ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಲಿಂಗ, ಮೂರ್ತಿಪೂಜೆ, ಸ್ಥಾವರಲಿಂಗ

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ವೀರಶೈವ, ಲಿಂಗಾಯತ ಎರಡೂ ಬೇರೆ ಬೇರೆ ಅಲ್ಲ’ ಎಂದು ಹೇಳುತ್ತಲೇ ವ್ಯತ್ಯಾಸವನ್ನು ಸ್ಪಷ್ಟಪಡಿಸಲೋ ಎಂಬಂತೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ‘ವೀರಶೈವರು ಮೂರ್ತಿ ಆರಾಧಕರು, ಲಿಂಗಾಯತರು ಇಷ್ಟಲಿಂಗ ಆರಾಧಕರು’ ಎಂದು ನೀಡಿರುವ ವಿವರಣೆಯ ಅರ್ಥ ಸ್ವಯಂ ಪೇಜಾವರರಿಗೇ ಆಗಿಲ್ಲವೆಂಬುದು ಸ್ಪಷ್ಟ. ಇನ್ನು ಅವರ ತಪ್ಪನ್ನು ಸರಿಪಡಿಸುವ ಸಂಬಂಧದಲ್ಲಿ ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು, ‘ವೀರಶೈವ, ಲಿಂಗಾಯತರು ಮೂರ್ತಿ ಆರಾಧಕರಲ್ಲ, ಅವರು ಇಷ್ಟಲಿಂಗ ಪೂಜಕರಾದರೂ ಸುತ್ತಮುತ್ತಲಿನವರ ಪ್ರಭಾವದಿಂದ ದೇವರ ಮೂರ್ತಿಗಳಿಗೆ ಗೌರವ ಕೊಡುವುದು, ಭಕ್ತಿ ತೋರಿಸುವುದು ಸಾಮಾನ್ಯ ಸಂಗತಿಯಾಗಿದೆ’ ಎಂದು ನೀಡಿರುವ ವಿವರಣೆ (ಪ್ರ.ವಾ., ಏ.4) ಮತ್ತೊಂದು ಚೋದ್ಯವೇ ಸರಿ.

ವಾಸ್ತವವಾಗಿ ಕರಡಿಗೆಯೊಳಗಿರುವುದೇನು? ಅದುಅನಿಲ-ದ್ರವ ರೂಪಿ ಶಿವನಂತೂ ಅಲ್ಲ. ದೇವಸ್ಥಾನಗಳಲ್ಲಿ ಪ್ರತಿಷ್ಠಾಪನೆಗೊಂಡ ಸ್ಥಾವರಲಿಂಗದ ಸಣ್ಣ ಆಕಾರದ ಪ್ರತಿಮೂರ್ತಿ ಅದು. ಹಾಗಿರುವಾಗ ಮೂರ್ತಿ ಆರಾಧಕರಲ್ಲ ಎಂಬ ಮಾತಿಗೆ ಏನು ಅರ್ಥವಿದೆ?

ಇನ್ನು ‘ಸುತ್ತಲಿನವರ ಪ್ರಭಾವದಿಂದ ದೇವರ ಮೂರ್ತಿಗಳಿಗೆ ಗೌರವ ಕೊಡುವುದು’ ಎನ್ನುವುದಕ್ಕೆ ಅರ್ಥವೇ ಇಲ್ಲ. ಮುಂಚಿನಿಂದಲೂ ವೀರಶೈವ ಇಲ್ಲವೇ ಲಿಂಗಾಯತರೂ ಸೇರಿದಂತೆ ಎಲ್ಲ ಜಾತಿ ಜನವರ್ಗಗಳವರೂ ಶಿವ ದೇವಾಲಯಗಳನ್ನು ಸ್ವತಃ ಇಷ್ಟಪಟ್ಟೇ ಸ್ಥಾಪಿಸಿ ಪೂಜಿಸುತ್ತಿರುವುದು ಸೂರ್ಯಸತ್ಯ. ಅಷ್ಟೇಕೆ ಬಸವಣ್ಣನವರ, ಅಕ್ಕನವರ, ಜೇಡರ ದಾಸಿಮಯ್ಯನವರ ಆರಾಧ್ಯ ದೈವಗಳು ನೆಲೆಗೊಂಡಿರುವುದಾದರೂ ಸ್ಥಾವರಗಳೆನಿಸಿದ ದೇವಾಲಯಗಳಲ್ಲೇ.

ಹೀಗಾಗಿ, ಬಸವಾದಿ ಶರಣರು ಮೂರ್ತಿಪೂಜೆ ವಿರೋಧಿಗಳೆಂದು ತಿಳಿಯುವುದೇ ಅರ್ಥಹೀನ. ಅವರು ವಿರೋಧಿಸಿದ್ದು ಭಕ್ತಿಯ ಕೇಂದ್ರಗಳಾಗಬೇಕಾಗಿದ್ದ ದೇವಾಲಯಗಳು ಶೋಷಣೆಯ ಕೇಂದ್ರಗಳಾದದ್ದನ್ನು. ಅಲ್ಲದೆ, ದೇವಾಲಯದಲ್ಲಿ ಪೂಜಾರಿಯೆಂಬೊಬ್ಬ ಮಧ್ಯವರ್ತಿ ಇರುತ್ತಾನೆ. ಈ ಹಂಗಿಲ್ಲದೆಯೇ ಲಿಂಗಸ್ಥಲನೆನಿಸಿದ ಪರಶಿವನನ್ನು ಅಂಗಸ್ಥಲಿಯಾದ ಜೀವನು ಅಂಗೈಯಲ್ಲಿಟ್ಟುಕೊಂಡು ತನ್ನ ಅಂತರಂಗದ ಭಕ್ತಿ, ಪೂಜೆಗಳನ್ನು ಸಮರ್ಪಿಸಲು ಸಾಧ್ಯವಾಗಲೆನ್ನುವ ಕಾರಣಕ್ಕೆ ಇಷ್ಟಲಿಂಗ ಧಾರಣೆಯನ್ನು ವೀರಶೈವ, ಲಿಂಗಾಯತ ವಿಧಿಸಿತು. ತಾತ್ವಿಕವಾಗಿ ಬಸವಣ್ಣ, ಅಲ್ಲಮ ಮುಂತಾದ ಶರಣರೆಲ್ಲ ಬೋಧಿಸಿದ್ದು ಶಿವಾದ್ವೈತವನ್ನು. ಅರ್ಥಾತ್ ನಿರಾಕಾರ ಸ್ವರೂಪಿಯಾದ ಶಿವ ಬೇರೆಯಲ್ಲ; ಜೀವ ಬೇರೆಯಲ್ಲ ಎಂದೇ.

‘ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ’- ಎಂಬ ಬಸವಣ್ಣನವರ ವಚನದ ಸಾಲು, ಸ್ಥಾವರಗಳಾದ ದೇವಸ್ಥಾನಗಳು ನಾಶವಾದರೂ ಹೃದಯದಲ್ಲಿ ಪ್ರಾಣಲಿಂಗವೆಂದು ಶೋಭಿಸುತ್ತಿರುವವನಿಗೆ ಜೀವನ ದೇಹ ನಾಶವಾದರೂ ಆತ್ಮನಿಗೆ ಸಾವಿಲ್ಲವಾದ ಕಾರಣ ಜಂಗಮಕ್ಕಳಿವಿಲ್ಲ ಎಂದಲ್ಲವೆ? ಅಲ್ಲಮ ಪ್ರಭುವಂತೂ ‘ಆರೈದು ಒಕ್ಕುಡಿತೆ ನೀರನೆರೆವೆ, ಆಗಾಗ ಓಗರವನಿಕ್ಕುವೆ ನೀ ದೇವನಲ್ಲದೆ ನಾ ದೇವ ಕಾಣಾ ಗುಹೇಶ್ವರ’ ಹಾಗೂ ‘ಗುಹೇಶ್ವರ ನೀ ಕಲ್ಲಾದಡೆ ನಾನೇನಪ್ಪೆ’ ಎಂದು ಹೇಳಿರುವ ಮಾತುಗಳನ್ನು ಸಮನ್ವಯ ಮಾಡಿದಾಗ ಹೊರಡುವ ಅರ್ಥ ಕೂಡ ಜೀವನೇ ದೇವ ಎಂಬುದನ್ನಲ್ಲವೇ?

ಶಂಕರರ ಅದ್ವೈತ ಸಾರುವುದೂ ಇದನ್ನೇ. ಶಂಕರರೇ ಅದ್ವೈತಕ್ಕೆ ಮೊದಲಿಗರೇನಲ್ಲ. ಅವರು ಅದ್ವೈತದ ಪ್ರವರ್ತಕರು ಅಷ್ಟೆ; ವೀರಶೈವ–ಲಿಂಗಾಯತಕ್ಕೆ ಬಸವಣ್ಣನಂತೆ. ಶಂಕರರ ಗುರು ಗೋವಿಂದ ಭಗವತ್ಪಾದರು, ಇನ್ನೂ ಹಿಂದಕ್ಕೆ ಹೋದರೆ ಬಹುಶಃ ವ್ಯಾಸರು, ವೇದ, ಉಪನಿಷತ್ತುಗಳು ಇವಕ್ಕೆ ಮೂಲವೇನೋ. ಇದನ್ನು ಹಿಂದೂ ಎನ್ನಿ; ವೈದಿಕವೆನ್ನಿ ಎರಡೂ ಬೇಡವಾದರೆ ಭಾರತೀಯವೆನ್ನಿ. ಒಟ್ಟಿನಲ್ಲಿ ವೀರಶೈವಕ್ಕಿಂತ ಹಿಂದಿನದು; ಸನಾತನವಾದದ್ದು.

ತಾತ್ವಿಕವಾಗಿ ಇಷ್ಟೆಲ್ಲ ಸಾಮ್ಯವಿದ್ದರೂ ಆಚರಣೆಗಳಲ್ಲಿ ಭಿನ್ನತೆಗಳಿದ್ದವು. ವಿವರಗಳು ಬೇಕೆನಿಸಿದರೆ ಕರ್ನಾಟಕ ವಿಶ್ವವಿದ್ಯಾಲಯವೇ ಪ್ರಕಟಿಸಿರುವ, ವೀರಶೈವ– ಲಿಂಗಾಯತರೇ ರಚಿಸಿರುವ ಹಲವಾರು ಗ್ರಂಥಗಳು ಬಲವಾದ ಪುರಾವೆ ಒದಗಿಸುತ್ತವೆ. ಆದರೆ ಆ ಮಹನೀಯರಿಗೆ ತಮ್ಮದು ಅಲ್ಪಸಂಖ್ಯಾತವೆಂದು ಸಾರಿಕೊಳ್ಳುವ ಉಮೇದು ಇರಲಿಲ್ಲ ಅಷ್ಟೆ. ಸಾಮಾನ್ಯರಿಗೆ ಮೂರ್ತಿಯ ಆಕಾರದಲ್ಲಿ ಕಲ್ಪಿಸಿಕೊಳ್ಳದ ಹೊರತು ಭಕ್ತಿ ಸಾಧನೆ ಕಷ್ಟವೆನ್ನುವ ಕಾರಣಕ್ಕೆ ಇಷ್ಟಲಿಂಗಾಕೃತಿ ಕಲ್ಪಿಸಿ ಅದನ್ನು ಆಚರಣೆಯಾಗಿ ವಿಧಿಸಿದರು. ಆದ್ದರಿಂದ ಇಷ್ಟಲಿಂಗ ಪೂಜೆ ಕೂಡ ಮಥಿತಾರ್ಥದಲ್ಲಿ ಮೂರ್ತಿಪೂಜೆಯೇ. ತಾವು ಮೂರ್ತಿಪೂಜಕರಲ್ಲ ಎಂದು ಹೇಳಿಕೊಳ್ಳುವುದು ಹೆಮ್ಮೆಯ ಸಂಗತಿ ಕೂಡ ಅಲ್ಲ.

ಅಖಂಡ ಭಾರತದ ಸಂಚಾರದಲ್ಲಿದ್ದ ಸ್ವಾಮಿ ವಿವೇಕಾನಂದರು ಒಮ್ಮೆ ಮುಸ್ಲಿಂ ದೊರೆಯೊಬ್ಬನ ಆಸ್ಥಾನಕ್ಕೆ ಹೋಗುತ್ತಾರೆ. ಸ್ವಾಮೀಜಿಯನ್ನು ಆದರದಿಂದ ರಾಜನು ಬರಮಾಡಿಕೊಂಡರೂ, ‘ಸ್ವಾಮೀಜಿ ನನಗೆ ಮೂರ್ತಿಪೂಜೆಯಲ್ಲಿ ಕಿಂಚಿತ್ತೂ ನಂಬಿಕೆಯಿಲ್ಲ. ನನಗೆ ರೌರವ ನರಕವೇ ಗತಿಯೆನಿಸುತ್ತದೆ’ ಎಂದು ಹಾಸ್ಯಭರಿತವಾಗಿ ಆದರೆ ಹಿಂದೂಗಳ ಮೂರ್ತಿಪೂಜೆ ಲೇವಡಿ ಮಾಡಲೆಂದು ಹೇಳುತ್ತಾನೆ. ಸ್ವಾಮೀಜಿಯವರ ಸೌಮ್ಯಮುಖ ಉಗ್ರವಾಯಿತು. ಒಂದೆರಡು ಕ್ಷಣಗಳ ನಂತರ ಆ ದೊರೆಯ ಹಿಂದಿದ್ದ ಒಂದು ಫೋಟೊವನ್ನು ಕೈಗೆತ್ತಿಕೊಂಡು ‘ಇದು ಯಾರ ಭಾವಚಿತ್ರ’ ಎಂದು ಕೇಳುತ್ತಾರೆ. ಅದಕ್ಕೆ ಸುತ್ತಮುತ್ತ ಇದ್ದ ಮಂತ್ರಿಮಹೋದಯರು, ‘ಅದು ನಮ್ಮ ಮಹಾರಾಜರ ತಂದೆಯವರ ಭಾವಚಿತ್ರ’ ಎನ್ನುತ್ತಾರೆ. ಸ್ವಾಮೀಜಿ ಕೂಡಲೇ ‘ಹಾಗಿದ್ದರೆ ಇದರ ಮೇಲೆ ಉಗುಳಿರಿ’ ಎನ್ನುತ್ತಾರೆ. ಎಲ್ಲರೂ ಭಯದಿಂದ ನಡುಗತೊಡಗುತ್ತಾರೆ; ಆದರೆ ಮೌನ ತಾಳುತ್ತಾರೆ.

ಆಗ ಸ್ವಾಮೀಜಿ ‘ಏಕೆ ಸುಮ್ಮನಾದಿರಿ? ಈ ಫೋಟೊದಲ್ಲೇನೂ ನಿಮ್ಮ ಗತಿಸಿದ ಮಹಾರಾಜರು ಕುಳಿತಿಲ್ಲ. ಏಕೆ ಉಗುಳುತ್ತಿಲ್ಲ? ಅದಕ್ಕೆ ಕಾರಣ– ಈ ಫೋಟೊದಲ್ಲಿ ಸಾಕ್ಷಾತ್ ನಿಮ್ಮ ಮಹಾರಾಜರು ಇದ್ದಾರೆಂದೇ ನೀವು ತಿಳಿಯುತ್ತೀರಿ. ಹಾಗೆಯೇ ಹಿಂದೂಗಳು ಮೂರ್ತಿಯನ್ನು ಪೂಜಿಸುವಾಗ ಅದನ್ನು ಕಲ್ಲೆಂದು ತಿಳಿಯುವುದಿಲ್ಲ. ಅದರ ಮೂಲಕ ಭಗವಂತನಿಗೆ ತಮ್ಮ ಭಕ್ತಿ ನಿವೇದನೆ ಮಾಡುತ್ತಾರೆ ಅಷ್ಟೆ. ಎಲ್ಲೆಲ್ಲೂ ಇರುವ ಪರಮಾತ್ಮನು ಆ ಮೂರ್ತಿಯಲ್ಲೇಕೆ ಇರಲಾರ?’ ಎಂದು ರಾಜನ ಮುಖ ನೋಡಿದಾಗ, ಸ್ವಾಮೀಜಿಗೆ ನೋವುಂಟು ಮಾಡಿದ್ದಕ್ಕೆ ತನ್ನನ್ನು ಕ್ಷಮಿಸಬೇಕೆಂದು ರಾಜನು ಕೋರುತ್ತಾನೆ.

ತಾವು ಸ್ಥಾಪಿಸಿದ ರಾಮಕೃಷ್ಣಾಶ್ರಮಗಳಲ್ಲೆಲ್ಲ ತಮ್ಮ ಕಾಲದಲ್ಲೇ ರಾಮಕೃಷ್ಣರ ಮೂರ್ತಿ ಪೂಜೆಗೊಳ್ಳುತ್ತಿದ್ದುದು ವಿವೇಕಾನಂದರಿಗೆ ತಿಳಿದಿತ್ತು. ಅದ್ವೈತಾಶ್ರಮವೊಂದರಲ್ಲಿ ಮಾತ್ರ ಯಾವುದೇ ಮೂರ್ತಿಪೂಜೆಗೆ ಅವಕಾಶವಿರಲಿಲ್ಲ. ಆದರೆ, ಸ್ವಾಮೀಜಿಗೆ ತಿಳಿಯದಂತೆ ಗುಟ್ಟಾಗಿ ಕೆಲ ಭಕ್ತರು ಮರೆಯಲ್ಲಿ ರಾಮಕೃಷ್ಣರ ಭಾವಚಿತ್ರ ಪೂಜಿಸುತ್ತಿದ್ದದನ್ನು ಕಂಡು ಇದೊಂದು ಕಡೆಯಲ್ಲಾದರೂ ಮೂರ್ತಿಪೂಜೆ ಬೇಡವೆಂದಿದ್ದರೆ ಅಲ್ಲೂ ಸ್ಥಾಪಿಸಿ ಬಿಟ್ಟಿದ್ದೀರಲ್ಲ ಎಂದು ನಯವಾಗಿ ಆಕ್ಷೇಪಿಸಿ ತೆಗೆಸುತ್ತಾರೆ. ಹೀಗೆ ಸಾಮಾನ್ಯರಿಗೆ ಮೂರ್ತಿ ಬೇಕಾಗುತ್ತದೆ. ಆದರೆ ಅದಿಲ್ಲದೆಯೂ ಅಧ್ಯಾತ್ಮ ಸಾಧನೆ ಸಾಧ್ಯವಾಗಬೇಕೆಂಬುದು ಸ್ವಾಮೀಜಿಯ ನಿಲುವು. ಹಾಗಾಗಿ ಮೂರ್ತಿಪೂಜೆ ತನಗೆ ತಾನೆ ಖಂಡನೀಯವೂ ಅಲ್ಲ; ಶ್ಲಾಘ್ಯವೂ ಅಲ್ಲ

(ವಿವರ: ಕುವೆಂಪು ವಿರಚಿತ ‘ಸ್ವಾಮಿ ವಿವೇಕಾನಂದ’).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT