ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

–ಎನ್. ಸುಭಾನ್ ಸಾಹೇಬ್, ಹೊಳಲು, ಬಳ್ಳಾರಿ

ನಾನು ನಿವೃತ್ತ ಮುಖ್ಯ ಶಿಕ್ಷಕ. ನಾನು ನನ್ನ ಮಗಳ ಬಿ.ಇ. ವಿದ್ಯಾಭ್ಯಾಸದ ಸಲುವಾಗಿ 2011–21 ಸಾಲಿನಲ್ಲಿ ಶಿಕ್ಷಣ ಸಾಲ ಪಡೆದಿದ್ದೆ. ಶಿಕ್ಷಣ ಸಾಲದ ಮೊತ್ತ ₹ 1,68,700. ಈ ಹಣ ಬಡ್ಡಿ ಸಮೇತ ನಾನು 2017ರಲ್ಲಿ  ತುಂಬಿ ತೀರಿಸಿದ್ದೇನೆ. ನೀವು ಪ್ರಶ್ನೆಯೊಂದಕ್ಕೆ ಉತ್ತರಿಸಿ, ಶಿಕ್ಷಣ ಸಾಲಕ್ಕೆ ಅನುದಾನಿತ ಬಡ್ಡಿ ಇದೆ ಎಂದು ತಿಳಿಸಿದ್ದೀರಿ. ನನಗೂ ಇದು ಅನ್ವಯವಾಗುವುದೋ ತಿಳಿಸಿರಿ.

ಉತ್ತರ: ಅನುದಾನಿತ ಶಿಕ್ಷಣ ಸಾಲ ತಾ. 1–4–2009 ರಿಂದಲೇ ಜಾರಿಯಲ್ಲಿದೆ. ವಿದ್ಯಾರ್ಥಿಯ ಹೆತ್ತವರ ವಾರ್ಷಿಕ ಆದಾಯ ₹ 4.50 ಲಕ್ಷದೊಳಗಿದ್ದು, ವೃತ್ತಿಪರ ಶಿಕ್ಷಣ ಪಡೆಯುವಲ್ಲಿ ಗರಿಷ್ಠ ₹ 10 ಲಕ್ಷ ಶಿಕ್ಷಣ ಸಾಲ ಪಡೆಯಬಹುದು. ಈ ಬಡ್ಡಿ ವಿನಾಯ್ತಿಯು ವಿದ್ಯಾರ್ಥಿಯ ಅಧ್ಯಯನದ ಕೋರ್ಸಿನ ಅವಧಿ ಹಾಗೂ ಒಂದು ವರ್ಷ ಅಥವಾ ಕೆಲಸಕ್ಕೆ ಸೇರಿದ 6 ತಿಂಗಳೊಳಗೆ (ಇದರಲ್ಲಿ ಯಾವುದು ಮೊದಲೋ ಅದು ಅನ್ವಯ) ಅನ್ವಯವಾಗುತ್ತದೆ. ನಂತರ ಬಡ್ಡಿ ಇರುತ್ತದೆ. ಪ್ರಾಯಶಃ ನಿಮ್ಮ ಮಗಳ ಶಿಕ್ಷಣ ಸಾಲಕ್ಕೆ ಇದು ಅನ್ವಯವಾಗುತ್ತಿತ್ತೋ ಏನೋ. ಆದರೆ ಈಗ ಕಾಲ ಮೀರಿದೆ. ಆದರೂ ಬ್ಯಾಂಕ್‌ನಲ್ಲಿ ವಿಚಾರಿಸಿರಿ. ಸರ್ಕಾರದ ಹಲವಾರು ಯೋಜನೆಗಳು ಜನಸಾಮಾನ್ಯರಿಗೆ ತಲಪದಿರುವುದು ಶೋಚನೀಯ.

**

–ನಾರಾಯಣ, ಬೆಂಗಳೂರು

ನನ್ನ ವಯಸ್ಸು 61. ನನ್ನ ವಾರ್ಷಿಕ ಆದಾಯ ₹ 4 ಲಕ್ಷ. ಐ.ಟಿ. ರಿಟರ್ನ್ ತುಂಬಿರುವುದಿಲ್ಲ. ಎಷ್ಟು ತೆರಿಗೆ ಬರುತ್ತದೆ. ಯಾವಾಗ ರಿಟರ್ನ್ ಫೈಲ್ ಮಾಡಬೇಕು. ಎನ್‌ಎಸ್‌ಎಸ್ ಖರೀದಿಸಿದರೆ ತೆರಿಗೆ ಉಳಿಸಬಹುದೇ ಹಾಗೂ ಸಂಪೂರ್ಣ ತೆರಿಗೆ ಉಳಿಸಲು ಮಾರ್ಗದರ್ಶನ ಮಾಡಿರಿ.

ಉತ್ತರ: ನಿಮ್ಮ ಒಟ್ಟು ಆದಾಯ ₹ 4 ಲಕ್ಷ ಆದಲ್ಲಿ, ಅದರಲ್ಲಿ ನೀವು ₹ 3 ಲಕ್ಷ ಕಳೆದು ಉಳಿದ ಆದಾಯಕ್ಕೆ ಅಂದರೆ ₹ 1 ಲಕ್ಷಕ್ಕೆ ಶೇ 5 ರಂತೆ ತೆರಿಗೆ ಸಲ್ಲಿಸಬೇಕು. ತೆರಿಗೆ ಮೇಲೆ Education cess ಶೇ 3 ಕೂಡಾ ಕೊಡಬೇಕಾಗುತ್ತದೆ. ಇದೇ ವೇಳೆ ನೀವು ಬಯಸಿದಂತೆ NSC ₹ 1 ಲಕ್ಷ ಖರೀದಿಸಿ ಸಂಪೂರ್ಣ ತೆರಿಗೆ ವಿನಾಯ್ತಿ ಪಡೆಯಬಹುದು. 31–3–2018 ರೊಳಗೆ ₹ 1 ಲಕ್ಷ  NSC ಖರೀದಿಸಿರಿ. ನಿಮಗೆ ಈ ಮಾರ್ಗದಿಂದ ತೆರಿಗೆ ಬಾರದಿದ್ದರೂ 31–7–2018 ರೊಳಗೆ ಐ.ಟಿ ರಿಟರ್ನ್‌ ತುಂಬಲೇ ಬೇಕು.

**

–ವಿಶ್ವನಾಥ, ದಾವಣಗೆರೆ

ನನ್ನ ಮಗಳು MCA ಮುಗಿಸಿ ಕೆಲಸಕ್ಕೆ ಸೇರಿದ್ದಾಳೆ. ಅವಳು ವಾರ್ಷಿಕ ₹ 50,000 ದಂತೆ ಮೂರು ವರ್ಷ ಬ್ಯಾಂಕ್‌ನಲ್ಲಿ ಎಫ್‌ಡಿ ಮಾಡಿರುತ್ತಾಳೆ. ಪ್ರತೀ ವರ್ಷ ನವೀಕರಿಸುತ್ತಿದ್ದಾಳೆ. ಕಳೆದ ಆಗಸ್ಟ್‌ನಲ್ಲಿ ನವೀಕರಿಸಲು ಹೋದಾಗ ₹ 900 ಕಡಿತಗೊಂಡಿದ್ದು ಬ್ಯಾಂಕಿನಲ್ಲಿ ವಿಚಾರಿಸಿದಾಗ, ನೇರವಾಗಿ ಆದಾಯ ತೆರಿಗೆ ಇಲಾಖೆಯು ಕಡಿತಗೊಳಿಸಿದೆ ಎಂದು ತಿಳಿಸಿದರು. ಇನ್ನು ಮುಂದೆ ಯಾವುದೇ ಎಫ್‌ಡಿ ಠೇವಣಿಗೆ ₹ 1.50 ಲಕ್ಷ ಬಡ್ಡಿ ಮೀರಿದರೆ ನೇರವಾಗಿ ತೆರಿಗೆ ಕಡಿತಗೊಳಿಸುತ್ತಾರೆ ಎಂದು ತಿಳಿಸಿದರು. ನನ್ನ ಮಗಳ ವಾರ್ಷಿಕ ಆದಾಯ ₹ 2.50 ಲಕ್ಷದೊಳಗಿದೆ. ಸದ್ಯ ಕೆಲಸವಿಲ್ಲ. ದಯಮಾಡಿ ಸತ್ಯ ಸಂಗತಿ ತಿಳಿಸಿರಿ.

ಉತ್ತರ: ಸೆಕ್ಷನ್ 194ಎ ಆಧಾರದ ಮೇಲೆ, ಬ್ಯಾಂಕುಗಳು ಗ್ರಾಹಕರ ಠೇವಣಿಯ ಮೇಲಿನ ವಾರ್ಷಿಕ ಬಡ್ಡಿ ₹ 10,000 ದಾಟಿದಲ್ಲಿ, ಬಂದಿರುವ ಬಡ್ಡಿಯ ಶೇ 10 ರಷ್ಟು ಮುರಿದು ಆದಾಯ ತೆರಿಗೆ ಇಲಾಖೆಗೆ ರವಾನಿಸತಕ್ಕದ್ದು, ಇದೇ ವೇಳೆ ಗ್ರಾಹಕರು, 15ಜಿ (ಇತರರು) 15 ಎಚ್ (ಹಿರಿಯ ನಾಗರಿಕರು) ಪ್ರತೀ ಏಪ್ರಿಲ್‌ನಲ್ಲಿ ಸಲ್ಲಿಸಿದಲ್ಲಿ ಬ್ಯಾಂಕುಗಳು ಮೂಲ ಬಡ್ಡಿಯಿಂದ ಕಡಿತ (TDS) ಮಾಡುವಂತಿಲ್ಲ.

ಆದಾಯ ತೆರಿಗೆ ಇಲಾಖೆಯವರಿಗೆ ಬ್ಯಾಂಕ್ ಠೇವಣಿ ವಿಚಾರ ತಿಳಿದಿರುವುದಿಲ್ಲ ಹಾಗೂ ಅವರು ನೇರವಾಗಿ ಕಡಿತ ಮಾಡುವ ಕ್ರಮ ಸತ್ಯಕ್ಕೆ ದೂರವಾದ ವಿಚಾರ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ನಿಮ್ಮ ಮಗಳ ವಾರ್ಷಿಕ ಆದಾಯ ₹ 2.50 ಲಕ್ಷದೊಳಗಿರುವಲ್ಲಿ ಅವರು ತೆರಿಗೆಗೆ ಒಳಗಾಗುವುದಿಲ್ಲ. ಐ.ಟಿ ರಿಟರ್ನ್‌ ತುಂಬುವ ಅವಶ್ಯವಿಲ್ಲ. ಬ್ಯಾಂಕಿನಿಂದ ಮುರಿದ ತೆರಿಗೆಗೆ ಫಾರಂ ನಂಬರ್ 16–A ಪಡೆದು, ತೆರಿಗೆ ರಿಟರ್ನ್ ತುಂಬಿದಲ್ಲಿ ₹ 900 ವಾಪಸ್‌ ಪಡೆಯಬಹುದು.

**

ಸುರೇಂದ್ರನಾಥ್, ಮಡಕಶಿರ

ನಾನು 80 ವರ್ಷ ದಾಟಿದ ಹಿರಿಯ ನಾಗರಿಕ (1–3–1936). ನಾನು ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಿ ₹ 13 ಲಕ್ಷ ಎಸ್‌ಬಿಐನಲ್ಲಿ ಆರ್‌.ಡಿ ಮಾಡಿ ಮೂರು ತಿಂಗಳಿಗೊಮ್ಮೆ ಬಡ್ಡಿ ಪಡೆಯುತ್ತಿದ್ದೆ. ಈ ಬಡ್ಡಿ ಹಣದಲ್ಲಿ ತೆರಿಗೆ ಮುರಿಯುತ್ತಿದ್ದರು. ಪ್ರಜಾವಾಣಿಯಲ್ಲಿ ನೀವು ನೀಡಿದ ಮಾಹಿತಿಯಂತೆ ಅರ್ಜಿ ಸಲ್ಲಿಸಿದೆ. ಅಂದಿನಿಂದ ಟಿಡಿಎಸ್‌ ಮಾಡುತ್ತಿಲ್ಲ. ನಿಮಗೆ ಅಭಿನಂದನೆಗಳು. ಹೆಸರು ಹಾಗೂ ಹುಟ್ಟಿದ ದಿನಾಂಕಕ್ಕೆ ತೆರಿಗೆಗೆ ಸಂಬಂಧ ಇದೆಯೇ.

ನಾನು ರೈತ, ಹಿರಿಯ ನಾಗರಿಕ. ಈ ಬಡ್ಡಿಯಿಂದಲೇ ನನ್ನ ಜೀವನ, ನಾನು ಪ್ರತೀ ವರ್ಷ ಯಾವ ರೀತಿಯಲ್ಲಿ ಬ್ಯಾಂಕ್‌ಗೆ ಮಾಹಿತಿ ಕೊಡಬೇಕು?

ಉತ್ತರ: ಪ್ರಜಾವಾಣಿಯ ಪ್ರಶ್ನೋತ್ತರ ಓದಿ, ಬ್ಯಾಂಕಿಗೆ ಮಾಹಿತಿ ನೀಡಿ, ತೆರಿಗೆ ಮುರಿಯದಂತೆ ಮಾಡಿಕೊಂಡ ನಿಮಗೆ ಅಭಿನಂದಿಸುತ್ತೇನೆ. ಹೆಸರು ಮತ್ತು ಹುಟ್ಟಿದ ದಿನಾಂಕಕ್ಕೂ ತೆರಿಗೆಗೂ ಸಂಬಂಧ ವಿಲ್ಲವಾದರೂ, ಹುಟ್ಟಿದ ತಾರೀಕಿ ಗನುಗುಣವಾಗಿ ವ್ಯಕ್ತಿಯ ತೆರಿಗೆ ಆದಾಯದ ಮಿತಿಯನ್ನು ಸರ್ಕಾರ ನಿಗದಿಪಡಿಸುತ್ತದೆ.

ಉದಾಹರಣೆಗಾಗಿ, 60 ವರ್ಷದೊಳ ಗಿರುವವರು, 60 ರಿಂದ 80 ವರ್ಷದೊಳಗಿರುವವರು ಹಾಗೂ 80 ದಾಟಿದವರು. ಈ ಮೂರು ವರ್ಗಕ್ಕೆ ಕ್ರಮವಾಗಿ ₹ 2.50 ಲಕ್ಷ, ₹ 3 ಲಕ್ಷ ಹಾಗೂ ₹ 5 ಲಕ್ಷ ಆದಾಯಕ್ಕೆ ಆದಾಯ ತೆರಿಗೆ ವಿನಾಯಿತಿ ಇರುತ್ತದೆ. ಆದರೆ ಹೆಸರಿನಿಂದ ತೆರಿಗೆ ವ್ಯತ್ಯಾಸವಾಗುವುದಿಲ್ಲ. ನೀವು ಬಾಂಕ್ ಠೇವಣಿ ಇರುವ ತನಕ ಪ್ರತೀ ವರ್ಷ, 15ಎಚ್ ಸಮೂನೆ ಫಾರಂ ಬ್ಯಾಂಕಿಗೆ ಸಲ್ಲಿಸಿ ತೆರಿಗೆ ಮುರಿಯದಂತೆ ನೋಡಿಕೊಳ್ಳಿ. ಇದಕ್ಕೂ ಹೆಚ್ಚಿನ ಮಾಹಿತಿ ಅಗತ್ಯವಿಲ್ಲ.

**

–ಲಕ್ಷ್ಮಿ, ವಿಜಯನಗರ, ಬೆಂಗಳೂರು

ನಾನು ಹಿರಿಯ ನಾಗರಿಕಳು ಹಾಗೂ ಗೃಹಿಣಿ. ನಾನು ಇಲ್ಲಿಯ ಒಂದು ಸಹಕಾರಿ ಬ್ಯಾಂಕ್‌ನಲ್ಲಿ ಶೇ 9.50 ಬಡ್ಡಿ ದರದಲ್ಲಿ, ₹ 25 ಲಕ್ಷದ ಮೊತ್ತವನ್ನು ಒಮ್ಮೆಲೇ ಬಡ್ಡಿ ಬರುವ ಠೇವಣಿ ಇರಿಸಿದ್ದೇನೆ. ಬ್ಯಾಂಕಿಗೆ ಪ್ಯಾನ್, ಆಧಾರ ಕೊಟ್ಟಿದ್ದೇನೆ. ನಾನು ‘15ಎಚ್’ ಕೂಡಾ ಕೊಟ್ಟಿದ್ದೇನೆ. ನನಗೆ ಇನ್ನೂ ಎಷ್ಟು ಈ ಬ್ಯಾಂಕಿನಲ್ಲಿ ಉಳಿತಾಯ ಮಾಡುವ ತನಕ ತೆರಿಗೆ ಬರುವುದಿಲ್ಲ. ದಯಮಾಡಿ ತಿಳಿಸಿರಿ.

ಉತ್ತರ: ಶೇ 9.50 ಬಡ್ಡಿ ದರದಲ್ಲಿ ₹ 25 ಲಕ್ಷ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರುವುದರಿಂದ ಪ್ರತೀ ಮೂರು ತಿಂಗಳಿಗೆ ಅಸಲಿಗೆ (ನಿಮ್ಮ ₹ 25 ಲಕ್ಷಕ್ಕೆ) ಸೇರಿಸಿ, ಬಡ್ಡಿ ಮೇಲೆ ಬಡ್ಡಿ ಬರುವುದರಿಂದ, ನಿಮ್ಮ ಠೇವಣಿ ಕನಿಷ್ಠ ಶೇ 10 ಬಡ್ಡಿ ದುಡಿಯುತ್ತದೆ. ಇದರಿಂದಾಗಿ ನಿಮ್ಮ ವಾರ್ಷಿಕ ಬಡ್ಡಿ ಆದಾಯ ₹ 2.50 ಲಕ್ಷವಾಗುತ್ತದೆ. ನೀವು ಹಿರಿಯ ನಾಗರಿಕರಾದ್ದರಿಂದ, ₹ 3 ಲಕ್ಷ ಬಡ್ಡಿ ಬಂದರೂ ನಿಮಗೆ ತೆರಿಗೆ ಅನ್ವಯವಾಗಲಾರದು. ನೀವು ₹ 30 ಲಕ್ಷಗಳ ತನಕ ಠೇವಣಿ ಇರಿಸಬಹುದು. ಬ್ಯಾಂಕ್ ಹೊರತುಪಡಿಸಿ, ಬೇರೆಯವರ ಮಾತು ಕೇಳಿ ಅಭದ್ರವಾದ ಹೂಡಿಕೆಯಲ್ಲಿ ಎಂದಿಗೂ ತೊಡಗಿಸಬೇಡಿ.

**

–ಹೆಸರು–ಊರು–ಬೇಡ

ನಾನು ಪ್ರೌಢಶಾಲಾ ಶಿಕ್ಷಕನಾಗಿದ್ದು, ಸಾಲ ಕಳೆದು ಮಾಸಿಕ ₹ 15,000 ಆದಾಯ ಪಡೆಯುತ್ತಿದ್ದೇನೆ. ಕಡಿತಗಳು ಎನ್‌.ಪಿ.ಎಸ್‌. ಸೇರಿ ₹ 8,000 ಇದೆ. ಇನ್ನು ಮುಂದೆ ನಿವೇಶನಕೊಳ್ಳಲು ಆಲೋಚನೆ ಇದೆ. ಉಳಿತಾಯಕ್ಕೆ ಮಾರ್ಗ ತಿಳಿಸಿ ಹಾಗೂ ಅಟಲ್‌ ಪೆನ್ಶನ್‌ ಯೋಜನೆಯಲ್ಲಿ ಹೂಡಿಕೆ ಮಾಡಿದ್ದು, ಅದಕ್ಕೆ ಯಾವುದೇ ದಾಖಲೆಗಳು ಬಂದಿರುವುದಿಲ್ಲ. ಎಲ್ಲಿ ಹೇಗೆ ಪಡೆಯಬಹುದು ತಿಳಿಸಿರಿ.

ಉತ್ತರ: ನಿಮ್ಮ ಮನೆ ಖರ್ಚು ಎಷ್ಟು ಎಂಬುದು ತಿಳಿದಿಲ್ಲ.

₹ 15,000ದಲ್ಲಿ ₹ 8,000 ಕಡಿತವಿದೆಯೇ ಎಂಬುದು ಕೂಡಾ ಸ್ಪಷ್ಟವಾಗಿಲ್ಲ. ಏನೇ ಇರಲಿ ನಿವೇಶನ ಕೊಳ್ಳಲು ಸ್ವಲ್ಪ ದೊಡ್ಡ ಮೊತ್ತದ ಅವಶ್ಯವಿದೆ. ಸದ್ಯಕ್ಕೆ ಇದು ನಿಮಗೆ ಸಾಧ್ಯವಾಗಲಾರದು. ಆದರೆ ಈಗಿನಿಂದಲೇ ಎಷ್ಟಾದರಷ್ಟು ಮೊತ್ತ ಕನಿಷ್ಠ 5 ವರ್ಷಗಳ ಅವಧಿಯ ಬ್ಯಾಂಕ್‌ ಆರ್‌.ಡಿ. ಮಾಡಿ ಹಣ ಉಳಿಸುತ್ತಾ ಬನ್ನಿ. 5 ವರ್ಷಗಳ ನಂತರ ಸ್ವಲ್ಪ ಸಾಲ ಮಾಡಿ ನಿವೇಶನ ಕೊಳ್ಳಿರಿ. ನೀವು ಎಲ್ಲಿ ಅಟಲ್‌ ಪಿಂಚಣಿ ಹಣ ಪಾವತಿಸುತ್ತಿದ್ದಿರೋ ಅದೇ ಆಫೀಸಿನಲ್ಲಿ ದಾಖಲೆ ಪಡೆಯಿರಿ.

**

–ಜೈರಾಮು, ಬೆಂಗಳೂರು

ಕೆಲವು ವರ್ಷಗಳ ಹಿಂದೆ ಕೊಂಡ ನಿವೇಶನ ಸಧ್ಯ ಮಾರಾಟ ಮಾಡಿದ್ದೇನೆ. ಈ ಹಣದಿಂದ, ನನ್ನ ಅಣ್ಣ ನನಗೆ ದಾನವಾಗಿ ಕೊಟ್ಟ ನಿವೇಶನದಲ್ಲಿ ಮನೆ ಕಟ್ಟಬೇಕೆಂದಿದ್ದೇನೆ. ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಲೆಕ್ಕ ಹಾಕಲು ಮನೆ ಸಂಪೂರ್ಣ ಆಗುವ ತನಕ ಕಾಯಬಹುದೇ ಅಥವಾ ಮುಂಗಡವಾಗಿ ತೆರಿಗೆ ಸಲ್ಲಿಸಬೇಕೇ ತಿಳಿಸಿರಿ.

ಉತ್ತರ: ನೀವು ಮಾರಾಟ ಮಾಡಿರುವ ನಿವೇಶನದ ವಿಚಾರದಲ್ಲಿ, ಕೊಂಡುಕೊಳ್ಳುವಾಗ ಕೊಟ್ಟ ಹಣ ಹಾಗೂ ಮಾರಾಟ ಮಾಡಿದಾಗ ಬಂದ ಹಣ ಇವೆರಡರ ಅಂತರಕ್ಕೆ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಕೊಡಬೇಕಾಗುತ್ತದೆ. ಆದರೆ ಹೀಗೆ ಬಂದ ಲಾಭ ಸಂಪೂರ್ಣವಾಗಿ ಇನ್ನೊಂದು ಮನೆ ನಿರ್ಮಿಸಲು, ಸೆಕ್ಷನ್‌ 54ಎಫ್‌ ಆಧಾರದ ಮೇಲೆ, ಆಸ್ತಿ ಮಾರಾಟ ಮಾಡಿದ ಮೂರು ವರ್ಷಗಳಲ್ಲಿ ವಿನಿಯೋಗಿಸುವಲ್ಲಿ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ವಿನಾಯ್ತಿ ಪಡೆಯಬಹುದು.

ನೀವು ಅಣ್ಣನಿಂದ ದಾನವಾಗಿ ಪಡೆದ ನಿವೇಶನದಲ್ಲಿ ಮೇಲೆ ವಿವರಿಸಿದಂತೆ 3 ವರ್ಷಗಳಲ್ಲಿ ಮನೆ ಕಟ್ಟುವಲ್ಲಿ ಹಾಗೂ ಸಂಪೂರ್ಣ ಹಣ ವಿನಿಯೋಗಿಸುವಲ್ಲಿ ಕ್ಯಾಪಿಟಲ್‌ಗೇನ್‌ ಟ್ಯಾಕ್ಸ್‌ ಬರುವುದಿಲ್ಲ. ನಿವೇಶನ ಮಾರಾಟ ಮಾಡಿದ ಹಣ ಕ್ಯಾಪಿಟಲ್‌ಗೇನ್‌ 1988 ರಲ್ಲಿ ಬ್ಯಾಂಕಿನಲ್ಲಿ ಠೇವಣಿ ಇರಿಸಿ, ಈ ಹಣ ಮನೆ ಕಟ್ಟಲು ಉಪಯೋಗಿಸಿರಿ.

**

–ಶ್ರೇಯಸ್‌, ಹೊಸದುರ್ಗ

ನಾನು ಪ್ರೌಢಶಾಲಾ ಶಿಕ್ಷಕ, ವಯಸ್ಸು 35. ನಾನು ಇದುವರೆಗೂ ಉಳಿತಾಯ ಮಾಡಿಲ್ಲ. ಕೆಜಿಐಡಿ ಹಾಗೂ ವೇತನ ಸಾಲ, ಎನ್‌ಪಿಎಸ್‌–ಎಲ್‌ಐಸಿ ಎಲ್ಲ ಕಡಿತವಾಗಿ ಹಾಗೂ ಖರ್ಚು ಕಳೆದು ₹ 10,000 ಉಳಿಸಬಹುದು. ನಿವೇಶನ–ಮನೆ ನನ್ನ ಮುಖ್ಯ ಆದ್ಯತೆ. ದಯವಿಟ್ಟು ಸಲಹೆ ನೀಡಿರಿ. ನಿಮ್ಮ ಉತ್ತರ ನನಗೆ ದಾರಿದೀಪವಾಗಲಿದೆ.

ಉತ್ತರ: ನೀವು ಕೆಜಿಐಡಿ ಹಾಗೂ ವೇತನದ ಮೇಲೆ ಯಾವ ಕಾರಣಕ್ಕಾಗಿ ಸಾಲ ಪಡೆದ್ದೀರಿ ಹಾಗೂ ಸಾಲದ ಮೊತ್ತ–ಅವಧಿ ಇವೆಲ್ಲವನ್ನೂ ಪ್ರಶ್ನೆಯಲ್ಲಿ ತಿಳಿಸಿಲ್ಲ. ಏನೇ ಇರಲಿ, ಸಾಲವನ್ನು ಆದಷ್ಟು ಬೇಗ ತೀರಿಸುವ ಪ್ರಯತ್ನ ಮಾಡಿರಿ.

ಸಾಲದ ಕಂತು, ಬಡ್ಡಿ ನಿಮ್ಮ ಒಟ್ಟು ಆದಾಯದ ಸಿಂಹಪಾಲು ಆವರಿಸಿ, ನೀವು ಆರ್ಥಿಕವಾಗಿ ಸಬಲರಾಗಲು ಅಡ್ಡಿಪಡಿಸುತ್ತದೆ. ನೀವು ಇನ್ನೂ ಸಣ್ಣ ವಯಸ್ಸಿನವರು. ನಿಮಗೆ ಉತ್ತಮ ಭವಿಷ್ಯವಿದೆ, ಜೊತೆಗೆ ವೇತನ ಪರಿಷ್ಕರಣೆಯಿಂದಾಗಿ ಇನ್ನೂ ₹8000 ರಿಂದ ₹ 10,000 ಹೆಚ್ಚಿಗೆ ಕೈ ಸೇರಲಿದೆ. ಇದನ್ನೆಲ್ಲಾ ಲೆಕ್ಕಕ್ಕೆ ತೆಗೆದುಕೊಂಡು, ಸಾಲ ಮರುಪಾವತಿಗೆ ಆದ್ಯತೆ ನೀಡಿ, ಉಳಿದ ಹಣ ದೀರ್ಘಾವಧಿ ಅಂದರೆ 10 ವರ್ಷಗಳ ಆರ್‌.ಡಿ. ಮಾಡಿರಿ. ಅಷ್ಟರಲ್ಲಿ ಸಾಲ ತೀರಿಸಿ ಉಳಿತಾಯದ ಹಣ ಸೇರಿಸಿ ನಿವೇಶನ–ಮನೆ ಮಾಡಿಕೊಳ್ಳಿ.

–ಮಹಂತೇಶ್‌, ಊರು ಬೇಡ

ವಯಸ್ಸು 24, ಒಂದು ವರ್ಷದಿಂದ ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಎನ್‌ಪಿಎಸ್‌–ಎಲ್‌ಐಸಿ–ಕೆಜಿಐಡಿ ಕಡಿತವಾಗಿ ₹ 17,000 ಕೈಗೆ ಬರುತ್ತದೆ. 7ನೇ ವೇತನ ಜಾರಿಯಿಂದ ಸಂಬಳ ಹೆಚ್ಚಳವಾಗಿದೆ. ಸದ್ಯಕ್ಕೆ ಅಂಚೆ ಕಚೇರಿಯಲ್ಲಿ 5 ವರ್ಷಗಳ ಆರ್‌.ಡಿ. ₹ 5000ಕ್ಕೆ ಮಾಡಿದ್ದೇನೆ. 2–3 ವರ್ಷಗಳಲ್ಲಿ ಹಣ ಬೇಕಾಗಬಹುದು. ಖರ್ಚು ಕಳೆದು ಉಳಿಯುವ ₹ 4000 ಎಸ್‌ಬಿಐನಲ್ಲಿ ಮರು ಹೂಡಿಕೆ ಠೇವಣಿಯಲ್ಲಿ ಇರಿಸಲೇ–ಮರು ಹೂಡಿಕೆ ಠೇವಣಿ ಎಂದರೇನು ತಿಳಿಸಿರಿ.

ಉತ್ತರ: ನೀವು ಇದುವರೆಗೆ ಮಾಡುತ್ತಿರುವ ಉಳಿತಾಯ ತುಂಬಾ ಚೆನ್ನಾಗಿದೆ. ಹಾಗೆ ಮುಂದುವರಿಸಿರಿ. ಮರು ಹೂಡಿಕೆ ಠೇವಣಿ ಎಂದರೆ, ಒಂದು ಮೊತ್ತ ಠೇವಣಿಯಾಗಿರಿಸಿ, ಅವಧಿ ಮುಗಿಯುವ ತನಕ ಬಡ್ಡಿ ಪಡೆಯದೆ, ಕಾಲ ಕಾಲಕ್ಕೆ ಬರುವ ಬಡ್ಡಿ ಅಸಲಿಗೆ ಸೇರಿಸಿ, ಚಕ್ರಬಡ್ಡಿಯಲ್ಲಿ ವಾಪಸು ಪಡೆಯುವ ಠೇವಣಿ ಯೋಜನೆ.

ನೀವು ಪ್ರತೀ ತಿಂಗಳೂ ಎಸ್‌ಬಿಐನಲ್ಲಿ ₹ 4000 ಮರು ಹೂಡಿಕೆ ಠೇವಣಿ ಮಾಡುವ ಬದಲು, ಒಂದು ವರ್ಷದ ಆರ್‌.ಡಿ. ಮಾಡಿ, ವರ್ಚಾಂತ್ಯಕ್ಕೆ ₹ 50,000 ಮರುಹೂಡಿಕೆ ಠೇವಣಿ ಮಾಡಿರಿ. ಈ ಪ್ರಕ್ರಿಯೆ ನಿರಂತರವಾಗಿರಲಿ. ಸಂಬಳ ಹೆಚ್ಚಾದಾಗ, ತುಟ್ಟಿಭತ್ಯೆ–ವಾರ್ಷಿಕ ಇನ್‌ಕ್ರಿಮೆಂಟ್‌ ಬಂದಾಗ ಕನಿಷ್ಠ ಶೇ 50ರಷ್ಟನ್ನು ವಾರ್ಷಿಕ ಆರ್‌.ಡಿ. ಮಾಡಿ, ವರ್ಚಾಂತ್ಯಕ್ಕೆ, ಮರು ಹೂಡಿಕೆ ಠೇವಣಿ ಮಾಡಿರಿ. ಇಂತಹ ಉಳಿತಾಯದ  ಪ್ಲ್ಯಾನ್‌ ನಿಮ್ಮ ಆರ್ಥಿಕ ಸದೃಢತೆಗೆ ನಾಂದಿಯಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT