ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಿನ ಹುಣ್ಣಿಮೆ ಚಂದಿರ

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನನಗಾಗ ಐದು ವರ್ಷ. ಓಣಿಯಲ್ಲಿನ ಮಕ್ಕಳೆಲ್ಲಾ ಶಾಲೆಗೆ ಹೋಗುವುದನ್ನು ಕಂಡು ನನಗೂ ಆಸೆಯಾಗಿತ್ತು. ಅಮ್ಮನಿಗೆ ದುಂಬಾಲು ಬಿದ್ದೆ. ಮಾರನೆಯ ದಿನವೇ ಅಮ್ಮ ಶಾಲೆಗೆ ಕರೆದುಕೊಂಡು ಹೋದಳು. ಟೀಚರ್ ನನ್ನ ಹೆಸರು ಬರೆದುಕೊಂಡು ವಯಸ್ಸು ಕೇಳಿದರು. ಐದು ವರ್ಷ ಎಂದಿದ್ದಕ್ಕೆ ‘ಮುಂದಿನ ವರ್ಷ ಸೇರಿಸಿ’ ಎಂದರು. ನನಗೆ ಕಣ್ಣಲ್ಲಿ ನೀರು ಬಂತು. ಅಮ್ಮ ನನ್ನ ಮುಖವನ್ನೊಮ್ಮೆ ನೋಡಿ, ಆರು ವರ್ಷ ಅಂತ ಬರೆದುಕೊಳ್ಳಿ ಎಂದಳು. ನಾನು ನಿಂತಲ್ಲೆ ಕುಣಿದೆ. ಅಮ್ಮನ ಸೆರಗಿನ ತುದಿಯ ಗಂಟಿನಲ್ಲಿ ಮುದ್ದೆಯಾಗಿದ್ದ ₹5ರ ನೋಟು ನನ್ನ ಕಣ್ಣಿಂದ ಇನ್ನೂ ಮಾಸಿಲ್ಲ. ಅದು ನನ್ನ ದಾಖಲಾತಿಯ (ಅಡ್ಮಿಶನ್) ಫೀಸ್‌.

ಹೆರಿಗೆ ಆಗುವವರೆಗೂ ಹೊಟ್ಟೆಯಲ್ಲಿ ಇಬ್ಬರು ಮಕ್ಕಳಿರುವ ಸಂಗತಿ ಅಮ್ಮನಿಗೆ ತಿಳಿದೇ ಇರಲಿಲ್ಲ. ಅದಾಗಲೇ ಕೈಯಲ್ಲೊಂದು ಅಕ್ಕ, ಕಂಕುಳಲ್ಲೊಂದು ಅಣ್ಣನನ್ನು ಸಂಭಾಳಿಸುತ್ತಾ, ಕೂಡುಕುಟುಂಬದ ಮನೆಯಲ್ಲಿ ಕೆಲಸದ ಒತ್ತಡದಲ್ಲಿ ಅಪರೂಪದ ಅವಳಿಗಳಿಗೆ ಜನ್ಮವಿತ್ತಿದ್ದಳು. ನನ್ನ ಜೊತೆ ಹುಟ್ಟಿದವನು ಬುದ್ದಿಮಾಂದ್ಯ ಮಗು. ಆದರೆ ಅಮ್ಮ ಅವನನ್ನು ಬೆಳೆಸಿದ ರೀತಿ ಯಾವ ಬುದ್ಧಿವಂತ ಮಗುವಿಗೂ ನನ್ನ ಮಗ ಕಡಿಮೆ ಇಲ್ಲ ಎಂಬತ್ತಿತ್ತು.

ಅವನನ್ನು ಕಂಡು ಯಾರಾದರೂ ಮರುಕಪಟ್ಟರೆ ಅಮ್ಮ, ‘ದೇವರು ದೊಡ್ಡವನು ಹೆಣ್ಣುಮಗುವನ್ನು ಚೆನ್ನಾಗಿ ಕೊಟ್ಟಿದ್ದಾನಲ್ಲ, ಅವನೂ ಕ್ರಮೇಣ ಸುಧಾರಿಸ್ತಾನೆ ಅಂತ ಡಾಕ್ಟರ್ ಹೇಳಿದ್ದಾರೆ’ ಎನ್ನುತ್ತಿದ್ದಳು. ಅಮ್ಮ ಯಾವತ್ತೂ ಸ್ವಮರುಕಪಟ್ಟು ಗೋಳಾಡಿದವಳಲ್ಲ. ಧೈರ್ಯವನ್ನು ಎದೆಯಲ್ಲಿ ಕಾಪಿಟ್ಟುಕೊಂಡು ಬಂದದ್ದನ್ನು ಎದುರಿಸಬೇಕೆನ್ನುವ ಸಮಯವರ್ತಿ.

ಶಾಲೆಯಲ್ಲಿ ಭಾಷಣ, ಪ್ರಬಂಧ, ಹಾಡು, ರಂಗೋಲಿ ಯಾವ ಸ್ಪರ್ಧೆ ಇದ್ದರೂ ಭಾಗವಹಿಸಲು ಪ್ರೋತ್ಸಾಹಿಸುತ್ತಿದ್ದಳು. ಒಮ್ಮೆ ಶಾಲೆಯಲ್ಲಿ ಫ್ಲವರ್ ಪಾಟ್ ಮಾಡುವ ಸ್ಪರ್ಧೆ. ಅಮ್ಮ ತಾನೇ ಹಸಿರುಬಣ್ಣದ ವೈರಿಂದ ಒಂದು ಪುಟ್ಟ ಹೂಕುಂಡ ಹೆಣೆದು ಅದರಲ್ಲಿ ಮನೆಯಲ್ಲೆ ಬೆಳೆದ ಚೆಂಡು ಹೂಗಳನ್ನಿಟ್ಟು ಕೊಟ್ಟಿದ್ದಳು. ಅದು ನನ್ನ ಶಾಲೆಯ ಆಫೀಸ್ ರೂಮಿನ ಟೇಬಲ್ ಮೇಲೆ ಪೆನ್ ಸ್ಟ್ಯಾಂಡ್‌ ಆಗಿ ರೂಪುಗೊಂಡಿತ್ತು. ಆಗ ಈಗಿನಂತೆ ಅಲಂಕಾರಿಕ ವಸ್ತುಗಳು ಅಷ್ಟಾಗಿ ಸಿಗುತ್ತಿರಲಿಲ್ಲ. ಗಣೇಶನ ಹಬ್ಬದ ಹಿಂದಿನ ದಿನವೇ ಬಣ್ಣದ ಹಾಳೆಗಳಿಂದ ಗೋಡೆಯ ಮೇಲೆ ಚಂದದ ಬಾಡದ ಹೂ, ಎಲೆಗಳು ಕಂಗೊಳಿಸುತ್ತಿದ್ದವು. ಅವಳ ರಂಗೋಲಿ ಕಲೆಯೂ ಅದ್ಭುತ (ಗಂಟಿನ ರಂಗೋಲಿ). ಎಲ್ಲಿಂದ ಆರಂಭವಾಯ್ತು? ಎಲ್ಲಿ ಕೊನೆಗೊಂಡಿತು?  – ಎಂದು ತಿಳಿಯದೆ ಒದ್ದಾಡುತ್ತಿದ್ದೆ. ಎಷ್ಟೇ ಕಷ್ಟದ ಕಗ್ಗಂಟಿನ ಪರಿಸ್ಥಿತಿಯನ್ನೂ ನಿಭಾಯಿಸಿದ ಅಮ್ಮನ ಬದುಕು ಸಹ ರಂಗೋಲಿಯಷ್ಟೇ ಸುಂದರವೂ ಹೌದು, ಸಂಕೀರ್ಣವೂ ಹೌದು.

ಈಗ ನಾನೂ ಅಮ್ಮನಾಗಿದ್ದೇನೆ. ನನ್ನ ನೆರೆಯ ಗೆಳತಿಯರು ನೀವು ಮಕ್ಕಳ ಮೇಲೆ ಕೂಗಾಡುವುದು ಕೇಳಿಸುವುದೇ ಇಲ್ಲವಲ್ಲ, ಎಂದಾಗ ಅಮ್ಮನ ಬಗ್ಗೆ ಹೇಳಿ ಹೆಮ್ಮೆಪಡುತ್ತೇನೆ. ಗಂಭೀರ ಸ್ವಭಾವದ ಅಪ್ಪ, ಯಾವಾಗಲೂ ಏನಾದರೊಂದು ತರಲೆ ಮಾಡುತ್ತಲೇ ಇರುವ ಬುದ್ಧಿಮಾಂದ್ಯ ಮಗ, ಬೆಳಗಿಂದ ರಾತ್ರಿಯವರೆಗೂ ಬಿಡುವಿಲ್ಲದ ಮನೆಕೆಲಸದ ನಡುವೆಯೂ ನಾವೆಲ್ಲ ಎಷ್ಟೇ ಗಲಾಟೆ ಮಾಡಿದರೂ ಒಂದು ದಿನವೂ ಅಮ್ಮ ನಮ್ಮ ಮೇಲೆ ಕೈ ಮಾಡಿದವಳಲ್ಲ. ಮಾತಿನಲ್ಲಿ ಚತುರೆ. ಅಪ್ಪ ಯಾವಾಗಲೂ  ‘ನೀನು ಲಾಯರ್ ಆಗಬೇಕಿತ್ತು’ ಎಂದು ಛೇಡಿಸುತ್ತಿದ್ದರು. ಸಂಸಾರ ನಡೆಸುವಲ್ಲಿ ಚಾಣಾಕ್ಷೆ. ಮನೆಯ ಯಾವ ಪದಾರ್ಥಗಳೂ ಕೆಡದಂತೆ, ಅಚ್ಚುಕಟ್ಟಾಗಿ, ಅಷ್ಟೇ ರುಚಿಯಾಗಿ ತಿಂಡಿ, ಅಡುಗೆ, ಸಂಡಿಗೆ, ಹಪ್ಪಳ, ಶಾವಿಗೆ – ತಯಾರಿಸುವುದರಲ್ಲಿ ಸಿದ್ಧಹಸ್ತಳು.

ನಾನು ಎಷ್ಟೋ ಬಾರಿ ಅಮ್ಮನನ್ನು ಕೇಳಿದ್ದಿದೆ ‘ಅಪ್ಪ ನಿನ್ನ ತಪ್ಪಿರದಿದ್ದರೂ ರೇಗುವಾಗ ನೀನೇಕೆ ತೆಪ್ಪಗಿರುತ್ತಿ?’ ಅಂತ.
ನಮ್ಮ ಮನೆಯಲ್ಲೂ ಇಂಥದೇ ಪ್ರಸಂಗ ಎದುರಾದಾಗ ಅಮ್ಮನಿಗೆ ಫೋನ್ ಮಾಡಿದೆ. ಅಮ್ಮ ನಕ್ಕು ‘ಹಣ್ಣು ಭಾರವಾದರೇನೆ ಬಳ್ಳಿ ಬಾಗುವುದು. ಬಾಗಿದರೇನೆ ಬದುಕು, ಮಾತಿಗಿಂತಲೂ ಮೌನಕ್ಕೆ ಬೆಲೆ ಹೆಚ್ಚು’ ಎಂಬರ್ಥದಲ್ಲಿ ಮಾತು ಮುಗಿಸಿದ್ದಳು.

ಯಾವ ಕೋನದಿಂದ ಅಳೆದರೂ ಅಮ್ಮನಷ್ಟು ಪಕ್ವತೆ ಬರಲು ಸಾಧ್ಯವಿಲ್ಲ ಎನ್ನಿಸಿತ್ತು. ಸುಮ್ಮನಿದ್ದುಬಿಡು ಎಲ್ಲವೂ ಸರಿಹೋಗುತ್ತದೆ ಎನ್ನುವ ಅವಳ ಮಾತು ಅಳವಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅವಳ ಮಗಳಾಗಿ ಹುಟ್ಟಿದ್ದಕ್ಕೇನೋ ಅವಳ ಕಾಲಂಶ
ದಷ್ಟಾದರೂ ಗುಣಗಳು ಬಂದಿದ್ದರೆ ಅದು ಅವಳದೇ ಕೊಡುಗೆ. ತೀರಿಸಲಾಗದ ತಾಯಿಯ ಋಣಕ್ಕೆ ಥ್ಯಾಂಕ್ಸ್ ಎನ್ನುವ ಪದ ಹೇಗೆ ಸಾಕಾದೀತು?

ನನ್ನ ಬದುಕೆಂಬ ಬಾನಿನಲ್ಲಿ ಎಲ್ಲವೂ ಆದ ಇವಳನ್ನು ಹುಣ್ಣಿಮೆಯ ಚಂದ್ರ ಏನ್ನಲೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT