ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಗತಿಯ ಹಾದಿಯಲ್ಲಿ ಮಾಣಿ ಹೊಳೆ ಸೇತುವೆ ಕಾಮಗಾರಿ

ಸಿದ್ದಾಪುರ ತಾಲ್ಲೂಕಿನಲ್ಲಿ ನಡೆಯುತ್ತಿರುವ ಕೆಲಸ
Last Updated 6 ಏಪ್ರಿಲ್ 2018, 9:34 IST
ಅಕ್ಷರ ಗಾತ್ರ

ಸಿದ್ದಾಪುರ: ತಾಲ್ಲೂಕಿನ ಮಾಣಿ ಹೊಳೆ ಸೇತುವೆ ಕಾಮಗಾರಿ ಚುರುಕುಗೊಂಡಿದೆ. ಈ ಕಾಮಗಾರಿ ಪೂರ್ಣವಾದ ನಂತರ ಇದು ತಾಲ್ಲೂಕಿನ ಅತ್ಯಂತ ಎತ್ತರದ ಸೇತುವೆ ಎನ್ನುವ ಕೀರ್ತಿಗೆ ಪಾತ್ರವಾಗಲಿದೆ.

ಸಿದ್ದಾಪುರ, ಹಾರ್ಸಿಕಟ್ಟಾ, ಗೋಳಿಮಕ್ಕಿ ರಸ್ತೆಯಲ್ಲಿರುವ ಈ ಹಳೆಯ ಸೇತುವೆ 2014ರಲ್ಲಿ ದಿಢೀರ್ ಕುಸಿದಿತ್ತು. ಈ ಸೇತುವೆಯ ಮೇಲೆ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮಾಣಿ ಹೊಳೆಯ ಆಚೆಗಿನ ಐದಾರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜನರಿಗೆ ತಾಲ್ಲೂಕಿನ ಕೇಂದ್ರ ಸ್ಥಳಕ್ಕೆ ಬರಲು ಬಳಸು ದಾರಿ ಅನಿವಾರ್ಯವಾಯಿತು.

ಪ್ರತಿ ಬೇಸಿಗೆಯಲ್ಲಿ ಈ ಸೇತುವೆಯ ಪಕ್ಕದಲ್ಲಿಯೇ ತಾತ್ಕಾಲಿಕ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ನಿರ್ಮಿಸುತ್ತ ಬಂದಿದೆ. ಬೇಸಿಗೆಯ ಸಮಯದಲ್ಲಿ (ಹೊಳೆಯಲ್ಲಿ ನೀರು ಕಡಿಮೆ ಆಗುವುದರಿಂದ) ಸೇತುವೆಯ ಪಕ್ಕದಲ್ಲಿ ಸಿಮೆಂಟ್ ಪೈಪ್ ಜೋಡಿಸಿ, ಅದರ ಮೇಲೆ ಮಣ್ಣು ಹಾಕಿ, ನಿರ್ಮಿಸಿದ ತಾತ್ಕಾಲಿಕ ರಸ್ತೆಯಲ್ಲಿ ವಾಹನ ಸಂಚಾರವೂ ನಡೆದಿದೆ.

ಹೊನ್ನಾವರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಕಚೇರಿಯ ಮೂಲಗಳ ಪ್ರಕಾರ, ಈ ಸೇತುವೆ ನಿರ್ಮಾಣಕ್ಕೆ ಕೇಂದ್ರದ ರಸ್ತೆ ನಿಧಿಯಿಂದ ಅನುದಾನ ಮಂಜೂರಾಗಿದೆ. ₹ 13.3 ಕೋಟಿ ಟೆಂಡರ್ ಮೊತ್ತವಾಗಿದ್ದು, ಕಾಮಗಾರಿಯ ಕಾಲಾವಧಿ 11 ತಿಂಗಳು. ಈ ಸೇತುವೆಯ ಎತ್ತರ 11 ಮೀಟರ್ ಹಾಗೂ ಉದ್ದ 72 ಮೀಟರ್. ತಲಾ 18 ಮೀಟರ್‌ಗಳ ನಾಲ್ಕು ಅಂಕಣ (ವಿಭಾಗಗಳು) ಈ ಸೇತುವೆಯಲ್ಲಿ ಇರಲಿದ್ದು, 3 ಕಂಬಗಳನ್ನು ನಿರ್ಮಿಸಲಾಗುತ್ತದೆ.

‘ಇಳಿಮನೆ ಸೇತುವೆ 7 ಮೀಟರ್ ಎತ್ತರವಿದ್ದು, ಇದು ತಾಲ್ಲೂಕಿನ ಅತ್ಯಂತ ಎತ್ತರದ ಸೇತುವೆ ಎನಿಸಿದೆ. ಮಾಣಿ ಹೊಳೆ ಸೇತುವೆಯು ಇಳಿಮನೆ ಸೇತುವೆಯ ಎತ್ತರವನ್ನು ಮೀರುವುದರಿಂದ ಈ ಹೊಸ ಸೇತುವೆ ತಾಲ್ಲೂಕಿನ ಹೆಚ್ಚು ಎತ್ತರದ ಸೇತುವೆಯಾಗಲಿದೆ ’ ಎಂಬುದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಎಂಜಿನಿಯರ್ ಮಹೇಶ ನಾಯ್ಕ ತಿಳಿಸಿದರು.

ಮಳೆಗಾಲದ ಸಂಕಟ ಶಿಥಿಲಗೊಂಡಿದ್ದ ಮಾಣಿ ಹೊಳೆ ಸೇತುವೆಯ ಸಮಸ್ಯೆ ಜನರಿಗೆ ನಿಜವಾಗಿ ಕಾಡುತ್ತಿದ್ದುದು ಮಳೆಗಾಲದಲ್ಲಿ. ಮಾಣಿ ಹೊಳೆ ಸೇತುವೆಯ ಆ ಭಾಗದ ಜನರು ಪಟ್ಟಣಕ್ಕೆ ಬರಲು ಬಳಸು ದಾರಿ ಕ್ರಮಿಸಬೇಕಾಗಿತ್ತು.ಈ ರೀತಿ ಬಳಸು ದಾರಿಯಲ್ಲಿ ಹೋಗಲು ಬಯಸದವರು ಧೈರ್ಯ ಮಾಡಿ, ತಮ್ಮ ದ್ವಿಚಕ್ರ ವಾಹನವನ್ನು ಶಿಥಿಲ ಸೇತುವೆ ಮೇಲೆಯೆ ದಾಟಿಸಿದ ಸಂದರ್ಭಗಳೂ ಇದ್ದವು. ಮಳೆಗಾಲದಲ್ಲಿ ಸಾರಿಗೆ ಸಂಸ್ಥೆ ಕೂಡ ತನ್ನ ಸಂಚಾರ ಮಾರ್ಗವನ್ನು ಬದಲು ಮಾಡದೇ ಬೇರೆ ದಾರಿ ಇರಲಿಲ್ಲ. ಆಗ ಸಿದ್ದಾಪುರ, ಹಾರ್ಸಿಕಟ್ಟಾ, ಗೋಳಿಮಕ್ಕಿ ಮಾರ್ಗದ ಬದಲು, ಸಿದ್ದಾಪುರ, ಹಾರ್ಸಿಕಟ್ಟಾ, ಮುಠ್ಠಳ್ಳಿ, ಹಾಲ್ಕಣಿ, ಕೋಡ್ಸರ ಮಾರ್ಗವಾಗಿ ಬಸ್‌ಗಳು ಸಂಚರಿಸುತ್ತಿದ್ದವು.

**

ಮಾಣಿ ಹೊಳೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿದ್ದು, ನಿಗದಿತ ಸಮಯದಲ್ಲಿ ಮುಗಿಯುವ ವಿಶ್ವಾಸವಿದೆ – ಮಹೇಶ ನಾಯ್ಕ, ಸಹಾಯಕ ಎಂಜನಿಯರ್,ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಹೊನ್ನಾವರ.

**

ರವೀಂದ್ರ ಭಟ್ ಬಳಗುಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT