ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ‍್ರಿ, ದನದ ಸಂತಿ ಮಾಡೂಣು!

Last Updated 2 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅದು ಸೋಮವಾರದ ನಡುರಾತ್ರಿ ಮೀರಿದ ಕ್ಷಣ ಅಥವಾ ಮಂಗಳವಾರ ನಸುಕು ಹರಿಯುವ ಗಳಿಗೆ ಎಂದು ಹೇಳಬಹುದೇನೋ. ನಮ್ಮ ಯಾತ್ರೆ ಹುಬ್ಬಳ್ಳಿಯಿಂದ ಬಾಗಲಕೋಟೆ ಕಡೆಗೆ ಹೊರಟಿತ್ತು. ಕೊಣ್ಣೂರು ಗ್ರಾಮದ ಬಳಿ ಮಲಪ್ರಭಾ ನದಿಯನ್ನು ದಾಟಿಕೊಂಡು ಕಾರು ಮುಂದೆ ಹೊರಟಾಗ ಇಬ್ಬರು ರೈತರು ಮಜಬೂತಾದ ಎರಡು ಎತ್ತುಗಳನ್ನು ಹೊಡೆದುಕೊಂಡು ಹೋಗುತ್ತಿದ್ದ ನೋಟ ಕಣ್ಣಿಗೆ ಬಿತ್ತು.

ಅರವತ್ತರ ಆಸುಪಾಸಿನಲ್ಲಿದ್ದ ಒಬ್ಬ ರೈತ, ತಾನು ತೊಟ್ಟಿದ್ದ ಮಾಸಿದ ಧೋತರದ ಚುಂಗನ್ನು ಸೊಂಟಕ್ಕೆ ಸಿಕ್ಕಿಸಿ, ಎತ್ತುಗಳೊಂದಿಗೆ ಸರಬರ ಹೆಜ್ಜೆ ಹಾಕುತ್ತಿದ್ದ. ತಲೆಗೆ ಹಳದಿ ರುಮಾಲು ಸುತ್ತಿದ್ದ. ಇನ್ನೊಬ್ಬ ರೈತನ ವಯಸ್ಸು ನಲವತ್ತರ ಆಸುಪಾಸು ಇತ್ತೇನೋ. ಆತನೂ ಧೋತರವನ್ನೇ ಉಟ್ಟಿದ್ದನಾದರೂ ತಲೆಮೇಲೆ ಮಾತ್ರ ಗಾಂಧಿ ಟೋಪಿ ಇತ್ತು. ಕಾರು ಪಕ್ಕಕ್ಕೆ ನಿಲ್ಲಿಸಿ, ಈ ರೈತರೊಂದಿಗೆ ಮಾತಿಗಿಳಿದಾಗ, ಅವರು ಕೆರೂರಿನ ದನದ ಸಂತೆಗೆ ಹೊರಟಿದ್ದಾರೆ ಎಂದು ಗೊತ್ತಾಯಿತು.

‘ಎಲಿ–ಅಡ್ಕಿ ಹಾಕ್ತಿರೇನ್ರಿ ಸಾಹೇಬ್ರ’ ಎನ್ನುತ್ತಾ ಕಿಸೆಯಿಂದ ಸೆಂಚಿಯನ್ನು ತೆಗೆದ ಆ ಹಿರಿಯ ರೈತನ ಹೆಸರು ಮಲ್ಲನಗೌಡ ನಾಗನಗೌಡ್ರ ಎಂದು. ಕೊಣ್ಣೂರಿನ ಪಕ್ಕದ ಯಾವುದೋ ಪುಟ್ಟ ಹಳ್ಳಿಯಿಂದ ಅವರ ಸವಾರಿ ಹೊರಟಿತ್ತು. ಮಗಳ ಮದುವೆಗಾಗಿ ಹೊಲವನ್ನು ಮಾರಿದ್ದಲ್ಲದೆ ಮನೆ ರಿಪೇರಿಗಾಗಿ ಸಾಲ ಮಾಡಿದ್ದ ಅವರು, ಸಾಲ ತೀರಿಸಿ ಕೈತೊಳೆದುಕೊಳ್ಳುವ ಸಲುವಾಗಿ ಎತ್ತುಗಳನ್ನು ಮಾರಲು ಕೆರೂರ ಸಂತೆಗೆ ಹೊರಟಿದ್ದರು. ‘ಟೈಮ್‌ ಇದ್ರ ನೀವೂ ಸಂತಿಗೆ ಬರ್‍ರಿ. ಅದ್ರ ಖದರ್‍ರು ಹ್ಯಾಂಗ್‌ ಇರ್ತೈತಿ ನೋಡ್ರಿ’ ಎಂದು ಆಹ್ವಾನವಿತ್ತ ಮಲ್ಲನಗೌಡರು, ‘ಬೆಳಕು ಹರಿಯೋದ್ರಾಗ ನಾವೂ ಕೆರೂರ ಮುಟ್ಟಿರ್ತೀವಿ, ನಡ್ರಿ’ ಎಂದು ನಮ್ಮನ್ನು ಬೀಳ್ಕೊಟ್ಟರು.

ದಾರಿಯುದ್ದಕ್ಕೂ ನಮಗೆ ಎತ್ತು–ಆಕಳುಗಳ ಇಂತಹ ಯಾತ್ರೆಗಳು ಕಣ್ಣಿಗೆ ಬೀಳುತ್ತಲೇ ಹೋದವು. ಒಬ್ಬ ರೈತ ಹಿಡಿದು ಹೊರಟಿದ್ದ ಬಿಳಿ–ಕರಿ ಬಣ್ಣದ ಎತ್ತುಗಳನ್ನು ನೋಡಿದಾಗ ‘ಬಿಳಿ ಎತ್ತು ಮಾಲಿಂಗ, ಕರಿ ಎತ್ತು ಕರಿಲಿಂಗ’ ಎಂಬ ಆಕಾಶವಾಣಿಯ ‘ರೈತರಿಗೆ ಸಲಹೆಗಳು’ ಕಾರ್ಯಕ್ರಮದ ಶೀರ್ಷಿಕೆ ಗೀತೆ ನೆನಪಾಗಿ ಗುನುಗುನಿಸುವಂತೆ ಆಯಿತು.

ಕುಳಗೇರಿ ಕ್ರಾಸ್‌ ದಾಟುವ ಹೊತ್ತಿಗೆ ‘ಟ್ರಿಪಲ್‌ ಡೆಕ್ಕರ್‌’ ಶೀಪ್‌ ವ್ಯಾನ್‌ಗಳು ಕಣ್ಣಿಗೆ ಬಿದ್ದವು. ಇವುಗಳು ‘ಟ್ರಿಪಲ್‌ ಡೆಕ್ಕರ್‌’ ಏಕೆಂದರೆ, ಕುರಿಗಳನ್ನು ತುಂಬಲು ಮೂರು ಅಂತಸ್ತುಗಳ ವ್ಯವಸ್ಥೆಯನ್ನು ಈ ವ್ಯಾನ್‌ಗಳಲ್ಲಿ ಮಾಡಲಾಗಿತ್ತು. ವ್ಯಾನ್‌ಗಳ ಒಳಗೆ ಎರಡು ಅಂತಸ್ತುಗಳಿದ್ದರೆ, ಮತ್ತೊಂದು ಅಂತಸ್ತು ಟಾಪ್‌ ಮೇಲಿತ್ತು. ಶಾಲಾ ಮಕ್ಕಳನ್ನು ಕರೆದೊಯ್ಯುವ ವ್ಯಾನ್‌ಗಳಿಗೆ ‘ಕುರಿ ತುಂಬಿದಂತೆ, ಮಕ್ಕಳನ್ನು ತುಂಬಿದ್ದಾರೆ’ ಎನ್ನುವ ಕುಹಕದ ಮಾತು ಯಾಕಿದೆ ಎನ್ನುವುದು ಆಗಲೇ ಗೊತ್ತಾಗಿದ್ದು. ಒಂದರ ಮೇಲೊಂದರಂತೆ ಅವುಗಳು ಬಿದ್ದಿದ್ದವು. ಟಾಪ್‌ ಮೇಲಿದ್ದ ಕುರಿಗಳು ಮಾತ್ರ ಹವಾ ಮಹಲ್‌ನಲ್ಲಿ ತೇಲುತ್ತಿದ್ದವು.

ಕೆರೂರಿನ ಸಂತೆಯನ್ನು ನೋಡಿಕೊಂಡೇ ಯಾತ್ರೆ ಮುಂದುವರಿಸಲು ನಿರ್ಧರಿಸಿ, ಅಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಕ್ಕೆ ಹೋದೆವು. ಬಯಲು ಸೀಮೆಯ ಈ ಊರಿಗೆ ರಾಜ್ಯದೆಲ್ಲೆಡೆ ಸಂತೆಯ ಪಟ್ಟಣವೆಂದೇ ಹೆಸರು. ಇಲ್ಲಿನ ಪ್ರತಿ ಮಂಗಳವಾರದ ದನದ ಸಂತೆಗೆ ದಕ್ಷಿಣ ಭಾರತ ಮಟ್ಟದ ಖ್ಯಾತಿಯಿದೆ. ಬಾಲಿವುಡ್‌ ಮಂದಿ ಕೂಡ ಇಲ್ಲಿನ ಜವಾರಿ ಕುರಿಗಳ ಖರೀದಿಗಾಗಿ ಬರುವುದಿದೆ.

ಸೂರ್ಯೋದಯಕ್ಕೆ ಮುನ್ನವೇ ಶುರುವಾಗುವ ಗೌಜು, ಗದ್ದಲದ ಈ ಸಂತೆ ಅದೆಷ್ಟೊಂದು ಸೊಗಸು. ಅತ್ತ ಕುರಿ–ಮೇಕೆಗಳ ‘ಮೆಹೆಹೆ’ ಎನ್ನುವ ಸದ್ದು, ಇತ್ತ ದನಗಳ ‘ಅಂಬಾ’ ಎಂಬ ಕೂಗು. ಎಮ್ಮೆಗಳ ಏಕತಾರಿ ಸ್ವರ. ಈ ಮಧ್ಯೆ ದನ–ಕುರಿಗಳನ್ನು ಮಾರಲು–ಕೊಳ್ಳಲು ಬಂದವರು ರಾತ್ರಿ ಪ್ರಯಾಣದ ಆಯಾಸ ನೀಗಿಸಿ ಕೊಳ್ಳಲು ಚಹಾದಂಗಡಿ ಮುಂದೆ ಚೆರಿಗೆಯಲ್ಲಿ ಮುಖ ತೊಳೆಯುತ್ತಾ, ಬಿಸಿ ಚಹಾಕ್ಕೆ ಬಾಯೊಡ್ಡಲು ತೋರುವ ಆತುರ. ನಸುಕಿನಲ್ಲೇ ವ್ಯವಹಾರ ಕುದುರಿಸುವವರು ಅದೇ ಚಹಾದಂಗಡಿಗಳ ಮುಂದೆ ಅಷ್ಟರಲ್ಲಿ ಹಾಜರ್‌.

ಜವಾರಿ ತಳಿಗಳಾದ ಬನ್ನೂರು, ರ‍್ಯಾಂಬೋಲೆಟ್ ಕುರಿಗಳಿಗೆ ಎಲ್ಲಿಲ್ಲದ ಬೇಡಿಕೆ. ತಿರುವು ಕೋಡು, ಅಧಿಕ ಕೊಬ್ಬು ಹೊಂದಿದ, ಎದುರು ಬಂದರೆ ಗುದ್ದಲು ಹಾತೊರೆವ ಜವಾರಿ ತಳಿಯ ಟಗರು ಹಾಗೂ ರುಚಿಕರ ಮಾಂಸಕ್ಕಾಗಿ ಹೆಸರಾದ ಹೋತಕ್ಕಾಗಿ (ಗಂಡು ಮೇಕೆ) ಜೊಲ್ಲು ಸುರಿಸುವವರು ಕೆರೂರನ್ನು ಹುಡುಕಿಕೊಂಡು ಬರುತ್ತಾರೆ. ‘ಇಲ್ಲಿನ ಕುರಿ ನೋಡಿಯೇ ಮಸಾಲೆ ಅರೆಯಬೇಕು ನೋಡ್ರಿ’ ಎನ್ನುವ ದಸ್ತಗೀರಸಾಬ್‌ ಎಣ್ಣಿ ಅವರ ಮಾತು ನಮಗಂತೂ ತಮಾಷೆಯಾಗಿ ತೋರಲಿಲ್ಲ.

ಹಾಗೆಯೇ ಎಪಿಎಂಸಿ ಪ್ರಾಂಗಣದ ಬಲಬದಿ ಹೊಕ್ಕರೆ ಮಿರಿ ಮಿರಿ ಮಿಂಚುವ ಕಿಲಾರಿ, ಜವಾರಿ ತಳಿಗಳ ಹೋರಿ, ಎತ್ತುಗಳು, ಮುರ್‍ರಾ ಮತ್ತು ಬಯಲು ಸೀಮೆಯ ಹವಾಗುಣಕ್ಕೆ ಹೊಂದಿಕೊಳ್ಳುವ ಜವಾರಿ ಹಾಗೂ ಹೈಬ್ರೀಡ್ ತಳಿಯ ಉದ್ದ ಕೋಡಿನ ಎಮ್ಮೆಗಳು, ದೊಡ್ಡ ದೇಹಾಕೃತಿಯ ಅಧಿಕ ಹಾಲು ನೀಡುವ ಜರ್ಸಿ ತಳಿಯ ಹಸುಗಳು. ಎವೆಯಿಕ್ಕದೇ ನೋಡುತ್ತಿದ್ದರೆ ಯಾವುದನ್ನು ಕೊಳ್ಳುವುದು, ಯಾವುದನ್ನು ಬಿಡುವುದು ಎನ್ನುವ ಗೊಂದಲ. ‘ತಳಿ, ಬಣ್ಣ ಹಾಗೂ ದೇಹಾರೋಗ್ಯ ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿ ನಿಖರ ಅಂದಾಜಿನೊಂದಿಗೆ ಜಾನುವಾರು ಖರೀದಿಸಬೇಕು’ ಎನ್ನುವ ಸಲಹೆ ಕೊಡುತ್ತಾರೆ ಸಾಕಷ್ಟು ನುರಿತಿರುವ ವರ್ತಕ ರಂಗಪ್ಪ ಕಣ್ಣೂರ.

‘ಬಲಿತ ಮಾಂಸದ ದೊಡ್ಡ ಟಗರು ಅಂದಾಜು ₹1 ಲಕ್ಷದವರೆಗೆ, ಸೊಕ್ಕಿದ ಹೋತ ₹70 ಸಾವಿರದವರೆಗೆ ಮಾರಾಟವಾದ ಉದಾಹರಣೆಗಳಿವೆ. ಅಲ್ಲದೇ ಚಿಕ್ಕಪುಟ್ಟ ಟಗರು ಮರಿಗಳು ₹ 5 ಸಾವಿರದಿಂದ ₹ 10 ಸಾವಿರದವರೆಗೆ ಸಿಗುತ್ತವೆ’ ಎನ್ನುತ್ತಾರೆ ಕುರಿ ವ್ಯಾಪಾರದಲ್ಲಿ ತೊಡಗಿಸಿಕೊಂಡಿರುವ ಯಲ್ಲಪ್ಪ ಹಳಕಟ್ಟಿ.

ಮುಖ್ಯವಾಗಿ ರುಚಿಕರ ಮಾಂಸಕ್ಕಾಗಿ ಇಲ್ಲಿನ ಟಗರು, ಹೋತ, ಕುರಿಯ ಮರಿಗಳನ್ನು ದಂಡುದಂಡಾಗಿ ಖರೀದಿಸಲೆಂದೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಗೋವಾ, ಮಹಾರಾಷ್ಟ್ರದಿಂದ ವರ್ತಕರು ಬರುತ್ತಾರೆ. ಅದರಲ್ಲೂ ಮಹಾರಾಷ್ಟ್ರದ ಮೀರಜ್, ಸಾಂಗ್ಲಿ, ಪುಣೆ ಹಾಗೂ ರಾಜ್ಯದ ಬೆಂಗಳೂರು, ಚಿತ್ರದುರ್ಗ, ನಿಪ್ಪಾಣಿ, ಸಂಕೇಶ್ವರ, ಬೆಳಗಾವಿ ಭಾಗಗಳ ಖರೀದಿದಾರರ ಸಂಖ್ಯೆಯೇ ದೊಡ್ಡದು. ಅವರೆಲ್ಲ ದೊಡ್ಡ ದೊಡ್ಡ ಶೀಪ್ ವಾಹನಗಳ ಜತೆಗೆ ಬಂದು ಒಂದುದಿನ ಮೊದಲೇ ಇಲ್ಲಿ ತಂಗಿರುತ್ತಾರೆ. ಸಂತೆಯ ಸಂಜೆಗೆಲ್ಲಾ ಇವರೆಲ್ಲಾ ವಹಿವಾಟು ಮುಗಿಸಿ, ಭರ್ತಿ ವಾಹನಗಳ ಸಮೇತ ಮರಳುತ್ತಾರೆ.

ರೈತರು, ಖರೀದಿದಾರರು ಹಾಗೂ ಮಧ್ಯವರ್ತಿಗಳ ಹೊಟ್ಟೆ ತಣಿಸಲು ಮಿರ್ಚಿ–ಒಗ್ಗರಣಿ, ಎಗ್‌ ರೈಸ್‌ ಅಂಗಡಿಗಳ ಸಾಲು ಸಾಲೇ ಇಲ್ಲಿ ಎದ್ದಿರುತ್ತವೆ. ದನ ಹಾಗೂ ಕುರಿಗಳಿಗೆ ಎಪಿಎಂಸಿಯಿಂದ ನೀರಿನ ವ್ಯವಸ್ಥೆ ಮಾಡಲಾಗಿರುತ್ತದೆ. ಆದರೆ, ಮೇವಿನ ವ್ಯವಸ್ಥೆ ಯನ್ನು ಮಾಲೀಕರೇ ಮಾಡಿಕೊಳ್ಳ ಬೇಕು. ಹಸಿ ಹಾಗೂ ಒಣ ಮೇವು ಮಾರುವವರಿಗೂ ಇಲ್ಲಿ ಬಿಡುವಿಲ್ಲದ ಕೆಲಸ. ದನಗಳ ಸಂತೆ ಎಂದಮೇಲೆ ಅವುಗಳ ಅಲಂಕಾರ ಸಾಮಗ್ರಿಗಳು ದೊರೆಯಬೇಕಲ್ಲವೆ?

ಮೂಗು ದಾರ, ಹಗ್ಗ, ಜೂಲ, ಕಿಣಿ ಕಿಣಿ ಎಂಬ ಸದ್ದು ಹೊರಡಿಸುವ ಗಂಟೆ ಸರ, ಬಾರುಕೋಲು, ಗೊಂಡೇವು...

ಹೀಗೆ ದನಗಳ ಪ್ರಸಾಧನ ಸಾಮಗ್ರಿಗಳ ವಿರಾಟ್‌ ರೂಪವೇ ಇಲ್ಲಿ ಮೈದಳೆದಿರುತ್ತದೆ. ವ್ಯಾಪಾರಿಗಳು ಹೇಳುವ ಪ್ರಕಾರ, ಪ್ರತಿವಾರ ಸರಾಸರಿ ₹5 ಕೋಟಿ ವಹಿವಾಟು ಇಲ್ಲಿ ನಡೆಯುತ್ತದೆ!

ಅಂದಹಾಗೆ, ಮಲ್ಲನಗೌಡರು ಸಂತೆಯಲ್ಲಿ ಮತ್ತೆ ಸಿಕ್ಕರು. ಬಂದ ಸ್ವಲ್ಪ ಹೊತ್ತಿನಲ್ಲೇ ಎತ್ತುಗಳನ್ನು ಮಾರಾಟ ಮಾಡಿದ ಖುಷಿಯಲ್ಲಿ ಅವರು ಬೀಗುತ್ತಿದ್ದರು. ಆ ಖುಷಿಯಲ್ಲಿ ನಮಗೆ ಮಿರ್ಚಿ–ಒಗ್ಗರಣಿ, ಚಹಾದ ಸಮಾರಾಧನೆ ಮಾಡಿಸಿ ‘ಬೈ ಬೈ’ ಹೇಳಿ ಹೊರಟರು.

ಪೂರಕ ಮಾಹಿತಿ: ಪ್ರಭು ಎಂ. ಲಕ್ಷೆಟ್ಟಿ

**

**

**

**

**

**

**

ಐನೂರು ರೂಪಾಯಿ ಅಷ್ಟss ಕಡಿಮಿ ಮಾಡೀವಿ ತೊಗೊಬೇ...

**

**

**

**

ತೆಗಿ ಬಾಯಿ, ಹಲ್ಲು ಎಷ್ಟು ಅದಾವು ನೋಡೂಣು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT