ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಸಮಾನತೆ ಸಾಧನೆಯೊಂದೇ ನೇರ ದಾರಿ

Last Updated 3 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ದೇಶದ ನಾನಾ ಭಾಗಗಳಲ್ಲಿ ದಲಿತ- ಆದಿವಾಸಿ ಜನರ ಆಕ್ರೋಶ ಸೋಮವಾರ ಸ್ಫೋಟಗೊಂಡಿತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಲಾಗಿದೆ ಎಂದು ಪ್ರತಿಭಟಿಸಿದ ದಲಿತ ಸಂಘಟನೆಗಳು ‘ಭಾರತ್ ಬಂದ್’ ನಡೆಸಲು ಮುಂದಾದವು. ಇದರ ಪರಿಣಾಮ-ಪ್ರಭಾವಕ್ಕೆ ಉತ್ತರ ಮತ್ತು ಮಧ್ಯಭಾರತದ ಹಲವು ಪ್ರದೇಶಗಳು ಸಾಕ್ಷಿಯಾದವು. ಹಿಂಸಾಚಾರಕ್ಕೆ ತಿರುಗಿದ ಪ್ರದರ್ಶನದಲ್ಲಿ ಏಳು ಮಂದಿ ದಲಿತರೂ ಸೇರಿದಂತೆ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ. ಪಿಸ್ತೂಲು- ಬಂದೂಕು ಪ್ರಯೋಗ, ಅಗ್ನಿಸ್ಪರ್ಶ, ದೊಂಬಿ, ಮಾರಾಮಾರಿ ನಡೆದು ನೂರಾರು ಜನರನ್ನು ಬಂಧಿಸಲಾಗಿದೆ. ಹಿಂಸಾಚಾರ ಯಾವ ಕಾರಣಕ್ಕೂ ಸಮರ್ಥನೀಯ ಅಲ್ಲ. ಈ ಪ್ರದರ್ಶನಗಳಲ್ಲಿ ಪೊಲೀಸರ ವಿನಾ ಗುಂಡು ಹಾರಿಸಿದ ‘ಇತರರು’ ಯಾರೆಂಬ ಕುರಿತು ತನಿಖೆ ನಡೆದಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಲ್ಲಿಸಿದ ಒಡನೆಯೇ ಆರೋಪಿಗಳನ್ನು ಬಂಧಿಸುವಂತಿಲ್ಲ ಮತ್ತು ಎಫ್‌.ಐ.ಆರ್‌.  ದಾಖಲಿಸುವಂತಿಲ್ಲ ಎಂಬುದಾಗಿ ಮಾರ್ಚ್‌ 20ರಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಪರಿಣಾಮವಾಗಿ ಕಾಯ್ದೆಯು ಹಲ್ಲು– ಉಗುರುಗಳನ್ನು ಕಳೆದುಕೊಂಡಿದೆ ಎಂಬ ತೀವ್ರ ಅಸಮಾಧಾನ ದೇಶದಾದ್ಯಂತ ದಲಿತ ಸಮುದಾಯದಲ್ಲಿ ಪ್ರಕಟಗೊಂಡಿತ್ತು. ಸವರ್ಣೀಯರು ತಮಗೆ ಸಮ್ಮಾನ ಕೊಡದಿದ್ದರೂ, ಅಪಮಾನಿಸಲು ಕೊಂಚವಾದರೂ ಅಳುಕುತ್ತಿದ್ದರು. ತಮ್ಮ ಪಾಲಿನ ಸುರಕ್ಷಾ ಕವಚವನ್ನು ನ್ಯಾಯಾಲಯದ ತೀರ್ಪು ಕಿತ್ತುಕೊಂಡಿದೆ ಎಂಬುದು ದಲಿತ ಸಮುದಾಯದ ಅಳಲು. ಜಾತಿ ವ್ಯವಸ್ಥೆಯೆಂಬ ಸಾಮಾಜಿಕ ಅಭಿಶಾಪದ ದಳ್ಳುರಿಯಲ್ಲಿ ನೂರಾರು ವರ್ಷಗಳಿಂದ ಬೇಯುತ್ತ ಬಂದಿರುವ ಈ ಸಮುದಾಯಗಳು ಅಭದ್ರ ಭಾವನೆಯಲ್ಲಿ ನರಳಿರುವುದು ಕಠೋರ ವಾಸ್ತವ. ಈ ವಾಸ್ತವದ ನಿರಾಕರಣೆ ಆತ್ಮವಂಚನೆಯಲ್ಲದೆ ಬೇರೇನೂ ಅಲ್ಲ. 33 ಕೋಟಿ ದೇಶವಾಸಿಗಳು ನಿತ್ಯ ಅವಹೇಳನ- ಅಭದ್ರತೆಯಲ್ಲಿ ಬದುಕು ದೂಡುವ ದುಃಸ್ಥಿತಿ ಆರೋಗ್ಯವಂತ ಸಮಾಜದ ಲಕ್ಷಣ ಅಲ್ಲ.
ಇಷ್ಟೊಂದು ಜನಸಂಖ್ಯೆಯನ್ನು ಅದುಮಿರಿಸುವ ಯಾವ ದೇಶವೂ ಸಾಮಾಜಿಕ- ಆರ್ಥಿಕ ಪ್ರಗತಿಯನ್ನು ಸಾಧಿಸುವ ಅಥವಾ ವಿಶ್ವಗುರು ಆಗುವ ಕನಸು ಕಾಣಲು ಬರುವುದಿಲ್ಲ. ಸುಪ್ರೀಂ ಕೋರ್ಟಿನ ಈ ತೀರ್ಪಿನ ಹಿನ್ನೆಲೆಯಲ್ಲಿ ದಲಿತರ ಆತಂಕಗಳನ್ನು ದೂರ ಮಾಡುವ ಪ್ರಾಮಾಣಿಕ ಪ್ರಯತ್ನವನ್ನು
ಕೇಂದ್ರ ಸರ್ಕಾರ ಚುರುಕಾಗಿ ಮಾಡಬೇಕಿತ್ತು. ದಲಿತರು ಬೀದಿಗಿಳಿದು ಆಕ್ರೋಶ ಪ್ರಕಟಿಸುವ ತನಕ, ಹಿಂಸಾಚಾರ ಭುಗಿಲೇಳುವ ತನಕ ಕಾಯುವ
ಅಗತ್ಯ ಇರಲಿಲ್ಲ. ಜಾತಿ ವ್ಯವಸ್ಥೆಯ ಒಳಿತನ್ನು ಪ್ರತಿಪಾದಿಸುವ, ಮೀಸಲಾತಿಯನ್ನು ಅಂತ್ಯಗೊಳಿಸುವ ಹಾಗೂ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಕೇಂದ್ರ ಸರ್ಕಾರದ ಒಳಗಿನಿಂದ ಮತ್ತು ಹೊರಗಿನಿಂದ ಆಗಾಗ ಕೇಳಿಬರುತ್ತಲೇ ಇವೆ. ಭಾರತ ಸರ್ಕಾರದ ರಾಷ್ಟ್ರೀಯ ಅಪರಾಧ ದಾಖಲೆ ಬ್ಯೂರೊದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ 2007-17ರ ನಡುವಣ ಹತ್ತು ವರ್ಷಗಳ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಗಳ ಪ್ರಮಾಣ ಶೇ 66ರಷ್ಟು ಹೆಚ್ಚಿದೆ. ದೇಶದಲ್ಲಿ ನಿತ್ಯ ಸರಾಸರಿ ಆರು ಮಂದಿ ದಲಿತ ಮಹಿಳೆಯರ ಮೇಲೆ ಬಲಾತ್ಕಾರ ನಡೆಯುತ್ತಿದೆ. ವಿಚಾರಣೆಗೆ ಕಾದಿರುವ ಪ್ರಕರಣಗಳ ಬಾಕಿಯ ಬೆಟ್ಟ ಬೆಳೆಯುತ್ತಿದೆ. ಸಜೆಯಲ್ಲಿ ಕೊನೆಯಾಗುವ ಪ್ರಕರಣಗಳ ಪ್ರಮಾಣ ಶೇ 28ಕ್ಕೆ ಕುಸಿದಿದೆ. ಭಯ ಮತ್ತು ಅಪಮಾನದ ಲಜ್ಜೆಯನ್ನು ಬದಿಗೊತ್ತಿರುವ ದಲಿತರು ಪ್ರತಿರೋಧ ಮತ್ತು ಅರಿವಿನ ಹಾದಿ ಹಿಡಿದಿರುವುದು ಪ್ರಬಲರ ಕಣ್ಣುಗಳನ್ನು ಮತ್ತಷ್ಟು ಕೆಂಪಾಗಿಸಿ ದೌರ್ಜನ್ಯಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಅಧ್ಯಯನಗಳು ಸಾರಿವೆ. ಹೀಗಿದ್ದಾಗಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ದುರುಪಯೋಗ ಆಗುತ್ತಿದೆ ಎಂಬ ನ್ಯಾಯಾಲಯದ ತೀರ್ಪಿನ ಅಂಶ ಚರ್ಚಾರ್ಹ. ದುರ್ಬಳಕೆ ಆಗುತ್ತಿರುವುದು ಇದೊಂದೇ ಕಾಯ್ದೆಯೇ? ಭಾರತದಲ್ಲಿ ಬಹುಪಾಲು ಕಾಯ್ದೆಗಳು ದುರ್ಬಳಕೆ ಆಗುತ್ತಿವೆ ಎಂಬ ಮಾತಿದೆ. ಇದನ್ನು ನಾವು ಕಡೆಗಣಿಸುವಂತಿಲ್ಲ.

ಅರಾಜಕತೆಯ ವ್ಯಾಕರಣ ಮತ್ತು ವ್ಯಕ್ತಿಪೂಜೆಯನ್ನು ದೂರ ಇರಿಸುವ ಜೊತೆ ಜೊತೆಗೆ ಸಾಮಾಜಿಕ ಸ್ವಾತಂತ್ರ್ಯ ಸಾಧಿಸದೆ ಹೋದರೆ ದೇಶ ಮತ್ತೆ ಸ್ವಾತಂತ್ರ್ಯ ಕಳೆದುಕೊಳ್ಳಬೇಕಾದೀತು ಎಂಬ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೂರು ಮುಖ್ಯ ಎಚ್ಚರಿಕೆಗಳನ್ನು ಆಳುವವರು ಮತ್ತು ಅವರ ಹಿಂದಿರುವವರು ಗಂಭೀರವಾಗಿ ಪರಿಗಣಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT