ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಮಿತ್ ಶಾ ಬಿಜೆಪಿ ಹಿತಶತ್ರುವೇ’

Last Updated 6 ಏಪ್ರಿಲ್ 2018, 5:37 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಲಿಂಗಾಯತ ಸ್ವತಂತ್ರ ಧರ್ಮ ಮನ್ನಣೆ ವಿಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಹೇಳಿಕೆ ಗಮನಿಸಿದರೆ ಅವರು, ಆ ಪಕ್ಷದ ಹಿತಶುತ್ರು ಎಂಬ ಸಂದೇಹ ಬರುತ್ತದೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯೆಕ್ಷೆ ಮಾತೆ ಮಹಾದೇವಿ ಹೇಳಿದರು.‘ವೀರಶೈವ ಲಿಂಗಾಯತಕ್ಕೆ ಪ್ರತ್ಯೇಕ ಧರ್ಮದ ಸ್ಥಾನ ಕೊಡುವುದಿಲ್ಲ ಎಂದು ತಾವೇ ನಿರ್ಣಯ ಕೊಡುವ ಮೂಲಕ ಅಮಿತ್‌ ಶಾ ಬಿಜೆಪಿಯ ಹಿತಶತ್ರುವಿನಂತೆ ತೋರುತ್ತಿದ್ದಾರೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಚುನಾವಣೆಯ ಹೊಸ್ತಿಲಲ್ಲಿ ನಿಂತಿರುವ ರಾಜಕೀಯ ಪಕ್ಷಗಳ ಮುಖಂಡರು ಮುತ್ಸದ್ಧಿತನದಿಂದ ಮಾತನಾಡಬೇಕಿದೆ. ಆದರೆ, ಶಾ ಹುಂಬತನದ ಮಾತು ಅವರ ಬೌದ್ಧಿಕ ದಾರಿದ್ರ್ಯವನ್ನಷ್ಟೇ ತೋರಿಸುವುದಿಲ್ಲ, ಬದಲಿಗೆ ಬಿಜೆಪಿಯ ಹಿನ್ನಡೆಗೂ ಕಾರಣವಾಗಲಿದೆ’ ಎಂದು ಎಚ್ಚರಿಸಿದ್ದಾರೆ.ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಬೇಡ ಎಂದು ಶಿವಯೋಗ ಮಂದಿರದಲ್ಲಿ ಸ್ವಾಮೀಜಿಗಳು ಶಾ ಅವರಿಗೆ ಮನವಿ ಮಾಡಿದ್ದಾರೆ. ಅದರ ಬದಲು ಪುರಾತನವಾದ ವೀರಶೈವಕ್ಕೆ ಮಾನ್ಯತೆ ಕೊಡಿ ಎಂದು ಕೇಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

‘ಲಿಂಗಾಯತ ಧರ್ಮದ ಸ್ವರೂಪವನ್ನೇ ಕೆಡಿಸಿದ ಶಿವಯೋಗ ಮಂದಿರ, ಜಂಗಮವನ್ನು ಒಂದು ಜಾತಿಯಾಗಿ ಸೀಮಿತಗೊಳಿಸಿದೆ. ಅಲ್ಲಿ ಜಂಗಮ ವಟುಗಳಿಗೆ ಮಾತ್ರ ಪ್ರವೇಶ ಮತ್ತು ತರಬೇತಿ ನೀಡಲಾಗುತ್ತಿದೆ. ಅದರ ಬದಲಿಗೆ ಎಲ್ಲಾ ಜಾತಿಯ ಸಾಧಕರಿಗೂ ಪ್ರವೇಶ ಕೊಡಬೇಕು. ವೇದಾಗಮಗಳ, ವೈದಿಕ ಕ್ರಿಯೆಗಳ ತರಬೇತಿ ತೊರೆದು ವಚನಗಳ ಅಧ್ಯಯನ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಔರಂಗಾಬಾದ್‌ನಲ್ಲಿ ಸಮಾವೇಶ ಏ.8ಕ್ಕೆ

ಲಿಂಗಾಯತ ಪ್ರತ್ಯೇಕ ಧರ್ಮ ಘೋಷಿಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ಒತ್ತಾಯಿಸಲು ಏಪ್ರಿಲ್‌ 8ರಂದು ಔರಂಗಾಬಾದ್‌ನಲ್ಲಿ ಲಿಂಗಾಯತ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಮಾತೆ ಮಹಾದೇವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT