ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸದೀಯ ಸಂಪ್ರದಾಯಗಳ ಅವಗಣನೆ ಸಲ್ಲದು

Last Updated 5 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಅನೇಕ ಅಡೆತಡೆಗಳು ಹಾಗೂ ಮುಂದೂಡುವಿಕೆಗಳ ನಡುವೆ ಸಂಸತ್‍ನ ಬಜೆಟ್ ಅಧಿವೇಶನದ ಎರಡನೇ ಭಾಗದ ಕಲಾಪ ವ್ಯರ್ಥವಾಗಿ ಹೋಗಿದೆ. ಸಂಸತ್‍ನ ಎರಡೂ ಸದನಗಳು ಈ 23 ದಿನಗಳ ಕಾಲ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ‘ವಿರೋಧ ಪಕ್ಷಗಳ ಪ್ರತಿಭಟನೆಯಿಂದಾಗಿ ಹೀಗೆ ವ್ಯರ್ಥವಾಗಿ ಹೋದ ಈ ಅವಧಿಯ ವೇತನವನ್ನು ಎನ್‍ಡಿಎ ಸಂಸತ್ ಸದಸ್ಯರು  ಸ್ವಯಂ ಇಚ್ಛೆಯಿಂದ  ಬಿಟ್ಟುಕೊಡಲಿದ್ದಾರೆ’ ಎಂದು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್ ಪ್ರಕಟಿಸಿದ್ದಾರೆ. ಸಂಸತ್ ಕಲಾಪಗಳು ನಡೆಯದಿರುವ ಬಗ್ಗೆ  ಸರ್ಕಾರ ಹಾಗೂ ಪ್ರತಿಪಕ್ಷಗಳ ಮಧ್ಯೆ ಈಗಾಗಲೇ ಹಣಾಹಣಿ ನಡೆಯುತ್ತಿದೆ.

ಇಂತಹ ಸಂದರ್ಭದಲ್ಲಿ ಅನಂತಕುಮಾರ್ ಅವರ ಮಾತುಗಳು ಈ ವಾಗ್ಯುದ್ಧಕ್ಕೆ ಮತ್ತಷ್ಟು ತುಪ್ಪ ಸುರಿದಿವೆ. ‘ಸಂಸತ್ ಕಲಾಪಗಳು ನಡೆಯದೆ ವ್ಯರ್ಥವಾಗಿದ್ದಕ್ಕೆ ಪ್ರತಿಪಕ್ಷಗಳೇ ಕಾರಣ ಎಂಬಂತಹ ಸಂದೇಶವನ್ನು ಇದು ನೀಡುತ್ತದೆ. ಇದು ಸರಿಯಲ್ಲ’ ಎಂದು ಪ್ರತಿಪಕ್ಷಗಳು ವಾದಕ್ಕಿಳಿದಿವೆ. ಕಳೆದ ಮಾರ್ಚ್ 5ರಂದು ಆರಂಭವಾದ ಬಜೆಟ್ ಅಧಿವೇಶದ ಸಂಸತ್ ಕಲಾಪಗಳು ಸುಗಮವಾಗಿ ನಡೆಯಲೇ ಇಲ್ಲ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ, ಕಾವೇರಿ ವಿವಾದ ಇತ್ಯಾದಿ ವಿಚಾರಗಳಿಗೆ ಸಂಬಂಧಿಸಿದಂತೆ ಸಂಸತ್‌ನಲ್ಲಿ ಪ್ರತಿಭಟನೆ, ಕೋಲಾಹಲ ಮುಂದುವರಿಯಿತು. ಈ ಗೊಂದಲದಲ್ಲೇ, ಹಣಕಾಸು ಮಸೂದೆಯನ್ನು ಕೆಲವೇ ನಿಮಿಷಗಳಲ್ಲೇ ಲೋಕಸಭೆ ಅಂಗೀಕರಿಸಿದ ಇತಿಹಾಸವೂ ಸೃಷ್ಟಿಯಾಯಿತು. ಈ ವಿಚಾರದಲ್ಲಿ ಪ್ರತಿಪಕ್ಷಗಳ ಪಾತ್ರ ತೀವ್ರ ಪರಿಶೀಲನೆಗೆ ಒಳಪಡಬೇಕು.

ಪ್ರತಿಪಕ್ಷಗಳನ್ನು ಒಟ್ಟಿಗೆ ಕರೆದೊಯ್ದು ಸದನ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಆಡಳಿತಾರೂಢ ಮೈತ್ರಿಕೂಟವಾಗಿ ಎನ್‍ಡಿಎಗೂ ಜವಾಬ್ದಾರಿ ಇದೆ. ಎನ್‍ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯವನ್ನು ಲೋಕಸಭೆಯಲ್ಲಿ ಚರ್ಚೆಗೆ ಎತ್ತಿಕೊಳ್ಳಲು ಅವಕಾಶವನ್ನೇ ನೀಡದಿದ್ದುದಂತೂ ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳ ಉಲ್ಲಂಘನೆ. ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು, ಪ್ರತಿದಿನವೂ ಸದನವನ್ನು ಮುಂದೂಡುತ್ತಾ ಬಂದರು. ರಾಜ್ಯಸಭೆಯಲ್ಲಿ ಬುಧವಾರ ಒಂದೇ ದಿನ 11 ಬಾರಿ ಕಲಾಪ ಮುಂದೂಡಿಕೆಯಾಯಿತು. ನಿಯಮಗಳ ಪ್ರಕಾರ, ಅವಿಶ್ವಾಸ ನಿರ್ಣಯ ಆದ್ಯತೆ ಪಡೆದುಕೊಳ್ಳಬೇಕು.

ಆದರೆ ಸದನದಲ್ಲಿ ಕೋಲಾಹಲವಿದೆ, ಸದನ ಸುಸ್ಥಿತಿಯಲ್ಲಿ ಇಲ್ಲ ಎಂದು ಪ್ರತಿದಿನ ಕಾರಣ ಹೇಳುತ್ತಾ ಅವಿಶ್ವಾಸ ನಿರ್ಣಯವನ್ನು ಸ್ಪೀಕರ್ ಕೈಗೆತ್ತಿಕೊಳ್ಳಲೇ ಇಲ್ಲ. ವಾಸ್ತವವಾಗಿ ಎಐಎಡಿಎಂಕೆ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಸದಸ್ಯರು ಮಾತ್ರ ಕಲಾಪಕ್ಕೆ ಅಡ್ಡಿಪಡಿಸುತ್ತಿದ್ದರು. ಆದರೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದ ಸ್ಪೀಕರ್ ಸದನ ಮುಂದೂಡುತ್ತಲೇ ಹೋದರು. ಸ್ಪೀಕರ್‌ಗೆ ಸದನದಲ್ಲಿ ಶಿಸ್ತು ಕಾಪಾಡುವ ಹೊಣೆಗಾರಿಕೆ ಇರುತ್ತದೆ. ಇದಕ್ಕೆ ಅಗತ್ಯ ಅಧಿಕಾರವೂ ಇರುತ್ತದೆ. ನಿಯಮ ಪಾಲಿಸದ ಸದಸ್ಯರನ್ನು ಎತ್ತಿ ಹೊರಗೆ ಹಾಕಿಸಬಹುದು. ಆದರೆ ಸದನ ಗೊಂದಲದ ಗೂಡಾಗಿದ್ದರೂ  ಹಣಕಾಸು ಮಸೂದೆ ಅನುಮೋದನೆಗೆ ಮಾತ್ರ ಅಡ್ಡಿ ಆಗಲಿಲ್ಲ ಎಂಬುದು ವಿಪರ್ಯಾಸ. ///ಇಡೀ ಸದನವನ್ನು ಸ್ಪೀಕರ್ ಪ್ರತಿನಿಧಿಸುತ್ತಾರೆ, ಬರೀ ಆಡಳಿತ ಪಕ್ಷವನ್ನಲ್ಲ ಎಂಬುದು ಇಲ್ಲಿ ಮುಖ್ಯ.

ಸಂಸದೀಯ ಪ್ರಜಾಪ್ರಭುತ್ವದ ಸಂಪ್ರದಾಯಗಳನ್ನು ಸರ್ಕಾರ ಗೌರವಿಸಬೇಕು. ಎನ್‌ಡಿಎಯಿಂದ ಟಿಡಿಪಿ ಹೊರಬಂದಿದೆ. ಶಿವಸೇನಾ ಹಾಗೂ ಅಕಾಲಿ ದಳದ ಜೊತೆಗೂ ಬಿಜೆಪಿಯ ಸಂಬಂಧ ಹದಗೆಟ್ಟಿದೆ. ಇಂತಹ ಸನ್ನಿವೇಶದಲ್ಲಿ ಪ್ರತಿಪಕ್ಷಗಳು ಒಟ್ಟಾಗಿ ಮಾಡುವ ದಾಳಿ, ಸರ್ಕಾರಕ್ಕೆ ಮುಜುಗರ ತರುವ ಸಂಗತಿಯಾಗಬಹುದು ಎಂಬುದು ನಿಜ. ಹಾಗಂತ ಅವಿಶ್ವಾಸ ನಿರ್ಣಯ ಎದುರಿಸುವುದನ್ನು ತಪ್ಪಿಸಿಕೊಳ್ಳಲು ಇದು ನೆಪವಾಗಬಾರದು. ಅದೂ ಬಿಜೆಪಿಗೆ ಬಹುಮತ ಇರುವ ಸಂದರ್ಭದಲ್ಲಿ ಈ ನಡೆ ವಿಚಿತ್ರವಾದದ್ದು. ಸಂಸತ್‌ಗೆ ಸರ್ಕಾರದ ಉತ್ತರದಾಯಿತ್ವ ಇರಬೇಕು. ವ್ಯರ್ಥವಾದ ಈ ಅಧಿವೇಶನದಿಂದ ಸುಮಾರು ₹ 190 ಕೋಟಿ ನಷ್ಟವಾಗಿದೆ ಎಂಬುದು ಸಣ್ಣ ಸಂಗತಿಯಲ್ಲ. ಕಾರ್ಯವೇ ನಿರ್ವಹಿಸದ ಸಂಸತ್ತು ಮುಂದೆ ಅಪ್ರಸ್ತುತವಾಗಿಬಿಡುವಂತಹ ಸ್ಥಿತಿ ಬರಬಾರದು. ಚರ್ಚೆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುತ್ತಿದ್ದ ಕಾಲ ಮುಗಿದುಹೋಗಿರುವುದು ವಿಷಾದನೀಯ. ಯಾವಾಗಲೂ ಚುನಾವಣೆಗೆ ಹೋಗುವ ರೀತಿಯಲ್ಲಿ ರಾಜಕೀಯವೇ ಪ್ರಾಧಾನ್ಯ ಪಡೆದುಕೊಳ್ಳಬಾರದು. ಆಡಳಿತವೂ ಮುಖ್ಯವಾಗಬೇಕು. ಪ್ರಜಾಪ್ರಭುತ್ವ ಗಟ್ಟಿಯಾಗಲು ಇದು ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT