ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಡೆ ಇವಿಎಂ, ವಿ.ವಿ ಪ್ಯಾಟ್‌ ಪ್ರಾತ್ಯಕ್ಷಿಕೆ

ಬೂತ್ ಮಟ್ಟದಲ್ಲಿ ನಿತ್ಯ ಎರಡು ಕಡೆಗಳಲ್ಲಿ ಪ್ರಾತ್ಯಕ್ಷಿಕೆ ಆಯೋಜನೆ, ಸ್ವೀಪ್ ಸಮಿತಿ ತರಬೇತುದಾರರಿಂದ ಪಂಚಾಯಿತಿ ಮಟ್ಟದಲ್ಲಿ ತಿಳಿವಳಿಕೆ ಮೂಡಿಸಲು ಯತ್ನ
Last Updated 5 ಏಪ್ರಿಲ್ 2018, 7:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿಶ್ವಾಸಾರ್ಹತೆ ಬಗ್ಗೆ ಮತದಾರರಲ್ಲಿರುವ ಅನುಮಾನ ಹೋಗಲಾಡಿಸುವ ಉದ್ದೇಶದಿಂದ ಇದೇ ಮೊದಲ ಬಾರಿ ರಾಜ್ಯದ ಸಾರ್ವತ್ರಿಕ ಚುನಾವಣೆಯಲ್ಲಿ ಬಳಕೆಯಾಗುತ್ತಿರುವ ಮತ ಖಾತ್ರಿ ಯಂತ್ರಗಳ (ವಿ.ವಿ ಪ್ಯಾಟ್‌) ಬಗ್ಗೆ ಮತದಾರರಿಗೆ ಅರಿವು ಮೂಡಿಸುವ ಕಾರ್ಯ ಜಿಲ್ಲೆಯಾದ್ಯಂತ ಬುಧವಾರದಿಂದ ಚುರುಕು ಪಡೆದುಕೊಂಡಿದೆ.ಜಿಲ್ಲಾ ಚುನಾವಣಾ ಆಯೋಗ ಸೆಕ್ಟರ್ ಅಧಿಕಾರಿಗಳ ಮೂಲಕ ಬೂತ್ ಮಟ್ಟದಲ್ಲಿ ಮತ್ತು ‘ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಮತ್ತು ಮತದಾನದಲ್ಲಿ ಭಾಗವಹಿಸುವಿಕೆ’ (ಸ್ವೀಪ್) ಸಮಿತಿ ಅಧಿಕಾರಿಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಲ್ಲಲ್ಲಿ ಈ ಎರಡು ಯಂತ್ರಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಜತೆಗೆ ಮತದಾರರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಸಾರ್ವಜನಿಕ ಪ್ರದೇಶಗಳಲ್ಲಿ ಜನರಿಗೆ ಇವಿಎಂ ಮತ್ತು ವಿ.ವಿ ಪ್ಯಾಟ್ ಕುರಿತು ತಿಳಿವಳಿಕೆ ಮೂಡಿಸುವ ಈ ಕಾರ್ಯ ಜಿಲ್ಲೆಯಲ್ಲಿ ಸುಮಾರು 20 ದಿನ ನಡೆಯಲಿದೆ. 78 ಇವಿಎಂ, 78 ವಿ.ವಿ.ಪ್ಯಾಟ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಏ.3 ರಿಂದಲೇ ಈ ಜಾಗೃತಿ ಕಾರ್ಯ ಆರಂಭಗೊಂಡಿದೆ. ಚಿಂತಾಮಣಿ, ಗೌರಿಬಿದನೂರು, ಶಿಡ್ಲಘಟ್ಟದಲ್ಲಿ ಬುಧವಾರ ಪ್ರಾರಂಭವಾಯಿತು. ಬಾಗೇಪಲ್ಲಿ ಕ್ಷೇತ್ರದಲ್ಲಿ ಗುರುವಾರದಿಂದ ಶುರುವಾಗಲಿದೆ. ಮತಗಟ್ಟೆ ಹಂತದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 2ರ ವರೆಗೆ ನಂತರ ಮಧ್ಯಾಹ್ನ 2.30ರಿಂದ ಸಂಜೆ 5.30ರ ವರೆಗೆ ಎರಡು ಹಂತದಲ್ಲಿ ಈ ಪ್ರಾತ್ಯಕ್ಷಿಕೆ ನಡೆಯಲಿದೆ.

ಗ್ರಾಮ ಪಂಚಾಯಿತಿ ಮತ್ತು ಬೂತ್ ಮಟ್ಟದಲ್ಲಿ ಮಾತ್ರವಲ್ಲದೆ, ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಪರಿಶಿಷ್ಟ ಸಮುದಾಯಗಳ ಜನರಿರುವ ಕಾಲೊನಿಗಳು, ಮಾರುಕಟ್ಟೆ, ಜನದಟ್ಟಣೆ ಪ್ರದೇಶ, ಜಾತ್ರೆ, ಸಂತೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಇನ್ನೊಂದೆಡೆ ಸ್ವೀಪ್ ಸಮಿತಿ ಅಧಿಕಾರಿಗಳು ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರಿಗೆ ಕೂಡ ಅರಿವು ಮೂಡಿಸುವ ಕೆಲಸ ಮಾಡಲಿದ್ದಾರೆ.

‘ಸ್ವೀಪ್ ಸಮಿತಿ ವತಿಯಿಂದ ನಾವು ಏ.20ರ ವರೆಗೆ ಎರಡೂ ಯಂತ್ರಗಳ ಅರಿವು ಕಾರ್ಯಕ್ರಮ ನಡೆಸಲಿದ್ದೇವೆ. ಜಿಲ್ಲೆಯಲ್ಲಿ 1,200ಕ್ಕೂ ಅಧಿಕ ಹಳ್ಳಿಗಳಿವೆ. ಆದರೆ ನಮಗೆ ಚುನಾವಣೆಗೆ ಬಳಕೆಯಾಗುವ ಒಟ್ಟು ಯಂತ್ರಗಳಲ್ಲಿ ಶೇ 5ರಷ್ಟು ಮಾತ್ರ ತರಬೇತಿಗೆ ಬಳಕೆ ಮಾಡಲು ಅವಕಾಶವಿದೆ. ಹೀಗಾಗಿ ಪ್ರತಿಯೊಂದು ಹಳ್ಳಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವುದು ಕಷ್ಟ. ಸದ್ಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ’ ಎಂದು ಸ್ವೀಪ್ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್ ಹೆಗಡೆ ತಿಳಿಸಿದರು.

‘ಸೆಕ್ಟರ್ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿ, ಮತಗಟ್ಟೆ ಮಟ್ಟದ ಅಧಿಕಾರಿಗಳು ಪ್ರತಿ ದಿನ ಎರಡು ಮತಗಟ್ಟೆಗಳಲ್ಲಿ ಸ್ಥಳೀಯ ಜನರನ್ನು ಸೇರಿಸಿ ಅರಿವು ಕಾರ್ಯಕ್ರಮ ನಡೆಸುತ್ತಿದ್ದಾರೆ. ಮತದಾನಕ್ಕೆ ಯಂತ್ರಗಳ ಬಳಕೆ ಮಾಡುವ ಬಗ್ಗೆ ಜನರಲ್ಲಿ ಇಂದಿಗೂ ಕುತೂಹಲ ಮನೆ ಮಾಡಿದೆ. ಹೀಗಾಗಿ ಪ್ರಾತ್ಯಕ್ಷಿಕೆ ನೋಡಲು ಜನರು ದೌಡಾಯಿಸುತ್ತಿದ್ದಾರೆ. ಎಲ್ಲ ಕಡೆಗಳಲ್ಲಿ ನಮ್ಮ ಅರಿವು ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ’ ಎಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಬಿ.ಶಿವಸ್ವಾಮಿ ತಿಳಿಸಿದರು.

‘ನಿತ್ಯ ಎರಡು ಕಡೆ ಪ್ರಾತ್ಯಕ್ಷಿಕೆ ನಡೆಸುತ್ತೇವೆ. ಜನಸ್ಪಂದನೆ ಕೂಡಾ ತುಂಬಾ ಚೆನ್ನಾಗಿದೆ. ಮತ ಚಲಾಯಿಸಿದವರೆಗೆ ಸತ್ಯದ ಕೈಗನ್ನಡಿಯಂತೆ ಕಣ್ಣೆದುರಿಗೆ ಗೋಚರಿಸುವ ಮಾಹಿತಿಯ ಸ್ಲೀಪ್ ಜನರಲ್ಲಿ ಯಂತ್ರದ ಬಗ್ಗೆ ವಿಶ್ವಾಸ ಗಟ್ಟಿಗೊಳಿಸುತ್ತಿದೆ. ಬುಧವಾರ 500 ಜನರಿಗೆ ಅರಿವು ಮೂಡಿಸಿದೆವು’ ಎಂದು ಸೇಕ್ಟರ್ ಅಧಿಕಾರಿ ಕೃಷ್ಣಮೂರ್ತಿ ಹೇಳಿದರು.

ವಿಶೇಷ ಮತದಾರರ ಸಹಭಾಗಿತ್ವಕ್ಕೆ ಒತ್ತು

‘ಜಿಲ್ಲೆಯಲ್ಲಿ ಸುಮಾರು 25 ದಿನಗಳ ಕಾಲ ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಯಲಿದೆ. ನಗರ ಪ್ರದೇಶದಲ್ಲಿ ಪ್ರತಿ ವಾರ್ಡ್‌ನಲ್ಲಿ, ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಇದು ನಡೆಯಲಿದೆ. ವಿ.ವಿ ಪ್ಯಾಟ್ ರಾಜ್ಯದ ಮತದಾರರಿಗೆ ಅಪರಿಚಿತ ಯಂತ್ರ. ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರ ಉದ್ದೇಶ ಏನು? ಎನ್ನುವ ಬಗ್ಗೆ ಜನರಲ್ಲಿ ಕೂಡ ತಿಳವಳಿಕೆ ಬರಬೇಕು ಎನ್ನುವ ಕಾರಣಕ್ಕೆ ಈ ಕಾರ್ಯಕ್ರಮವನ್ನು ವ್ಯಾಪಕವಾಗಿ ಹಮ್ಮಿಕೊಂಡಿದ್ದೇವೆ’ ಎನ್ನುತ್ತಾರೆ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾಧಿಕಾರಿ ದೀಪ್ತಿ ಕಾನಡೆ.

‘ಈ ಬಾರಿ ಯುವ ಮತದಾರರಿಗೆ ಹೆಚ್ಚು ಒತ್ತು ನೀಡುತ್ತಿದ್ದೇವೆ. ಜತೆಗೆ ಅಂಗವಿಕಲರು ಸೇರಿದಂತೆ ವಿಶೇಷ ಮತದಾರರ ಸಹಭಾಗಿತ್ವ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದೇವೆ. ಇದೊಂದು ಒಳ್ಳೆಯ ಅವಕಾಶ ಇದನ್ನು ಅವರು ಸದ್ಭಳಕೆ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾಯಿಸಬೇಕು. ಜನಸಾಮಾನ್ಯನಿಗೆ ಸಂವಿಧಾನ ಕೊಟ್ಟ ಅತ್ಯುತ್ತಮ ಅಧಿಕಾರವೆಂದರೆ ಅದು ಮತ. ಹೀಗಾಗಿ ಪ್ರತಿಯೊಬ್ಬರೂ ಆಮಿಷಕ್ಕೆ ಒಳಗಾಗದೆ ನೈತಿಕವಾಗಿ ಮತ ಚಲಾಯಿಸಬೇಕು’ ಎಂದು ಹೇಳಿದರು.

ಸಂಶಯ ನಿವಾರಣೆಯಾಯ್ತು

‘ಮತಯಂತ್ರಗಳಲ್ಲಿ ಹಾಕಿದ ಮತವನ್ನು ತಮಗೆ ಬೇಕಾದವರಿಗೆ ಹೋಗುವಂತೆ ತಿರುಚಲಾಗುತ್ತದೆ ಎನ್ನುವುದು ಸೇರಿದಂತೆ ಏನೆಲ್ಲ ಸುದ್ದಿಗಳು ಹರಿದಾಡಿದಾಗ ನಾವು ಕೂಡ ಸಹಜವಾಗಿಯೇ ಅದನ್ನೆಲ್ಲ ನಂಬಿದ್ದೆವು. ಆದರೆ ಇದೀಗ ವಿ.ವಿ ಪ್ಯಾಟ್ ಯಂತ್ರ ನೋಡಿದಾಗ ಮತ್ತು ಅಧಿಕಾರಿಗಳು ಹೇಳಿದ ಮಾಹಿತಿ ಕೇಳಿದಾಗ ನಮ್ಮ ಎಲ್ಲ ಸಂಶಯಗಳು ನಿವಾರಣೆಯಾದವು. ಗಾಳಿ ಮಾತುಗಳಿಗೆ ತಪ್ಪು ಅಭಿಪ್ರಾಯಗಳನ್ನು ಹೊಂದಿದವರೆಲ್ಲ ಒಮ್ಮೆ ಯಂತ್ರದ ಪ್ರಾತ್ಯಕ್ಷಿಕೆ ನೋಡುವುದು ಒಳಿತು’ ಎಂದು ಚಾಮರಾಜಪೇಟೆ ನಿವಾಸಿ ಝಾಕೀರ್ ಹೇಳಿದರು.

**

ಇದೇ ಮೊದಲ ಬಾರಿ ರಾಜ್ಯದಲ್ಲಿ ಪರಿಚಯಿಸುತ್ತಿರುವ ವಿ.ವಿ ಪ್ಯಾಟ್ ಯಂತ್ರದ ಬಳಕೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಬಂದರೆ ಮಾತ್ರ ಆ ಯಂತ್ರ ಬಳಕೆ ಉದ್ದೇಶ ಸಾರ್ಥಕವಾಗುತ್ತದೆ – ಗುರುದತ್ ಹೆಗಡೆ, ಸ್ವೀಪ್ ಸಮಿತಿ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT