ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನದಿ ನೀರು ಹಂಚಿಕೆ ವಿವಾದ: ‘ತಮಿಳುನಾಡು ಬೆದರಿಕೆಗೆ ಮಣಿಯದಿರಿ’

Last Updated 4 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನೀರು ನಿರ್ವಹಣಾ ಮಂಡಳಿ ರಚನೆಗಾಗಿ ತಮಿಳುನಾಡು ಬೆದರಿಕೆ ತಂತ್ರ ಅನುಸರಿಸುತ್ತಿದೆ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ದೂರಿದರು.

ಕೇಂದ್ರ ಸರ್ಕಾರವು ಇಂತಹ ಒತ್ತಡದ ತಂತ್ರಗಳಿಗೆ ಮಣಿಯಬಾರದು. ಬ್ರಿಟಿಷರ ಕಾಲದಿಂದಲೂ ತಮಿಳುನಾಡು ಇಂತಹುದೇ ತಂತ್ರವನ್ನು ಅನುಸರಿಸಿಕೊಂಡು ಬಂದಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಹರಿಹಾಯ್ದರು.

‘ತಮಿಳುನಾಡು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರು ಚೆನ್ನೈನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.  ಎಐಎಡಿಎಂಕೆ ಸಂಸದರು ಸಂಸತ್ ಅಧಿವೇಶನ ನಡೆಯಲು ಬಿಡುತ್ತಿಲ್ಲ.ಅಲ್ಲಿನ ರಾಜಕಾರಣಿಗಳು ಪ್ರಚೋದನಾತ್ಮಕವಾಗಿ ವರ್ತಿಸುತ್ತಿದ್ದಾರೆ.  ಇವೆಲ್ಲಾ ಒತ್ತಡದ ತಂತ್ರಗಳು. ನಮಗೂ ಹೋರಾಟ ಮಾಡಲು ಬರುತ್ತದೆ. ಆದರೆ, ಶಾಂತಿ ಮತ್ತು ಸೌಹಾರ್ದತೆಯಿಂದಲೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬದಷ್ಟೇ ನಮ್ಮ ನೈಜ ಕಳಕಳಿ’ ಎಂದು ದೇವೇಗೌಡ ಹೇಳಿದರು.

ಕಾವೇರಿ ನೀರು ಹಂಚಿಕೆ ಸಂಬಂಧ ಆರು ವಾರಗಳಲ್ಲಿ ಸ್ಕೀಮ್‌ ರಚಿಸಬೇಕು ಎಂದು ಸುಪ್ರೀಂಕೋರ್ಟ್‌ ತೀರ್ಪಿನಲ್ಲಿ ತಿಳಿಸಿತ್ತು. ಆದರೆ, ಆರು ವಾರಗಳಲ್ಲಿ ಇದನ್ನು ಮಾಡುವುದು ಕಷ್ಟ. ಇನ್ನಷ್ಟು ಸಮಯಬೇಕು ಎಂಬುದಾಗಿ  ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ನ್ಯಾಯಾಲಯಕ್ಕೆ ಹೇಳಿದ್ದರು. ಈ ಕಾರಣಕ್ಕಾಗಿಯೇ ತಮಿಳುನಾಡು ಸರ್ಕಾರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ. ಸಂಘರ್ಷದ ಹಾದಿ ಬಿಟ್ಟು ಪರಸ್ಪರ ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳುವ ಮನೋಭಾವ ತಮಿಳುನಾಡಿಗೆ ಇನ್ನೂ ಬಂದಿಲ್ಲ ಎಂದು ಅವರು ಟೀಕಿಸಿದರು.

ಇದೇ 9 ರಂದು ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆಗೆ ಬರಲಿದೆ. ಕರ್ನಾಟಕಕ್ಕೆ ನಿರಂತರವಾಗಿ ಆಗಿರುವ ಅನ್ಯಾಯಗಳ ಬಗ್ಗೆ  ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ಅಲ್ಲದೆ, ಆ ವಿಚಾರಗಳನ್ನೂ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಬೇಕು ಎಂದೂ ಅವರು ಸಲಹೆ ನೀಡಿದರು.

1991 ರಲ್ಲಿ ನ್ಯಾಯಮಂಡಳಿಯನ್ನು ರಚಿಸಲಾಯಿತು. ನ್ಯಾಯಮಂಡಳಿ ಮಧ್ಯಂತರ ವರದಿ ನೀಡಿದ ಬಳಿಕ ಅದರ ಅಧಿಸೂಚನೆ ಹೊರಡಿಸಬೇಕು ಎಂದು  ಜಯಲಲಿತಾ ಮರಿನಾ ಬೀಚ್‌ನಲ್ಲಿ ಉಪವಾಸ ಸತ್ಯಾಗ್ರಹ ಕುಳಿತರು. ಇದರಿಂದ ಗಾಬರಿಗೊಂಡ ಅಂದಿನ ಪ್ರಧಾನಿ ಪಿ.ವಿ.ನರಸಿಂಹರಾವ್‌ ಮಾರನೇ ದಿನ ಬೆಳಿಗ್ಗೆಯೇ ಜಲಸಂಪನ್ಮೂಲ ಸಚಿವ ವಿ.ಸಿ.ಶುಕ್ಲಾ ಅವರನ್ನು ಚೆನ್ನೈಗೆ ಕಳುಹಿಸಿದರು. ತಕ್ಷಣವೇ ಅಧಿಸೂಚನೆ ಹೊರಡಿಸುವುದಾಗಿ ಹೇಳಿ ಜಯಲಲಿತಾ ಅವರನ್ನು ನರಸಿಂಹರಾವ್‌ ಸಮಾಧಾನ ಪಡಿಸಿದರು ಎಂದು ದೇವೇಗೌಡ ಹೇಳಿದರು.

ಯುಪಿಎ ಅಧಿಕಾರದಲ್ಲಿದ್ದಾಗ ಕಾವೇರಿ ನದಿ ನೀರಿನ ವಿವಾದದ ಸಂಬಂಧ ಅಂದಿನ ಪ್ರಧಾನಿ ಮನಮೋಹನಸಿಂಗ್‌ ಅವರನ್ನು ಭೇಟಿ ಮಾಡಿದ್ದೆ. ‘ತಮಿಳುನಾಡಿನ 39 ಸಂಸದರು ನಮ್ಮ ಒಕ್ಕೂಟದಲ್ಲಿದ್ದಾರೆ. ಈ ವಿಚಾರವಾಗಿ ನಾವು ಮುಂದುವರಿದರೆ ನಮ್ಮ ಸರ್ಕಾರವೇ ಉರುಳಿ ಹೋಗುತ್ತದೆ. ಸರ್ಕಾರ ಉಳಿಸಿಕೊಳ್ಳುವುದು ಮುಖ್ಯ’ ಎಂದರು. ಆಗ, ಸಿಂಗ್‌ ಸರ್ಕಾರದಲ್ಲಿ ರಾಜ್ಯದ ನಾಲ್ಕು ಮಂದಿ ಸಚಿವರು ಇದ್ದರೂ ಅಸಹಾಯಕತೆ ತೋರಿಸಿದರು. ಬಿಜೆಪಿಯ 17 ಸಂಸದರ ಜತೆ ಸೇರಿ ಹೋರಾಟ ಮಾಡೋಣ ಎಂದು ಅನಂತಕುಮಾರ್‌ ಅವರಿಗೆ ಹೇಳಿದೆ. ಆಯಿತು ಎಂದು ಹೋದವರು, ಆ ಬಳಿಕ ಬರಲೇ ಇಲ್ಲ ಎಂದರು.

‘ಕೇಂದ್ರದ ಹಿಂದಿನ ಎಲ್ಲ ಜಲಸಂಪನ್ಮೂಲ ಸಚಿವರಿಗೆ ಹೋಲಿಕೆ ಮಾಡಿದರೆ ನಿತಿನ್ ಗಡ್ಕರಿ  ರಾಜ್ಯದ ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ್ದೂ ಅಲ್ಲದೆ, ಹೆಚ್ಚಿನ ಸಮಯ ಕೋರಿ ನ್ಯಾಯಾಲಯಕ್ಕೆ ಅರ್ಜಿಯನ್ನೂ ಹಾಕಿದ್ದಾರೆ. ಈ ವಿಚಾರದಲ್ಲಿ ಅಂತಿಮ ಮುದ್ರೆ ಹಾಕುವುದಕ್ಕೆ ಮುನ್ನ ರಾಜ್ಯಕ್ಕೆ ನ್ಯಾಯ ಕೊಡಿ ಎನ್ನುವುದಷ್ಟೇ ನಮ್ಮ ಮನವಿ’ ಎಂದು ದೇವೇಗೌಡ ಹೇಳಿದರು.

‘ತಮಿಳುನಾಡಿಗೆ ಇಂದು ಬಸ್‌ ಇಲ್ಲ’
ಬೆಂಗಳೂರು:
ಗುರುವಾರ ತಮಿಳುನಾಡು ಬಂದ್‌ ನಡೆಯಲಿರುವ ಕಾರಣ ಆ ರಾಜ್ಯಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ.

ಕೇಂದ್ರ ಸರ್ಕಾರ ಕೂಡಲೇ ಕಾವೇರಿ ನಿರ್ವಹಣಾ ಮಂಡಳಿಯನ್ನು ರಚಿಸಬೇಕು ಎಂದು ಒತ್ತಾಯಿಸಿ ಡಿಎಂಕೆ ಬಂದ್‌ಗೆ ಕರೆ ನೀಡಿದೆ. ‘ಬೆಳಿಗ್ಗೆಯಿಂದ ಸಂಜೆಯವರೆಗೆ ಸುಮಾರು 250 ಬಸ್‌ಗಳ ಸಂಚಾರ ಇರುವುದಿಲ್ಲ. ರಾತ್ರಿ ಸೇವೆ ಎಂದಿನಂತೆ ಇರಲಿದೆ’ ಎಂದು ಕೆಎಸ್‌ಆರ್‌ಟಿಸಿ ಪ್ರಕಟಣೆ ತಿಳಿಸಿದೆ.

ಗಡಿ ಬಂದ್‌: ‘ಕಾವೇರಿ ನಿರ್ವಹಣಾ ಮಂಡಳಿ ರಚನೆ ಬೇಡವೇ–ಬೇಡ’ ಎಂದು ಒತ್ತಾಯಿಸಿ ಕನ್ನಡ ಒಕ್ಕೂಟದ ನೇತೃತ್ವದಲ್ಲಿ ಇದೇ 5ರಂದು ಬೆಳಿಗ್ಗೆ 11 ಗಂಟೆಗೆ ಹೊಸೂರು ರಸ್ತೆಯ ಅತ್ತಿಬೆಲೆ ಹತ್ತಿರ ಗಡಿ ಬಂದ್‌ ಮಾಡಿ ಪ್ರತಿಭಟಿಸಲಾಗುತ್ತದೆ ಎಂದು ಒಕ್ಕೂಟದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

**

ಕಾವೇರಿ ವಿಚಾರದಲ್ಲಿ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಅಧಿಕಾರದಲ್ಲಿರುವವರು ರಾಜೀನಾಮೆ ನೀಡುವರೇ.
– ಎಚ್‌.ಡಿ.ದೇವೇಗೌಡ, ರಾಷ್ಟ್ರೀಯ ಅಧ್ಯಕ್ಷ, ಜೆಡಿಎಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT