ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲಾರ ಹುಡುಗಿಯ ಒಬ್ಬಂಟಿ ಪ್ರವಾಸ

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ವಾಸ್ತವಿಕ ಅನುಭವಕ್ಕೂ, ಕಲ್ಪನೆಗೂ ಅಜಗಜಾಂತರವಿದೆ. ಚಿಕ್ಕವರಿದ್ದಾಗ ಕೇಳುತ್ತಿದ್ದ ಪಾಠಗಳಲ್ಲಿನ ಪಾತ್ರ, ಸ್ಥಳಗಳನ್ನು ನಾವು ಕಲ್ಪಿಸಿಕೊಳ್ಳುತ್ತಿರುತ್ತೇವೆ. ಅದನ್ನು ಖುದ್ದು ಅನುಭವಿಸುವ ಅವಕಾಶ ಸಿಗುವುದು ಕೆಲವರಿಗೆ ಮಾತ್ರ. ಹೀಗೆ ಅವಕಾಶ ಗಿಟ್ಟಿಸಿಕೊಂಡು ದೇಶ–ವಿದೇಶ ಸುತ್ತಿದವರಲ್ಲಿ ಚಂದನ್ ರಾವ್‌ ಕೂಡ ಒಬ್ಬರು.

ಈ ಯುವತಿ, ಯಾವುದೇ ಅಳುಕು–ಅಂಜಿಕೆಯಿಲ್ಲದೆ ಒಬ್ಬಂಟಿಯಾಗಿ ಪ್ರವಾಸ ಹೋಗುವುದು ವಿಶೇಷ.

‘ಕೇಳಿದ್ದು, ಓದಿದ್ದು ಎಲ್ಲವನ್ನೂ ಖುದ್ದು ನೋಡಬೇಕು ಎನ್ನುವ ಬಯಕೆ ನನ್ನನ್ನು ಕಾಂಬೋಡಿಯಾ, ಥಾಯ್ಲೆಂಡ್‌ ರಾಷ್ಟ್ರಗಳಿಗೂ ಎಳೆದುಕೊಂಡು ಹೋಗಿದೆ’ ಎನ್ನುತ್ತಾರೆ ಅವರು.

(ಚಿತ್ರಗಳು ಚಂದನ್‌ ರಾವ್‌ ಪ್ರವಾಸದ ಸಮಯದಲ್ಲಿ ಕ್ಲಿಕಿಸಿರುವವು)

ಕೋಲಾರ ಜಿಲ್ಲೆಯ ಚಂದನ್‌ ರಾವ್‌ ಗ್ರಾಫಿಕ್‌ ಡಿಸೈನ್‌ ಕೋರ್ಸ್‌ ಮಾಡಿದ್ದು, ತಮ್ಮದೇ ಸ್ಟಾರ್ಟ್‌ಅಪ್‌ ಸಂಸ್ಥೆಯನ್ನು ಪ್ರಾರಂಭಿಸಿದ್ದಾರೆ. ಇವರ ಸಂಸ್ಥೆಯಲ್ಲಿ ಹಲವರಿಗೆ ಕೆಲಸವನ್ನೂ ನೀಡಿದ್ದಾರೆ. ತಮಿಳುನಾಡಿನಲ್ಲಿ ಇತ್ತೀಚೆಗೆ ಎಂಟು ದಿನ ಒಂಟಿಯಾಗಿ ಕೇವಲ ₹ 1,840ರಲ್ಲಿ ಪ್ರವಾಸ ಮಾಡಿದ್ದಾರೆ. ಅವರ ಪ್ರವಾಸದ ಅನುಭವವನ್ನು ಅವರ ಮಾತುಗಳಲ್ಲೇ ಕೇಳಿ:

ನಾನು ಹೀಗೆ ಅಲೆಮಾರಿಯಂತೆ ಊರೂರು ಸುತ್ತುವುದಕ್ಕೆ, ಒಬ್ಬಳೇ ಎಲ್ಲೆಂದರಲ್ಲಿ ವಾರಗಟ್ಟಲೇ ಉಳಿದುಬಿಡುವುದಕ್ಕೆ ಚಿಕ್ಕ ವಯಸ್ಸಿನಲ್ಲಿ ನಮ್ಮ ಅಮ್ಮ ತಂದು ಕೊಡುತ್ತಿದ್ದ ಪುಸಕ್ತಗಳೇ ಕಾರಣ. ಚಿಕ್ಕವಳಿದ್ದಾಗ ಮಕ್ಕಳ ಸಾಹಸ, ಒಂದು ಆನೆಯ ಸಾವು, ಪರ್ವತದಲ್ಲಿ ಏಳು ದಿನಗಳು ಎಂಬಂತಹ ಪುಸ್ತಕಗಳನ್ನೇ ಅಮ್ಮ ತಂದು ಕೊಡುತ್ತಿದ್ದರು. ನಾನು ಅಲೆಮಾರಿಯಾಗಲು ಅವುಗಳೇ ಪ್ರೇರಣೆ.

ಹೆಣ್ಣೊಬ್ಬಳು ರಾತ್ರಿ 8 ಗಂಟೆಯ ಮೇಲೆ ಎಲ್ಲೂ ಹೊರಗಡೆ ಹೋಗಬಾರದು ಎನ್ನುವುದು ಈಗಲೂ ಅಲಿಖಿತ ನಿಯಮವಾಗಿ ಉಳಿದಿದೆ. ಅದಕ್ಕೆ ನಮ್ಮ ಸಮಾಜದಲ್ಲಿ ಆಗುತ್ತಿರುವ ಅವಘಡಗಳು ಸಹ ಕಾರಣ. ಆದರೆ, ನಿಜಕ್ಕೂ ಸಮಾಜ ಅಷ್ಟು ಕ್ರೂರಿಯಾಗಿಲ್ಲ.  ದೇಶ–ವಿದೇಶವನ್ನು ಒಂಟಿಯಾಗಿ ಸುತ್ತಿದ ನನಗೆ ಆ ರೀತಿಯ ಕೆಟ್ಟ ಅನುಭವ ಎಂದೂ ಆಗಿಲ್ಲ.

(ಚಂದನ್‌ ರಾವ್‌)

ಮೊದಲನೆಯದಾಗಿ ನಾವು ನಮ್ಮ ಸುತ್ತಲೂ ಒಂದು ಪಾಸಿಟಿವ್‌ ಸರ್ಕಲ್‌ ನಿರ್ಮಿಸಿಕೊಳ್ಳಬೇಕು. ನಾನು ಇದನ್ನು ಬಲವಾಗಿ ನಂಬುತ್ತೇನೆ. ಇದು ನನಗೆ ಆತ್ಮವಿಶ್ವಾಸ ತುಂಬಿದೆ. ನಮ್ಮ ಮೇಲೆ ಮಿತಿಗಳನ್ನು ಹೇರಿಕೊಳ್ಳಲು ನೂರಾರು ನೆಪಗಳಿವೆ. ಅವುಗಳನ್ನು ಕಳಚಿಕೊಂಡು ಹೊರಬಂದರೆ ಆಚೆ ಹೊಚ್ಚ ಹೊಸ ಜಗತ್ತಿದೆ. ನಾನು ಪ್ರವಾಸ ಮಾಡುತ್ತೇನೆ, ಒಬ್ಬಳೇ ಹೋಗುತ್ತೇನೆ ಎಂದಾಗ, ಮನೆಯಲ್ಲಿ ಮೊದ ಮೊದಲು ವಿರೋಧಿಸಿದರು. ಆತಂಕಪಟ್ಟರು. ಆದರೆ, ಅವರನ್ನು ಒಪ್ಪಿಸುವಲ್ಲಿ ನಾನು ಯಶಸ್ವಿಯಾದೆ. ಪ್ರವಾಸ ಹೋದಾಗ ಪ್ರತಿದಿನ ನಾನು ಅವರಿಗೆ ಕರೆ ಮಾಡುತ್ತೇನೆ.

ರಾಜಸ್ಥಾನ, ಗುಜರಾತ್‌, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಮುಂಬೈ ಪ್ರವಾಸ ಮಾಡಿದ್ದೇನೆ. ಇವುಗಳಲ್ಲಿ ಕೆಲವು ಸ್ಥಳಗಳಿಗೆ ಸ್ನೇಹಿತರನ್ನು ಕರೆದುಕೊಂಡು ಹೋಗಿದ್ದೇನೆ.

ಪ್ರವಾಸ ಮಾಡುವ ಸಮಯದಲ್ಲಿ ಮೊದಲಿಗೆ ನಾವು ಹೇಗಿರುತ್ತೇವೆ ಎನ್ನುವುದು ಅತಿಮುಖ್ಯ ಅಂಶ. ‘ಬಿ ಎ ರೋಮನ್‌ ಇನ್‌ ರೋಮ್‌’ (ರೋಮ್‌ನಲ್ಲಿ ರೋಮಿನವನಂತೆಯೇ ಇರು) ಎನ್ನುವ ಮಾತಿದೆ. ಇದನ್ನು ನಾನು ಹೋದ ಎಲ್ಲ ಕಡೆ ಚಾಚೂ ತಪ್ಪದೆ ಪಾಲಿಸುತ್ತೇನೆ. ಅಲ್ಲಿನ ಭಾಷೆ, ಉಡುಗೆಗೆ ನಾನು ಮೊದಲ ಪ್ರಾಧಾನ್ಯ ಕೊಡುತ್ತೇನೆ. ನಾವು ಹಾಕಿರುವ ಬಟ್ಟೆಯು ಸಹ ನಮಗೆ ಇತರ ಜನರೊಂದಿಗೆ ಬೆರೆಯಲು ಮತ್ತು ಗೌರವ ಪಡೆಯಲು ಸಹಕಾರಿ. ಸ್ಥಳೀಯತೆಗೆ ತಕ್ಕಂತೆ ಇದ್ದರೆ, ಜನ ಕೊಡುವ ಪ್ರೀತಿ ಅಪಾರ.

(ಚಿತ್ರಗಳು ಚಂದನ್‌ ರಾವ್‌ ಪ್ರವಾಸದ ಸಮಯದಲ್ಲಿ ಕ್ಲಿಕಿಸಿರುವವು)

ಯಾರೋ ದೂರದ ಊರಿನಿಂದ ಬಂದವರು ಅಥವಾ ಹೊರ ದೇಶದವರು, ಕ್ರೀಡಾಪಟುಗಳು ಬಂದು ನಮ್ಮ ಭಾಷೆಯಲ್ಲಿ ‘ನಮಸ್ಕಾರ, ಹೇಗಿದ್ದೀರಾ’ ಎಂದು ಎರಡು ಮಾತು ಆಡಿದರೆ ನಾವು ಪುಳಕಿತರಾಗುತ್ತೇವೆ. ಅದು ಭಾಷೆಗಿರುವ ಶಕ್ತಿ. ಅದನ್ನು ನಾನು ಎಲ್ಲಾ ಕಡೆಯೂ ಬಳಸುತ್ತೇನೆ. ನಾಟಕೀಯವಾಗಿ ಅಲ್ಲ, ಭಾವನಾತ್ಮಕವಾಗಿ. ಗುಜರಾತಿಗೆ ಹೋದಾಗ ‘ಕೈಮ್‌ ಚೋ’ (ಹೇಗಿದ್ದೀರಾ), ತಮಿಳುನಾಡಿನಲ್ಲಿ ‘ವಣಕ್ಕಂ’ (ನಮಸ್ತೆ) ಎಂದಾಗ ಕೆಲವು ಸ್ಥಳಗಳಲ್ಲಿ ಜನ ಕನ್ನಡ ಮಾತನಾಡಿಸಲು ಪ್ರಯತ್ನಿಸಿದ್ದು ಇದೆ. ಈ ಸಂಭಾಷಣೆ ಹೊಸ ರೋಮಾಂಚನವನ್ನೇ ನೀಡುತ್ತದೆ.

ನಾನು ಎಲ್ಲೇ ಹೋದರೂ ಅಲ್ಲಿನ ಜನರ ಜೊತೆ ಬೆರೆಯುತ್ತೇನೆ. ಇದು ನನಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು, ಅವುಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗಿದೆ. ಅಲ್ಲಿನ ಅಕ್ಕಿ ಬೆಲೆಯಿಂದ, ಯಾವ ರೀತಿಯ ಅಡುಗೆ ಮಾಡುತ್ತಾರೆ, ಅವರ ಅಭಿರುಚಿಗಳೇನು ಎನ್ನುವ ಮಾಹಿತಿ ತಿಳಿದುಕೊಳ್ಳಲು ನನಗೆ ಸದಾ ಕುತೂಹಲ.

ಪ್ರವಾಸ ಮಾಡುವಾಗ ನಾನು ಮೊದಲಿಗೆ ಸುತ್ತಮುತ್ತಲಿನ ಜನರ ಪರಿಚಯ ಮಾಡಿಕೊಳ್ಳುತ್ತೇನೆ. ಇದು ಮೂರನೇ ವ್ಯಕ್ತಿ ಯಾರಾದರೂ ಬಂದು ನನಗೆ ತೊಂದರೆ ಕೊಡಲು ಪ್ರಯತ್ನಿಸಿದರೆ ಸಹಾಯ ಪಡೆಯಲು ಸಹಕಾರಿ. ಪರಿಚಯ ಮಾಡಿಕೊಂಡವರೇ ತೊಂದರೆ ಕೊಟ್ಟ ಪ್ರಸಂಗ ಎಂದಿಗೂ ಬಂದಿಲ್ಲ. ಹಾಗೇನಾದರೂ ಅದನ್ನು ನಿಭಾಯಿಸುವ ಚಾಕಚಕ್ಯತೆಯನ್ನು ನಾನು ಬೆಳೆಸಿಕೊಂಡಿದ್ದೇನೆ.

(ಚಿತ್ರಗಳು ಚಂದನ್‌ ರಾವ್‌ ಪ್ರವಾಸದ ಸಮಯದಲ್ಲಿ ಕ್ಲಿಕಿಸಿರುವವು)

ನಮ್ಮ ರಾಜ್ಯಕ್ಕಿಂತ ಚಿಕ್ಕ ರಾಷ್ಟ್ರಗಳು ಪ್ರವಾಸೋದ್ಯಮಕ್ಕೆ ಕೊಡುತ್ತಿರುವಷ್ಟು ಕಾಳಜಿಯನ್ನೂ ನಾವು ಕೊಡುತ್ತಿಲ್ಲ. ಭಾರತದಲ್ಲಿ ಸಮುದ್ರ, ಪರ್ವತ, ಮರಳುಗಾಡು, ಜಲಪಾತ ಎಲ್ಲವೂ ಇವೆ. ಪ್ರವಾಸೋದ್ಯಮದ ದೃಷ್ಟಿಯಿಂದ ಅವುಗಳನ್ನು ದೊಡ್ಡದಾಗಿ ಬಳಸಿಕೊಳ್ಳಬೇಕಿದೆ.

ಈ ತಿಂಗಳು ನಾನು ಒಂಟಿಯಾಗಿ ಸೌರಾಷ್ಟ್ರ ಪ್ರವಾಸ ಮಾಡಲಿದ್ದೇನೆ’ ಎಂದು ಮಾತು ಮುಗಿಸಿದರು ಚಂದನ್‌. ಅವರಿಗೆ ಶುಭವಾಗಲಿ, ಅವರ ಪ್ರವಾಸದ ಅನುಭವ ಮತ್ತಷ್ಟು ಯುವತಿಯರಿಗೆ ಸ್ಫೂರ್ತಿಯಾಗಲಿ...

**

₹ 1,840ರಲ್ಲಿ ಎಂಟು ದಿನ ಪ್ರವಾಸ!

ತಮಿಳುನಾಡಿನ ಪ್ರವಾಸ ಪೂರ್ವ ನಿಯೋಜಿತವಾಗಿರಲಿಲ್ಲ. ಫೆಬ್ರುವರಿಯಲ್ಲಿ ಒಂದೆರಡು ದಿನಗಳಲ್ಲಿ ಯೋಚನೆ ಮಾಡಿ ಹೊರಟಿದ್ದು. ಮಧುರೆ ಹೊರತುಪಡಿಸಿ ಎಲ್ಲಿಯೂ ಹೋಟೆಲ್‌ಗಳಲ್ಲಿ ಉಳಿದುಕೊಳ್ಳಲಿಲ್ಲ. ಬಹುತೇಕ ಸ್ಥಳಗಳಲ್ಲಿ ವರ್ಕ್‌ ಎಕ್ಸ್‌ಚೇಂಜ್‌ ಮೂಲಕ ವಾಸ್ತವ್ಯ ನಿಭಾಯಿಸುತ್ತಿದ್ದ (ಗ್ರಾಫಿಕ್‌ ಡಿಸೈನ್ ಮಾಡಿಕೊಡುವುದು, ಫೋಟೊಗ್ರಫಿ, ಲೋಗೊ ತಯಾರಿಸಿಕೊಡುವುದು, ಹಾಸ್ಟೆಲ್ ಪ್ರಾಜೆಕ್ಟ್‌ಗಳಿಗೆ ಸಹಾಯ ಮಾಡುವುದು). ಇದರಿಂದ  ಹಾಸ್ಟೆಲ್‌ಗಳಲ್ಲಿ ಅಥವಾ ಸ್ಥಳೀಯ ನರ್ಸಿಂಗ್‌ ಹಾಸ್ಟೆಲ್‌ಗಳಲ್ಲಿ ಒಂದೆರಡು ದಿನ ಉಳಿಯಲು ಅವಕಾಶ ಸಿಗುತ್ತಿತ್ತು.  

ಸಾಮಾಜಿಕ ಮಾಧ್ಯಮದಿಂದ ಒಂದಷ್ಟು ಮಾಹಿತಿ ಕಲೆಹಾಕಿ ಪ್ರವಾಸ ಪ್ರಾರಂಭಿಸಿದ ನಾನು, ಮೊದಲ ದಿನ ಚೆನ್ನೈನ ಮರೀನಾ ಬೀಚ್‌ನ ಸುತ್ತ ಮುತ್ತ ಸುತ್ತಿದೆ. ಅಲ್ಲಿಂದ ಎರಡನೆಯ ದಿನ, ಸ್ಥಳೀಯ ಬಸ್‌ನಲ್ಲಿ ಪಾಂಡಿಚೇರಿ ಸುತ್ತಾಡಿ ಫೋಟೊ ಕ್ಲಿಕ್ಕಿಸಿಕೊಂಡು ಒಂದಿಷ್ಟು ಜನರ ಜೊತೆ ಒಡನಾಟ ಬೆಳೆಸಿಕೊಂಡೆ. ಹೋದಲ್ಲೆಲ್ಲಾ ದೇವಸ್ಥಾನಗಳಲ್ಲೇ ಊಟ ಆಗುತ್ತಿತ್ತು. ಹೀಗಾಗಿ ಊಟಕ್ಕೂ ಹೆಚ್ಚು ಖರ್ಚು ತಗುಲಲಿಲ್ಲ.

(ಚಿತ್ರಗಳು ಚಂದನ್‌ ರಾವ್‌ ಪ್ರವಾಸದ ಸಮಯದಲ್ಲಿ ಕ್ಲಿಕಿಸಿರುವವು)

ಅಲ್ಲಿಂದ ನಾನು ತಿರುಚಿಗೆ ಪ್ರಯಾಣ ಬೆಳೆಸಿದೆ. ಐದನೇ ದಿನ ಶ್ರೀರಂಗಂ, ತಂಜಾವೂರು ಮತ್ತು ಕುಂಭಕೋಣಂನ ದೇವಸ್ಥಾನಗಳನ್ನು ಸುತ್ತಿದೆ. ಮಧುರೆಯ  ಮೀನಾಕ್ಷಿ ದೇವಸ್ಥಾನ ಮತ್ತು ತಿರುಮಲೈ ನಾಯಕರ್‌ ಮಹಲ್‌, ಅಲ್ಲಿಂದ ರಾಮೇಶ್ವರಂ ಸಮುದ್ರ ತೀರ ನೋಡಿದೆ. ಧನುಷ್ಕೋಟಿಯಲ್ಲಿ ಎರಡು ಸಮುದ್ರಗಳು ಒಂದೆಡೆ ಸೇರುವ ಸ್ಥಳದ ದರ್ಶನವಾಯಿತು. ಪ್ರವಾಸದ ಕಡೆ ದಿನ ಕನ್ಯಾಕುಮಾರಿಗೆ ಬಂದು ರಾಮೇಶ್ವರಂ ಮೂಲಕ ಬೆಂಗಳೂರಿಗೆ ವಾಪಸಾದೆ. ಪ್ರವಾಸದಲ್ಲಿ ದೇವಸ್ಥಾನ ಮತ್ತಿತರ ಕಡೆ ಕ್ಯಾಮೆರಾ ಬಳಸಲು ಶುಲ್ಕ ಹೊರತುಪಡಿಸಿ ಎಲ್ಲೂ ಹೆಚ್ಚು ಖರ್ಚು ತಗುಲಲಿಲ್ಲ. ಹಾಗಾಗಿ ಇಷ್ಟು ಸಣ್ಣ ಬಜೆಟ್‌ನಲ್ಲಿ ಪ್ರವಾಸ ಮುಗಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT