ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವರ್ತಮಾನ’ದಲ್ಲಿ ನಿಂತು ಭವಿಷ್ಯದತ್ತ ಕಣ್ಣು...

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅವಳು ಎಂಟನೇ ತರಗತಿಯ ಹುಡುಗಿ. ಹೈಸ್ಕೂಲಿನ ವಾರ್ಷಿಕೋತ್ಸವ ಕಾರ್ಯಕ್ರಮದ ನಾಟಕದಲ್ಲಿ ಸಣ್ಣ ಪಾತ್ರ. ಅದೂ ಆಸಕ್ತಿಯಿಂದ ಆಯ್ದುಕೊಂಡಿಲ್ಲ. ಒತ್ತಾಯಕ್ಕೆ ಒಪ್ಪಿಕೊಂಡಿದ್ದು. ಆದರೆ, ವೇದಿಕೆಯ ಮೇಲೆ ನಿಂತು ಅಭಿನಯಿಸುವಾಗ ಆ ಬಣ್ಣದ ಬೆಳಕು, ಎದುರು ಕೂತಿದ್ದವರ ಕರತಾಡನ ಅವಳ ಮನಸಲ್ಲಿ ಏನೋ ಮಿಂಚು ಹುಟ್ಟಿಸಿತು. ಇದೇ ಮಿಂಚು ನಂತರ ಕಾಲೇಜು ದಿನಗಳಲ್ಲಿ ಮಾಡೆಲಿಂಗ್‌ ಲೋಕದತ್ತಲೂ ಸೆಳೆದೊಯ್ದಿತು. ಅಷ್ಟೇ ಅಲ್ಲ, 2013ರಲ್ಲಿ ಮೊದಲ ಸಲ ಕ್ಯಾಮೆರಾ ಎದುರು ನಿಂತು ‘ಆ್ಯಕ್ಷನ್‌’ ಎಂಬ ಶಬ್ದ ಕೇಳಿದಾಗಲೂ ಅವರೊಳಗೆ ಹುಟ್ಟಿಕೊಂಡಿದ್ದು ಇದೇ ಮಿಂಚು.

ಆ ಹುಡುಗಿಯ ಹೆಸರು ಸಂಜನಾ ಪ್ರಕಾಶ್‌. ಅವರು ನಾಯಕಿಯಾಗಿ ನಟಿಸುತ್ತಿರುವ, ಉಮೇಶ್‌ ಅಂಶಿ ನಿರ್ದೇಶನದ ‘ವರ್ತಮಾನ’ ಸಿನಿಮಾ ಈ ವಾರ (ಏ.6) ತೆರೆಕಾಣುತ್ತಿದೆ.

2013ರಲ್ಲಿ ಸಂಜನಾ ಅವರಿಗೆ ಮೊದಲು ನಟಿಸುವ ಅವಕಾಶ ಕೊಟ್ಟಿದ್ದ ಸಿನಿಮಾ ಪೂರ್ಣಗೊಳ್ಳಲೇ ಇಲ್ಲ. ಹಾಗೆಂದು ಅವರ ಕನಸಿನ ಓಟಕ್ಕೆ ತಡೆಯೇನೂ ಬೀಳಲಿಲ್ಲ. ಅದೇ ವರ್ಷ ‘ಪಂಗನಾಮ’ ಎಂಬ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಹಾಗೆಯೇ ‘ಕಲಬೆರಿಕೆ’ ಎಂಬ ಚಿತ್ರದಲ್ಲಿಯೂ ನಟಿಸಿದರು.

ಈ ಎರಡು ಚಿತ್ರಗಳಲ್ಲಿ ನಟಿಸಿದ ಸಂಜನಾ ಕೆಲವು ಕಾಲ ಬ್ರೇಕ್‌ ತೆಗೆದುಕೊಂಡರು. ಆ ಬ್ರೇಕ್‌ ಅವರಿಗೆ ಆತ್ಮವಿಮರ್ಶೆಯ ಅವಧಿ. ನಟನೆ ಎನ್ನುವುದು ತನಗೆ ಆ ಕ್ಷಣದ ಥ್ರಿಲ್‌ ಅಷ್ಟೇನಾ? ಜನಪ್ರಿಯತೆಯ ಹುಚ್ಚು ಮಾತ್ರವಾ? ಅಥವಾ ಅದನ್ನು ಮೀರಿದ ವ್ಯಾಮೋಹ ತಮ್ಮಲ್ಲಿ ಇದೆಯಾ? ಎಂಬಿತ್ಯಾದಿ ಪ್ರಶ್ನೆಗಳನ್ನು ತಮಗೆ ತಾವೇ ಹಾಕಿಕೊಂಡರು. ಈ ಸ್ವಯಂ ಪರೀಕ್ಷೆಯ ನಂತರವೂ ಅವರಿಗೆ ಸಿನಿಮಾ ಬಿಟ್ಟಿರುವುದು ಅಸಾಧ್ಯ ಎಂದೇ ತೋರಿತು. ‘ನನ್ನ ಬದುಕಿನ ಉದ್ದೇಶ ನಟನೆ’ ಎಂಬುದು ಖಾತ್ರಿಯಾಯಿತು. ಸಾಕಷ್ಟು ನಟನಾ ಕಾರ್ಯಾಗಾರಗಳಲ್ಲಿ ಪಾಲ್ಗೊಂಡರು. ತಮ್ಮ ಲುಕ್‌ ಅನ್ನೂ ಬದಲಿಸಿಕೊಂಡರು.

ಅದೇ ಸಂದರ್ಭದಲ್ಲಿ ಅವರಿಗೆ ‘ವರ್ತಮಾನ’ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂತು. ಈ ಸಿನಿಮಾ ಚಿತ್ರರಂಗದಲ್ಲಿ ತಾವು ಇಡುವ ಇನ್ನೊಂದು ಗಟ್ಟಿ ಹೆಜ್ಜೆ ಆಗಬಲ್ಲದು ಎಂದು ಅವರಿಗನಿಸಿತು.

‘ವರ್ತಮಾನ’ದಂಥ ಸಿನಿಮಾವನ್ನು ನಾನು ಇದುವರೆಗೆ ನೋಡಿಲ್ಲ. ಪ್ಯಾಟರ್ನ್‌ ಅನ್ನುವುದೇ ಇಲ್ಲದ ಸಿನಿಮಾ ಇದು. ಇಂಥ ಸಿನಿಮಾ ಫ್ರೆಂಚ್‌ನಲ್ಲಿ ಒಂದೆರಡು ಬಂದಿವೆಯಂತೆ. ಆದರೆ ನಾನಂತೂ ನೋಡಿಲ್ಲ. ಇದಾದ ಮೇಲೆ ಇದಾಗಬೇಕು ಎಂಬ ಸೂತ್ರಗಳೆಲ್ಲವನ್ನೂ ಬಿಟ್ಟು ಸಿನಿಮಾ ಮಾಡಿದ್ದಾರೆ ಅಂಶಿ ಉಮೇಶ್‌’ ಎಂದು ಅವರು ಹೇಳಿಕೊಳ್ಳುತ್ತಾರೆ.

ಆ ಚಿತ್ರದಲ್ಲಿ ತಮ್ಮ ಪಾತ್ರ ಏನು, ಅದು ಯಾವ ರೀತಿ ಪ್ಲೇ ಆಗುತ್ತದೆ ಎಂಬುದೇ ಅವರಿಗೆ ತಿಳಿದಿಲ್ಲ! ಇದಕ್ಕೆ ಅವರ ನಿರ್ಲಕ್ಷ್ಯ ಕಾರಣ ಅಲ್ಲ. ಬದಲಿಗೆ ನಿರ್ದೇಶಕರ ಮೇಲಿನ ನಂಬಿಕೆ ಕಾರಣ. ‘ಪ್ರತಿದಿನ ಸೆಟ್‌ಗೆ ಹೋಗಿ ಡೈರೆಕ್ಟರ್‌ ಏನು ಹೇಳುತ್ತಾರೋ ಅದನ್ನು ಅಭಿನಯಿಸಿ ಬರುತ್ತಿದ್ದೆ. ಪ್ರತಿಯೊಂದು ದೃಶ್ಯಕ್ಕೂ ಕಾಸ್ಟ್ಯೂಮ್‌ ಕೂಡ ಬೇರೆ ಬೇರೆಯೇ ಆಗಿರುತ್ತಿತ್ತು. ಮೊದಮೊದಲಿಗೆ ಇದೇನು ನಾನು ಏನು ಮಾಡ್ತಿದ್ದೇನೆ ಎನ್ನುವುದು ನನಗೇ ಗೊತ್ತಾಗ್ತಿಲ್ವಲ್ಲಾ ಎಂದು ಸಹನಟರ ಜತೆ ಚರ್ಚಿಸುತ್ತಿದ್ದೆ. ಆದರೆ ನಿರ್ದೇಶಕರನ್ನು ಮೊದಲ ಬಾರಿ ಭೇಟಿಯಾದಾಗಲೇ ಅವರಲ್ಲಿ ಏನೋ ಪ್ರತಿಭೆ ಇದೆ. ಹೊಸಥರದ ತುಡಿತ ಇದೆ ಎಂದು ಗೊತ್ತಾಗಿತ್ತು. ಆದ್ದರಿಂದ ಅವರ ಮೇಲೆ ನಂಬಿಕೆ ಇಟ್ಟು ನಟಿಸಿದ್ದೇನೆ’ ಎನ್ನುವ ಸಂಜನಾಗೆ ಈ ಚಿತ್ರದಲ್ಲಿ ಸಂಚಾರಿ ವಿಜಯ್‌ ಜತೆ ನಟಿಸಿದ್ದೂ ಸಾಕಷ್ಟು ಒಳ್ಳೆಯ ಅನುಭವ ನೀಡಿದೆ.

‘ಕನ್ನಡವೇ ನನ್ನ ಮೊದಲ ಆದ್ಯತೆ’ ಎನ್ನುವ ಸಂಜನಾಗೆ ಈಗಾಗಲೇ ಪರಭಾಷೆಯಲ್ಲಿಯೂ ಅವಕಾಶಗಳು ಸಿಗಲಾರಂಭಿಸಿವೆ. ತಮಿಳಿನಲ್ಲಿ ಒಂದು ಚಿತ್ರದ ಮಾತುಕತೆ ನಡೆಯುತ್ತಿದೆ. ಅವರ ನಟನೆಯ ‘ವಸುಧೈವ ಕುಟುಂಬಕಂ’, ಮತ್ತು ‘ಸೈನೈಡ್‌ ಮಲ್ಲಿಕಾ’ ಚಿತ್ರಗಳು ತೆರೆಕಾಣಬೇಕಿವೆ.

**

ಸಿನಿಮಾ ನನ್ನ ಬದುಕು, ಉಸಿರು. ನಾನು ನಟನೆಯ ಮೂಲಕವೇ ಬದುಕುತ್ತೇನೆ. ಹಾಗಾಗಿ ನಾನು ಪ್ರತಿಕ್ಷಣವೂ ಅದರ ಬಗ್ಗೆಯೇ ಯೋಚಿಸುತ್ತೇನೆ. ಇದನ್ನು ಬಿಟ್ಟು ನನಗೆ ಬೇರೆ ಹವ್ಯಾಸಗಳು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT