ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಫೂರ್ತಿಯ ಚಿಲುಮೆ ನನ್ನಜ್ಜಿ

Last Updated 6 ಏಪ್ರಿಲ್ 2018, 19:24 IST
ಅಕ್ಷರ ಗಾತ್ರ

ಬದುಕಿಗೆ ಸ್ಫೂರ್ತಿ ನೀಡಿದ ಮಹಿಳೆಯರು ಅನೇಕರಿದ್ದಾರೆ. ಆದರೆ ಯಾವುದೇ ಹಿಂಜರಿಕೆ, ಅಭದ್ರತೆ, ಒಂಟಿತನಗಳಿಂದ ದಿಕ್ಕುಕಾಣದಾದಾಗ ಇವರನ್ನು ಒಮ್ಮೆ ನೆನೆದರೆ ನೂರಾನೆ ಬಲ ಬಂದಂತಾಗುತ್ತದೆ. ಅವರೇ ನನ್ನ ಅಜ್ಜಿ ಸರಸ್ವತಿ ಲಿಂಗಣ್ಣ. ತನ್ನ ಸಣ್ಣ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು, ನಡುವಯಸ್ಸಿನಲ್ಲಿ ಪತಿಯನ್ನು ಕಳೆದುಕೊಂಡು, ಶಿಕ್ಷಕಿಯಾಗಿ ಸಾವಿರಾರು ಮಕ್ಕಳಿಗೆ ಪಾಠ ಮಾಡಿ, ರಾಜಕೀಯ ನಾಯಕತ್ವವನ್ನು ನಿಭಾಯಿಸಿ, ಕೊನೆಗಾಲದಲ್ಲಿ ಯಾವ ಮಕ್ಕಳಿಗೂ ಭಾರವಾಗದೆ ಒಂಟಿಯಾಗಿ ಕ್ಯಾನ್ಸರ್ ಎಂಬ ಮಹಾಮಾರಿಯೊಡನೆ ಸೆಣಸುತ್ತಾ ಕೊನೆಯುಸಿರೆಳೆದವರು.

ಹೇಳುತ್ತಾ ಹೋದರೆ ಬಹಳಷ್ಟಿವೆ ಹಾಗಾಗಿ ಪ್ರಮುಖ ಘಟನೆಗಳನ್ನಷ್ಟೇ ಇಲ್ಲಿ ಉಲ್ಲೇಖಿಸುತ್ತೇನೆ.

ಅಜ್ಜಿ ಮದುವೆಯಾಗಿ ಹೋಗಿದ್ದು ಕೂಡುಕುಟುಂಬಕ್ಕೆ, ನಮ್ಮ ತಾತ ದುಡಿದ ಸಂಬಳವನ್ನೆಲ್ಲಾ ತಂದು ತನ್ನ ತಂದೆಯ ಕೈಗೊಪ್ಪಿಸುತ್ತಿದ್ದರು. ಮದುವೆಯಾದ ಮೇಲೆ ಅಜ್ಜಿಯ ಸಂಬಳವೂ ಅವರ ಪಾಲಾಯಿತು. ಆರಂಭದಲ್ಲೇನೋ ಸರಿ, ಆದರೆ ಮಕ್ಕಳಾದ ಮೇಲೆ ಬಹಳ ಕಷ್ಟವಾಗತೊಡಗಿತು. ಅಜ್ಜಿ ತಾತ ಇಬ್ಬರೂ ಕೆಲಸಕ್ಕೆ ಹೊರಹೋದಮೇಲೆ ಮಕ್ಕಳನ್ನು ಮನೆಯಲ್ಲಿದ್ದವರು ಸರಿಯಾಗಿ ನೋಡಿಕೊಳ್ಳತ್ತಿರಲಿಲ್ಲ, ಕಾಲಿಗೆ ಹಗ್ಗ ಕಟ್ಟಿ ಕಂಬಕ್ಕೆ ಕಟ್ಟಿಬಿಟ್ಟರೆ, ಸಂಜೆಯವರೆಗೂ ಎಲ್ಲ ಅಲ್ಲೇ, ಅಷ್ಟಲ್ಲದೇ ಹಾಲಿನ ಪುಡಿಯನ್ನು ತಮ್ಮ ಮಕ್ಕಳಿಗೆ ಬಳಸಿ, ಇವರ ಮಗುವಿಗೆ ಬೆಲ್ಲದ ನೀರನ್ನು ಬಾಟಲಿಯಲ್ಲಿ ಹಾಕಿಕೊಡುತ್ತಿದ್ದರಂತೆ. ಇವುಗಳನ್ನೆಲ್ಲ ಸಹಿಸದ ಅಜ್ಜಿ ಇನ್ನುಮುಂದೆ ತಾವು ಸಂಬಳವನ್ನು ಮಾವನವರ ಕೈಗೆಕೊಡಬಾರದೆಂದು ಕೇಳಿಕೊಂಡರು ಆದರೆ ತಾತ ಒಪ್ಪಲಿಲ್ಲ ಕೊನೆಗೆ, ತನ್ನ ಸಂಬಳವನ್ನು ತಾನು ಕೊಡುವುದೇ ಇಲ್ಲ ಎಂದು ಹಟಕ್ಕೆ ನಿಂತರು. ಊಟ ಬಿಟ್ಟರು. ಹೇಗೋ ಅಂತೂ ಒಪ್ಪಿಗೆ ದೊರೆಯಿತು. ನಂತರ ವರ್ಷಾನುಗಟ್ಟಲೆ ರಾತ್ರಿ ಊಟ ಬಿಟ್ಟು ದುಡ್ಡು ಕೂಡಿಸಿ, ಪಕ್ಕದ ಊರಿನಲ್ಲಿ ಒಂದಿಷ್ಟು ಜಾಗ ಕೊಂಡು ಸ್ವಂತ ಮನೆಕಟ್ಟಿದರು.

ಅಜ್ಜಿ ಕೆಲಸ ಮಾಡುತ್ತಿದ್ದ ಶಾಲೆಯಲ್ಲಿ ಸರದಿಗೆ ಅನುಸಾರವಾಗಿ ಅವರೇ ಮುಖ್ಯೋಪಾಧ್ಯಾಯಿನಿ ಆಗಬೇಕಾಗಿತ್ತು. ಆದರೆ ಇವರಿಗಿಂತ ಕಿರಿಯರಾಗಿದ್ದ ಮತ್ತೊಬ್ಬ ಶಿಕ್ಷಕರನ್ನು ಆ ಹುದ್ದೆಗೆ ನೇಮಕ ಮಾಡಿದಾಗ, ಅಜ್ಜಿ ಛಲ ಬಿಡದೆ ಅದನ್ನು ವಿರೋಧಿಸಿ ತಾನೇ  ಆ ಸ್ಥಾನವನ್ನು ಪಡೆದುಕೊಂಡರು. ಅಜ್ಜಿಯ ಶಿಷ್ಯಸಮೂಹ ಎಲ್ಲೆಲ್ಲೂ ಹರಡಿ ಹಂಚಿಹೋಗಿತ್ತು. ಎಷ್ಟರಮಟ್ಟಿಗೆ ಎಂದರೆ ರಾಜಕೀಯ ಕ್ಷೇತ್ರದವರು ತಾವೇ ಕರೆದು ಟಿಕೆಟ್ ಕೊಟ್ಟು ಜಿಲ್ಲಾ ಪಂಚಾಯಿತಿ ಸದಸ್ಯೆಯ ಸ್ಥಾನಕ್ಕೇರಿದರು. ತನ್ನ ನೇರ, ದಿಟ್ಟ ನಡವಳಿಕೆಯ ಕಾರಣದಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ವಂಚಿತರಾದರು.

ಐವರು ಮಕ್ಕಳಲ್ಲಿ ಮೊದಲಿಬ್ಬರಿಗೆ ಮದುವೆ ಮಾಡುವಷ್ಟರಲ್ಲಿ ತಾತ ತೀರಿಕೊಂಡರು. ಒಂಟಿಯಾಗಿ ಜವಾಬ್ದಾರಿಗಳನ್ನೆಲ್ಲಾ ನಿರ್ವಹಿಸಿ, ನಂತರ ಮಗನೊಂದಿಗೆ ಮನಸ್ತಾಪವಾದಾಗ ತಾನೇ ಕಟ್ಟಿದ ಮನೆ, ಕೊಂಡುಕೊಂಡ ಹೊಲಗದ್ದೆಗಳನ್ನೆಲ್ಲ ಬಿಟ್ಟು, ಬೇರೆ ಊರಿನಲ್ಲಿ ಬಾಡಿಗೆಮನೆಯಲ್ಲಿದ್ದುಕೊಂಡು ಮತ್ತೊಂದು ಸೈಟು ಖರೀದಿಸಿ ಹೊಸಮನೆ ಕಟ್ಟಿಯೇ ಬಿಟ್ಟರು. ಇಷ್ಟೆಲ್ಲ ಮಾಡುವಷ್ಟರಲ್ಲಿ ಜವರಾಯನಿಗೂ ಅವರ ಮೇಲೆ ಮಮತೆಯುಕ್ಕಿ ಕ್ಯಾನ್ಸರ್ ರೂಪದಲ್ಲಿ ಬಂದು ತನ್ನೆಡೆಗೆ ಸೆಳೆದುಕೊಂಡುಬಿಟ್ಟ.

ಪ್ರೆಸ್ ಫಾರ್ ಪ್ರೋಗ್ರೆಸ್ ಎಂದಾಗ ಪ್ರೋಗ್ರೆಸ್ ವೈಯಕ್ತಿಕ ನೆಲೆಯಿಂದ ಆರಂಭವಾಗಿ, ತನ್ನ ಮನೆ, ಔದ್ಯೋಗಿಕ ಕ್ಷೇತ್ರ , ಸಮಾಜ ಹೀಗೆ ವಿಸ್ತಾರಗೊಳ್ಳುತ್ತಾ ಹೋಗುತ್ತದೆ, ಈ ಯಾವುದೇ ನೆಲೆಯಿಂದ ನೋಡಿದರೂ ನನ್ನಜ್ಜಿ ನನಗೆ ಯಾವ ಲೋಕನಾಯಕರಿಗಿಂತಲೂ ಕಡಿಮೆಯಲ್ಲ, ಹೀಗಾಗಿ ಜೀವನದ ಪ್ರತಿಹೆಜ್ಜೆಯಲ್ಲೂ ಸದಾ ಅವರೇ ನನ್ನ ಸ್ಫೂರ್ತಿ!


-ಕಾವ್ಯಶ್ರೀ ಎಚ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT