ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ನಾಗ್‌ ಹೇಳಿಕೆ
Last Updated 6 ಏಪ್ರಿಲ್ 2018, 9:07 IST
ಅಕ್ಷರ ಗಾತ್ರ

ಹಾನಗಲ್: ‘ನವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ನಾಗ್‌ ಹೇಳಿದರು.ಇಲ್ಲಿನ ಕುಮಾರೇಶ್ವರ ವಿರಕ್ತಮಠದ ಮಂಗಲಭವನದಲ್ಲಿ ಗುರುವಾರ ನಡೆದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಸಹಭಾಗಿತ್ವ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

‘ಮಿಂಚಿನ ನೋಂದಣಿ ಅಭಿಯಾನಕ್ಕೆ ವ್ಯಾಪಕ ಪ್ರಚಾರ ನೀಡುವ ಮೂಲಕ, ಮತದಾರರ ಪಟ್ಟಿಯಿಂದ ಹೊರಗೆ ಉಳಿದವರನ್ನು ಸೇರ್ಪಡೆ ಮಾಡಿಕೊಳ್ಳುವಲ್ಲಿ ಬಿಎಲ್‌ಓಗಳ ಪಾತ್ರ ಪ್ರಮುಖವಾಗಿದೆ’ ಎಂದು ಹೇಳಿದರು.

‘ಹೊಸ ಮತದಾರರನ್ನು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಲು ‘ಕ್ಯಾಂಪಸ್‌ ರಾಯಭಾರಿ’ಗಳನ್ನು ಆಯ್ಕೆ ಮಾಡಿ
ಕೊಂಡು, ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಸೆಲ್ಫಿ ಇಫಿಕ್‌ ಹಾಗೂ ವಿವಿಧ ಕ್ರೀಡಾ ಚಟುವಟಿಕೆ ಆಯೋಜಿಸುವ ಮೂಲಕ, ಯುವ ಮತದಾರರನ್ನು ಸೆಳೆಯಲಾಗುವುದು’ ಎಂದರು.‘ಜಿಲ್ಲೆಯಲ್ಲಿ 14,500 ಸಾವಿರ ಅಂಗವಿಕಲ ಮತದಾರರಿದ್ದಾರೆ. ಪ್ರತಿ ಮತಗಟ್ಟೆಯಲ್ಲಿ ರ‍್ಯಾಂಪ್ ವ್ಯವಸ್ಥೆ ಮಾಡುವ ಮೂಲಕ, ಅಂಗವಿಕಲರಿಗೆ ಅನೂಕೂಲ ಕಲ್ಪಿಸಲಾಗುವುದು. ಅಶಕ್ತರು ಹಾಗೂ ವೃದ್ಧರಿಗೆ ಮತಗಟ್ಟೆಗೆ ಬಂದು ಹೋಗಲು ವ್ಯವಸ್ಥೆ ಮಾಡಲಾಗುತ್ತದೆ’ ಎಂದು ತಿಳಿಸಿದರು.ಆರಂಭದಲ್ಲಿ ಕಡ್ಡಾಯ ಮತದಾನದ ಪ್ರತಿಜ್ಞಾ ವಿಧಿ ಬೋಧಿಸಿದ ನಾಗ್, ಇದೇ 8ರಂದು ನಡೆಯುವ ‘ಮಿಂಚಿನ ನೋಂದಣಿ’ ಅಭಿಯಾನದ ಯಶಸ್ಸಿಗೆ, ಅಧಿಕಾರಿಗಳು ವಹಿಸಬೇಕಾದ ಪಾತ್ರದ ಬಗ್ಗೆ ವಿವರಿಸಿದರು.

ತಹಶೀಲ್ದಾರ್‌ ಶಕುಂತಲಾ ಚೌಗಲಾ ಮಾತನಾಡಿ, ‘ಮತದಾನದ ಜಾಗೃತಿ ಮೂಡಿಸುವುದು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಅಲ್ಲಲ್ಲಿ ಜಾಥಾ ಮತ್ತು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅದಕ್ಕಾಗಿ, ಅಂತರ್ಜಾಲವನ್ನು ಸಹ
ಬಳಸಿಕೊಳ್ಳಲಾಗುತ್ತಿದೆ’ ಎಂದರು.ತಾಲ್ಲೂಕಿನ 239 ಮತಗಟ್ಟೆಗಳ ಬೂತ್‌ ಮಟ್ಟದ ಅಧಿಕಾರಿಗಳು ಮತ್ತು 42 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.ಜಿಲ್ಲಾ ಪಂಚಾಯ್ತಿ ಸಹಾಯಕ ಕಾರ್ಯದರ್ಶಿ ಜಾಫರ್‌ಶರೀಪ್‌ ಸುತಾರ ಮಾತನಾಡಿದರು.

ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ ಇದ್ದರು.ಸಭೆಯ ಬಳಿಕ, ಶಿಲ್ಪಾ ನಾಗ್‌ ಅವರು ಕಳೆದ ಚುಣಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಪಟ್ಟಣದ ದರ್ಗಾ ಮತ್ತು ಕುರುಬಗೇರಿ ಪ್ರದೇಶಕ್ಕೆ ತೆರಳಿ ಮತದಾನದಲ್ಲಿ ಕಡ್ಡಾಯವಾಗಿ ಭಾಗವಹಿಸುವಂತೆ ಮನವಿ ಮಾಡಿದರು. ಜತೆಗೆ,ಕೆಲವು ಮತಗಟ್ಟೆ ಕೇಂದ್ರಗಳನ್ನು ವೀಕ್ಷಿಸಿದರು.

**

ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಕಡಿಮೆ ಮತದಾನ ದಾಖಲಾದ ಮತಗಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು - ಶಿಲ್ಪಾ ನಾಗ್‌, ಜಿಲ್ಲಾ ಪಂಚಾಯ್ತಿ ಸಿಇಒ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT