ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಿ

ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಎಸ್.ಎಲ್.ಭಟ್ ಸಲಹೆ
Last Updated 7 ಏಪ್ರಿಲ್ 2018, 9:40 IST
ಅಕ್ಷರ ಗಾತ್ರ

ಕೋಲಾರ: ‘ರೇಡಿಯಂ ಹಾಗೂ ಪೊಲೋನಿಯಂ ಮೂಲಧಾತುಗಳನ್ನು ಕಂಡು ಹಿಡಿಯುವ ಮೂಲಕ ನೋಬಲ್ ಪ್ರಶಸ್ತಿಗೆ ಪಾತ್ರರಾದ ಮೇರಿ ಕ್ಯೂರಿ ಅವರ ಪ್ರೇರಣೆಯೊಂದಿಗೆ ಮಹಿಳೆಯರು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು’ ಎಂದು ಭಾರತೀಯ ವಿಜ್ಞಾನ ಸಂಸ್ಥೆ ವಿಜ್ಞಾನಿ ಎಸ್.ಎಲ್.ಭಟ್ ಕಿವಿಮಾತು ಹೇಳಿದರು.

ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಸರ್ಕಾರಿ ಮಹಿಳಾ ಕಾಲೇಜು, ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ವಿಕಿರಣ ಭೌತಶಾಸ್ತ್ರ’ ಕುರಿತ ರಾಷ್ಟ್ರೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

‘ಇಂದು ಸಂಶೋಧನಾ ಕ್ಷೇತ್ರದಲ್ಲಿ ಪುರುಷರ ಸಂಖ್ಯೆಯೇ ಹೆಚ್ಚಿನ ಪ್ರಮಾಣದಲ್ಲಿದೆ. ಪೋಷಕರು ಮಕ್ಕಳನ್ನು ಎಂಜಿನಿಯರಿಂಗ್‌, ವೈದ್ಯಕೀಯ ಶಿಕ್ಷಣಕ್ಕೆ ಸೀಮಿತಗೊಳಿಸುತ್ತಿದ್ದಾರೆ. ಇದರಿಂದ ಮೂಲ ವಿಜ್ಞಾನ ಅಧ್ಯಯನ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಮೂಲ ವಿಜ್ಞಾನ ಅಧ್ಯಯನಕ್ಕೆ ಹೆಚ್ಚಿನ ಒತ್ತು ಕೊಡಬೇಕು’ ಎಂದು ಸಲಹೆ ನೀಡಿದರು.

‘ವಿಕಿರಣ ಭೌತಶಾಸ್ತ್ರದಿಂದ ವೈದ್ಯಕೀಯ ರಂಗಕ್ಕೆ ಹೆಚ್ಚಿನ ಉಪಯೋಗವಾಗಿದೆ. ಎಕ್ಸರೆ, ಕ್ಯಾನ್ಸರ್ ಚಿಕಿತ್ಸೆಗೆ ಇದು ಸಹಕಾರಿ. ಇದರ ಮತ್ತಷ್ಟು ಪ್ರಯೋಜನಗಳ ಕುರಿತು ಉನ್ನತ ಅಧ್ಯಯನ ನಡೆಯಬೇಕು. ವಿದ್ಯಾರ್ಥಿನಿಯರಲ್ಲಿ ಸಂಶೋಧನಾ ಆಸಕ್ತಿ ಹೆಚ್ಚಬೇಕು’ ಎಂದು ಆಶಿಸಿದರು.

ಜಿಲ್ಲೆಯಲ್ಲಿ ಹೆಚ್ಚು: ‘ವಿ.ವಿಯು 250ಕ್ಕೂ ಹೆಚ್ಚು ಕಾಲೇಜುಗಳನ್ನು ಒಳಗೊಂಡಿದೆ. ಈ ಕಾಲೇಜುಗಳ ಪೈಕಿ ಮೂಲ ವಿಜ್ಞಾನ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯ ಕೋಲಾರ ಜಿಲ್ಲೆಯಲ್ಲಿ ಹೆಚ್ಚಿದೆ’ ಎಂದು ಬೆಂಗಳೂರು ಉತ್ತರ ವಿ.ವಿ ಉಪ ಕುಲಪತಿ ಕೆಂಪರಾಜು ತಿಳಿಸಿದರು.

ವಿಜ್ಞಾನಿಗಳಾದ ಆರ್.ಎಸ್.ಕೇಶವರೆಡ್ಡಿ, ಬಿ.ಎಸ್.ಶೇಷಾದ್ರಿ ವಿಕಿರಣ ಭೌತಶಾಸ್ತ್ರದ ಪ್ರಾಮುಖ್ಯತೆ ಕುರಿತು ಉಪನ್ಯಾಸ ನೀಡಿದರು. ದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯದ ಉಪ ಕುಲಪತಿ ಡಾ.ಸಿ.ವಿ.ರಘುವೀರ್, ಮಹಿಳಾ ಕಾಲೇಜು ಪ್ರಾಂಶುಪಾಲ ಜಯರಾಮರೆಡ್ಡಿ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಸೀನಾನಾಯಕ್, ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ವಿಜಯಕುಮಾರ್, ಉಪನ್ಯಾಸಕರಾದ ದ್ಯಾವಪ್ಪ, ನಾಗರಾಜ್, ಎನ್.ಸೌಮ್ಯ, ಮುನಿರತ್ನಪ್ಪ, ರವೀಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT