ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಬದುಕಿನ ಸ್ಫೂರ್ತಿಸೆಲೆ ನನ್ನಜ್ಜಿ

Last Updated 6 ಏಪ್ರಿಲ್ 2018, 19:36 IST
ಅಕ್ಷರ ಗಾತ್ರ

ಬಾಲ್ಯದಿಂದಲೆ ಸ್ವಾಭಿಮಾನದ ಬದುಕಿನ ಅರ್ಥವನ್ನು ತಿಳಿಸಿಕೊಟ್ಟಾಕೆ, ಸ್ವಾವಲಂಬನೆಯ  ಸ್ವಾಭಿಮಾನದ  ಪಾಠವನ್ನು   ತಾನಾಗಿ ಹೇಳಿಕೊಡದಿದ್ದರೂ  ತನ್ನ ನಡೆ ನುಡಿಯಿಂದ ತನ್ನ ಕೆಲಸ ಕಾರ್ಯಗಳ ಮೂಲಕ ಕಲಿಸಿಕೊಟ್ಟವಳು ನನ್ನಜ್ಜಿ. ಎಳೆಯ ಪ್ರಾಯದಲ್ಲಿಯೆ ಪತಿಯನ್ನು ಕಳೆದುಕೊಂಡು ಐದು ಮಕ್ಕಳ ಸಂಸಾರ ಸರಿದೂಗಿಸುತ್ತಾ ಅವರಿಗೆಲ್ಲಾ ನೆಮ್ಮದಿಯ ನೆಲೆ ಕಟ್ಟಿಕೊಟ್ಟವಳು. ಬರಗಾಲದ ಸಂದರ್ಭದಲ್ಲಿ ಬಿದಿರಕ್ಕಿ ತಂದು  ಮಕ್ಕಳ ಹಸಿವು ನೀಗಿಸಿದವಳು.  ಅಂದಿನ ಕಷ್ಟದ ದಿನಗಳಲ್ಲಿ ಯಾರ ಮುಂದೆಯೂ ಕೈಚಾಚದೆ ತನ್ನದೆ ಹೊಲದಲ್ಲಿ ಆಳುಗಳೊಂದಿಗೆ ಆಳಾಗಿ ದುಡಿದು ಮಕ್ಕಳನ್ನು ಸಲುಹಿದ ಮಹಾನ್ ತಾಯಿ. ಕೆಣಕಬಂದವರಿಗೆ ಅಂಜದೆ ದಿಟ್ಟತನದಲ್ಲಿ ಅವರನ್ನು ಎದುರಿಸಿ ಮತ್ತೆಂದೂ ಅವರತ್ತ ಸುಳಿಯದಂತೆ ಮಾಡಿದ್ದ ಬಲು ಗಟ್ಟಿಗಿತ್ತಿ. ನಾವು ನಾಲ್ವರು ಮಕ್ಕಳನ್ನು ಬಾಲ್ಯದಲ್ಲಿಯೇ ನನ್ನ ಹೆತ್ತಮ್ಮ ನಮ್ಮನ್ನಗಲಿಹೋದಾಗ  ನಮಗಾಸರೆಯಾಗಿ ನಿಂತವರು. ಗಂಡುಮಕ್ಕಳ ಮನೆಯಲ್ಲಿರದೆ ಅಳಿಯನಮನೆ ಸೇರಿದ್ದಾರೆಂಬ ಆರೋಪ ಬೇಡ ಬನ್ನಿರೆಂದು ಬೇಡಿಕೊಂಡ ಗಂಡು ಮಕ್ಕಳ ಮನವಿಯನ್ನು ನಯವಾಗಿ ತಿರಸ್ಕರಿಸಿ ಅಳಿಯನು ನನ್ನ ಮಗನಿದ್ದಂತಯೆ ನನ್ನ ಮೊಮ್ಮಕ್ಕಳ ಪಾಲನೆ ನನ್ನ ಜವಾಬ್ದಾರಿಯೂ ಹೌದೆಂದು ನುಡಿದ ವಿಶಾಲ ಹೃದಯಿ. 

ವೈದ್ಯರಾದರೂ ಹೆಚ್ಚಿನ ಸಮಯ ಸಮಾಜಸೇವೆಗೇ ಮುಡಿಪಾಗಿಟ್ಟಿದ್ದ ನನ್ನ ತಂದೆಯವರು ಮಕ್ಕಳತ್ತ ಹೆಚ್ಚು ಗಮನ ಹರಿಸುವುದಿಲ್ಲವೆನೋ ಎಂಬ ಆತಂಕ ಅವರಿಗಿತ್ತು. ಹಾಗಾಗಿ ನಮ್ಮ ಪಾಲನೆ ಪೋಷಣೆಗೆ ಟೊಂಕಕಟ್ಟಿ ನಿಂತ ಮಮತಾಮಯಿ. ಕಷ್ಟಗಳು ಎದುರಾದಾಗ ಎದೆಗುಂದದೆ ಅವುಗಳನ್ನು ದೈರ್ಯವಾಗಿ ಎದುರಿಸುವುದನ್ನು ಹೇಳಿಕೊಟ್ಟಾಕೆ. ನೊಂದವರಿಗೆ ನೆರವಾಗುವುದನ್ನು ಕಲಿಸಿದಾಕೆ. ಹೆಣ್ಣಾಗಲಿ, ಗಂಡಾಗಲಿ ನಮ್ಮ ನಡೆನುಡಿ ಸದಾ ಜಾಗೃತವಾಗಿರಬೇಕೆಂಬ ಎಚ್ಚರ ನೀಡಿದಾಕೆ.


ತನ್ನ ಅಂತ್ಯ ಕಾಲದಲ್ಲಿಯೇ ಸ್ವಾಭಿಮಾನದ ಪಾಠವನ್ನು ಬೋಧಿಸಿದಾಕೆ. ತಮ್ಮ ಸಾವಿನ ಕೆಲವು ತಿಂಗಳುಗಳ ಮಂಚೆ ತಮ್ಮ ಮಕ್ಕಳ ಮನೆಗೆ ತೆರಳಿ ತನ್ನ ಸ್ವಂತ ದುಡಿಮೆಯ ಹಣದಿಂದ ಮಕ್ಕಳು ಹಾಗೂ ಮೊಮ್ಮಕ್ಕಳೆಲ್ಲರಿಗೂ ಉಪಯುಕ್ತ ಉಡುಗೊರೆ ನೀಡಿದ್ದರು. ಇದೆಲ್ಲದ್ದಕ್ಕಿಂತ ನಮಗೆಲ್ಲರಿಗೂ ಮನಕಲಕಿದ ಸಂಗತಿಎಂದರೆ ಅವರ ಮರಣದ ನಂತರದ ಕಾರ್ಯಗಳಿಗೆ ಖರ್ಚು ಮಾಡುವಂತೆ ಅವರ ಗಂಡುಮಕ್ಕಳ ಕೈಗೆ ಹಣ ನೀಡಿ ಯಾರೂ ನನ್ನಿಂದ ತೊಂದರೆ ಪಡಬಾರದೆಂದು ನುಡಿದ  ಅವರ ಮಾತುಗಳು ನಮ್ಮನ್ನು ಗದ್ಗದಿತರನ್ನಾಗಿಸಿತು. ಬದುಕಿರುವವರೆಗೂ  ಯಾರಿಗೂ ಹೊರೆಯಾಗದೆ ಮತ್ತೊಬ್ಬರಿಗೆ ತೊಂದರೆ ನೀಡದಂತೆ ಬಾಳಿ ಬದುಕಿದ ನನ್ನ ಪ್ರೀತಿಯ ಮಾಳಮ್ಮಜ್ಜಿ ನಮ್ಮನ್ನಗಲಿ  21 ವರ್ಷಗಳಾಗಿದ್ದು ಅವರ ಬದುಕು ಇಂದಿಗೂ ನಮಗೆ ದಾರಿದೀಪವಾಗಿದೆ ಅವರ ಮಾತುಗಳಿನ್ನೂ ಕಿವಿಯಲ್ಲಿ ಮಾರ್ದನಿಸುತ್ತಿದೆ. ಅವರ ಅನುಭವದ ಕಥನವೆ ನನಗೆ ಮಹಾ ಗ್ರಂಥ. ನನ್ನ ಬದುಕಿನ ಪ್ರತಿ ಹೆಜ್ಜೆಗೂ ಅವರೆ ಸ್ಫೂರ್ತಿಸೆಲೆ.

-ಕೆ.ಟಿ.ಜಯಶ್ರೀ
ಹಾಸನ 573201

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT