ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋಗ್ವೇದ ಮತ್ತು ದೇವತೆಗಳು

Last Updated 6 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನಾಲ್ಕು ವೇದಗಳಲ್ಲಿ ಮೊದಲನೆಯದು ಋಗ್ವೇದಸಂಹಿತೆ. ಈ ವೇದಕ್ಕೆ ಇಪ್ಪತ್ತೊಂದು ಶಾಖೆಗಳು ಇದ್ದವು ಎಂಬ ಒಕ್ಕಣೆಯಿದೆ. ಆದರೆ ಈ ಎಲ್ಲ ಶಾಖೆಗಳು ಈಗ ದೊರೆತಿಲ್ಲ. ಶಾಕಲ, ಬಾಷ್ಕಲ, ಅಶ್ವಲಾಯನ, ಶಾಂಖಾಯನ ಮತ್ತು ಮಾಂಡೂಕೇಯ – ಇವು ಪ್ರಸಿದ್ಧ ಶಾಖೆಗಳು.

ಋಗ್ವೇದದ ಒಟ್ಟು 10,552 ಮಂತ್ರಗಳನ್ನು ಎರಡು ರೀತಿಯಾಗಿ ವಿಂಗಡಣೆ ಮಾಡುವ ಕ್ರಮವುಂಟು. ಅಷ್ಟಕ, ಅಧ್ಯಾಯ ಮತ್ತು ವರ್ಗ – ಎಂದು ವಿಭಾಗಿಸುವುದು ಒಂದು ಕ್ರಮ. ಹೀಗೆ ಇಡಿಯ ಸಂಹಿತೆಯನ್ನು ಎಂಟು ಅಷ್ಟಕಗಳಲ್ಲಿ ವಿಭಾಗಿಸಲಾಗಿದೆ. ಒಂದೊಂದು ಅಷ್ಟಕದಲ್ಲಿಯೂ ಎಂಟೆಂಟು ಅಧ್ಯಾಯಗಳಿವೆ; ಒಂದೊಂದು ಅಧ್ಯಾಯದಲ್ಲೂ ಹಲವು ವರ್ಗಗಳಿವೆ. (ಒಟ್ಟು 2024 ವರ್ಗಗಳಿವೆ.)

ಋಗ್ವೇದದ ಮಂತ್ರಗಳನ್ನು ಮತ್ತೊಂದು ರೀತಿಯಲ್ಲೂ ವಿಂಗಡಿಸುವ ಕ್ರಮವುಂಟು. ಇಡಿಯ ಮಂತ್ರಗಳನ್ನು ಹತ್ತು ಮಂಡಲಗಳಲ್ಲಿ ವಿಭಾಗಿಸಲಾಗಿದೆ. ಮಂಡಲಗಳನ್ನು ಅನುವಾಕಗಳನ್ನಾಗಿಯೂ (ಒಟ್ಟು ಅನುವಾಕಗಳು 85), ಅನುವಾಕಗಳನ್ನು ಸೂಕ್ತಗಳನ್ನಾಗಿಯೂ (ಒಟ್ಟು 1028 ಸೂಕ್ತಗಳು), ಸೂಕ್ತಗಳನ್ನು ಮಂತ್ರಗಳನ್ನಾಗಿಯೂ ವಿಂಗಡಿಸಲಾಗಿದೆ.

ಪ್ರತಿಯೊಂದು ಸೂಕ್ತಕ್ಕೂ ಋಷಿ–ದೇವತೆ–ಛಂದಸ್ಸು - ಇವನ್ನು ಸೂಚಿಸಿಯೇ ಪಠಿಸುವ ಕ್ರಮವಿದೆ. ಸೂಕ್ತದ ಮಂತ್ರಗಳನ್ನು ಯಾರು ಕಂಡಿದ್ದಾರೋ ಅವರು ಅದರ ಋಷಿ; ಯಾವ ದೇವತೆಯನ್ನು ಉದ್ದೇಶಿಸಿ ಮಂತ್ರಗಳು ಹೊರಟಿವೆಯೋ ಆ ದೇವತೆ ಆ ಸೂಕ್ತದ ದೇವತೆ ಎನಿಸಿಕೊಳ್ಳುತ್ತದೆ; ಒಂದೊಂದು ಸೂಕ್ತವೂ ನಿರ್ದಿಷ್ಟ ಛಂದಸ್ಸಿನಲ್ಲಿರುತ್ತದೆ.

ಋಗ್ವೇದದಲ್ಲಿ ಮೂವತ್ತಮೂರು ದೇವತೆಗಳು ಎಂಬ ಎಣಿಕೆಯಿದೆ. ಈ ದೇವತೆಗಳನ್ನು ಮೂರು ನೆಲೆಗಳಲ್ಲಿ ವಿಂಗಡಿಸಲಾಗಿದೆ: 1. ಪೃಥ್ವೀಸ್ಥಾನದ ದೇವತೆಗಳು; 2. ಅಂತರಿಕ್ಷಸ್ಥಾನದ ದೇವತೆಗಳು; 3. ದ್ಯುಸ್ಥಾನದ ದೇವತೆಗಳು.

ಋಗ್ವೇದದ ಪ್ರಧಾನ ದೇವತೆಗಳು: ಅಗ್ನಿ, ಪೃಥ್ವೀ, ಸೋಮ, ನದೀ, ಬೃಹಸ್ಪತಿ – ಇವರು ಪೃಥ್ವೀಸ್ಥಾನೀಯ ದೇವತೆಗಳು. ಇಂದ್ರ, ವಾಯು, ಅಪಾಂನಪಾತ್‌, ರುದ್ರ, ಮರುತ್‌, ವಾತ, ಪರ್ಜನ್ಯ, ಆಪಃ – ಇವರು ಅಂತರಿಕ್ಷಸ್ಥಾನಗಳು. ದ್ಯೌಃ, ವರುಣ, ಮಿತ್ರ, ಸೂರ್ಯ, ಸವಿತೃ, ಪೂಷನ್‌, ಅಶ್ವಿನ್‌, ಉಷಸ್‌, ರಾತ್ರಿ, ಆದಿತ್ಯಾಃ, ವಿಷ್ಣು – ಇವರು ದ್ಯುಸ್ಥಾನೀಯ ದೇವತೆಗಳು.

ಅಗ್ನಿ: ಪೃಥ್ವೀಸ್ಥಾನದ ದೇವತೆಗಳಲ್ಲಿ ಅಗ್ನಿ ಪ್ರಧಾನ ದೇವತೆ. ಅವನನ್ನು ಕುರಿತು 200 ಸೂಕ್ತಗಳಿವೆ. ಅಗ್ನಿ ಎಲ್ಲೆಲ್ಲೂ ಇದ್ದಾನೆ. ಅವನ ಸರ್ವಾಂತರ್ಯಾಮಿತ್ವವನ್ನು ಈ ಮಂತ್ರ ಸೊಗಸಾಗಿ ವರ್ಣಿಸಿದೆ:

ಗರ್ಭೋ ಯೋ ಅಪಾಂ ಗರ್ಬೋ ವನಾನಾಂ
ಗರ್ಭಶ್ಚ ಸ್ತಾತಾಂ ಗರ್ಭಶರ್ಚಥಾಮ್‌ |
ಅದ್ರೌಚಿದಸ್ಮಾ ಅಂತರ್ದುರೋಣೇ
ವಿಶಾಂ ನ ವಿಶ್ವೋ ಅಮೃತಃ ಸ್ವಾಧೀಃ ||

‘ಅಗ್ನಿಯು ಜಲದಲ್ಲಿದ್ದಾನೆ; ಅರಣ್ಯದ ವೃಕ್ಷದಲ್ಲಿದ್ದಾನೆ; ಕಟ್ಟಿಗೆಯಲ್ಲೂ ಇದ್ದಾನೆ; ಪ್ರಾಣಿಗಳಲ್ಲಿಯೂ ಜನರಲ್ಲಿಯೂ ಅವನಿದ್ದಾನೆ; ಬೆಟ್ಟದಲ್ಲೂ ಇದ್ದಾನೆ; ಇವನು ಅಮರ. ಸಜ್ಜನನಾದ ರಾಜನು ಪ್ರಜೆಗಳನ್ನು ರಕ್ಷಿಸುವಂತೆ ಅವನು ನಮ್ಮನ್ನು ಕಾಪಾಡುತ್ತಾನೆ.’

ಅಗ್ನಿಯ ವಿಷಯವಾಗಿ ಮತ್ತಷ್ಟು ವಿವರಗಳನ್ನು ಮುಂದೆ ತಿಳಿಯೋಣ.
****
ನಿಮ್ಮ ಅನಿಸಿಕೆಗಳನ್ನು ನಮಗೆ ಕಳುಹಿಸಿ. ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001
email: arivu@prajavani.co.in.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT