ಮರ ಸಿಗಲಿಲ್ಲ. ನಿರಾಶರಾಗಿ ಹಿಂತಿರುಗದೇ ನಿರ್ವಾಹವಿರಲಿಲ್ಲ. ಆಗಿನಿಂದ ಕಾಡು ತ್ತಿದ್ದ ಆ ಮರವನ್ನು ಕಾಣಬೇಕೆಂಬ ಕನಸು ಎರಡು ವರ್ಷಗಳ ಬಳಿಕ ನನಸಾಗುವ ಕ್ಷಣ ಬಂದಿತ್ತು.

ಶನಿವಾರ ಬೆಳಿಗ್ಗೆ ಸರಿಯಾಗಿ ಒಂಬತ್ತು ಗಂಟೆಗೆ ತೊಂಬತ್ತು ವಿದ್ಯಾರ್ಥಿಗಳೊಂದಿಗೆ ಕಾಲ್ನಡಿಗೆ ಯಲ್ಲಿ ಹೊರಟೆವು. ರಸ್ತೆಯಿಂದ ಕಾಡಿನೊಳಗೆ ಪ್ರವೇಶಿಸ ಬೇಕಾದ ಕಡೆ ನಮಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶಂಕರ್ ಕಾಯುತ್ತಿದ್ದರು. ಅವರ ಮಾರ್ಗದರ್ಶನದಲ್ಲಿ ಕಾಡನ್ನು ಹೊಕ್ಕೆವು. ಏರು-ತಗ್ಗುಗಳಲ್ಲಿ, ಸುತ್ತಿಕೊಂಡಿರುವ ಬಳ್ಳಿಗಳನ್ನು ಬಳಸಿ, ಕೆಲವೆಡೆ ಹಾಲುಮಡ್ಡಿ ಸಂಗ್ರಹ ಮಾಡುವವರು ನಡೆದಾಡುವ ಕಾಲುದಾರಿಯಲ್ಲಿ ನಡೆದು, ಸಣ್ಣ ಬೆಟ್ಟ ಹತ್ತಿ ಇಳಿದು, ನೀರು ಬತ್ತಿದ ಹಳ್ಳವನ್ನು ದಾಟಿ ಸಾಗಿದೆವು.

ದಾರಿಯುದ್ದಕ್ಕೂ ಕಾಡಿನ ಅನುಪಮ ಸೌಂದರ್ಯ ನಮ್ಮ ಕಣ್ಮನ ತಣಿಸುತ್ತಿತ್ತು. ವಿವಿಧ ರೂಪ ಹಾಗೂ ಆಕಾರಗಳಲ್ಲಿ ಬೆಳೆದು ಮರಗಳನ್ನು ಸುತ್ತಿಕೊಂಡಿದ್ದ ಬಳ್ಳಿಗಳು, ಆಗತಾನೇ ಹುಟ್ಟಿದ ಸಣ್ಣ ಕಂದನನ್ನು ನೆನಪಿಸುವ ಕೆಂಪಾದ ಚಿಗುರುಗಳು, ಒಣಮರಗಳಲ್ಲಿ ಬೆಳೆದಿದ್ದ ಮರ ಅಣಬೆಗಳು, ಕೀಟಗಳು, ಚಿಟ್ಟೆಗಳು, ಹುತ್ತಗಳು, ದೊಡ್ಡ ಬಂಡೆಗಳು, ನೇರವಾಗಿ ಬಹು ಎತ್ತರಕ್ಕೆ ಬೆಳೆದಿರುವ ಮರಗಳು ಹೀಗೆ ಕಾಡಿನ ಸೌಂದರ್ಯವನ್ನು ಸವಿಯುತ್ತಾ ಹರಟುತ್ತಾ ಸಾಗಿದಾಗ ಇನ್ನೊಂದು ಇಳಿಜಾರು ಸಿಕ್ಕಿತು. ಆ ಇಳಿಜಾರಿನಾಚೆ ಇನ್ನೊಂದು ಏರು ಇತ್ತು. ಹೆಚ್ಚು ಕಡಿಮೆ ಆ ಇಳಿಜಾರು ಹಾಗೂ ಏರು ಸಂಧಿಸುವ ಜಾಗದಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತಿತ್ತು ಆ ಬೃಹತ್ ಮರ.

ಇಳಿಜಾರಿನ ಮೇಲ್ತುದಿಯಿಂದಲೇ ಆ ಮರವನ್ನು ಕಂಡ ನಾವು ದಂಗಾದೆವು. ಬೃಹತ್ ಮರ ಎಂದಾಗ ನಮ್ಮಲ್ಲಿ ಮೂಡಿದ್ದ ಕಲ್ಪನೆಗಿಂತ ಹಲವು ಪಟ್ಟು ದೊಡ್ಡದಿತ್ತು ಅದು. ಅದರ ಬುಡ ಭಾಗ ದೊಡ್ಡದೊಂದು ಕೋಟೆಯ ಗೋಡೆಯಂತೆ ಕಂಡಿತು. ನಮಗರಿವಿಲ್ಲದೇ ಬಾಯಿಂದ ಉದ್ಗಾರ ಹೊರಟಿತು. ಆ ಬಳಿಕ ಓಡೋಡಿಕೊಂಡೇ ಅದರ ಬುಡಕ್ಕೆ ಬಂದೆವು. ಆಗ ಮತ್ತಷ್ಟೂ ಆಶ್ಚರ್ಯ ಕಾದಿತ್ತು. ಆ ಮರವು ಕಾಂಡದ ಒಂದು ಭಾಗದಿಂದಲೇ ಉಂಟಾದ ಹಲಗೆಗಳಂತಹ ರಚನೆಗಳ ಆಧಾರ ದಲ್ಲಿ ಮೇಲಕ್ಕೆ ತಲೆಯೆತ್ತಿ ನಿಂತಿತ್ತು. ಆ ಹಲಗೆಗಳಂತಹ ಒಂದೊಂದು ರಚನೆಗಳ ನಡುವೆಯೂ ಒಂದು ದೊಡ್ಡ ಕೊಠಡಿಯಷ್ಟು ಸ್ಥಳಾವಕಾಶವಿತ್ತು.

ಫೋಟೊ ತೆಗೆಯುವ, ತೆಗೆಸಿಕೊಳ್ಳುವ ಸಂಭ್ರಮದಲ್ಲಿ ಕೆಲಕಾಲ ಕಳೆದೆವು. ಜೀವಮಾನದಲ್ಲಿ ಪ್ರಥಮ ಬಾರಿಗೆ ಇಂತಹ ಭಾರೀ ವಿಸ್ತಾರವಾದ ಮರವನ್ನು ಕಂಡಾಗ ನಡಿಗೆಯ ಸುಸ್ತು ಮರೆತೇಹೋಗಿತ್ತು. ಮರವನ್ನು ಪುನಃ ಪುನಃ ನೋಡಿ ತೃಪ್ತಿಯಾದಾಗ ಮಕ್ಕಳಿಗೆ ಸೂಕ್ತ ಜಾಗದಲ್ಲಿ ಕುಳಿತುಕೊಂಡು ತಿಂಡಿ ತಿನಿಸುಗಳನ್ನು ತಿನ್ನುವಂತೆ ಸೂಚಿಸಿದೆವು.

ನಮ್ಮ ಉಪಾಹಾರದ ವೇಳೆ ಶಂಕರಣ್ಣ ಈ ಮರದ ಕುರಿತು ತಮಗೆ ತಿಳಿದಿದ್ದ ಮಾಹಿತಿ ಹೇಳಿದರು. 1905ರಲ್ಲಿ ಈ ಭಾಗ ಅರಣ್ಯ ಇಲಾಖೆಯ ಅಡಿಯಲ್ಲಿ ಸೇರ್ಪಡೆಗೊಂಡಿತು. ಈ ಮರದ ಕುರಿತು ಅಧಿಕೃತ ವಿವರ ಲಭ್ಯವಿಲ್ಲದಿದ್ದರೂ ಸ್ಥಳೀಯ ಹಿರಿಯರ ಪ್ರಕಾರ ಅದು ತುಂಬಾ ಹಳೆಯದು. ಇದರಲ್ಲಿ ಒಂದು ಜಾತಿಯ ಹಣ್ಣು ಬೆಳೆಯುತ್ತಿದ್ದು ಅದನ್ನು ತಿನ್ನಲು ‘ಗೂರ್ಮೆ’ ಎಂದು ತುಳು ಭಾಷೆಯಲ್ಲಿ ಕರೆಯುವ ದೊಡ್ಡಗಾತ್ರದ ಹಕ್ಕಿ ಬರುತ್ತಿತ್ತು. ಆದರೆ ಜನರು ಮಾಂಸಕ್ಕಾಗಿ ಅದನ್ನು ನಿರಂತರ ಬೇಟೆಯಾಡಿದ್ದರಿಂದ ಈಗ ಅವುಗಳು ಕಂಡುಬರುತ್ತಿಲ್ಲ. ತುಳುವಿನಲ್ಲಿ ಈ ಮರಕ್ಕೆ ‘ಬೊಳ್ಳೂರು’ ಎಂಬ ಹೆಸರಿದೆ. ಆದರೆ ಕನ್ನಡದಲ್ಲಿ ಆ ಮರ ಹಾಗೂ ಪಕ್ಷಿಯ ಹೆಸರು ತಮಗೆ ಗೊತ್ತಿಲ್ಲ ಎಂದು ಹೇಳಿದರು.

ಶಂಕರಣ್ಣ ಅವರ ವಿವರಣೆ ಕೇಳಿದ ಬಳಿಕ ಅಲ್ಲೇ ಸ್ವಲ್ಪ ಅಡ್ಡಾಡಿದೆವು. ಬೇರೆ ಜಾತಿಯ ಮರಗಳಿಂದ ಇಳಿಬಿದ್ದ ಕಾಡುಬಳ್ಳಿಗಳತ್ತ ನಮ್ಮ ಗಮನ ಹೋದಾಗ ಸುಮ್ಮನಿರುವ ಮನಸ್ಸಾಗಲಿಲ್ಲ. ಶಿಕ್ಷಕರು, ಮಕ್ಕಳೆನ್ನದೇ, ಹೆಣ್ಣು-ಗಂಡು ಬೇಧವಿಲ್ಲದೇ ಎಲ್ಲರೂ ಆ ಬಳ್ಳಿಗಳಲ್ಲಿ ಮನಸೋ ಇಚ್ಛೆ ಜೀಕಿದೆವು. ನಂತರ ಮುಖ್ಯೋಪಾಧ್ಯಾಯರ ಸೂಚನೆಯಂತೆ ಮಕ್ಕಳು ಕೈಕೈ ಹಿಡಿದು ನಿಂತು ಮರದ ಸುತ್ತಳತೆ ಲೆಕ್ಕಹಾಕಲು ಅನುವಾದರು. ಇಪ್ಪತ್ತೆರಡು ವಿದ್ಯಾರ್ಥಿಗಳು ಕೈಕೈ ಹಿಡಿದು ನಿಂತಾಗ ಮರವನ್ನು ಸುತ್ತುವರಿಯಲು ಸಾಧ್ಯವಾಯಿತು!

ಆಗಲೇ ಮಧ್ಯಾಹ್ನ ಹನ್ನೆರಡು ಗಂಟೆ ಕಳೆದಿತ್ತು. ಹಾಗಾಗಿ ಊರಿನ ಕಡೆ ಮನಸ್ಸಿಲ್ಲದ ಮನಸ್ಸಿಂದ ಪ್ರಯಾಣ ಆರಂಭಿಸಿದೆವು. ತಂಡದ ಪ್ರತಿಯೊಬ್ಬರೂ ಇದೊಂದು ಅನನ್ಯ ಅನುಭವ ಎಂದು ಪುನರುಚ್ಛರಿಸುತ್ತಿದ್ದರು.

ಮನೆಗೆ ಬಂದ ಬಳಿಕ ನನಗೆ ಆ ಮರದ ಕುರಿತು ತಿಳಿಯಬೇಕೆಂಬ ಹಂಬಲ ತೀವ್ರವಾಯಿತು. ಅಂತರ್ಜಾಲ ಜಾಲಾಡಿದೆ. ಯಾವ ಮಾಹಿತಿಯೂ ಸಿಗ ಲಿಲ್ಲ. ಅಷ್ಟರಲ್ಲಿ ಫೇಸ್‌ಬುಕ್‌ನ Plant Identification ಎಂಬ ಗುಂಪು ನೆನಪಾಯ್ತು. ಕೆಲವು ಫೋಟೊಗಳನ್ನು ಅಪ್‌ಲೋಡ್ ಮಾಡಿ, ನನಗೆ ತಿಳಿದಿದ್ದ ಮಾಹಿತಿ ಹಾಗೂ ಲಕ್ಷಣಗಳನ್ನು ಸ್ಥಳ ವಿವರ ಸಹಿತ ಹಂಚಿಕೊಂಡೆ.

ಆ ಮರ ಬಹಳ ಎತ್ತರವಾಗಿದ್ದರಿಂದ ನನಗೆ ಅದರ ಎಲೆಯ ಫೋಟೊ ಸಿಕ್ಕಿರಲಿಲ್ಲ. ಅದರ ಹಣ್ಣು ಅಥವಾ ಹೂಗಳೂ ಆಗ ಲಭ್ಯವಿರಲಿಲ್ಲ. 'ಅವಿಲ್ಲದೇ ಸರಿಯಾದ ನಿರ್ಧಾರಕ್ಕೆ ಬರುವುದು ಕಷ್ಟ. ಆದರೆ ನೀವು ನೀಡಿದ ಮಾಹಿತಿಗಳಿಂದ ಅದು ಫಿಕಸ್ (Ficus), ಎಲಿಯೊಕಾರ್ಪಸ್ (Elaeocarpus) ಯಾವುದಾದರೂ ಒಂದು ಆಗಿರಬಹುದು ಎಂದು ಯಾರೋ ಸೂಚಿಸಿದರು. ಅವನ್ನೆಲ್ಲಾ ಗೂಗಲ್‌ನಲ್ಲಿ ಹುಡುಕಿದೆ. ನಾವು ನೋಡಿದ ಮರ ಎಲಿಯೊಕಾರ್ಪಸ್ ಟ್ಯೂಬರ್ಕ್ಯುಲಸ್ (Elaeocarpus Tuberculatus) ಎಂಬ ಜಾತಿಯ ಮರವೇ ಇದ್ದಿರಬೇಕೆಂದು ಅದರ ಲಕ್ಷಣಗಳಿಂದ ಊಹಿಸಿದೆ.

ಆ ಮರದ ಮಾಹಿತಿ ಜಾಲಾಡಿದಾಗ ‘ಹಲಗೆಯಂತಹ ಆನಿಕೆಗಳುಳ್ಳ, 40 ಅಡಿ ಎತ್ತರದವರೆಗೆ ಬೆಳೆಯುವ, ಬೂದುಬಣ್ಣದ ಚುಕ್ಕೆಗಳಿರುವ, ಬಿಳಿಬಣ್ಣದ ತೊಗಟೆ ಹೊಂದಿದ ದೊಡ್ಡ ಮರ ಎಂಬ ವಿವರಣೆ ಸಿಕ್ಕಿತು. ಅಲ್ಲಿ ನೀಡಿದ್ದ ಫೋಟೊ ಹಾಗೂ ನಾನು ತೆಗೆದ ಫೋಟೊಗಳು ಒಂದಕ್ಕೊಂದು ಹೋಲಿಕೆಯಾಗುತ್ತಿದ್ದವು. ಮರದ ಜಾಡು ಹುಡುಕಿದ ಖುಷಿಗೆ ಬೀಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ ಕೆಯ್ಯೂರು ಸಮೀಪದ ಕಣಿಯಾರು ಕಾಡಿನಲ್ಲಿದೆ ಈ ಮರ. ಈ ಅರಣ್ಯ ಪುತ್ತೂರು ವಲಯಕ್ಕೆ ಸೇರಿದೆ. ಪುತ್ತೂರಿನಿಂದ ಕೆಯ್ಯೂರಿಗೆ ಹದಿನೇಳು ಕಿ.ಮೀ ದೂರವಿದೆ. ಪುತ್ತೂರು-ಸುಳ್ಯ ರಸ್ತೆಯಲ್ಲಿ ಹತ್ತು ಕಿ.ಮೀ. ದೂರದಲ್ಲಿರುವ ಕುಂಬ್ರದವರೆಗೆ ಬಂದು, ಅಲ್ಲಿಂದ ಸುಬ್ರಹ್ಮಣ್ಯ ಹೋಗುವ ರಸ್ತೆಯಲ್ಲಿ ಏಳು ಕಿ.ಮೀ ಬಂದರೆ ಕೆಯ್ಯೂರು ಸಿಗುತ್ತದೆ. ಅಲ್ಲಿಂದ ಕೆಯ್ಯೂರು-ಕಣಿಯಾರು-ಕೌಡಿಚ್ಚಾರು (ಕಾಡಿನ ನಡುವಿನ) ರಸ್ತೆಯಲ್ಲಿ ಐದು ಕಿ.ಮೀ ಸಂಚರಿಸಿ ನಂತರ ಕಾಡಿನೊಳಗೆ ನಡೆದರೆ ಈ ಮರ ಸಿಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT