ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆದ ತಡೆಗೋಡೆ: ನಿವಾಸಿಗಳಿಗೆ ಆತಂಕ

ನದಿಗೆ ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬಗಳು; ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
Last Updated 5 ಏಪ್ರಿಲ್ 2018, 9:47 IST
ಅಕ್ಷರ ಗಾತ್ರ

ಕಾರವಾರ: ಕಾಳಿ ನದಿಗೆ ನಿರ್ಮಿಸಿದ್ದ ತಡೆಗೋಡೆಗಳು ಒಡೆದಿದ್ದು, ಚಿತ್ತಾಕುಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಕುದಾ ಮೊಹಲ್ಲಾದ ನಿವಾಸಿಗಳು ಜೀವ ಭಯದಲ್ಲಿ ದಿನ ದೂಡುವ ಪರಿಸ್ಥಿತಿ ಉಂಟಾಗಿದೆ.ನಾಕುದಾ ಮೊಹಲ್ಲಾದಿಂದ ದೇವಭಾಗದವರೆಗೆ ಇರುವ ಈ ಅಲೆ ತಡೆಗೋಡೆಗಳು ನೀರು ಅಪ್ಪಳಿಸಿ ಒಡೆದಿವೆ. ಮಳೆಗಾಲದಲ್ಲಿ ಗ್ರಾಮಗಳ ಮನೆಗಳ ಒಳಗೆ ನೀರು ನುಗ್ಗುವ ಆತಂಕ ಎದುರಾಗಿದೆ. ಸಂಬಂಧಪಟ್ಟ ಇಲಾಖೆಗಳಿಗೆ ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ವಿದ್ಯುತ್ ಕಂಬಗಳ ಭಯ: ತಡೆಗೋಡೆ ಒಡೆದು ಮನೆಗಳಿಗೆ, ಸಮೀಪದ ಗದ್ದೆಗಳಿಗೆ ನೀರು ನುಗ್ಗುತ್ತದೆ ಎನ್ನುವುದು ಒಂದು ಕಡೆಯಾದರೆ, ಅದೇ ತಡೆಗೋಡೆಗಳ ಮೇಲೆ ಕಾಂಕ್ರೀಟ್‌ ಕಟ್ಟೆ ನಿರ್ಮಿಸಿ ವಿದ್ಯುತ್ ಕಂಬಗಳನ್ನು ಸ್ಥಾಪಿಸಿರುವುದು ಭಯದ ವಾತಾವರಣ ಸೃಷ್ಟಿಸಿದೆ.‘ಈ ಭಾಗದಲ್ಲಿ 500ಕ್ಕೂ ಅಧಿಕ ಮನೆಗಳಿವೆ. ಬಹುತೇಕ ಕುಟುಂಬಗಳು ಮೀನುಗಾರಿಕೆಯನ್ನೇ ಅವಲಂಬಿಸಿವೆ. ಚಳಿ, ಮಳೆ, ಗಾಳಿ ಎನ್ನದೇ ನದಿ, ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಬೇಕಿದೆ. ಮನೆಯ ಜವಾಬ್ದಾರಿ ಹೊತ್ತಿರುವವರು ಮೀನುಗಾರಿಕೆಗೆ ತೆರಳಿದ್ದ ವೇಳೆ ಮನೆಗಳಿಗೆ ನೀರು ನುಗ್ಗಿದರೆ ಆ ಕುಟುಂಬಗಳಿಗೆ ಗತಿ ಯಾರು?’ ಎಂದು ಪ್ರಶ್ನಿಸುತ್ತಾರೆ ಸ್ಥಳೀಯ ಮುಕ್ತಿಯಾರ್ ಶೇಖ್.

ಚುನಾವಣೆ ಬಂದಾಗ ಎಚ್ಚರ: ಇನ್ನೊಬ್ಬ ಸ್ಥಳೀಯ ಅಫ್ತಾಬ್ ಶೇಖ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಕಂಬಗಳನ್ನು ಸ್ಥಳಾಂತರಿಸುವಂತೆ ಅನೇಕ ಬಾರಿ ಹೆಸ್ಕಾಂಗೆ ಮನವಿ ಮಾಡಿದ್ದೇವೆ. ಜನಪ್ರತಿನಿಧಿಗಳಿಗೂ  ತಿಳಿಸಿದ್ದೇವೆ. ಆದರೆ, ಇಲ್ಲೇ ಸಮೀಪದ ಕೆಲವು ರೆಸಾರ್ಟ್‌ಗಳಿಗಾಗಿ ಈ ಕಂಬಗಳನ್ನು ಸ್ಥಳಾಂತರಿಸುತ್ತಿಲ್ಲ. ಶಾಸಕರು ಒಮ್ಮೆ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಏಳು ದಿನಗಳಲ್ಲಿ ಈ ಬಗ್ಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇನ್ನೂ ಅದು ನೆರವೇರಿಲ್ಲ. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಈ ಬಗ್ಗೆ ಎಚ್ಚರವಾಗುತ್ತದೆಯಷ್ಟೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

**

ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆ

ನಾಕುದಾ ಮೊಹಲ್ಲಾ ಭಾಗದ ತಡೆಗೋಡೆಗಳು ಖಾರ್ ಭೂಮಿ ಆಗಿದ್ದು, ಅದರ ನಿರ್ವಹಣೆ ಜವಾಬ್ದಾರಿ ಸಣ್ಣ ನೀರಾವರಿ ಇಲಾಖೆಗೆ ಬರುತ್ತದೆ. ಆದರೆ, ಸಮುದ್ರಕ್ಕೆ ಸಮೀಪ ಇರುವುದರಿಂದ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ತಡೆಗೋಡೆ ನಿರ್ಮಾಣಕ್ಕೆ ಈಗಾಗಲೇ ಬಂದರು ಇಲಾಖೆಯಿಂದ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. 2017ರ ಜೂನ್, ಜುಲೈ ಸಮಯದಲ್ಲಿ ರವಾನೆಯಾಗಿದ್ದು, ಸರ್ಕಾರಕ್ಕೂ ಸಲ್ಲಿಕೆಯಾಗಿದೆ. ಆದರೆ, ಅಲ್ಲಿಂದ ಪ್ರತ್ಯುತ್ತರ ಈವರೆಗೂ ಬಂದಿಲ್ಲ. ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದರೆ ₹ 76 ಲಕ್ಷ ಅಂದಾಜು ವೆಚ್ಚದಲ್ಲಿ 350 ಮೀ. ತಡೆಗೋಡೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ’ ಎನ್ನುತ್ತಾರೆ ಬಂದರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ್ ಹೆಡೆ.

**

ರಭಸದ ಗಾಳಿ ಬೀಸಿದರೆ ವಿದ್ಯುತ್ ಕಂಬಗಳೆಲ್ಲವೂ ಕಾಳಿ ನದಿಗೆ ಬೀಳುತ್ತವೆ. ವಿದ್ಯುತ್ ಹರಿಯುವುದರಿಂದ ನದಿಗೆ ಇಳಿಯಲೂ ಹೆದರಿಕೆಯಾಗುತ್ತಿದೆ – ಮುಖ್ತಿಯಾರ್ ಶೇಖ್,ಸ್ಥಳೀಯ ನಿವಾಸಿ.

**

ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT