ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಪರ್‌ಲೂಪ್‌: ಭವಿಷ್ಯದ ಸಾರಿಗೆ ವ್ಯವಸ್ಥೆ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಜೇಮ್ಸ್‌ ಬಾಂಡ್‌ನ ‘ಮೂನ್‌ ರಾಕರ್‌’ ಸಿನಿಮಾದಲ್ಲಿ ಬಾಂಡ್‌ ಕೋಶದಂತಹ ಬಾಹ್ಯಾಕಾಶ ನೌಕೆಯಲ್ಲಿ ಕುಳಿತು ಬಾಹ್ಯಾಕಾಶದ ನಿರ್ವಾತ ವಾತಾವರಣದಲ್ಲಿ ಸರ್ರಂತ ಹೋಗಿ ಮತ್ತೆ ಭೂಮಿಗೆ ಇಳಿಯುವುದನ್ನು ಕಂಡು ಬೆರಗಾಗಿರಬಹುದು. ಬಾಹ್ಯಾಕಾಶಕ್ಕೆ ಸಾಮಾನ್ಯರೂ ನಿಗದಿತ ಮೊತ್ತ ತೆತ್ತು ಹೋಗಿ ಬರುವ ಕನಸು ಯಾವಾಗಲೋ ನನಸಾಗಿಬಿಟ್ಟಿದೆ. ಆದರೆ, ಆ ಕೋಶದೊಳಗೆ ಕೂತು ಈ ಭೂಮಿಯಲ್ಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ನಿರ್ವಾತ ವಾತಾವರಣದಲ್ಲಿ ಧ್ವನಿಯ ವೇಗದಲ್ಲಿ ಪಯಣಿಸ ಬಹುದಾದರೆ... ಅದೂ ಕೂಡ ನನಸಾಗಲು ಇನ್ನೊಂದೇ ಹೆಜ್ಜೆ ಬಾಕಿಯಿದೆ. ‘ಹೈಪರ್‌ಲೂಪ್‌’ ಎಂಬ ಅದ್ಭುತ ತಂತ್ರಜ್ಞಾನವು ಅದನ್ನು ಸಾಧ್ಯ ಮಾಡಿಕೊಡಲಿದೆ.

‘ಭವಿಷ್ಯದ ಸಾರಿಗೆ ವ್ಯವಸ್ಥೆ’ ಎಂದೇ ಹೇಳಲಾಗುತ್ತಿರುವ ಈ ಹೈಪರ್‌ಲೂಪ್‌ ಸಾರಿಗೆ ವ್ಯವಸ್ಥೆಯೇನಾದರೂ ಜಾರಿಗೆ ಬಂದರೆ ಬೆಂಗಳೂರಿನಿಂದ 140 ಕಿ.ಮೀ. ದೂರದ ಮೈಸೂರನ್ನು ಕೇವಲ 20 ನಿಮಿಷಗಳಲ್ಲಿ ತಲುಪಲು ಸಾಧ್ಯ.

ಏನಿದು ಹೈಪರ್‌ಲೂಪ್‌

ಅಮೆರಿಕದ ಉದ್ಯಮಿ, ಸ್ಪೇಸ್‌ ಎಕ್ಸ್‌ ಮತ್ತು ಟೆಲ್ಸಾ ಮುಖ್ಯಸ್ಥ ಎಲಾನ್‌ ಮಸ್ಕ್‌ 2012ರಲ್ಲಿ ಈ ‘ಐದನೇ ವಿಧ’ದ ಸಾರಿಗೆ ವ್ಯವಸ್ಥೆಯ ಬಗ್ಗೆ ತನ್ನ ಕನಸನ್ನು ಬಿಚ್ಚಿಟ್ಟಾಗ ಜನ ನಕ್ಕರು. ಆದರೆ, ಕಾರ್ಖಾನೆಯಲ್ಲಿ ವಸ್ತುಗಳನ್ನೋ ಅಥವಾ ಕಚೇರಿಯಲ್ಲಿ ಫೈಲುಗಳನ್ನೋ ಒಂದು ಕೊಳವೆಯಲ್ಲಿ ಅತ್ಯಂತ ವೇಗದಲ್ಲಿ ರವಾನಿಸುವ ಈ ತಂತ್ರಜ್ಞಾನವನ್ನು ಜನರನ್ನು ಮತ್ತು ಸರಕನ್ನು ದೂರದೂರಿಗೆ ಸಾಗಣೆ ಮಾಡಲು ಯಾಕೆ ಬಳಸಬಾರದು ಎಂದು ಆತ ವಾದ ಮಂಡಿಸಿದ್ದು ಕೆಲವರಲ್ಲಾದರೂ ಆಲೋಚನೆಯ ಸುಳಿಯನ್ನು ಎಬ್ಬಿಸಿತ್ತು. ಗಂಟೆಗೆ 760 ಮೈಲು ಅಂದರೆ ಸುಮಾರು 1,223 ಕಿ.ಮೀ. ವೇಗದಲ್ಲಿ ಚಲಿಸುವುದೆಂದರೆ... ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ ಬೆವರಿಳಿಸದೇ ಕ್ಷಣ ಮಾತ್ರದಲ್ಲಿ ಗಮ್ಯ ಸ್ಥಾನವನ್ನು ತಲುಪಬಹುದು.

ಕೊಳವೆ ಮಾರ್ಗವನ್ನು ನಿರ್ಮಿಸುವುದು, ಅದರೊಳಗೆ ಒತ್ತಡವನ್ನು ಕಡಿಮೆ ಮಾಡುವುದು, ಹೆಚ್ಚು ಕಡಿಮೆ ನಿರ್ವಾತ ವಾತಾವರಣವನ್ನು ನಿರ್ಮಿಸುವುದು, ಪ್ರಯಾಣಿಕರು ಕುಳಿತ ಕೋಶದಂತಹ ರಚನೆ ಅತ್ಯಂತ ವೇಗವಾಗಿ ಈ ಕೊಳವೆಯೊಳಗೆ ಚಲಿಸುವುದು– ಇದೆಲ್ಲ ಈ ಹೂಪರ್‌ ಲೂಪ್ ತಂತ್ರಜ್ಞಾನದಿಂದ ಸಾಧ್ಯ.

ಈ ಕೋಶ ವೇಗೋತ್ಕರ್ಷ ಪಡೆಯಲು ವಿದ್ಯುತ್‌ ಮುನ್ನೂಕುವಿಕೆ (ಎಲೆಕ್ಟ್ರಿಕ್‌ ಪ್ರೊಪಲ್ಶನ್‌)ಯಿಂದ ಸಾಧ್ಯವಾಗುತ್ತದೆ. ಈ ಕೋಶ ಮಾರ್ಗದಿಂದ ಮೇಲೇಳಲು ಅಯಸ್ಕಾಂತೀಯ ತೇಲುವಿಕೆಯನ್ನು (ಮ್ಯಾಗ್ನೆಟಿಕ್‌ ಲೆವಿಟೇಶನ್‌) ಬಳಸಲಾಗುವುದು. ಕೊಳವೆಯಲ್ಲಿ ಅಲ್ಲಲ್ಲಿ ಅಳವಡಿಸಲಾಗುವ ಚೋದಕ ಮೋಟರ್‌ಗಳಿಂದ ವೇಗವನ್ನು ಹೆಚ್ಚು– ಕಡಿಮೆ ಮಾಡಬಹುದು.

ವೆಚ್ಚವೂ ಕಡಿಮೆ

ಈ ತಂತ್ರಜ್ಞಾನ ಅಳವಡಿಕೆಗೆ ತಗಲುವ ವೆಚ್ಚವೂ ಕಡಿಮೆಯೇ. ಹೈ ಸ್ಪೀಡ್‌ ರೈಲಿಗೆ ತಗಲುವ ವೆಚ್ಚದ ನಾಲ್ಕನೇ ಒಂದು ಭಾಗದಷ್ಟು ಮಾತ್ರ. ಜರ್ಮನಿ ಹಾಗೂ ಚೀನಾದಲ್ಲಿ ಸದ್ಯಕ್ಕೆ ಚಾಲ್ತಿಯಲ್ಲಿರುವ ಅಯಸ್ಕಾಂತೀಯ ತೇಲುವಿಕೆ (ಹಳಿ ಬಿಟ್ಟು ಮೇಲೆ ಚಲಿಸುವ ಅಯಸ್ಕಾಂತೀಯ ತೇಲುವಿಕೆ ತಂತ್ರಜ್ಞಾನದಿಂದ ಚೀನಾದ ಷಾಂಗೈ ನಗರದಿಂದ ಅಲ್ಲಿಯ ವಿಮಾನ ನಿಲ್ದಾಣಕ್ಕೆ ‘ಮ್ಯಾಗ್ಲೆವ್‌’ ರೈಲು ಗಂಟೆಗೆ 430 ಕಿ.ಮೀ. ವೇಗದಲ್ಲಿ ಚಲಿಸುತ್ತದೆ.) ಆಧಾರದ ಸಾರಿಗೆ ವ್ಯವಸ್ಥೆಗೆ ತಗುಲುತ್ತಿರುವ ವೆಚ್ಚದ ಒಂದಂಶ ಮಾತ್ರವಂತೆ. ಜೊತೆಗೆ ಕೋಶ ಚಲಿಸುವಾಗ ಶೇ 30ರಷ್ಟು ಶಕ್ತಿಯನ್ನೂ ಉತ್ಪಾದಿಸುತ್ತದೆ. ಇದನ್ನು ಬೇರೆ ಕಾರ್ಯಕ್ಕೆ ಬಳಸಬಹುದು ಎಂಬುದು ಕಂಪೆನಿಯ ಅಂಬೋಣ.

ಸದ್ಯಕ್ಕೆ ಅಮೆರಿಕದ ನೆವಾಡಾ ಮರುಭೂಮಿಯಲ್ಲಿ ಅರ್ಧ ಕಿ.ಮೀ. ಉದ್ದದ ಕೊಳವೆ ಮಾರ್ಗ ನಿರ್ಮಿಸಲಾಗಿದ್ದು, ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ಸಮುದ್ರ ಮಟ್ಟಕ್ಕಿಂತ 2 ಲಕ್ಷ ಅಡಿಯಷ್ಟು ಮೇಲೆ ಎಷ್ಟು ಒತ್ತಡವಿದೆಯೋ ಅಷ್ಟು ಒತ್ತಡವನ್ನು ಈ ಕೊಳವೆಯಲ್ಲಿ ಸೃಷ್ಟಿಸಲಾಗಿದೆ.

ಇತ್ತೀಚೆಗೆ ದುಬೈನಲ್ಲಿ ಈ ಕೋಶದ ಮಾದರಿಯನ್ನು ವಿನ್ಯಾಸಗೊಳಿಸಿ ಬಿಡುಗಡೆ ಮಾಡಲಾಗಿದೆ. ಅಂದುಕೊಂಡಂತೆ ಎಲ್ಲವೂ ಜಾರಿಯಾದರೆ ದುಬೈ ಮತ್ತು ಅಬುಧಾಬಿ ನಡುವೆ 12 ನಿಮಿಷದಲ್ಲಿ ಪಯಣಿಸಬಹುದು. ಗಂಟೆಗೆ 10 ಸಾವಿರ ಪ್ರಯಾಣಿರು ಪಯಣಿಸಬಹುದು.

ಎಲಾನ್‌ ಮಸ್ಕ್‌ ಈಗಾಗಲೇ ನ್ಯೂಯಾರ್ಕ್‌ ಮತ್ತು ವಾಷಿಂಗ್ಟನ್‌ ಡಿಸಿಯನ್ನು ಹೈಪರ್‌ಲೂಪ್‌ ಮೂಲಕ ಜೋಡಿಸಲು ನೆಲದಡಿ ಸುರಂಗ ಮಾರ್ಗ ಕೊರೆಯುತ್ತಿದ್ದು, ಇದು ಪೂರ್ಣಗೊಂಡರೆ ಕೇವಲ ಅರ್ಧ ತಾಸಿನಲ್ಲಿ ಗಮ್ಯ ತಲುಪಬಹುದಂತೆ. ಆದರೆ ಅಮೆರಿಕ ಸರ್ಕಾರ ಇದಕ್ಕೆ ತಾತ್ವಿಕ ಒಪ್ಪಿಗೆ ನೀಡಲು ಮೀನ–ಮೇಷ ಮಾಡುತ್ತಿದೆ.

ಭಾರತದ ಮೇಲೆ ಕಣ್ಣು

ಅಮೆರಿಕ, ಇಂಗ್ಲೆಂಡ್‌ಗಳಲ್ಲಿ ಈ ತಂತ್ರಜ್ಞಾನ ಆಧಾರಿತ ಸಾಕಷ್ಟು ಕಂಪನಿಗಳು ಹುಟ್ಟಿಕೊಂಡಿದ್ದು, ಏಷ್ಯಾದ ರಾಷ್ಟ್ರಗಳಲ್ಲಿ ಈ ಯೋಜನೆ ಜಾರಿಗೊಳಿಸುವುದು ಸುಲಭ ಎಂದು ಹೇಳುತ್ತಿವೆ. 2–3 ಕಂಪನಿಗಳು ಭಾರತದಲ್ಲಿ ವಿವಿಧ ರಾಜ್ಯಗಳ ಸರ್ಕಾರಗಳನ್ನು ಸಂಪರ್ಕಿಸಿ ಯೋಜನೆ ಕುದುರಿಸಲು ನೋಡುತ್ತಿವೆ. ಆಂಧ್ರದ ಅಮರಾವತಿ ಹಾಗೂ ವಿಜಯವಾಡಾ ಮಧ್ಯೆ ಭಾರತದ ಮೊದಲ ಹೈಪರ್‌ಲೂಪ್‌ ಸಾರಿಗೆ ಕಾಲಿಡಲಿದೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಕಳೆದ ವರ್ಷ ಬೆಂಗಳೂರಿನ ಏರೋ ಇಂಡಿಯ ಷೋನಲ್ಲಿ ಎಲಾನ್‌ ಮಸ್ಕ್‌ನ ಹೈಪರ್‌ಲೂಪ್‌ ಟ್ರಾನ್ಸ್‌ಪೋರ್ಟೇಶನ್‌ ಟೆಕ್ನಾಲಜೀಸ್‌ನ ಬಿಬಾಪ್‌ ಗ್ರೇಸ್ಟಾ ಬೆಂಗಳೂರು– ಮೈಸೂರು ಮಧ್ಯೆ ಇಂತಹ ಮಾರ್ಗ ನಿರ್ಮಾಣದ ಕನಸು ಬಿತ್ತಿದ್ದರು.

ಬೆಂಗಳೂರು– ಚೆನ್ನೈ, ಮುಂಬೈ– ಬೆಂಗಳೂರು– ಚೆನ್ನೈ, ಬೆಂಗಳೂರು– ತಿರುವನಂತಪುರಂ ಮಧ್ಯೆ ಇಂತಹ ಮಾರ್ಗ ನಿರ್ಮಾಣದ ಪ್ರಸ್ತಾವವನ್ನು ಲಾಸ್‌ ಏಂಜಲೀಸ್‌ನ ಹೈಪರ್‌ಲೂಪ್‌ ಕಂಪನಿ ಮುಂದಿಟ್ಟಿತ್ತು. ಇದೇನಾದರೂ ಕಾರ್ಯಗತಗೊಂಡರೆ ಬೆಂಗಳೂರಿನಿಂದ ಚೆನ್ನೈನಿಂದ 20 ನಿಮಿಷದಲ್ಲಿ ತಲುಪಬಹುದು ಎನ್ನುತ್ತಾರೆ ಕಂಪನಿಯ ಪ್ರತಿನಿಧಿಗಳು.

ಒಟ್ಟಿನಲ್ಲಿ 40ಕ್ಕೂ ಅಧಿಕ ದೇಶಗಳ ಸುಮಾರು 800 ವಿಜ್ಞಾನಿಗಳು ಈ ಯೋಜನೆಗೆ ಶ್ರಮಿಸುತ್ತಿದ್ದು, ವಿವಿಧ ಕಂಪನಿಗಳು ಭಾರತದಂತಹ ಅಭಿವೃದ್ಧಿಶೀಲ ದೇಶಗಳಲ್ಲಿ ವಹಿವಾಟು ಕುದುರಿಸಲು ಯತ್ನಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT