ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ನಲ್ಲಿ ಸಿಸಿಟಿವಿ ಕ್ಯಾಮೆರಾ ದೃಶ್ಯ!

ಚುನಾವಣಾ ಅಕ್ರಮ ನಿಯಂತ್ರಣಕ್ಕೆ ತಂತ್ರಜ್ಞಾನದ ಬಳಕೆ ಮಾಡಿಕೊಳ್ಳುತ್ತಿರುವ ಅಬಕಾರಿ ಇಲಾಖೆ
Last Updated 4 ಏಪ್ರಿಲ್ 2018, 13:16 IST
ಅಕ್ಷರ ಗಾತ್ರ

ಕಾರವಾರ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪಾರದರ್ಶಕತೆ ಹಾಗೂ ಭದ್ರತೆ ಕಾಪಾಡುವ ನಿಟ್ಟಿನಲ್ಲಿ ತಂತ್ರಜ್ಞಾನದ ಬಳಕೆಗೆ ಅಬಕಾರಿ ಇಲಾಖೆ ಮುಂದಾಗಿದೆ. ಗಡಿಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕ್ಯಾಮೆರಾಗಳ ನೇರ ದೃಶ್ಯಾವಳಿಗಳನ್ನು ಅಧಿಕಾರಿಗಳಿಗೆ ತಲುಪಿಸುವ ಸಲುವಾಗಿ ‘ಇಂಟರ್‌ನೆಟ್ ಪ್ರೊಟೊಕಾಲ್ ಆಧಾರಿತ ಸಿಸಿಟಿವಿ ಮೊಬೈಲ್ ಆ್ಯಪ್‌’ ಅನ್ನು ಬಳಸಲಾಗುತ್ತಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ ಎಲ್‌.ಎ.ಮಂಜುನಾಥ್, ‘ಗೋವಾದಿಂದ ನಮ್ಮ ರಾಜ್ಯಕ್ಕೆ ರಸ್ತೆ ಮೂಲಕ ಪ್ರವೇಶವಿರುವ ಮಾಜಾಳಿ ಮತ್ತು ಅನಮೋಡ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳಿಗೆ ಇಂಟರ್‌ನೆಟ್ ಸಂಪರ್ಕ ನೀಡಲಾಗಿದ್ದು, ಇಲಾಖೆಯ ಅಧಿಕಾರಿಗಳ ಮೊಬೈಲ್‌ನಲ್ಲಿರುವ ಆ್ಯಪ್‌ನಲ್ಲಿ ಐದೇ ಸೆಕೆಂಡ್‌ಗಳ ಅಂತರದಲ್ಲಿ ದೃಶ್ಯಗಳು ಕಾಣಿಸುತ್ತವೆ. ಇದಕ್ಕೆ ಮೊಬೈಲ್‌ ನೆಟ್‌ವರ್ಕ್‌ಗಳಲ್ಲಿ ಸಿಗುವ ಇಂಟರ್‌ನೆಟ್ ವೇಗವೇ ಸಾಕಾಗುತ್ತದೆ. ಹೀಗಾಗಿ ವಾಹನಗಳ ತಪಾಸಣೆ, ಸಿಬ್ಬಂದಿ ಮತ್ತು ಸಾರ್ವಜನಿಕರ ವರ್ತನೆಯ ಮೇಲೆ ಅಧಿಕಾರಿಗಳಿಗೆ ದಿನವಿಡೀ ನಿಗಾ ಇಡಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ತಪಾಸಣಾ ಕೇಂದ್ರಗಳು: ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿ ಒಂದೊಂದು ತಪಾಸಣಾ ಕೇಂದ್ರಗಳನ್ನು ತೆರೆಯಲಾಗಿದೆ. ಹೊನ್ನಾವರದ ಮಂಕಿ, ಶಿರಸಿ ಬಳಿಯ ಮಾವಿನಗುಂಡಿ, ಯಲ್ಲಾಪುರದ ಕಿರವತ್ತಿ ಹಾಗೂ ಮುಂಡಗೋಡದ ಬಾಚಣಕಿ ಬಳಿಯೂ ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲೂ ಇನ್ನೆರಡು ದಿನಗಳ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.

ತುರ್ತು ವಿಚಕ್ಷಣಾ ಪಡೆ: ಚುನಾವಣಾ ಅಕ್ರಮಗಳನ್ನು ನಿಯಂತ್ರಿಸಲು ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತುರ್ತು ವಿಚಕ್ಷಣಾ ಪಡೆಗಳನ್ನು ರಚಿಸಲಾಗಿದೆ. ಇವುಗಳಲ್ಲಿ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಹಾಗೂ ಇಬ್ಬರು ಗಾರ್ಡ್‌ಗಳು ಇರುತ್ತಾರೆ. ಅದೇ ರೀತಿ, ತಾಲ್ಲೂಕು ಉಪ ವಿಭಾಗಗಳಲ್ಲಿ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ ಎಂದು ಅವರು ತಿಳಿಸಿದರು.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದ (ಮಾರ್ಚ್ 26) ಈವರೆಗೆ ಒಟ್ಟು ₹ 6.36 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.ಸುಮಾರು 35 ಪ್ರಕರಣಗಳ 110 ಆರೋಪಿಗಳನ್ನು ತಾಲ್ಲೂಕು ದಂಡಾಧಿಕಾರಿಗಳ ಎದುರು ಹಾಜರುಪಡಿಸಿ ಮುಚ್ಚಳಿಕೆ ಬರೆಸಿಕೊಳ್ಳಲಾಗಿದೆ. ಈವರೆಗೆ 114 ಪ್ರದೇಶಗಳಲ್ಲಿ ದಾಳಿ ಮಾಡಲಾಗಿದೆ. ಮೂರು ಘೋರ ಪ್ರಕರಣಗಳು (ಜಾಮೀನು ರಹಿತ), ಪರವಾನಗಿ ಇಲ್ಲದೇ ಮದ್ಯ ಸಾಗಿಸುತ್ತಿದ್ದ 17 ಪ್ರಕರಣಗಳು, ಡಾಬಾ, ಹೋಟೆಲ್‌ಗಳಲ್ಲಿ ನಿಯಮ ಮೀರಿ ಮದ್ಯ ಮಾರುತ್ತಿದ್ದ ಐದು ಪ್ರಕರಣಗಳನ್ನು ದಾಖಲಿಸಲಾಗಿದೆ. ಇವುಗಳಿಂದ 52 ಲೀ ಗೋವಾ ಮದ್ಯ, 42 ಲೀ ಸ್ಥಳೀಯ ಮದ್ಯ,  38 ಲೀ ಬಿಯರ್, ತಲಾ ಒಂದು ಟಾಟಾ ಏಸ್ ಹಾಗೂ ಕಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಂಕಿ ಅಂಶ ನೀಡಿದರು.

ಮದ್ಯ ಸಾಗಣೆಗೆ ತಡೆ

‘ಚುನಾವಣೆ ಸಂದರ್ಭದಲ್ಲಿ ಮದ್ಯ ಸಾಗಣೆ ತಡೆಗಟ್ಟುವ ಸಂಬಂಧ ಗೋವಾ ಅಬಕಾರಿ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದೆ. ಎರಡು ಬಾಟಲಿ ಮದ್ಯವನ್ನು ನಮ್ಮ ರಾಜ್ಯಕ್ಕೆ ತೆಗೆದುಕೊಂಡು ಬರಲು ನೀಡುತ್ತಿದ್ದ ಪರವಾನಗಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅವರು ಒಪ್ಪಿಕೊಂಡಿದ್ದಾರೆ. ಇದೇರೀತಿ, ಕೆಲವು ಸೂಕ್ಷ್ಮ ಅಂಗಡಿಗಳ ಮೇಲೆ ಕೂಡ ಕಣ್ಣಿಡಲಾಗಿದೆ. ಎಲ್ಲೇ ಅಕ್ರಮ ಕಂಡುಬಂದರೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಎಲ್‌.ಎ.ಮಂಜುನಾಥ್ ತಿಳಿಸಿದರು.

**

ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗುವ ದೃಶ್ಯಗಳು 15 ದಿನ ಉಳಿಯುತ್ತವೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಎಲ್‌.ಎ.ಮಂಜುನಾಥ್, ಅಬಕಾರಿ ಇಲಾಖೆ ಜಿಲ್ಲಾ ಅಧಿಕಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT